Advertisement

ಕಾಂಗರೂ ಬಳಿಕ ಹರಿಣಗಳೊಂದಿಗೆ ಹಣಾಹಣಿ; ಇಂದು ಭಾರತ-ದ. ಆಫ್ರಿಕಾ ಮೊದಲ ಟಿ20

12:16 AM Sep 28, 2022 | Team Udayavani |

ತಿರುವನಂತಪುರ: ವಿಶ್ವ ಚಾಂಪಿಯನ್‌ ಕಾಂಗರೂ ಪಡೆ ಟಿ20 ಸರಣಿ ಸೋತು ನಿರ್ಗಮಿಸಿದ ಬೆನ್ನಲ್ಲೇ ಚುಟುಕು ಕ್ರಿಕೆಟಿನ ಮತ್ತೊಂದು ಅಪಾಯಕಾರಿ ತಂಡವಾದ ದಕ್ಷಿಣ ಆಫ್ರಿಕಾ ತಂಡ ಭಾರತಕ್ಕೆ ಕಾಲಿಟ್ಟಿದೆ. ಬುಧವಾರವೇ ತಿರುವನಂತಪುರದಲ್ಲಿ ಸರಣಿ ಮೊದಲ್ಗೊಳ್ಳಲಿದೆ.

Advertisement

ಟೀಮ್‌ ಇಂಡಿಯಾ ಆಸ್ಟ್ರೇಲಿಯ ವಿರುದ್ಧ ಸರಣಿ ಜಯಿಸಿತಾದರೂ ತಂಡದ ಸಮಸ್ಯೆ ಸಂಪೂರ್ಣ ಬಗೆಹರಿ ದಿಲ್ಲ. ಭಾರತ ಎರಡೂ ಪಂದ್ಯಗಳನ್ನು ಗೆದ್ದದ್ದು ಬ್ಯಾಟಿಂಗ್‌ ಬಲದಿಂದ ಎಂಬುದು ಗಮನಾರ್ಹ. ಹೀಗಾಗಿ ಬೌಲಿಂಗ್‌, ಅದರಲ್ಲೂ ಡೆತ್‌ ಓವರ್‌ ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸಬೇಕಿದೆ.

ಬೌಲಿಂಗ್‌ ಸುಧಾರಣೆ ಅಗತ್ಯ
ಇತ್ತೀಚೆಗೆ ದುಬಾರಿ ಬೌಲರ್‌ ಎಂದೇ ಹಣೆಪಟ್ಟಿ ಅಂಟಿಸಿಕೊಂಡಿರುವ ಭುವ ನೇಶ್ವರ್‌ ಕುಮಾರ್‌ ಈ ಸರಣಿಯಲ್ಲಿ ಆಡುತ್ತಿಲ್ಲ. ಬಹುಶಃ ಇದರಿಂದ ತಂಡಕ್ಕೆ ನಷ್ಟಕ್ಕಿಂತ ಲಾಭವೇ ಜಾಸ್ತಿ ಇರಬಹುದು! ಆದರೆ ಆಲ್‌ರೌಂಡರ್‌ ಹಾರ್ದಿಕ್‌ ಪಾಂಡ್ಯ ಗೈರು ಖಂಡಿತವಾಗಿಯೂ ಮೈನಸ್‌ ಪಾಯಿಂಟ್‌ ಆಗಲಿದೆ. ದೀಪಕ್‌ ಹೂಡಾ ಕೂಡ ಆಡುತ್ತಿಲ್ಲ. ಇವರನ್ನು ತಂಡವಿನ್ನೂ ಸೂಕ್ತ ರೀತಿಯಲ್ಲಿ ಬಳಸಿಕೊಂಡಿಲ್ಲ ಎಂದಷ್ಟೇ ಹೇಳಬಹುದು.

ಇವರ ಬದಲು ಶ್ರೇಯಸ್‌ ಅಯ್ಯರ್‌, ಅರ್ಷದೀಪ್‌ ಸಿಂಗ್‌ ಬಂದಿದ್ದಾರೆ. ಹಾಗೆಯೇ ವಿಶ್ವಕಪ್‌ ತಂಡದ ಮೀಸಲು ಆಟಗಾರರಾಗಿರುವ ದೀಪಕ್‌ ಚಹರ್‌ ಕೂಡ ಇದ್ದಾರೆ. ಇವರನ್ನು ಆಸೀಸ್‌ ವಿರುದ್ಧ ಆಡಿಸಿರಲಿಲ್ಲ. ಹರ್ಷಲ್‌ ಪಟೇಲ್‌ಗೆ ಇನ್ನೊಂದು ಅವಕಾಶ ಸಿಕ್ಕಿದೆ.

