Advertisement

ಹೆಚ್ಚುತ್ತಿದೆ ವೈರಲ್‌ ಜ್ವರ : ನಿರ್ಲಕ್ಷಿಸದೆ ಔಷಧ ಪಡೆದುಕೊಳ್ಳಿ

10:29 AM Jul 17, 2019 | sudhir |

ಮಂಗಳೂರು/ಉಡುಪಿ: ಒಂದು ವಾರದಿಂದ ಕರಾವಳಿಯ ಅನೇಕ ಕಡೆಗಳಲ್ಲಿ ಶೀತ, ಜ್ವರ, ತಲೆನೋವು ಸಮಸ್ಯೆ ಹೆಚ್ಚುತ್ತಿದ್ದು, ಕ್ಲಿನಿಕ್‌ಗಳ ಮುಂದೆ ಜನ ಸಾಲುಗಟ್ಟುತ್ತಿದ್ದಾರೆ. ವಾತಾವರಣದಲ್ಲಾಗುತ್ತಿರುವ ಬದಲಾವಣೆಗಳೇ ವೈರಲ್‌ ಜ್ವರಕ್ಕೆ ಕಾರಣ. ಮಳೆಗಾಲವಾದರೂ ಮಳೆ ಕಡಿಮೆಯಾಗಿ ಆಗಾಗ ಬಿಸಿಲು, ತಣ್ಣನೆ ವಾತಾವರಣ ಇರುವುದರಿಂದ ವೈರಲ್‌ ಜ್ವರ ಹೆಚ್ಚುತ್ತಿದೆ.

Advertisement

ಮೂರ್‍ನಾಲ್ಕು ದಿನಗಳಿಗೂ ಹೆಚ್ಚು ಕಾಲ ಜ್ವರ ಕಡಿಮೆಯಾಗದೆ ಇದ್ದಲ್ಲಿ ರಕ್ತಪರೀಕ್ಷೆ ಮಾಡಿಸಿಕೊಳ್ಳಬೇಕು. ಡೆಂಗ್ಯೂ, ಮಲೇರಿಯಾದಂತಹ ಸಾಂಕ್ರಾಮಿಕ ರೋಗಗಳು ಹೆಚ್ಚಿರುವುದರಿಂದ ನಿರ್ಲಕ್ಷ್ಯ ಸಲ್ಲದು ಎಂದು ವೈದ್ಯರು ತಿಳಿಸಿದ್ದಾರೆ.

ಕೆಮ್ಮಿದಾಗ ಹಳದಿ ಕಫ ಹೋಗುವುದು, ಶೀತದಿಂದ ಹಳದಿ ಸಿಂಬಳ ಬಂದಲ್ಲಿ ಬ್ಯಾಕ್ಟೀರಿಯಲ್‌ ಸೋಂಕು ಖಚಿತವಾಗುತ್ತದೆ. ಆಗ ಆ್ಯಂಟಿ ಬಯಾಟಿಕ್‌ ಔಷಧ ಅಗತ್ಯವಾಗಿರುತ್ತದೆ ಎನ್ನುತ್ತಾರೆ ವೈದ್ಯಾಧಿಕಾರಿಗಳು. ಕಳೆದ ಫೆಬ್ರವರಿಯಲ್ಲೂ ಇದೇ ರೀತಿಯ ವೈರಲ್‌ ಜ್ವರ ಹಲವೆಡೆ ವ್ಯಾಪಿಸಿತ್ತು.

ನೀರು ಕುದಿಸಿ ಆರಿಸಿ ಕುಡಿಯಿರಿ
ಕುದಿಸಿ ಆರಿಸಿದ ಉಗುರು ಬೆಚ್ಚಗಿನ ನೀರನ್ನೇ ಸಾಕಷ್ಟು ಪ್ರಮಾಣದಲ್ಲಿ ಕುಡಿಯಬೇಕು. ಜ್ವರ ಇದ್ದಾಗ ತಣ್ಣೀರನ್ನು ಕುಡಿಯಲೇ ಬಾರದು, ಸ್ನಾನಕ್ಕೂ ಬಿಸಿನೀರು ಬಳಸಬೇಕು, ತಲೆ ಸ್ನಾನ ಮಾಡದಿರುವುದು ಉತ್ತಮ. ಸರಿಯಾಗಿ ಆಹಾರ ತೆಗೆದುಕೊಳ್ಳಬೇಕು.

ಮೈಕೈ ನೋವು: ಹೆದರದಿರಿ
ವೈರಲ್‌ ಜ್ವರದಿಂದ ಚಳಿ ಜ್ವರದೊಂದಿಗೆ ಮೈಕೈ ನೋವು ಸಾಮಾನ್ಯ. ಆದರೆ ಇದನ್ನು ಡೆಂಗ್ಯೂ, ಮಲೇರಿಯಾದಂತಹ ಸಾಂಕ್ರಾಮಿಕ ಕಾಯಿಲೆಗಳೆಂದು ತಿಳಿದು ಭಯ ಬೀಳುವ ಅಗತ್ಯವಿಲ್ಲ. ಆದಷ್ಟು ವಿಶ್ರಾಂತಿ ಮತ್ತು ನಿದ್ದೆಗೆ ಗಮನ ಕೊಡಿ.

