Advertisement

ಏಕದಿನ ಸರಣಿ: ಕ್ಲೀನ್‌ಸ್ವೀಪ್ ಗೈದ ಕೌರ್‌ ಬಳಗ

10:35 PM Jul 07, 2022 | Team Udayavani |

ಪಲ್ಲೆಕೆಲೆ: ಆತಿಥೇಯ ಶ್ರೀಲಂಕಾ ಎದುರಿನ ವನಿತಾ ಏಕದಿನ ಸರಣಿಯನ್ನು ಹರ್ಮನ್‌ಪ್ರೀತ್‌ ಕೌರ್‌ ನಾಯಕತ್ವದ ಭಾರತ 3-0 ಅಂತರದಿಂದ ಕ್ಲೀನ್‌ಕ್ಲೀನ್‌ಸ್ವೀಪ್ ಆಗಿ ವಶಪಡಿಸಿ ಕೊಂಡಿದೆ. ಗುರುವಾರದ 3ನೇ ಹಾಗೂ ಅಂತಿಮ ಪಂದ್ಯವನ್ನು ಭಾರತ 39 ರನ್ನುಗಳ ಅಂತರದಿಂದ ಗೆದ್ದು ವೈಟ್‌ವಾಶ್‌ ಪ್ರಕ್ರಿಯೆಯನ್ನು ಪೂರ್ತಿ ಗೊಳಿಸಿತು. ಇದಕ್ಕೂ ಮೊದಲಿನ ಟಿ20 ಸರಣಿಯನ್ನು ಭಾರತ 2-1ರಿಂದ ತನ್ನದಾಗಿಸಿಕೊಂಡಿತ್ತು.

Advertisement

ಹಿಂದಿನೆರಡು ಪಂದ್ಯಗಳಲ್ಲಿ ಬೌಲರ್ ಮಿಂಚಿ ದರೆ, ಇಲ್ಲಿ ಬ್ಯಾಟರ್‌ಗಳು ಮೇಲುಗೈ ಸಾಧಿಸಿದರು. ಹೀಗಾಗಿ ಇದು ದೊಡ್ಡ ಮೊತ್ತದ ಸಮರವೆನಿಸಿತು. ಬ್ಯಾಟಿಂಗ್‌ಗೆ ಇಳಿಸಲ್ಪಟ್ಟ ಭಾರತ 9 ವಿಕೆಟಿಗೆ 255 ರನ್‌ ಪೇರಿ ಸಿದರೆ, ಶ್ರೀಲಂಕಾ 47.3 ಓವರ್‌ಗಳಲ್ಲಿ 216ಕ್ಕೆ ಸರ್ವ ಪತನ ಕಂಡಿತು. ಇದು ಲಂಕಾ ವಿರುದ್ಧ ಭಾರತ ಸಾಧಿಸಿದ ಸತತ 4ನೇ ಏಕದಿನ ಸರಣಿ ಗೆಲುವು.

ಸರಣಿಯಲ್ಲಿ ತಂಡದ ಮೊತ್ತ ಇನ್ನೂರರ ಗಡಿ ದಾಟಿದ ಮೊದಲ ನಿದರ್ಶನ ಇದಾಗಿದೆ. ಮೊದಲೆರಡೂ ಪಂದ್ಯಗಳಲ್ಲಿ ಸ್ಕೋರ್‌ 170ರ ಗಡಿಯಲ್ಲಿ ನಿಂತಿತ್ತು. ಭಾರತ ಕ್ರಮವಾಗಿ 4 ವಿಕೆಟ್‌ ಹಾಗೂ 10 ವಿಕೆಟ್‌ಗಳ ಅಧಿಕಾರಯುತ ಗೆಲುವು ಸಾಧಿಸಿತ್ತು. ಎರಡೂ ತಂಡಗಳಿನ್ನು ಕಾಮನ್ವೆಲ್ತ್‌ ಗೇಮ್ಸ್‌ಗಾಗಿ ಬರ್ಮಿಂಗ್‌ಹ್ಯಾಮ್‌ಗೆ ಪಯಣಿಸಲಿವೆ.

