ಬೆಂಗಳೂರು: ರಾಜ್ಯದಲ್ಲಿ ಹೊಸ ವರ್ಷದಿಂದೀಚೆಗೆ ಎಚ್1ಎನ್1 ಸೋಂಕಿತರ ಸಂಖ್ಯೆ ಸಾವಿರಕ್ಕೆ ಸಮೀಪಿಸುತ್ತಿದ್ದು, ಈವರೆಗೂ 959 ಮಂದಿಗೆ ಸೋಂಕು ತಗುಲಿದ್ದು ಈ ಪೈಕಿ 14 ಮಂದಿ ಮೃತಪಟ್ಟಿದ್ದಾರೆ.
ಕಳೆದ ವರ್ಷಕ್ಕೆ ಹೋಲಿಸಿದರೆ ವರ್ಷದ ಆರಂಭದಲ್ಲಿಯೇ ಸೋಂಕು ಉಲ್ಬಣಿಸುತ್ತಿದೆ.2018ರಲ್ಲಿ ಜನವರಿಯಿಂದ ಆಗಸ್ಟ್‌ವರೆಗೂ ಕೇವಲ 38 ಮಂದಿಗೆ ಮಾತ್ರ ತಗುಲಿದ್ದ ಈ ಸೋಂಕು, ಸೆಪ್ಟೆಂಬರ್‌ನಿಂದೀಚೆಗೆ ಭಾರೀ ಪ್ರಮಾಣದಲ್ಲಿ ಹೆಚ್ಚಳವಾಗಿತ್ತು. ಆನಂತರ ಆರೋಗ್ಯ ಇಲಾಖೆ ಜಾಗೃತಿ ಕಾರ್ಯಕ್ರಮ ಮೂಲಕ ಡಿಸೆಂಬರ್ ವೇಳೆಗೆ ಒಂದಿಷ್ಟು ಹತೋಟಿಗೆ ಬಂದಿತ್ತು. ಆದರೆ, ಈ ಬಾರಿ ವರ್ಷದ
ಆರಂಭದಿಂದಲೇ ಸೋಂಕು ಹೆಚ್ಚಿನ ಪ್ರಮಾಣದಲ್ಲಿರುವುದು ಆತಂಕ ಮೂಡಿಸಿದೆ.
2018ರಲ್ಲಿ ರಾಜ್ಯದಲ್ಲಿ 1,727 ಮಂದಿಗೆ ಎಚ್ 1ಎನ್1 ತಗುಲಿದ್ದು, ಅವರದಲ್ಲಿ 87 ಮಂದಿ ಮೃತಪಟ್ಟಿದ್ದರು. ಈ ಮೂಲಕ ದೇಶದಲ್ಲಿಯೇ ಅತೀ ಹೆಚ್ಚು ಎಚ್1ಎನ್1 ಸೋಂಕಿತರನ್ನು ಹೊಂದಿರುವ ರಾಜ್ಯಗಳ ಸಾಲಿಗೆ ಕರ್ನಾಟಕ ಸೇರಿತ್ತು. ಈ ಬಾರಿ ವರ್ಷಾರಂಭದಲ್ಲಿಯೇ ಸೋಂಕು ಮತ್ತೆ ಉಲ್ಬಣಿಸಿದ್ದು, ಮೈಸೂರಿನಲ್ಲಿ 4ಮಂದಿ, ಚಿಕ್ಕಬಳ್ಳಾಪುರ, ದಾವಣಗೆರೆಯಲ್ಲಿ ಹಾಗೂ ಚಿತ್ರದುರ್ಗದಲ್ಲಿ ತಲಾ 2, ಬೆಂ. ಗ್ರಾಮಂತರ, ಚಾಮರಾಜನಗರ, ತುಮಕೂರು,ಹಾಸನ, ಕಲಬುರ್ಗಿಯಲ್ಲಿ ತಲಾ ಒಬ್ಬರು ಸಾವಿಗೀಡಾಗಿದ್ದಾರೆ. ಈ ಹಿನ್ನೆಲೆ ಆರೋಗ್ಯ ಇಲಾಖೆ ಮುನ್ನೆಚ್ಚರಿಕಾ ಕ್ರಮಗಳಿಗೆ ಆಸ್ಪತ್ರೆ ಸಿಬ್ಬಂದಿಗೆ ಸೂಚಿಸಿದ್ದು, ಜತೆಗೆ ಎಚ್1ಎನ್1 ಬಗ್ಗೆ ಎಚ್ಚರ ವಹಿಸುವಂತೆ ಸಾರ್ವಜನಿಕರಲ್ಲಿ ಮನವಿ ಮಾಡಿದೆ.
ಪ್ರಸಕ್ತ ಸಾಲಿನಲ್ಲಿ 3,812 ಮಂದಿ ಶಂಕಿತರ ಗಂಟಲು ದ್ರಾವಣ ಮಾದರಿ ಪರೀಕ್ಷೆಗೆ ಒಳಪಡಿಸಿದ್ದು, ಆ ಪೈಕಿ 959 ಮಂದಿಯಲ್ಲಿ ಸೋಂಕಿರುವುದು ದೃಢಪಟ್ಟಿದೆ. ಜತೆಗೆ ನಗರ ಪ್ರದೇಶಗಲ್ಲಿಯೇ ಹೆಚ್ಚಿನವರಲ್ಲಿ ಸೋಂಕಿರುವುದು ಆಘಾತಕಾರಿ ವಿಚಾರವಾಗಿದೆ.
ಪ್ರಮುಖವಾಗಿ ಬೆಂಗಳೂರು ನಗರಲ್ಲಿ 256 ಮಂದಿಗೆ ಸೋಂಕು ತಗುಲಿದ್ದು, ಸಾವು ವರದಿಯಾಗಿಲ್ಲ. ಉಳಿದಂತೆ ಉಡುಪಿ 130, ಶಿವಮೊಗ್ಗ 77, ಮೈಸೂರು 87, ದಕ್ಷಿಣ ಕನ್ನಡ 80,ದಾವಣಗೆರೆ 43 (2 ಸಾವು), ಹಾಸನ ಹಾಗೂ ಬೆಳಗಾವಿಯಲ್ಲಿ ತಲಾ 34 ಮಂದಿಗೆ ಸೋಂಕು ತಗುಲಿದೆ.
ಸರ್ಕಾರಿ ಆಸ್ಪತ್ರೆಗಳಲ್ಲಿ ಪರೀಕ್ಷೆಯಿಂದ ಚಿಕಿತ್ಸೆವರೆಗೆ ಉಚಿತ ಸೌಲಭ್ಯವಿದ್ದು, ರೋಗ ಲಕ್ಷಣಗಳು ಕಂಡು ಬಂದ ಕೂಡಲೇ ಜಿಲ್ಲಾ ಸರ್ಕಾರಿ ಆಸ್ಪತ್ರೆಗಳಿಗೆ ತೆರಳಿ ಪರೀಕ್ಷೆ ಮಾಡಿಸಿಕೊಳ್ಳಬೇಕು. ಸರಿಯಾಗಿ ಐದು ದಿನಗಳ ಕಾಲ ಚಿಕಿತ್ಸೆ ಪಡೆದರೆ ಗುಣಮುಖವಾಗಬಹುದು.
– ಡಾ.ಶಿವರಾಜ್ ಸಜ್ಜನ್ ಶೆಟ್ಟಿ,
ಜಂಟಿ ನಿರ್ದೇಶಕರು. ಸಾಂಕ್ರಾಮಿಕ ರೋಗ ವಿಭಾಗ, ಆರೋಗ್ಯ ಇಲಾಖೆ