Advertisement

ಇರಲಿ ಮುನ್ನೆಚ್ಚರಿಕೆ
ಸಾಮಾನ್ಯ ಜ್ವರವು ವೈರಸ್‌ನಿಂದ ಉಂಟಾಗುವುದರಿಂದ ಒಬ್ಬರಿಂದ ಇನ್ನೊಬ್ಬರಿಗೆ ಸುಲಭವಾಗಿ ಹರಡುತ್ತದೆ. ಜ್ವರ ಮತ್ತು ಶೀತ ಬಾಧಿತ ವ್ಯಕ್ತಿಗಳಿಂದ ಅಂತರ ಕಾಯ್ದುಕೊಳ್ಳುವುದು ಉತ್ತಮ. ಕೆಮ್ಮುವಾಗ, ಸೀನುವಾಗ ಆದಷ್ಟು ಕರವಸ್ತ್ರದಿಂದ ಮುಖ, ಮೂಗು ಮುಚ್ಚಿಕೊಳ್ಳಬೇಕು.

ರೋಗಿಗಳ ಸಂಖ್ಯೆ ಹೆಚ್ಚಳ
ವೈರಲ್‌ ಜ್ವರಕ್ಕೆ ಔಷಧ ಪಡೆಯಲು ನಗರದ ವಿವಿಧ ಆಸ್ಪತ್ರೆ, ಕ್ಲಿನಿಕ್‌ಗಳಲ್ಲಿ ರೋಗಿಗಳು ಹೆಚ್ಚಾಗಿ ಬರುತ್ತಿದ್ದಾರೆ. ಕಂಕನಾಡಿಯ ಖಾಸಗಿ ಕ್ಲಿನಿಕ್‌ ಒಂದರ ಸಿಬಂದಿ ಹೇಳುವ ಪ್ರಕಾರ, ಮೊದಲೆಲ್ಲ ದಿನಕ್ಕೆ ಸುಮಾರು 100 ರೋಗಿಗಳು ಆಗಮಿಸುತ್ತಿದ್ದರೆ, ಕೆಲವು ದಿನಗಳಿಂದ 150ಕ್ಕೂ ಹೆಚ್ಚಾಗಿದೆ. ನಗರದ ಸರಕಾರಿ ವೆನಾÉಕ್‌ ಆಸ್ಪತ್ರೆಗೆ ದಿನಂಪ್ರತಿ ಬರುವ ರೋಗಿಗಳಲ್ಲಿ ಶೇ. 60ರಷ್ಟು
ವೈರಲ್‌ ಜ್ವರದಿಂದಾಗಿಯೇ ಬರುತ್ತಾರೆ. ಆದರೆ‌ ಅವರ ನಿಖರ ಸಂಖ್ಯೆಯನ್ನು ದಾಖಲಿಸಿಕೊಳ್ಳಲಾಗುವು ದಿಲ್ಲ ಎಂದು ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕಿ ಡಾ| ರಾಜೇಶ್ವರಿ ದೇವಿ ತಿಳಿಸಿದ್ದಾರೆ.

ಭಯ ಪಡುವ ಅಗತ್ಯವಿಲ್ಲ
ವಾತಾವರಣದ ಕಾರಣದಿಂದಾಗಿ ಈ ಸಮಯದಲ್ಲಿ ಜ್ವರ, ಶೀತ, ತಲೆನೋವು ಸಾಮಾನ್ಯವಾಗಿರುತ್ತದೆ. ಇದರ ಬಗ್ಗೆ ಜನ ಭಯ ಪಡುವ ಅಗತ್ಯವಿಲ್ಲ. ಆದರೆ ಯಾವುದೇ ಜ್ವರವನ್ನು ನಿರ್ಲಕ್ಷ್ಯ ಮಾಡದೇ ವೈದ್ಯರ ಬಳಿ ತೆರಳಿ ಔಷಧ ಪಡೆದುಕೊಳ್ಳಬೇಕು.
– ಡಾ| ನವೀನ್‌, ವೈದ್ಯಾಧಿಕಾರಿ

ನಿರ್ಲಕ್ಷ್ಯ ಬೇಡ
ವೈರಲ್‌ ಫ್ಲೂ ಮಳೆಗಾಲದಲ್ಲಿ ಹರಡುವ ರೋಗ. ನಿರ್ಲಕ್ಷಿಸದೆ ತತ್‌ಕ್ಷಣ ವೈದ್ಯರನ್ನು ಭೇಟಿಯಾಗಬೇಕು. ಚಿಕಿತ್ಸೆಯಿಂದ ಬಳಲುವಿಕೆ ಕಡಿಮೆಯಾಗುತ್ತದೆ. ವಾತಾವರಣದಲ್ಲಿ ಬದಲಾವಣೆ ಉಂಟಾದಾಗ ಆರೋಗ್ಯದಲ್ಲಿ ಏರುಪೇರಾಗುತ್ತದೆ.
– ಡಾ| ಎಂ.ಜಿ. ರಾಮ
ಉಡುಪಿ ಜಿಲ್ಲಾ ಪ್ರಭಾರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ

Advertisement

Udayavani is now on Telegram. Click here to join our channel and stay updated with the latest news.

Next