ಯಾರ್ಕರ್‌ ಸ್ಪೆಷಲಿಸ್ಟ್‌ ಜಸ್‌ಪ್ರೀತ್‌ ಬುಮ್ರಾ ತಂಡದಲ್ಲಿ ಮುಂದುವರಿದಿದ್ದಾರೆ. ಆಸ್ಟ್ರೇಲಿಯ ವಿರುದ್ಧ ಭುವನೇಶ್ವರ್‌ ಕುಮಾರ್‌ ದುಬಾರಿಯಾದಾಗ ಬುಮ್ರಾ ಈ ಸಮಸ್ಯೆಗೆ ಪರಿಹಾರವಾದಾರು ಎಂಬ ನಿರೀಕ್ಷೆ ಬಲವಾಗಿತ್ತು. ಆದರೆ ಇವರು ಹೈದರಾಬಾದ್‌ ಪಂದ್ಯದಲ್ಲಿ ಅತ್ಯಂತ ದುಬಾರಿ ಸ್ಪೆಲ್‌ ದಾಖಲಿಸಿ ವಿಲನ್‌ ಆಗಿ ಗೋಚರಿಸಿದರು. ಇಂಥ ಸ್ಥಿತಿಯಲ್ಲಿ ಬುಮ್ರಾ, ಆರ್ಷದೀಪ್‌, ಚಹರ್‌, ಹರ್ಷಲ್‌ ಪಟೇಲ್‌ ಅವರನ್ನೊಳಗೊಂಡ ವೇಗದ ಬೌಲಿಂಗ್‌ ಕಾಂಬಿನೇಶನ್‌ ಹರಿಣಗಳನ್ನು ಎಷ್ಟರ ಮಟ್ಟಿಗೆ ಕಂಗೆಡಿಸೀತು ಎಂಬ ಪ್ರಶ್ನೆ ಸಹಜವಾಗಿಯೇ ಕಾಡುತ್ತಿದೆ.

Advertisement

ಅಕ್ಷರ್‌ ಪಟೇಲ್‌ ಟ್ರಂಪ್‌ಕಾರ್ಡ್‌
ಆಸ್ಟ್ರೇಲಿಯ ವಿರುದ್ಧ ಬೌಲಿಂಗ್‌ ನಿಯಂತ್ರಣ ಸಾಧಿಸುವ ಜತೆಗೆ ವಿಕೆಟ್‌ಗಳನ್ನೂ ಕಿತ್ತ ಏಕೈಕ ಬೌಲರ್‌ ಅಕ್ಷರ್‌ ಪಟೇಲ್‌. ಇಲ್ಲಿಯೂ ಪಟೇಲ್‌ ಟ್ರಂಪ್‌ಕಾರ್ಡ್‌ ಆಗುವ ನಿರೀಕ್ಷೆ ಹೆಚ್ಚಿದೆ. ಚಹಲ್‌ ಇವರ ಜತೆಗಾರನಾಗಿದ್ದರೂ ಹಿರಿಯ ಸ್ಪಿನ್ನರ್‌ ಆರ್‌. ಆಶ್ವಿ‌ನ್‌ ಅವರನ್ನು ಸೈಡ್‌ಲೈನ್‌ ಮಾಡಿರುವುದು ಸರಿಯಲ್ಲ.

ಓಪನಿಂಗ್‌ ಸಮಸ್ಯೆ
ಬ್ಯಾಟಿಂಗ್‌ ವಿಭಾಗದಲ್ಲಿ ಓಪನಿಂಗೇ ಭಾರತಕ್ಕೆ ಚಿಂತೆಯ ಸಂಗತಿಯಾಗಿದೆ. ಕೆ.ಎಲ್‌. ರಾಹುಲ್‌ ಇನ್ನೂ ಸಂಪೂರ್ಣ ಲಯ ಕಂಡುಕೊಂಡಿಲ್ಲ. ರೋಹಿತ್‌ ಶರ್ಮ ಅಬ್ಬರಿಸುತ್ತಾರಾದರೂ ಬಹು ತೇಕ ಸಂದರ್ಭಗಳಲ್ಲಿ ಕ್ರೀಸ್‌ ಆಕ್ರಮಿ ಸಿಕೊಳ್ಳಲು ವಿಫಲರಾಗುತ್ತಾರೆ. ಆಸೀಸ್‌ ವಿರುದ್ಧದ ಹೈದರಾಬಾದ್‌ ಪಂದ್ಯದಲ್ಲಿ “ಹಳೆಯ ಕೊಹ್ಲಿ’ಯ ದರ್ಶನವಾಗಿರುವುದು ಶುಭ ಸೂಚನೆ.