ಕೌರ್‌-ಪೂಜಾ ಜತೆಯಾಟ :

ಗುರುವಾರದ ಪಂದ್ಯದಲ್ಲೂ ಭಾರತದ ಮೊತ್ತ 170ರ ಆಸುಪಾಸಿನಲ್ಲೇ ನಿಲ್ಲುವ ಸಾಧ್ಯತೆ ಇತ್ತು. 27ನೇ ಓವರ್‌ ವೇಳೆ 124 ರನ್ನಿಗೆ 6 ಪ್ರಮುಖ ವಿಕೆಟ್‌ ಉರುಳಿತ್ತು. ಆದರೆ 7ನೇ ವಿಕೆಟಿಗೆ ಜತೆಗೂಡಿದ ನಾಯಕಿ ಹರ್ಮನ್‌ಪ್ರೀತ್‌ ಕೌರ್‌ ಮತ್ತು ಪೂಜಾ ವಸ್ತ್ರಾಕರ್‌ ಭರ್ಜರಿ ಬ್ಯಾಟಿಂಗ್‌ ನಡೆಸಿ ಪಂದ್ಯದ ಗತಿಯನ್ನೇ ಬದಲಿಸಿದರು. 18.4 ಓವರ್‌ ಜತೆಯಾಟ ನಡೆಸಿ 97 ರನ್‌ ಒಟ್ಟುಗೂಡಿಸಿದರು.

Advertisement

ಕೌರ್‌ ಕೊಡುಗೆ 88 ಎಸೆತಗಳಿಂದ 75 ರನ್‌. 88 ಎಸೆತಗಳ ಈ ಸೊಗಸಾದ ಆಟದಲ್ಲಿ 7 ಬೌಂಡರಿ ಹಾಗೂ 2 ಸಿಕ್ಸರ್‌ ಸೇರಿತ್ತು. ನಾಯಕಿಗೆ ಅಮೋಘ ಬೆಂಬಲವಿತ್ತ ಪೂಜಾ ವಸ್ತ್ರಾಕರ್‌ 65 ಎಸೆತ ಎದುರಿಸಿ ಅಜೇಯ 56 ರನ್‌ ಹೊಡೆದರು. ಸಿಡಿಸಿದ್ದು 3 ಸಿಕ್ಸರ್‌. ಬೌಲಿಂಗ್‌ನಲ್ಲೂ ಮಿಂಚಿದ ಪೂಜಾ 2 ವಿಕೆಟ್‌ ಕೆಡವಿದರು.

ಅಪಾಯಕಾರಿ ಆಟಗಾರ್ತಿ, ಲಂಕಾ ನಾಯಕಿ ಚಾಮರಿ ಅತಪಟ್ಟು ವಿಕೆಟ್‌ ಕೂಡ ಹಾರಿಸಿದ ಹರ್ಮನ್‌ಪ್ರೀತ್‌ ಕೌರ್‌ ಪಂದ್ಯಶ್ರೇಷ್ಠ ಗೌರವಕ್ಕೆ ಪಾತ್ರರಾದರು. ಜತೆಗೆ ಸರಣಿಶ್ರೇಷ್ಠ ಪ್ರಶಸ್ತಿಯೂ ಒಲಿದು ಬಂತು.

ಶಫಾಲಿ ಸರ್ವಾಧಿಕ ರನ್‌ :

ಓಪನರ್‌ ಶಫಾಲಿ ವರ್ಮ ಭಾರತ ಸರದಿಯ ಮತ್ತೋರ್ವ ಪ್ರಮುಖ ಸ್ಕೋರರ್‌. 19ನೇ ಓವರ್‌ ತನಕ ನಿಂತ ಅವರು ಸತತ 2ನೇ ಅರ್ಧ ಶತಕಕ್ಕೆ ಒಂದೇ ರನ್‌ ಅಗತ್ಯವಿರುವಾಗ ಲೆಗ್‌ ಬಿಫೋರ್‌ ಬಲೆಗೆ ಬಿದ್ದರು (50 ಎಸೆತ, 5 ಬೌಂಡರಿ). 77.50 ಸರಾಸರಿಯಲ್ಲಿ ಸರಣಿಯಲ್ಲೇ ಸರ್ವಾಧಿಕ 155 ರನ್‌ ಬಾರಿಸಿದ ಸಾಧನೆ ಇವರದಾಗಿದೆ.

