Advertisement
ರಾಜ್ಯ ಕರಾವಳಿಯಲ್ಲೂ ಜೆಲ್ಲಿ ಮೀನಿನಿಂದಾಗಿ ಮೀನುಗಾರಿಕೆಗೆ ತೊಂದರೆಯಾಗುತ್ತಿದೆ. ಮೀನುಗಾರರು ಬೀಸಿದ ಬಲೆಯಲ್ಲಿ ಟನ್ನುಗಟ್ಟಲೆ ಜೆಲ್ಲಿ ಮೀನೇ ಸಿಗುತ್ತಿದ್ದು, ಮುಟ್ಟಿದರೆ ದೇಹವೆಲ್ಲ ತುರಿಕೆ ಆರಂಭವಾಗುತ್ತದೆ. ಇದರಿಂದ ಮೀನುಗಾರರು ಅರ್ಧದಿಂದಲೇ ವಾಪಸಾಗುತ್ತಿದ್ದಾರೆ.ನೋಡಲು ಸುಂದರವಾಗಿದ್ದರೂ ವಿಷಕಾರಿ. ಹೊರ ಕವಚದಲ್ಲಿ ಸಣ್ಣ ಮುಳ್ಳುಗಳ ಮಾದರಿಯ ರಚನೆಯಿದೆ. ಮುಟ್ಟಲು ಬಂದರೆ ಸ್ವರಕ್ಷಣೆಗೆ ರಾಸಾಯನಿಕವನ್ನು ಬಿಡುಗಡೆ ಮಾಡುತ್ತವೆ. ಮುಳ್ಳುಗಳ ಮೂಲಕ ಅದು ನಮ್ಮ ದೇಹ ಪ್ರವೇಶಿಸಿದಾಗ ತೀವ್ರ ತುರಿಕೆ ಉಂಟಾಗುತ್ತದೆ. ಇವುಗಳಲ್ಲೂ ಹಲವು ಪ್ರಭೇದಗಳಿದ್ದು, ವಿಷ ಪ್ರಮಾಣದಲ್ಲೂ ಹೆಚ್ಚು ಕಡಿಮೆ ಇದೆ. ಮುಟ್ಟಿದವರು ಮೃತಪಟ್ಟ ನಿದರ್ಶನಗಳಿವೆ. ಕನ್ನಡದಲ್ಲಿ ಅಂಬಲಿ ಮೀನು, ಲೋಳೆ ಮೀನು, ಕುಂದಾಪುರ ಕಡೆ ತಜ್ಜು ಮೀನು ಎನ್ನುತ್ತಾರೆ. ಕಡಲಾಮೆ ಕಡಿಮೆ
ಮಂಗಳೂರಿನ ಕೇಂದ್ರೀಯ ಸಮುದ್ರ ಮೀನುಗಾರಿಕೆ ಸಂಶೋಧನ ಸಂಸ್ಥೆ (ಸಿಎಂಎಫ್‌ಆರ್‌ಐ)ಯ ವಿಜ್ಞಾನಿಗಳು ಈ ಬಗ್ಗೆ ನಡೆಸಿದ ಸಂಶೋಧನೆಯಲ್ಲಿ ಜೆಲ್ಲಿಗಳನ್ನು ತಿನ್ನುವ ಕಡಲಾಮೆಗಳು ಮತ್ತು ಕೇದರ (ಟ್ಯೂನಾ) ಮೀನು ಸಂತತಿ ನಶಿಸುತ್ತಿರುವುದರಿಂದ ಜೆಲ್ಲಿ ಸಂತತಿ ವೃದ್ಧಿಯಾಗುತ್ತಿದೆ ಎಂದು ಕಂಡುಕೊಂಡಿದ್ದಾರೆ. ಆಳಸಮುದ್ರ ಬೋಟ್‌ಗಳ ಮಿತಿಮೀರಿದ ಮೀನುಗಾರಿಕೆ, ಪ್ಲಾಸ್ಟಿಕ್ ತ್ಯಾಜ್ಯ ಸಮುದ್ರ ಸೇರುತ್ತಿರುವುದು ಕೂಡ ಇತರ ಕಾರಣಗಳು. ಜೆಲ್ಲಿ ಮೀನುಗಳ ಮೊಟ್ಟೆ ಬೆಳವಣಿಗೆಗೆ ಪ್ಲಾಸ್ಟಿಕ್ ತ್ಯಾಜ್ಯ ಪೂಕರ ವಾತಾವರಣ ಒದಗಿಸುತ್ತದೆ. ಇನ್ನೊಂದೆಡೆ ಏರುತ್ತಿರುವ ವಾತಾವರಣದ ಉಷ್ಣತೆ ಬೇರೆಲ್ಲದಕ್ಕೂ ತೊಂದರೆಯಾದರೆ, ಜೆಲ್ಲಿ ಮೀನುಗಳಿಗೆ ಮಾತ್ರ ವರದಾನವಾಗಿದೆ.