ಇದಕ್ಕಿಂತ ಮಿಗಿಲಾದುದು ಸೂರ್ಯ ಕುಮಾರ್‌ ಯಾದವ್‌ ಅವರ ವಿಸ್ಫೋಟಕ ಬ್ಯಾಟಿಂಗ್‌. ಆಸೀಸ್‌ ಕೋಚ್‌ ಹೇಳಿ ದಂತೆ, ಮುಂದಿನ ವಿಶ್ವಕಪ್‌ನಲ್ಲಿ ಸೂರ್ಯ ಅಪಾಯಕಾರಿಯಾಗಿ ಗೋಚರಿಸಲಿ ದ್ದಾರೆ. ಅದಕ್ಕೂ ಮೊದಲು ಹರಿಣಗಳ ವಿರುದ್ಧ ಇವರ ರಿಹರ್ಸಲ್‌ ಮೇಲೆ ಸಹಜ ವಾಗಿಯೇ ಕುತೂಹಲ ಮೂಡಿದೆ.
ಪಾಂಡ್ಯ ಗೈರಿನಿಂದಾಗಿ ಕೆಳ ಕ್ರಮಾಂಕದಲ್ಲಿ ಬ್ಯಾಟಿಂಗ್‌ ಸಮಸ್ಯೆ ತಲೆದೋರಬಹುದು. ಇಲ್ಲಿ ಶ್ರೇಯಸ್‌ ಅಯ್ಯರ್‌, ದಿನೇಶ್‌ ಕಾರ್ತಿಕ್‌ ಅವರನ್ನು ತಂಡ ಹೆಚ್ಚಾಗಿ ಅವಲಂಬಿಸಬೇಕಿದೆ.

ದಕ್ಷಿಣ ಆಫ್ರಿಕಾ ಬಲಿಷ್ಠ ಪಡೆ
ದಕ್ಷಿಣ ಆಫ್ರಿಕಾ ಬ್ಯಾಟಿಂಗ್‌ ಹಾಗೂ ಬೌಲಿಂಗ್‌ ವಿಭಾಗಗಳೆರಡರಲ್ಲೂ ಬಲಿಷ್ಠವಾಗಿದೆ. ಮುಖ್ಯವಾಗಿ ಐಪಿಎಲ್‌ ಆಡಿದ ಬಹುತೇಕ ಆಟಗಾರರು ಇಲ್ಲಿ ಟೊಂಕ ಕಟ್ಟಿ ನಿಂತಿದ್ದಾರೆ. ಡಿ ಕಾಕ್‌, ಮಿಲ್ಲರ್‌, ಜಾನ್ಸೆನ್‌, ಮಾರ್ಕ್‌ರಮ್‌, ನೋರ್ಜೆ, ಪ್ರಿಟೋರಿಯಸ್‌, ರಬಾಡ, ಶಮಿÕ… ಎಲ್ಲರೂ ಭಾರತದ ಟ್ರಾÂಕ್‌ಗಳಲ್ಲಿ ಪಳಗಿದವರೇ. ಹೀಗಾಗಿ ಸರಣಿ ರೋಚಕವಾಗುವುದರಲ್ಲಿ ಅನುಮಾನವಿಲ್ಲ.ಇನ್ನೊಂದು ವಿಷಯ, ಟಿ20 ವಿಶ್ವಕಪ್‌ನಲ್ಲಿ ಭಾರತ-ದಕ್ಷಿಣ ಆಫ್ರಿಕಾ ಒಂದೇ ಗ್ರೂಪ್‌ನಲ್ಲಿವೆ!

ತಿರುವನಂತಪುರದಲ್ಲಿ ಭಾರತ
ತಿರುವನಂತಪುರದಲ್ಲಿ ಈವರೆಗೆ ನಡೆದದ್ದು 2 ಟಿ20 ಮಾತ್ರ. ಎರಡರಲ್ಲೂ ಭಾರತ ಕಾಣಿಸಿಕೊಂಡಿತ್ತು. ನ್ಯೂಜಿಲ್ಯಾಂಡ್‌ ವಿರುದ್ಧ 2017ರಂದು ಆಡಲಾದ ಮೊದಲ ಪಂದ್ಯದಲ್ಲಿ 6 ರನ್ನುಗಳ ರೋಚಕ ಜಯ ಸಾಧಿಸಿದರೆ, 2019ರಲ್ಲಿ ವೆಸ್ಟ್‌ ಇಂಡೀಸ್‌ ವಿರುದ್ಧ 8 ವಿಕೆಟ್‌ ಸೋಲನುಭವಿಸಿತು. 3 ವರ್ಷಗಳ ಬಳಿಕ ಇಲ್ಲಿ ಟಿ20 ಅಂತಾರಾಷ್ಟ್ರೀಯ ಪಂದ್ಯ ನಡೆಯುತ್ತಿದೆ.

