Advertisement

ಜಿಲ್ಲೆಯಲ್ಲಿ ದಿನೇದಿನೇ ಹೆಚ್ಚುತ್ತಿದೆ ಮಳೆಕೊಯ್ಲು ಅಳವಡಿಕೆ

10:34 PM Jul 23, 2019 | Team Udayavani |

ಮಹಾನಗರ: ಜಲಸಾಕ್ಷರತೆಯತ್ತ ಜನರ ಆಲೋಚನ ಕ್ರಮ ಕ್ರಾಂತಿಕಾರಕ ಬದಲಾವಣೆ ತಂದಿದೆ. “ಉದಯವಾಣಿ’ ಮನೆಮನೆಗೆ ಮಳೆಕೊಯ್ಲು ಅಭಿಯಾನ ನಡೆಸಿದ ಬಳಿಕ ಜನರು ನೀರಿಂಗಿಸಲು ಮಳೆಕೊಯ್ಲು ಅಳವಡಿಸಿಕೊಂಡ ಹಲವಾರು ಉದಾಹರಣೆಗಳು ಚಿತ್ರ ಸಮೇತ ನಮಗೆ ಸಿಕ್ಕಿದೆ. ಆ ಸಂಖ್ಯೆ ಏರುತ್ತಲೇ ಹೋಗುತ್ತಿವೆ. ಮನೆಗಳಲ್ಲಿ ಮಾತ್ರವಲ್ಲದೆ, ತಂಡಗಳ ಮೂಲಕವೂ ವಿವಿಧೆಡೆ ಮಳೆಕೊಯ್ಲು ವ್ಯವಸ್ಥೆ ಅಳವಡಿಸುವ ಕಾರ್ಯ ಸದ್ದಿಲ್ಲದೆ ನಡೆಯುತ್ತಿದೆ.

Advertisement

ದ.ಕ. ಜಿಲ್ಲಾ ಪಂಚಾಯತ್‌ ಮಾಜಿ ಅಧ್ಯಕ್ಷ ಸುಚರಿತ ಶೆಟ್ಟಿ ಅವರು ಸ್ವಯಂ ಆಸಕ್ತಿಯಿಂದ ಎನೆಸ್ಸೆಸ್‌ ವಿದ್ಯಾರ್ಥಿಗಳನ್ನು ತಮ್ಮ ಮನೆಗೆ ಕರೆಸಿ ಮಳೆಕೊಯ್ಲು ಬಗ್ಗೆ ಮಾಹಿತಿ ಕಾರ್ಯಕ್ರಮ ವೊಂದನ್ನು ಏರ್ಪಡಿಸಿದ್ದಾರೆ.

ಮೂಡುಬಿದಿರೆ ಮಹಾವೀರ ಕಾಲೇಜಿನ ಎನೆಸ್ಸೆಸ್‌ ವಿದ್ಯಾರ್ಥಿಗಳಿಗೆ ಮಳೆಕೊಯ್ಲು ಬಗ್ಗೆ ಮಂಗಳವಾರ ಮಾಹಿತಿ ನೀಡಲಾಯಿತು. ನಿರ್ಮಿತಿ ಕೇಂದ್ರದ ಯೋಜನ ನಿರ್ದೇಶಕ ರಾಜೇಂದ್ರ ಕಲಾºವಿ ಮಾಹಿತಿ ನೀಡಿ, ನೀರಿನ ಮಹತ್ವ, ನೀರುಳಿಸುವಿಕೆಯ ಅನಿವಾರ್ಯತೆ ಬಗ್ಗೆ ತಿಳಿಸಿ, ಮಾಹಿತಿ ನೀಡಿದರು. ಜಿ.ಪಂ. ಮಾಜಿ ಅಧ್ಯಕ್ಷ ಸುಚರಿತ ಶೆಟ್ಟಿ, ಜಿ.ಪಂ. ಮಾಜಿ ಸದಸ್ಯೆ ಸುನೀತಾ ಶೆಟ್ಟಿ, ಕಡಂದಲೆ ಹಾಲು ಉತ್ಪಾದಕರ ಸೊಸೈಟಿ ನಿರ್ದೇಶಕ ನಾರಾಯಣ, ನಿರ್ಮಿತಿ ಕೇಂದ್ರದ ಶರತ್‌, ಎನೆಸ್ಸೆಸ್‌ ಅಧಿಕಾರಿ ಕೃಷ್ಣ ಪ್ರಸಾದ್‌ ಮತ್ತಿತರರು ಉಪಸ್ಥಿತರಿದ್ದರು.

