Advertisement

ಎನ್‌ಇಪಿಯಿಂದ ಕಲಿಕಾ ಸಾಮರ್ಥ್ಯ ಹೆಚ್ಚಳ: ಸಿಎಂ ಬೊಮ್ಮಾಯಿ

08:15 PM Oct 29, 2022 | Team Udayavani |

ಬೆಂಗಳೂರು: ನೂತನ ಶಿಕ್ಷಣ ನೀತಿ ಮಕ್ಕಳ ಕಲಿಕಾ ಸಾಮರ್ಥ್ಯವನ್ನು ಹೆಚ್ಚಿಸುತ್ತದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅಭಿಪ್ರಾಯಪಟ್ಟಿದ್ದಾರೆ.

Advertisement

ನಗರದಲ್ಲಿ ಶನಿವಾರ ಆಯೋಜಿಸಲಾಗಿದ್ದ “ಶಿಕ್ಷಣದಲ್ಲಿ ನಾಯಕತ್ವಕ್ಕಾಗಿ ಅಂತಾರಾಷ್ಟ್ರೀಯ ಶೃಂಗಸಭೆ’ ಉದ್ಘಾಟಿಸಿ ಮಾತನಾಡಿದ ಅವರು, ರಾಜ್ಯದಲ್ಲಿ ಉನ್ನತ ಶಿಕ್ಷಣದಿಂದ ನೂತನ ಶಿಕ್ಷಣ ನೀತಿ ಜಾರಿಗೆ ತರಲಾಗಿದ್ದು, ಈ ವರ್ಷ ಮಾಂಟೆಸರಿಯಿಂದ ಪ್ರಾರಂಭಿಸಲಾಗುತ್ತಿದೆ. ನೂತನ ಶಿಕ್ಷಣ ನೀತಿಯನ್ನು ಅನುಷ್ಠಾನಕ್ಕೆ ತಂದ ಮೊದಲ ರಾಜ್ಯ ಕರ್ನಾಟಕ. ರಾಜ್ಯದ ಮಕ್ಕಳು ಎಲ್ಲಾ ಪರಿಸ್ಥಿತಿಗಳನ್ನು ನಿಭಾಯಿಸುವ ಸಾಮರ್ಥ್ಯವನ್ನು ಬೆಳೆಸಿಕೊಂಡು ಜ್ಞಾನವಂತರಾಗಬೇಕು ಎನ್ನುವುದು ನಮ್ಮ ಉದ್ದೇಶ ಎಂದು ಹೇಳಿದರು.

ಶಿಕ್ಷಣ ಮನುಷ್ಯನ ಸಹಜ ಗುಣಗಳಲ್ಲಿ ಒಂದು. ಅದು ಔಪಚಾರಿಕ ಅಥವಾ ಅನೌಪಚಾರಿಕ ಶಿಕ್ಷಣವಾಗಿರಬಹುದು, ಮನುಷ್ಯನ ಜ್ಞಾನದಾಹ ಹಲವಾರು ಶತಮಾನಗಳದ್ದು. ಆತನ ಎಲ್ಲಾ ಸಮಸ್ಯೆಗಳಿಗೆ ಉತ್ತರ ಕಂಡುಕೊಳ್ಳಲು ಅವನು ಸತತ ಪ್ರಯತ್ನ ಮಾಡುತ್ತಾನೆ. ಆದರೆ, ಪರಿಪೂರ್ಣ ಶಿಕ್ಷಣ ಇದಕ್ಕೆ ಉತ್ತರವಲ್ಲ. ಎಲ್ಲಾ ಸಮಸ್ಯೆಗಳಿಗೆ ಅದು ಉತ್ತರವನ್ನು ದೊರಕಿಸಿಕೊಡುವುದಿಲ್ಲ. ಸಮಸ್ಯೆಗಳು ತಾತ್ಕಾಲಿಕವಾದವು. ಶಿಕ್ಷಣ ನೀತಿಯು ಸುಲಭವಾಗಿದ್ದು, ಚಲನಶೀಲವಾಗಿರಬೇಕು. ಇದನ್ನೇ ಎಲ್ಲಾ ಶಿಕ್ಷಣ ತಜ್ಞರು ಪ್ರತಿಪಾದಿಸಿದ್ದರು. ಭಾರತದಲ್ಲಿ ಸಾಂಪ್ರದಾಯಿಕ ಮಾದರಿಯ ಶಿಕ್ಷಣವಿದೆ. ಮಾನವನ ಮೆದುಳಿನ ಪರಿಪೂರ್ಣ ಸಾಮರ್ಥ್ಯವನ್ನು ಬಳಕೆ ಮಾಡಿಲ್ಲವಾದ್ದರಿಂದ ಇನ್ನೂ ಹೆಚ್ಚಿನ ಜ್ಞಾನವನ್ನ ಪಡೆಯಲು ಸಾಧ್ಯವಿದೆ ಎಂದರು.

