ರಾಜ್‌ಕೋಟ್: ಸತತ ಎರಡು ಸೋಲುಗಳ ಬಳಿಕ ವಿಶಾಖಪಟ್ಟಣದಲ್ಲಿ ಮೈಚಳಿ ಬಿಟ್ಟು ಆಡಿದ ಭಾರತದ ಯುವ ಪಡೆ ದಕ್ಷಿಣ ಆಫ್ರಿಕಾವನ್ನು ಮಣಿಸುವಲ್ಲಿ ಯಶಸ್ವಿಯಾಗಿದೆ. ಸರಣಿ ಜೀವಂತವಾಗಿ ಉಳಿದಿದೆ. ಶುಕ್ರವಾರ ರಾಜ್‌ಕೋಟ್‌ನಲ್ಲಿ 4ನೇ ಮುಖಾಮುಖಿ ಏರ್ಪಡಲಿದ್ದು, ಇದನ್ನೂ ಗೆಲ್ಲಬೇಕಾದ ಒತ್ತಡ ಪಂತ್ ಪಡೆಯ ಮೇಲಿದೆ.
ತೃತೀಯ ಪಂದ್ಯದಲ್ಲಿ ಭಾರತ ಬ್ಯಾಟಿಂಗ್ ಹಾಗೂ ಬೌಲಿಂಗ್ ವಿಭಾಗಳೆರಡರಲ್ಲೂ ಉತ್ತಮ ಪ್ರದರ್ಶನ ನೀಡಿತ್ತು ನಿಜ, ಆದರೆ ಭಾರತದ ಬ್ಯಾಟಿಂಗ್ ಸರದಿಯಲ್ಲಿ ಕ್ಲಿಕ್ ಆದವರು ಆರಂಭಿಕರಾದ ಇಶಾನ್ ಕಿಶನ್ ಮತ್ತು ಋತುರಾಜ್ ಗಾಯಕ್ವಾಡ್ ಮಾತ್ರ. ಇವರಲ್ಲಿ ಇಶಾನ್ ಕಿಶನ್ ಹಿಂದಿನ ಲಯದಲ್ಲೇ ಸಾಗಿ ಸರಣಿಯಲ್ಲಿ 2ನೇ ಅರ್ಧ ಶತಕ ಬಾರಿಸಿದರು. ಗಾಯಕ್ವಾಡ್ ಮೊದಲ ಟಿ20 ಅರ್ಧ ಶತಕದ ಸಂಭ್ರಮ ಆಚರಿಸಿದರು. ಇವರಿಬ್ಬರನ್ನು ಬಿಟ್ಟರೆ ಮಿಂಚಿದ್ದು ಹಾರ್ದಿಕ್ ಪಾಂಡ್ಯ ಮಾತ್ರ (31).
ಉಳಿದಂತೆ ಶ್ರೇಯಸ್ ಅಯ್ಯರ್ (14), ಕ್ಯಾಪ್ಟನ್ ರಿಷಭ್ ಪಂತ್ ಮತ್ತು ದಿನೇಶ್ ಕಾರ್ತಿಕ್ (ತಲಾ 6) ಬ್ಯಾಟಿಂಗ್ ವೈಫಲ್ಯ ಅನುಭವಿಸಿದ್ದಾರೆ. ಇವರಲ್ಲಿ ಅಯ್ಯರ್ ಮತ್ತು ಕಾರ್ತಿಕ್ ಫಾರ್ಮ್ ಬಗ್ಗೆ ಆತಂಕವಿಲ್ಲ. ಆದರೆ ಪಂತ್ ಮಾತ್ರ ಸತತ ವೈಫಲ್ಯ ಕಾಣುತ್ತಿದ್ದಾರೆ. ನಾಯಕತ್ವದ ಒತ್ತಡದಿಂದ ಹೀಗಾಗುತ್ತಿದೆ ಎಂದೂ ಹೇಳುವಂತಿಲ್ಲ, ಈ ಜವಾಬ್ದಾರಿ ಲಭಿಸುವ ಮೊದಲೇ ಅವರು ರನ್ ಗಳಿಕೆಗೆ ಚಡಪಡಿಸುತ್ತಿದ್ದರು. ಇದಕ್ಕೆ ಐಪಿಎಲ್‌ಗಿಂತ ಉತ್ತಮ ನಿದರ್ಶನ ಬೇಕಿಲ್ಲ.
ಈ ನಡುವೆ ಮುಂದಿನ ಐರ್ಲೆಂಡ್ ಸರಣಿಗಾಗಿ ರಿಷಭ್ ಪಂತ್ ಅವರಿಗೆ ವಿಶ್ರಾಂತಿ ನೀಡಿ, ಐಪಿಎಲ್ ಚಾಂಪಿಯನ್ ಗುಜರಾತ್ ಟೈಟಾನ್ಸ್ ತಂಡದ ಸಾರಥಿ ಹಾರ್ದಿಕ್ ಪಾಂಡ್ಯ ಅವರಿಗೆ ಕ್ಯಾಪ್ಟನ್ಸಿ ನೀಡಿದ ವಿದ್ಯಮಾನವೂ ನಡೆದಿದೆ. ಇದು ಕೂಡ ಇವರಿಬ್ಬರ ಆಟದ ಮೇಲೆ ಪ್ರಭಾವ ಬೀರುವ ಸಾಧ್ಯತೆ ಇದ್ದೇ ಇದೆ. ಇದು ಸಕಾರಾತ್ಮಕ ಪರಿಣಾಮವಾದರೆ ತಂಡಕ್ಕೆ ಲಾಭವೇ ಹೆಚ್ಚು.