ನೀರಿಂಗಿಸೋಣ ತಂಡದ ಮೂರನೇ ಕಾರ್ಯಕ್ರಮವಾಗಿ ಮುಂಡಾಜೆ ಗ್ರಾಮದ ಮಿತೊಟ್ಟುವಿನಲ್ಲಿ ಜಲಸಾಕ್ಷರತೆ ಅಭಿಯಾನ ನಡೆಯಿತು. ಬಾವಿಗೆ ಜಲ ಮರುಪೂರಣ ಮಾಡುವ ವಿಧಾನದ ಪ್ರಾತ್ಯಕ್ಷಿಕೆ ನಡೆಸಲಾಯಿತು. ಸುತ್ತಮುತ್ತಲಿನ ಎತ್ತರದ ಪ್ರದೇಶದಲ್ಲಿನ ಕಾಲುವೆಗಳನ್ನು ಜಲ ಸಂರಕ್ಷಣೆಗಾಗಿ ತಡೆಯೊಡ್ಡಲು ಮತ್ತು ಅನುಸರಿಸಬೇಕಾದ ಕ್ರಮಗಳ ಬಗ್ಗೆ ಮಾಹಿತಿ ನೀಡಲಾಯಿತು. ಇಂಗುಗುಂಡಿಗಳನ್ನು ನಿರ್ಮಾಣ ಮಾಡಿ ಮಳೆ ನೀರಿಂಗಿಸುವಂತೆ ಜನತೆಯಲ್ಲಿ ತಿಳಿಸಲಾಯಿತು.

ನೀರಿನ ಕೊರತೆ ನೀಗಿಸಲು ಮಳೆಕೊಯ್ಲು
ಬಜಪೆ ಕಳವಾರು ಮೂಲದ ರಾಕಿ ಡಿ”ಸೋಜಾ ಅವರು ಕೆಲವು ದಿನಗಳ ಹಿಂದೆ ತಮ್ಮ ಮನೆಯಲ್ಲಿ ಮಳೆಕೊಯ್ಲು ವ್ಯವಸ್ಥೆ ಅಳವಡಿಸಿದ್ದಾರೆ. ಮುಂಬರುವ ಬೇಸಗೆಯಲ್ಲಿ ಮಳೆ ನೀರಿನ ಕೊರತೆ ಉಂಟಾಗಬಾರದು ಎಂಬ ಉದ್ದೇಶದಿಂದ ಈ ಬಾರಿ ಮಳೆಗಾಲ ಆರಂಭವಾಗುವ ವೇಳೆಯಲ್ಲೇ ಮಳೆಕೊಯ್ಲು ಅಳವಡಿಸಿದ್ದಾರೆ. ಮನೆಯ ಮೇಲ್ಛಾವಣಿ ಮೇಲೆ ಬಿದ್ದ ನೀರು ಪೈಪ್‌ ಮುಖೇನ ಬಾವಿಗೆ ಹೋಗುತ್ತದೆ. ಒಟ್ಟಾರೆಯಾಗಿ ಎರಡು ಫಿಲ್ಟರ್‌ ಅಳವಡಿಸಿದ್ದಾರೆ. ಬಾವಿ ಬಳಿ ಅಳವಡಿಸಿದ ಫಿಲ್ಟರ್‌ನಲ್ಲಿ ನೀರಿನೊಡನೆ ಬರುವ ಕಸಗಳು ನಿಂತು ಶುದ್ಧ ನೀರು ಬಾವಿಗೆ ಹೋಗುತ್ತದೆ. ಬಾವಿಯಲ್ಲಿ ಮತ್ತೂಂದು ಫಿಲ್ಟರ್‌ ಅಳವಡಿಸಿದ್ದು, ಇದರಲ್ಲಿ ಇದ್ದಿಲು, ಮರಳು, ಸಣ್ಣ ಕಲ್ಲು ಮತ್ತು ದೊಡ್ಡ ಕಲ್ಲುಗಳನ್ನು ಮಿಶ್ರವಡಲಾಗಿದೆ. ಸುಮಾರು 50 ಅಡಿ ಆಳ ಮತ್ತು 5 ಅಡಿ ಅಗಲದ ಬಾವಿ ಇದಾಗಿದೆ.

Advertisement

ಪತ್ರಿಕೆಯ ಕೆಲಸ ಅಭಿನಂದನೀಯ
ನಗರದಲ್ಲಿ ಮಳೆ ಕೊರತೆಯಿಂದಾಗಿ ಮುಂದಿನ ವರ್ಷದಲ್ಲಿ ಕುಡಿಯುವ ನೀರಿಗೆ ತುಂಬಾ ಕೊರತೆಯಾಗಬಹುದು ಎಂಬ ಆತಂಕ ಜನರಲ್ಲಿದೆ. ಇದಕ್ಕೆ ಸೂಕ್ತ ಪರಿಹಾರವಾಗಿ ಮಳೆಕೊಯ್ಲು ಅಳವಡಿಸಿ ಎಂಬ ದಾರಿಯನ್ನು “ಮನೆಮನೆಗೆ ಮಳೆಕೊಯ್ಲು’ ಅಭಿಯಾನದ ಮೂಲಕ “ಉದಯವಾಣಿ’ ತೋರಿಸಿಕೊಟ್ಟಿದೆ. ನೀರಿನ ಮಹತ್ವ, ಜಲಸಂರಕ್ಷಣೆಯ ಅವಶ್ಯಕತೆ ಬಗ್ಗೆ ಜನರಿಗೆ ತಿಳಿಸಿಕೊಟ್ಟ ಪತ್ರಿಕೆಯ ಕೆಲಸ ಅಭಿನಂದನೀಯ.
-ದೀಪ್ತಿ ಕಾಟಿಪಳ್ಳ, ವಿದ್ಯಾರ್ಥಿನಿ