Related Articles
ಜೆಲ್ಲಿ ಮೀನಿನ ಸಮಸ್ಯೆ ಎಷ್ಟಿದೆಯೆಂದರೆ, ಒಮ್ಮೆ ಮೀನುಗಾರಿಕೆಗೆ ತೆರಳಿದರೆ 400 ಮೀ. ವ್ಯಾಪ್ತಿಯಲ್ಲಿ 20 ಟನ್‌ಗಿಂತಲೂ ಹೆಚ್ಚು ಸಿಗುತ್ತಿದೆ. ಇದರಿಂದ ಬಲೆಗೆ ಬೇರೆ ಮೀನು ಬೀಳುವ ಸಾಧ್ಯತೆ ಕಡಿಮೆ. ತುರಿಕೆಯ ಹೆದರಿಕೆಯಿಂದ ಮೀನುಗಾರಿಕೆ ಕಡಿಮೆಯಾಗುತ್ತಿದೆ.
Advertisement
ಮತ್ಸ್ಯ ಸಂಕುಲಕ್ಕೆ ಅಪಾಯಹಿಂದೂ ಮಹಾಸಾಗರ – ಶಾಂತಸಾಗರದಲ್ಲಿ ಮಾತ್ರ ಕಂಡುಬರುತ್ತಿದ್ದ ಜೆಲ್ಲಿ ಮೀನಿನ ಹಾವಳಿ ಈಗ ಮಂಗಳೂರಿನಿಂದ ಆರಂಭವಾಗಿ ಕಾರವಾರದವರೆಗೆ ರಾಜ್ಯ ಕರಾವಳಿಯಲ್ಲೂ ಹೆಚ್ಚುತ್ತಿದೆ. ಇದರ ಹಾವಳಿಯಿಂದ ನಮೀಬಿಯಾ, ಜಪಾನ್, ಪೂರ್ವ ಯುರೋಪ್ ರಾಷ್ಟ್ರಗಳಲ್ಲಿ ಬೇರೆ ಮೀನುಗಳ ಸಂತತಿ ನಾಶವಾಗಿ ಮೀನುಗಾರಿಕೆಯೇ ಸ್ಥಗಿತಗೊಳ್ಳುವ ಮಟ್ಟಕ್ಕೆ ಮುಟ್ಟಿದೆ. ಮಹಾರಾಷ್ಟ್ರದ ರತ್ನಗಿರಿ, ಸಿಂಧುದುರ್ಗಾದಲ್ಲಿ ಕೆಲವು ವರ್ಷಗಳ ಹಿಂದೆ ಇದರಿಂದಾಗಿ ಮೀನುಗಾರಿಕೆಯನ್ನೇ ಸ್ಥಗಿತಗೊಳಿಸಿದ್ದರು. ರಾಜ್ಯ ಕರಾವಳಿಯಲ್ಲೂ ಭವಿಷ್ಯದಲ್ಲಿ ಮತ್ಸ್ಯ ಸಂಕುಲಕ್ಕೆ ಅಪಾಯ ಎದುರಾಗುವ ಸಂಭವ ಇಲ್ಲದಿಲ್ಲ.
– ಡಾ| ಜಿ.ಬಿ. ಪುರುಷೋತ್ತಮ್, ವಿಜ್ಞಾನಿ, ಸಿಎಂಎಫ್‌ಆರ್‌ಐ ಮಂಗಳೂರು ಮೀನುಗಾರಿಕೆ ಮೊಟಕು
ಮೀನುಗಾರಿಕೆ ಋತು ಆರಂಭವಾದ ಅನಂತರ ಆಗಸ್ಟ್ ಎರಡನೇ ವಾರದಿಂದ ಈ ಜೆಲ್ಲಿ ಮೀನು ಹೆಚ್ಚುತ್ತಿವೆ. ಸಾಮಾನ್ಯವಾಗಿ ನವರಾತ್ರಿ ಮುಗಿಯುವ ವರೆಗೆ ಇದೇ ಸಮಸ್ಯೆ. ಒಮ್ಮೆ ಮೀನುಗಾರಿಕೆಗೆ ಹೋದರೆ ದೋಣಿಯೊಂದಕ್ಕೆ 20 ಟನ್‌ಗಿಂತಲೂ ಹೆಚ್ಚು ಸಿಗುತ್ತದೆ. ಇದರಿಂದ ಮೀನುಗಾರಿಕೆ ಅರ್ಧಕ್ಕೆ ಮೊಟಕುಗೊಳಿಸುವಂತಾಗಿದೆ. ಜೆಲ್ಲಿ ಮೀನು ನಾಶಕ್ಕೆ ಎರಡು ವರ್ಷಗಳ ಹಿಂದೆ ಚೆನ್ನೈ ಕರಾವಳಿಯಲ್ಲಿ ಹೆಲಿಕಾಪ್ಟರ್ ಮೂಲಕ ರಾಸಾಯನಿಕ ಸಿಂಪಡಿಸಿದ್ದರು. ಇಲ್ಲೂ ಸರಕಾರ ಆ ರೀತಿಯ ಕ್ರಮ ಕೈಗೊಳ್ಳಲಿ.
– ಸಂಜೀವ ಖಾರ್ವಿ ಮರವಂತೆ, ಮೀನುಗಾರರು – ಪ್ರಶಾಂತ್ ಪಾದೆ