Advertisement

ಈಡನ್‌ನಲ್ಲಿ ಚಿಗುರಿದೆ ಕ್ಲೀನ್‌ ಸ್ವೀಪ್ ಕನಸು

10:01 PM Nov 20, 2021 | Team Udayavani |

ಕೋಲ್ಕತಾ: ವಿಶ್ವಕಪ್‌ ರನ್ನರ್ಅಪ್‌ ನ್ಯೂಜಿಲ್ಯಾಂಡ್‌ ವಿರುದ್ಧ ಎರಡೇ ಪಂದ್ಯಗಳಲ್ಲಿ ಸರಣಿ ಗೆದ್ದು ಬೀಗುತ್ತಿರುವ ಭಾರತ ರವಿವಾರ ಕೋಲ್ಕತಾದ “ಈಡನ್‌ ಗಾರ್ಡನ್ಸ್‌’ನಲ್ಲಿ ಕ್ಲೀನ್‌ ಸ್ವೀಪ್ ಗುರಿಯೊಂದಿಗೆ ಆಡಲಿಳಿಯಲಿದೆ. ಇದರಲ್ಲಿ ಯಶಸ್ವಿಯಾದರೆ ಟಿ20 ವೈಫ‌ಲ್ಯಕ್ಕೆ ಒಂದು ಹಂತದ ಸಮಾಧಾನ ಸಿಗಲಿದೆ. ಇನ್ನೊಂದೆಡೆ, ಸರಣಿಯ ಅಂತಿಮ ಪಂದ್ಯವನ್ನಾದರೂ ಗೆದ್ದು ಮುಖಭಂಗ ತಪ್ಪಿಸಿಕೊಳ್ಳುವ ಪ್ರಯತ್ನ ನ್ಯೂಜಿಲ್ಯಾಂಡ್‌ನ‌ದ್ದು.

Advertisement

ಎರಡೂ ಪಂದ್ಯಗಳಲ್ಲಿ ಭಾರತ ಅಧಿಕಾರಯುತವಾಗಿಯೇ ನ್ಯೂಜಿಲ್ಯಾಂಡನ್ನು ಮಣಿಸಿತ್ತೆಂಬುದು ಉಲ್ಲೇಖನೀಯ. ಕಿವೀಸ್‌ ಆರಂಭದಲ್ಲಿ ಅಬ್ಬರಿಸಿದರೂ ಡೆತ್‌ ಓವರ್‌ಗಳಲ್ಲಿ ಆತಿಥೇಯರ ಬಿಗಿ ದಾಳಿಗೆ ಸಿಲುಕಿ ಒದ್ದಾಡಿತು. ಹೀಗಾಗಿ ರನ್‌ರೇಟ್‌ನಲ್ಲಿ ತೀವ್ರ ಕುಸಿತ ಸಂಭವಿಸಿತು. ಚೇಸಿಂಗ್‌ ವೇಳೆ ರೋಹಿತ್‌-ರಾಹುಲ್‌ ಪ್ರಚಂಡ ಆರಂಭ ಒದಗಿಸಿದ್ದರಿಂದ ಭಾರತವೆಲ್ಲೂ ಒತ್ತಡಕ್ಕೆ ಒಳಗಾಗಲಿಲ್ಲ.

“ಸಿಟಿ ಆಫ್ ಜಾಯ್‌’ ಎನಿಸಿರುವ ಕೋಲ್ಕತಾದಲ್ಲಿ ರೋಹಿತ್‌ ಪಡೆಗೆ ಮೊದಲು ಬ್ಯಾಟಿಂಗ್‌ ನಡೆಸುವ ಅವಕಾಶ ಸಿಕ್ಕಿದರೆ ಆಗೇನಾದೀತು ಎಂಬುದನ್ನು ಕಾಣುವ ಕುತೂಹಲ ಕ್ರಿಕೆಟ್‌ ಅಭಿಮಾನಿಗಳದ್ದು. ರೋಹಿತ್‌ ಮತ್ತೆ ಟಾಸ್‌ ಗೆದ್ದರೆ ಬಹುಶಃ ಅಸಾಧ್ಯ!

ಮೀಸಲು ಸಾಮರ್ಥ್ಯ:

ಅಂತಿಮ ಪಂದ್ಯಕ್ಕಾಗಿ ಭಾರತ ತಂಡದಲ್ಲಿ ಕೆಲವು ಬದಲಾವಣೆ ಸಂಭವಿಸುವುದರಲ್ಲಿ ಅನುಮಾನವಿಲ್ಲ. ತಂಡದ ಮೀಸಲು ಸಾಮರ್ಥ್ಯವನ್ನೂ ಇದರಿಂದ ಪರೀಕ್ಷಿಸಿದಂತಾಗುತ್ತದೆ.

