ಅಡಿಲೇಡ್: ಅಮೋಘ ಹೋರಾಟದ ಹೊರತಾಗಿಯೂ ಆತಿಥೇಯ ಆಸ್ಟ್ರೇಲಿಯ ಎದುರಿನ ಹಾಕಿ ಟೆಸ್ಟ್ ಸರಣಿಯಲ್ಲಿ ಭಾರತ ಸತತ 2ನೇ ಸೋಲನುಭವಿಸಿದೆ.
ಭಾನುವಾರದ ದ್ವಿತೀಯ ಟೆಸ್ಟ್‌ನಲ್ಲಿ ಆತಿಥೇಯ ಆಸೀಸ್ 7-4 ಗೋಲುಗಳ ವಿಜಯೋತ್ಸವ ಆಚರಿಸಿತು. ಇದು ಭಾರತದೆದುರು ಆಸ್ಟ್ರೇಲಿಯ ಸಾಧಿಸಿದ ಸತತ 12ನೇ ಗೆಲುವು. ಸರಣಿಯ ಮೊದಲ ಪಂದ್ಯವನ್ನು ಆಸೀಸ್ 5-4 ಅಂತರದಿಂದ ಜಯಿಸಿತ್ತು.
ಬ್ಲೇಕ್ ಗೋವರ್ ಅವರ ಹ್ಯಾಟ್ರಿಕ್ ಆಸ್ಟ್ರೇಲಿಯ ಆಟದ ಆಕರ್ಷಣೆ ಆಗಿತ್ತು. ಅವರು ಪಂದ್ಯದ 12ನೇ, 27ನೇ ಹಾಗೂ 53ನೇ ನಿಮಿಷದಲ್ಲಿ ಗೋಲು ಸಿಡಿಸಿದರು. 2 ಗೋಲುಗಳು ಜಾಕ್ ವೆಲ್ಶ್ ಅವರಿಂದ ದಾಖಲಾದವು (17ನೇ ಮತ್ತು 24ನೇ ನಿಮಿಷ). ಜೇಕ್ ವೆಟನ್ (48ನೇ ನಿಮಿಷ) ಮತ್ತು ಜೇಕಬ್ ಆ್ಯಂಡರ್ಸನ್ (49ನೇ ನಿಮಿಷ) ತಲಾ ಒಂದು ಗೋಲು ಹೊಡೆದರು.
ಈ ಪಂದ್ಯದಲ್ಲಿ ಮೊದಲ ಗೋಲು ಬಾರಿಸಿದ್ದೇ ಭಾರತ. 3ನೇ ನಿಮಿಷದಲ್ಲೇ ನಾಯಕ ಹರ್ಮನ್‌ಪ್ರೀತ್ ಸಿಂಗ್ ಪೆನಾಲ್ಟಿಯೊಂದನ್ನು ಯಶಸ್ವಿಯಾಗಿ ಗೋಲಾಗಿಸಿದ್ದರು. ಹಾರ್ದಿಕ್ ಸಿಂಗ್ (25ನೇ ನಿಮಿಷ) ಹಾಗೂ ಮೊಹಮ್ಮದ್ ರಾಹೀಲ್ (36ನೇ ನಿಮಿಷ) ಉಳಿದೆರಡು ಗೋಲಿಗೆ ಸಾಕ್ಷಿಯಾಗಿದ್ದರು. 60ನೇ ನಿಮಿಷದಲ್ಲಿ ಹರ್ಮನ್‌ಪ್ರೀತ್ ಅವರಿಂದ ಇನ್ನೊಂದು ಗೋಲು ದಾಖಲಾಯಿತು. ಇದರಿಂದ ಸೋಲಿನ ಅಂತರವಷ್ಟೇ ಕಡಿಮೆಗೊಂಡಿತು. ಸರಣಿಯ 3ನೇ ಟೆಸ್ಟ್ ಪಂದ್ಯ ಬುಧವಾರ ನಡೆಯಲಿದೆ.