ನ್ಯೂಜಿಲ್ಯಾಂಡ್‌ ವಿರುದ್ಧ ನಡೆದದ್ದು ಸರಣಿ ನಿರ್ಣಾಯಕ ಪಂದ್ಯವಾಗಿತ್ತು. 1-1 ಸಮಬಲದೊಂದಿಗೆ ಇತ್ತಂಡಗಳು ಇಲ್ಲಿಗೆ ಆಗಮಿಸಿದ್ದವು. ಮಳೆಯಿಂದಾಗಿ ಈ ಪಂದ್ಯ 8 ಓವರ್‌ಗಳಿಗೆ ಸೀಮಿತಗೊಂಡಿತ್ತು. ವಿರಾಟ್‌ ಕೊಹ್ಲಿ ನೇತೃತ್ವದ ಭಾರತ 5 ವಿಕೆಟಿಗೆ 67 ರನ್‌ ಮಾಡಿದರೆ, ಕೇನ್‌ ವಿಲಿಯಮ್ಸನ್‌ ಪಡೆ 6 ವಿಕೆಟಿಗೆ 61 ರನ್‌ ಮಾಡಿ ಶರಣಾಯಿತು. ಬುಮ್ರಾ 9 ರನ್ನಿಗೆ 2 ವಿಕೆಟ್‌ ಕಿತ್ತು ಪಂದ್ಯಶ್ರೇಷ್ಠರೆನಿಸಿದರು.

ವಿಂಡೀಸ್‌ ವಿರುದ್ಧ ಸೋಲು
ವೆಸ್ಟ್‌ ಇಂಡೀಸ್‌ ವಿರುದ್ಧ ಭಾರತ 7ಕ್ಕೆ 170 ರನ್‌ ಪೇರಿಸಿಯೂ ಇದನ್ನು ಉಳಿಸಿಕೊಳ್ಳಲು ವಿಫಲವಾಯಿತು. ವಿಂಡೀಸ್‌ 18.3 ಓವರ್‌ಗಳಲ್ಲಿ ಎರಡೇ ವಿಕೆಟಿಗೆ 173 ರನ್‌ ಬಾರಿಸಿ ಸರಣಿಯನ್ನು 1-1 ಸಮಬಲಕ್ಕೆ ತಂದಿತು. ಲೆಂಡ್ಲ್ ಸಿಮನ್ಸ್‌ ಅಜೇಯ 67, ಎವಿನ್‌ ಲೂಯಿಸ್‌ 40, ನಿಕೋಲಸ್‌ ಪೂರಣ್‌ ಅಜೇಯ 38 ರನ್‌ ಬಾರಿಸಿ ಭಾರತವನ್ನು ಕಾಡಿದರು.

ಭಾರತದ ಪರ ಶಿವಂ ದುಬೆ ಏಕೈಕ ಅರ್ಧ ಶತಕಕ್ಕೆ ಸಾಕ್ಷಿಯಾದರು (54). ರಿಷಭ್‌ ಪಂತ್‌ ಅಜೇಯ 33 ರನ್‌ ಹೊಡೆದರು.

ತಂಡಗಳು
ಭಾರತ:
ರೋಹಿತ್‌ ಶರ್ಮ (ನಾಯಕ), ಕೆ.ಎಲ್‌. ರಾಹುಲ್‌, ವಿರಾಟ್‌ ಕೊಹ್ಲಿ, ಸೂರ್ಯಕುಮಾರ್‌ ಯಾದವ್‌, ರಿಷಭ್‌ ಪಂತ್‌, ದಿನೇಶ್‌ ಕಾರ್ತಿಕ್‌, ಆರ್‌. ಅಶ್ವಿ‌ನ್‌, ಯಜುವೇಂದ್ರ ಚಹಲ್‌, ಅಕ್ಷರ್‌ ಪಟೇಲ್‌, ಅರ್ಷದೀಪ್‌ ಸಿಂಗ್‌, ಹರ್ಷಲ್‌ ಪಟೇಲ್‌, ದೀಪಕ್‌ ಚಹರ್‌, ಜಸ್‌ಪ್ರೀತ್‌ ಬುಮ್ರಾ.