Related Articles
ವಿಶಾಖಪಟ್ಟಣದಲ್ಲಿ ಆರಂಭಿಕರ ನಿರ್ಗಮನದ ಬಳಿಕ ತಂಡದ ಮಧ್ಯಮ ಕ್ರಮಾಂಕ ಅದುರುತ್ತಿದ್ದಾಗ ಮೊತ್ತವನ್ನು 180ರ ಗಡಿಯ ತನಕ ವಿಸ್ತರಿಸಿದ್ದೇ ಹಾರ್ದಿಕ್ ಪಾಂಡ್ಯ. ಇದೀಗ ಮೊದಲ ಸಲ ಟೀಮ್ ಇಂಡಿಯಾದ ಕ್ಯಾಪ್ಟನ್ ಆಗಿದ್ದಾರೆ. ಈ ಖುಷಿ ಕೊನೆಯೆರಡು ಟಿ20 ಪಂದ್ಯಗಳಲ್ಲಿ ಮೇಳೈಸಬೇಕಿದೆ.
ಬೌಲಿಂಗ್ ಯಶಸ್ಸು :
ವಿಶಾಖಪಟ್ಟಣದಲ್ಲಿ ಭಾರತದ ಬೌಲಿಂಗ್ ವಿಭಾಗ ಸರಣಿಯಲ್ಲೇ ಮೊದಲ ಸಲ ಯಶಸ್ಸು ಕಂಡಿತ್ತು. ಹರಿಣಗಳ ನಾಡಿನ ಬಿಗ್ ಹಿಟ್ಟರ್‌ಗಳ ಸದ್ದಡಗಿತ್ತು. ಹರ್ಷಲ್ ಪಟೇಲ್, ಯಜುವೇಂದ್ರ ಚಹಲ್ ಒಟ್ಟು 7 ವಿಕೆಟ್ ಕಿತ್ತು ಪ್ರವಾಸಿಗರಿಗೆ ಹೆಚ್ಚಿನ ಹಾನಿ ಮಾಡಿದ್ದರು. ಭುವನೇಶ್ವರ್, ಅಕ್ಷರ್ ಪಟೇಲ್ ಕೂಡ ಉತ್ತಮ ನಿಯಂತ್ರಣ ಸಾಧಿಸಿದ್ದರು. ದಕ್ಷಿಣ ಆಫ್ರಿಕಾವನ್ನು 131ಕ್ಕೆ ಆಲೌಟ್ ಮಾಡಿದ್ದು ಸಾಮಾನ್ಯ ಸಾಧನೆಯೇನಲ್ಲ.
ಈ ಗೆಲುವಿನ ಹೊರತಾಗಿಯೂ ತಂಡದ ಬೌಲಿಂಗ್ ವಿಭಾಗವನ್ನು ಇನ್ನಷ್ಟು ಬಲಿಷ್ಠಗೊಳಿಸುವ ನಿಟ್ಟಿನಲ್ಲಿ ಸೂಕ್ತ ಬದಲಾವಣೆ ಮಾಡಿಕೊಳ್ಳಬೇಕಿದೆ. ಆವೇಶ್ ಖಾನ್ ಬದಲು ಉಮ್ರಾನ್ ಮಲಿಕ್ ಅಥವಾ ಆರ್ಷದೀಪ್ ಸಿಂಗ್ ಅವರಿಗೆ ಅವಕಾಶ ಕೊಟ್ಟು ನೋಡಬೇಕು.
ಡಿ ಕಾಕ್ ಪುನರಾಗಮನ?:
ದಕ್ಷಿಣ ಆಫ್ರಿಕಾ ಓಪನರ್ ಕ್ವಿಂಟನ್ ಡಿ ಕಾಕ್ ಅವರ ಪುನರಾಗಮನವನ್ನು ಎದುರು ನೋಡುತ್ತಿದೆ. ಹಾಗೆಯೇ ಸ್ಪಿನ್‌ದ್ವಯರಾದ ಕೇಶವ್ ಮಹಾರಾಜ್ ಮತ್ತು ತಬ್ರೇಜ್ ಶಮ್ಸಿ ಅವರ ಮ್ಯಾಜಿಕ್ ನಿರೀಕ್ಷೆಯಲ್ಲಿದೆ. ಆದರೆ ಇವೆಲ್ಲದರ ಹೊರತಾಗಿಯೂ ದಕ್ಷಿಣ ಆಫ್ರಿಕಾ ಬಲಿಷ್ಠವಾಗಿಯೇ ಇದೆ. ಮೂರನೇ ಮೆಟ್ಟಿಲಲ್ಲಿ ಎಡವಿದರೂ ಎದ್ದು ನಿಲ್ಲುವ ತಾಕತ್ತು ಇದ್ದೇ ಇದೆ. ಹೀಗಾಗಿ ಭಾರತ ಹೆಚ್ಚು ಎಚ್ಚರಿಕೆಯಿಂದ ಆಡಿ ಸರಣಿಯನ್ನು ಬೆಂಗಳೂರಿನ ಅಂತಿಮ ಪಂದ್ಯಕ್ಕೆ ವಿಸ್ತರಿಸಬೇಕಿದೆ.