Advertisement

ಕೆ.ಎಲ್‌. ರಾಹುಲ್‌ ಅವರಿಗೆ ವಿಶ್ರಾಂತಿ ನೀಡುವ ಮೂಲಕ ರೋಹಿತ್‌ ತಮ್ಮ ಆರಂಭಿಕ ಜತೆಗಾರನನ್ನು ಬದಲಿಸಿಕೊಳ್ಳುವ ಸಾಧ್ಯತೆ ಇದೆ. ಆಗ ಈ ಅವಕಾಶ ಋತುರಾಜ್‌ ಗಾಯಕ್ವಾಡ್‌ ಪಾಲಾದೀತು. ಐಪಿಎಲ್‌ನಲ್ಲಿ “ಆರೇಂಜ್‌ ಕ್ಯಾಪ್‌’ ಧರಿಸಿದ ಹೆಗ್ಗಳಿಕೆ ಗಾಯಕ್ವಾಡ್‌ ಅವರದೆಂಬುದನ್ನು ಮರೆಯುವಂತಿಲ್ಲ.

ಇಶಾನ್‌ ಕಿಶನ್‌, ಆವೇಶ್‌ ಖಾನ್‌, ಯಜುವೇಂದ್ರ ಚಹಲ್‌ “ವೇಟಿಂಗ್‌ ಲಿಸ್ಟ್‌’ನಲ್ಲಿರುವ ಉಳಿದ ಕ್ರಿಕೆಟಿಗರು. ರಿಷಭ್‌ ಪಂತ್‌, ಭುವನೇಶ್ವರ್‌ ಕುಮಾರ್‌, ದೀಪಕ್‌ ಚಹರ್‌, ಆರ್‌. ಅಶ್ವಿ‌ನ್‌, ಅಕ್ಷರ್‌ ಪಟೇಲ್‌ ಅವರಲ್ಲಿ ಕೆಲವರಿಗೆ ರೆಸ್ಟ್‌ ನೀಡಿದರೆ ಇವರಿಗೆಲ್ಲ ಆಡುವ ಅವಕಾಶ ಲಭಿಸಿಲಿದೆ. ಆಗ ಪಂತ್‌ ಬದಲು ಇಶಾನ್‌ ಕಿಶನ್‌ ಕೀಪಿಂಗ್‌ ನಡೆಸಲಿದ್ದಾರೆ. ಪಂತ್‌ ವಿಶ್ವ ಟೆಸ್ಟ್‌ ಚಾಂಪಿಯನ್‌ಶಿಪ್‌ ಆರಂಭದಿಂದಲೂ ನಿರಂತರವಾಗಿ ಆಡುತ್ತಲೇ ಇದ್ದಾರೆ. ಆದರೆ ಏಕಕಾಲಕ್ಕೆ 4 ಬದಲಾವಣೆ ಮಾಡಿಕೊಳ್ಳುವುದು ಕೆಲವೊಮ್ಮೆ “ಗ್ಯಾಂಬ್ಲಿಂಗ್‌’ ಎನಿಸುವುದು ಸುಳ್ಳಲ್ಲ!

ಬಹಳ ಕಾಲದ ಬಳಿಕ ಟಿ20 ಆಡಿದ ಅಶ್ವಿ‌ನ್‌ ಎರಡೂ ಪಂದ್ಯಗಳಲ್ಲಿ ಉತ್ತಮ ಬೌಲಿಂಗ್‌ ಪ್ರದರ್ಶಿಸಿದ್ದಾರೆ. 23ಕ್ಕೆ 2, 19ಕ್ಕೆ 1 ವಿಕೆಟ್‌ ಉರುಳಿಸಿದ್ದು, “ಸರಣಿಶ್ರೇಷ್ಠ’ ಪ್ರಶಸ್ತಿಯ ಸನಿಹದಲ್ಲಿದ್ದಾರೆ. ಹೀಗಾಗಿ ಇವರ ಬದಲು ಅಕ್ಷರ್‌ ಪಟೇಲ್‌ ಅವರನ್ನೇ ಕೈಬಿಡುವ ಬಗ್ಗೆ ಯೋಚಿಸಲಾಗುತ್ತಿದೆ.

ಹಾಗೆಯೇ ಆಲ್‌ರೌಂಡರ್‌ ವೆಂಕಟೇಶ್‌ ಅಯ್ಯರ್‌ ಅವರನ್ನೂ ಎರಡೂ ಪಂದ್ಯಗಳಲ್ಲಿ ಸರಿಯಾಗಿ ಬಳಸಿಕೊಳ್ಳಲಿಲ್ಲ. ರಾಂಚಿಯಲ್ಲೂ ಅವರನ್ನು ಬೌಲಿಂಗ್‌ನಿಂದ ದೂರ ಇರಿಸಲಾಗಿದೆ. ಮುಂದಿನ ಟಿ20 ವಿಶ್ವಕಪ್‌ಗೆ ತಂಡವನ್ನು ರಚಿಸುವ ಉದ್ದೇಶ ಭಾರತದ್ದಾದ್ದರಿಂದ ಇಂಥ ಪ್ರತಿಭಾನ್ವಿತರನ್ನು ಸರಿಯಾಗಿ ದುಡಿಸಿಕೊಳ್ಳಬೇಕಿದೆ.