ದಕ್ಷಿಣ ಆಫ್ರಿಕಾ:
ಟೆಂಬ ಬವುಮ (ನಾಯಕ), ಕ್ವಿಂಟನ್‌ ಡಿ ಕಾಕ್‌,  ಫಾರ್ಚುನ್‌, ರೀಝ ಹೆಂಡ್ರಿಕ್ಸ್‌, ಹೆನ್ರಿಚ್‌ ಕ್ಲಾಸೆನ್‌, ಮಾರ್ಕೊ ಜಾನ್ಸೆನ್‌, ಕೇಶವ್‌ ಮಹಾರಾಜ್‌, ಐಡನ್‌ ಮಾರ್ಕ್‌ರಮ್‌, ಡೇವಿಡ್‌ ಮಿಲ್ಲರ್‌, ಲುಂಗಿ ಎನ್‌ಗಿಡಿ, ಆ್ಯನ್ರಿಚ್‌ ನೋರ್ಜೆ, ವೇನ್‌ ಪಾರ್ನೆಲ್‌, ಆ್ಯಂಡಿಲ್‌ ಫೆಲುಕ್ವಾಯೊ, ಡ್ವೇನ್‌ ಪ್ರಿಟೋರಿಯಸ್‌, ಕಾಗಿಸೊ ರಬಾಡ, ರಿಲೀ ರೋಸ್ಯೂ, ತಬ್ರೇಜ್‌ , ಟ್ರಿಸ್ಟನ್‌ ಸ್ಟಬ್ಸ್.

ಇಂದಿನ ಪಂದ್ಯ
ಮೊದಲ ಟಿ20
ಭಾರತ- ದ. ಆಫ್ರಿಕಾ
ಸ್ಥಳ: ತಿರುವನಂತಪುರ
ಆರಂಭ: 7.00
ಪ್ರಸಾರ: ಸ್ಟಾರ್‌ ಸ್ಪೋರ್ಟ್ಸ್

“ಚೆಂಡನ್ನು ಎದುರಿಸುವುದು ಸವಾಲು’
ತಿರುವನಂತಪುರ: ಬುಧವಾರ ಇಲ್ಲಿ ಆರಂಭವಾಗ ಲಿರುವ ಭಾರತ ವಿರುದ್ಧದ ಮೂರು ಪಂದ್ಯಗಳ ಟಿ20 ಸರಣಿಯ ವೇಳೆ ಪವರ್‌ಪ್ಲೇಯಲ್ಲಿ ಸ್ವಿಂಗ್‌ ಆಗುವ ಚೆಂಡನ್ನು ಎದುರಿಸುವುದು ತಮ್ಮ ತಂಡದ ಆಟಗಾರರಿಗೆ ಪ್ರಮುಖ ಸವಾಲು ಆಗಿದೆ ಎಂದು ದಕ್ಷಿಣ ಆಫ್ರಿಕಾ ತಂಡದ ನಾಯಕ ತೆಂಬಾ ಬವುಮ ಹೇಳಿದ್ದಾರೆ.

ಭಾರತೀಯ ಬೌಲರ್‌ಗಳ ನಿರ್ವಹಣೆ ಮತ್ತು ಬ್ಯಾಟ್ಸ್‌ಮನ್‌ಗಳ ಸಾಧನೆ ಬಗ್ಗೆ ಮೆಚ್ಚುಗೆಯ ಮಾತುಗಳನ್ನಾಡಿದ ಬವುಮ ನಾವು ಬಹಳಷ್ಟು ಎಚ್ಚರಿಕೆಯಿಂದ ಆಡಬೇಕಾಗಿದೆ ಎಂದಿದ್ದಾರೆ. ಕಳೆದ ಬಾರಿ ಇಲ್ಲಿಗೆ ಬಂದ ವೇಳೆ ನಾವು ಸವಾಲನ್ನು ದಿಟ್ಟವಾಗಿ ಎದುರಿಸಿದ್ದೇವೆ. ಈ ಸರಣಿಯೂ ಸ್ಪರ್ಧಾತ್ಮಕವಾಗಿ ಸಾಗುವ ನಿರೀಕ್ಷೆ ಯಿದೆ. ವಿಶ್ವಕಪ್‌ ಮೊದಲು ಇದು ನಮ್ಮ ಪಾಲಿಗೆ ಕೊನೆಯ ಸರಣಿ. ಹಾಗಾಗಿ ಉತ್ತಮ ಪ್ರದರ್ಶನ ನೀಡಲು ಪ್ರಯತ್ನಿಸಲಿದ್ದೇವೆ ಎಂದುಬವುಮ ವಿವರಿಸಿದರು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next