ದ್ವಿತೀಯ ಪಂದ್ಯದ 10 ವಿಕೆಟ್‌ ಜಯದಲ್ಲಿ ಪ್ರಮುಖ ಪಾತ್ರ ವಹಿಸಿದ ಸ್ಮತಿ ಮಂಧನಾ ಇಲ್ಲಿ ಆರೇ ರನ್ನಿಗೆ ಔಟಾದರು. ಇದಕ್ಕಾಗಿ 20 ಎಸೆತ ಎದುರಿಸಿದ್ದರು. ಹಲೀìನ್‌ ದೇವಲ್‌ (1) ಮತ್ತು ದೀಪ್ತಿ ಶರ್ಮ (4) ಕೂಡ ವಿಫ‌ಲರಾದರು. ಶಫಾಲಿ ಮತ್ತು ಯಾಸ್ತಿಕಾ ಭಾಟಿಯ ದ್ವಿತೀಯ ವಿಕೆಟಿಗೆ 59 ರನ್‌ ಸೇರಿಸಿ ಆರಂಭಿಕ ಕುಸಿತಕ್ಕೆ ತಡೆಯಾದರು. ಯಾಸ್ತಿಕಾ ಗಳಿಕೆ 30 ರನ್‌ (38 ಎಸೆತ, 5 ಬೌಂಡರಿ).

ಹೋರಾಟ ನಡೆಸಿದ ಲಂಕಾ :

ಶ್ರೀಲಂಕಾ ಚೇಸಿಂಗ್‌ ವೇಳೆ ನಾಯಕಿ ಚಾಮರಿ ಅತಪಟ್ಟು (44), ಹಾಸಿನಿ ಪೆರೆರ (39), ನೀಲಾಕ್ಷಿ ಡಿ ಸಿಲ್ವ (ಔಟಾಗದೆ 48) ಉತ್ತಮ ಬ್ಯಾಟಿಂಗ್‌ ಪ್ರದರ್ಶಿಸಿದರು.

ರೇಣುಕಾ ಸಿಂಗ್‌ ಹೊರತುಪಡಿಸಿ ಭಾರತದ ಎಲ್ಲ ಬೌಲರ್ ವಿಕೆಟ್‌ ಕೀಳುವಲ್ಲಿ ಯಶಸ್ವಿಯಾದರು. ರಾಜೇಶ್ವರಿ ಗಾಯಕ್ವಾಡ್‌ 36ಕ್ಕೆ 3 ವಿಕೆಟ್‌ ಕಿತ್ತು ಹೆಚ್ಚಿನ ಯಶಸ್ಸು ಸಾಧಿಸಿದರು. ಮೇಘನಾ ಸಿಂಗ್‌, ಪೂಜಾ ವಸ್ತ್ರಾಕರ್‌ ಇಬ್ಬರಿಗೆ ಪೆವಿಲಿಯನ್‌ ಹಾದಿ ತೋರಿಸಿದರು.

ಸಂಕ್ಷಿಪ್ತ ಸ್ಕೋರ್‌ :

ಭಾರತ-9 ವಿಕೆಟಿಗೆ 255 (ಕೌರ್‌ 75, ಪೂಜಾ ಔಟಾಗದೆ 56, ಶಫಾಲಿ 49, ಯಾಸ್ತಿಕಾ 30, ರಣವೀರ 22ಕ್ಕೆ 2, ಚಾಮರಿ 45ಕ್ಕೆ 2, ರಶ್ಮಿ 53ಕ್ಕೆ 2). ಶ್ರೀಲಂಕಾ-47.3 ಓವರ್‌ಗಳಲ್ಲಿ 216 (ನೀಲಾಕ್ಷಿ ಔಟಾಗದೆ 48, ಚಾಮರಿ 44, ಹಾಸಿನಿ 39, ರಾಜೇಶ್ವರಿ 36ಕ್ಕೆ 3, ಮೇಘನಾ 32ಕ್ಕೆ 2, ಪೂಜಾ 33ಕ್ಕೆ 2). ಪಂದ್ಯಶ್ರೇಷ್ಠ, ಸರಣಿಶ್ರೇಷ್ಠ: ಹರ್ಮನ್‌ಪ್ರೀತ್‌ ಕೌರ್‌.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next