ಕಿವೀಸ್‌ ದುರ್ಬಲವೇನಲ್ಲ:

ನಾಯಕ ಕೇನ್‌ ವಿಲಿಯಮ್ಸನ್‌ ಗೈರಲ್ಲೂ ನ್ಯೂಜಿಲ್ಯಾಂಡ್‌ ದುರ್ಬಲ ತಂಡವನ್ನೇನೂ ಹೊಂದಿಲ್ಲ. ಸಾಕಷ್ಟು ಮಂದಿ ಟಿ20 ಸ್ಪೆಷಲಿಸ್ಟ್‌ಗಳಿದ್ದಾರೆ. ಆದರೆ ಆರಂಭದ ಅಬ್ಬರ ಡೆತ್‌ ಓವರ್‌ ಶುರುವಾಗು ವೇಳೆ ತಣ್ಣಗಾಗುತ್ತದೆ! ಭಾರತ ಮಾತ್ರ ಇನ್ನಷ್ಟು ರನ್‌ ಇದ್ದರೂ ಚೇಸ್‌ ಮಾಡಬಲ್ಲೆ ಎಂಬ ಜೋಶ್‌ನಲ್ಲೇ ಬ್ಯಾಟಿಂಗ್‌ ನಡೆಸುತ್ತ ಬಂದಿದೆ.

ಈಡನ್‌ ಗಾರ್ಡನ್ಸ್‌ “ಬ್ಯಾಟಿಂಗ್‌ ಬ್ಯೂಟಿ’ ಟ್ರ್ಯಾಕ್‌ ಹೊಂದಿದೆ. ಆದರೆ ಮಂಜಿನ ಪ್ರಭಾವ ಇರುವುದರಿಂದ ಚೇಸಿಂಗ್‌ ನಡೆಸುವ ತಂಡಕ್ಕೆ ಲಾಭ ಹೆಚ್ಚು.

ಕೋಲ್ಕತಾದಲ್ಲಿ ಮೊದಲ ಮುಖಾಮುಖಿ :

ಕೋಲ್ಕತಾದಲ್ಲಿ ಭಾರತ ಈವರೆಗೆ 4 ಟಿ20 ಪಂದ್ಯಗಳನ್ನಾಡಿದ್ದು, ಎರಡನ್ನು ಗೆದ್ದಿದೆ. ಒಂದರಲ್ಲಿ ಸೋಲನುಭವಿಸಿದೆ. ದಕ್ಷಿಣ ಆಫ್ರಿಕಾ ಎದುರಿನ 2015ರ ಪಂದ್ಯ ರದ್ದುಗೊಂಡಿದೆ.

ಭಾರತ-ನ್ಯೂಜಿಲ್ಯಾಂಡ್‌ “ಈಡನ್‌ ಗಾರ್ಡನ್ಸ್‌’ನಲ್ಲಿ ಈ ತನಕ ಮುಖಾಮುಖೀ ಆಗಿಲ್ಲ. ಆದರೆ ನ್ಯೂಜಿಲ್ಯಾಂಡ್‌ 2016 ಟಿ20 ವಿಶ್ವಕಪ್‌ ವೇಳೆ ಇಲ್ಲಿ ಬಾಂಗ್ಲಾದೇಶವನ್ನು ಎದುರಿಸಿ 75 ರನ್ನುಗಳ ಭರ್ಜರಿ ಜಯ ದಾಖಲಿಸಿದೆ.

ಭಾರತದ 2 ಗೆಲುವು ಪಾಕಿಸ್ಥಾನ ಹಾಗೂ ವೆಸ್ಟ್‌ ಇಂಡೀಸ್‌ ವಿರುದ್ಧ ಒಲಿದಿದೆ. 2016ರ ಟಿ20 ವಿಶ್ವಕಪ್‌ನಲ್ಲಿ ಪಾಕ್‌ 6 ವಿಕೆಟ್‌ಗಳಿಂದ ಭಾರತಕ್ಕೆ ಶರಣಾಗಿತ್ತು.

ಭಾರತ ಇಲ್ಲಿ ಕೊನೆಯ ಟಿ20 ಆಡಿದ್ದು ವೆಸ್ಟ್‌ ಇಂಡೀಸ್‌ ವಿರುದ್ಧ, 2018ರಲ್ಲಿ. ಇದನ್ನು ರೋಹಿತ್‌ ಪಡೆ 5 ವಿಕೆಟ್‌ಗಳಿಂದ ಗೆದ್ದಿತ್ತು. ಅನಂತರ ಈಡನ್‌ನಲ್ಲಿ ಟಿ20 ಅಂತಾರಾಷ್ಟ್ರೀಯ ಪಂದ್ಯ ನಡೆಯುತ್ತಿರುವುದು ಇದೇ ಮೊದಲು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next