21ನೇ ಶತಮಾನ ಜ್ಞಾನದ ಶತಮಾನ. ಜ್ಞಾನವುಳ್ಳವರು ಜಗತ್ತನ್ನು ಆಳುತ್ತಾರೆ. ಭಾರತ ಎಲ್ಲ ಜ್ಞಾನಗಳಿಗೆ ತಾಯಿ. ಜ್ಞಾನ ಕೇಂದ್ರಿತವಾದ ಸಮಾಜ ನಮ್ಮದು. ಪ್ರಾಚೀನ ಕಾಲದಲ್ಲಿಯೂ ಜ್ಞಾನಕ್ಕೆ ಸಂಬಂಧಿಸಿದ ಪ್ರಯೋಗಗಳು ಇಲ್ಲಿ ನಡೆದಿವೆ. ಬಹಳಷ್ಟು ಸಾಧನೆಗಳನ್ನು ಪ್ರಾಚೀನ ಭಾರತ ಮಾಡಿದೆ. ಇಂದು ಜಗತ್ತು ಒಂದು ಹಳ್ಳಿಯಾಗಿದೆ. ಸರ್ಕಾರಿ ಶಾಲೆಯ ವಿದ್ಯಾರ್ಥಿ ವಿವಿಧ ದೇಶಗಳ ವಿದ್ಯಾರ್ಥಿಗಳೊಂದಿಗೆ ಸ್ಪರ್ಧಿಸಬೇಕಾದರೆ, ನಮ್ಮ ವಿದ್ಯಾರ್ಥಿಗಳು ಅಂತಾರಾಷ್ಟ್ರೀಯ ಮಟ್ಟದಲ್ಲಿ ಸ್ಪರ್ಧಿಸುವಂತೆ ತಯಾರು ಮಾಡಬೇಕು. ಸ್ಪರ್ಧೆಗಳು ಇಂದು ಜಾಗತಿಕ ಮಟ್ಟದಲ್ಲಿವೆ. ಆದ್ದರಿಂದಲೇ ನಮ್ಮ ಪ್ರಧಾನಮಂತ್ರಿಗಳು ನೂತನ ಶಿಕ್ಷಣ ನೀತಿ ಸೇರಿ ಕೌಶಲ್ಯಾಭಿವೃದ್ಧಿ, ಮೇಕ್‌ ಇನ್‌ ಇಂಡಿಯಾ, ವಿಜ್ಞಾನಿಗಳಿಗೆ ನೆರವು, ವಿಜ್ಞಾನಕ್ಕೆ ಒತ್ತು ನೀಡಿದ್ದಾರೆ. ನಮ್ಮ ಪ್ರಧಾನಮಂತ್ರಿಗಳು ವಿಜ್ಞಾನ ಮತ್ತು ಆಧ್ಯಾತ್ಮ ಎರಡರ ಕುರಿತು ಮಹತ್ವ ನೀಡಿದ್ದಾರೆ ಎಂದರು.

ಇಸ್ರೋ ಖ್ಯಾತ ವಿಜ್ಞಾನಿ ಪದ್ಮಭೂಷಣ ನಂಬಿ ನಾರಾಯಣ, ಪ್ರಧಾನಮಂತ್ರಿಗಳ ಆರ್ಥಿಕ ಸಲಹಾ ಮಂಡಳಿಯ ಜಂಟಿ ಕಾರ್ಯದರ್ಶಿ ಪವನ್‌ ಕುಮಾರ್‌ ಜೈನ್‌ ಮತ್ತಿತರರು ಇದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next