ನೀವೂ ಅಳವಡಿಸಿ, ವಾಟ್ಸಪ್‌ ಮಾಡಿ
ಉದಯವಾಣಿಯ ಅಭಿಯಾನದಿಂದ ಪ್ರೇರಣೆಗೊಂಡು ಕಾರ್ಯಾಗಾರದಲ್ಲಿ ಭಾಗವಹಿಸಿದವರು ಈಗ ಕಾರ್ಯೋನ್ಮುಖರಾಗಿ ಮಳೆ ನೀರು ಕೊಯ್ಲು ಪದ್ಧತಿಯನ್ನು ತಮ್ಮ ಮನೆಗಳಲ್ಲಿ ಅಳವಡಿಸುತ್ತಿದ್ದಾರೆ. ಜತೆಗೆ ತಮ್ಮ ಖುಷಿಯನ್ನು ಉಳಿದವರೊಂದಿಗೂ ಹಂಚಿಕೊಳ್ಳುತ್ತಿದ್ದಾರೆ. ಹೀಗಿರುವಾಗ, “ಮನೆ ಮನೆಗೆ ಮಳೆಕೊಯ್ಲು’ ಅಭಿಯಾನದಿಂದ ಪ್ರೇರಿತರಾಗಿ ನೀವೂ ನಿಮ್ಮ ಮನೆಗಳಲ್ಲಿ ಮಳೆ ಕೊಯ್ಲು ಪದ್ಧತಿ ಅಳವಡಿಸಿಕೊಂಡಿದ್ದರೆ ಫೋಟೋ ಸಮೇತ ನಮಗೆ ವಿವರವನ್ನು ವಾಟ್ಸಪ್‌ ಮಾಡಿ. ಅವುಗಳನ್ನು ಪತ್ರಿಕೆಯಲ್ಲಿ ಪ್ರಕಟಿಸಿ ಮತ್ತಷ್ಟು ಜನರನ್ನು ಉತ್ತೇಜಿಸೋಣ. 9900567000

ಅಭಿಯಾನಕ್ಕೆ ಒಂದು ತಿಂಗಳು: ಜನಾಭಿಪ್ರಾಯ
ಜಲಕ್ರಾಂತಿಗೆ ಮುನ್ನುಡಿ
“ಉದಯವಾಣಿ’ ಪತ್ರಿಕೆಯ ಮನೆ ಮನೆಗೆ ಮಳೆಕೊಯ್ಲು ಅಭಿಯಾನ ನಿಜಕ್ಕೂ ಜಲಕ್ರಾಂತಿಗೆ ಮುನ್ನುಡಿ. ಸಮಾಜಮುಖೀ ಚಿಂತನೆ, ಕಾಳಜಿಯೊಂದಿಗೆ ಮಿಡಿಯುವ “ಉದಯವಾಣಿ’ ಪತ್ರಿಕಾ ಬಳಗಕ್ಕೆ ಅಭಿನಂದನೆಗಳು. ನೂತನ ಮನೆ, ವಾಣಿಜ್ಯ ಕಟ್ಟಡಗಳ ಪರವಾನಿಗೆ ಪಡೆಯುವಾಗ ಕಡ್ಡಾಯವಾಗಿ ಜಲ ಮರುಪೂರಣದ ವ್ಯವಸ್ಥೆಯನ್ನು ಅಳವಡಿಸುವ ಷರತ್ತನ್ನು ವಿಧಿಸಬೇಕು.
-ಜಗದೀಶ್‌ ನಾಯಕ್‌ , ಲ್ಯಾಂಡ್‌ ಲಿಂಕ್ಸ್‌ , ಮಂಗಳೂರು

ಜನಸಾಮಾನ್ಯರಿಗೆ ತುಂಬಾ ಸಹಕಾರಿ
ನೀರಿಗಾಗಿ ಜನ ಪರದಾಡುವ ಸ್ಥಿತಿ ಬಂದಿರುವಾಗ ನೀರುಳಿತಾಯಕ್ಕೆ ದಾರಿ ತೋರಿಸಿಕೊಟ್ಟ “ಉದಯವಾಣಿ’ಯ ಮಳೆಕೊಯ್ಲು ಅಭಿಯಾನ ಶ್ಲಾಘನೀಯವಾದುದು. ಈ ಅಭಿಯಾನದಿಂದ ಜನಸಾಮಾನ್ಯರಿಗೆ ತುಂಬಾ ಸಹಕಾರಿಯಾಗಿದೆ. ಅಭಿಯಾನ ಮುಂದುವರಿಯಲಿ.
-ಸುಮಲತಾ, ವಿದ್ಯಾರ್ಥಿನಿ, ಮೂಡುಬಿದಿರೆ

Advertisement

Udayavani is now on Telegram. Click here to join our channel and stay updated with the latest news.

Next