Advertisement

ಮುಜರಾಯಿ ದೇವಾಲಯಗಳ ಆರ್ಥಿಕ ಶಕ್ತಿ ವೃದ್ಧಿ 

10:00 PM Jul 16, 2023 | Team Udayavani |

ರಾಜ್ಯದ ಪ್ರಮುಖ ಮುಜರಾಯಿ ದೇವಾಲಯಗಳಲ್ಲಿ ಹುಂಡಿ ಸಂಗ್ರಹ ನಡೆದಿದೆ. ಕಳೆದೊಂದು ತಿಂಗಳಿಗೆ ಹೋಲಿಸಿದರೆ ಬಹುತೇಕ ದೇಗುಲಗಳಲ್ಲಿ ಈ ಬಾರಿ ಹೆಚ್ಚಿನ ಪ್ರಮಾಣದಲ್ಲಿ ಕಾಣಿಕೆ ಸಂಗ್ರಹವಾಗಿದ್ದು, ದೇವಾಲಯಗಳ ಆರ್ಥಿಕ ಶಕ್ತಿ ವೃದ್ಧಿಯಾಗಿದೆ.  ರಾಜ್ಯದಲ್ಲಿ ಮಹಿಳೆಯರಿಗೆ ಉಚಿತ ಬಸ್‌ ಪ್ರಯಾಣದ  ಶಕ್ತಿ ಯೋಜನೆ ಆರಂಭವಾದಾಗಿನಿಂದ ದೇವಾಲಯಗಳಿಗೆ  ಭೇಟಿ ನೀಡುವ ಯಾತ್ರಾರ್ಥಿಗಳ ಸಂಖ್ಯೆಯೂ ದ್ವಿಗುಣಗೊಂಡಿದೆ.  ಸೇವೆಗಳು, ಮಳಿಗೆಗಳು  ಇನ್ನಿತರ ಮೂಲಗಳಿಂದಲೂ ದೇವಸ್ಥಾನಗಳಿಗೆ ಸಾಕಷ್ಟು ಪ್ರಮಾಣದಲ್ಲಿ  ಆದಾಯ ಸಂಗ್ರಹವಾಗಿದ್ದು,  ಈ ಬಗ್ಗೆ  ಮಾಹಿತಿ ಇಲ್ಲಿದೆ.

Advertisement

ಯಲ್ಲಮ್ಮನ ಗುಡ್ಡದಲ್ಲಿ 1.37 ಕೋಟಿ ರೂ. ಸಂಗ್ರಹ

ಬೆಳಗಾವಿ: ಮುಜರಾಯಿ ಇಲಾಖೆಗೆ ಒಳಪಟ್ಟ ಸವದತ್ತಿ ಶ್ರೀ ರೇಣುಕಾ ಯಲ್ಲಮ್ಮ ದೇವಸ್ಥಾನದ ಹುಂಡಿಯಲ್ಲಿ ಒಂದೇ ತಿಂಗಳಲ್ಲಿ 1.30 ಕೋಟಿ ರೂ., 4 ಲಕ್ಷ ರೂ. ಮೌಲ್ಯದ ಚಿನ್ನಾಭರಣ ಸಂಗ್ರಹವಾಗಿದೆ. ಎಪ್ರಿಲ್‌, ಮೇ ತಿಂಗಳಿಗಿಂತಲೂ ಜೂನ್‌ನಲ್ಲಿ ಅಧಿಕ ಪ್ರಮಾಣದಲ್ಲಿ ಹುಂಡಿ ಹಣ ಸಂಗ್ರಹವಾಗಿದೆ.  ಹುಂಡಿಯನ್ನು 3 ಭಾಗಗಳಾಗಿ ಎಣಿಕೆ ಮಾಡಲಾಗಿದ್ದು, ಇನ್ನೂ ಒಂದು ಭಾಗ ಉಳಿದುಕೊಂಡಿದೆ. ಬುಧವಾರ (ಜು.19) ಎಣಿಕೆ ಕಾರ್ಯ ಪೂರ್ಣಗೊಳ್ಳಲಿದೆ. ಕಳೆದ ವರ್ಷಕ್ಕೆ ಹೋಲಿಸಿದರೆ ಈ  ತಿಂಗಳಲ್ಲಿ ಹುಂಡಿಯಲ್ಲಿ ನಗದು  ಹೆಚ್ಚಿನ ಪ್ರಮಾಣದಲ್ಲಿ ಏರಿಕೆ ಆಗಿದೆ. ಮಹಿಳೆಯರಿಗೆ ಉಚಿತ ಬಸ್‌ ಪ್ರಯಾಣದ  ಯೋಜನೆ ಆರಂಭವಾದಾಗಿನಿಂದ ದೇಗುಲಕ್ಕೆ ಬರುವ ಭಕ್ತರ ಸಂಖ್ಯೆ ಹೆಚ್ಚಿದೆ ಎಂದು  ಸವದತ್ತಿ ರೇಣುಕಾ ಯಲ್ಲಮ್ಮ ದೇವಸ್ಥಾನ ಕಾರ್ಯನಿರ್ವಾಹಕ ಅಧಿಕಾರಿ ಎಸ್‌ಪಿಬಿ ಮಹೇಶ ತಿಳಿಸಿದ್ದಾರೆ.

ಅಂಜನಾದ್ರಿ-ಹುಲಿಗೆಮ್ಮದೇವಿ ಸಿರಿವಂತರು

ಕೊಪ್ಪಳ: ತಾಲೂಕಿನ ಹುಲಿಗಿಯ ಹುಲಿಗೆಮ್ಮ ದೇವಿ ದೇವಸ್ಥಾನ ಹಾಗೂ ವಿಶ್ವಖ್ಯಾತ ಅಂಜನಾದ್ರಿಯ ಪರ್ವತಕ್ಕೆ ಪ್ರತಿ ದಿನವೂ ಭಕ್ತರ ದಂಡೇ ಬರುತ್ತಿದ್ದು, ದೇವಾಲಯದ ಆದಾಯವೂ ಹೆಚ್ಚುತ್ತಿದೆ. 2022-23ರಲ್ಲಿ ಬರೋಬ್ಬರಿ 14.23 ಕೋ. ರೂ. ಕಾಣಿಕೆ ಸಂಗ್ರಹವಾಗಿದೆ. ಅಂದರೆ ಕಳೆದ ಸಾಲಿಗೆ ಹೋಲಿಸಿದರೆ 4 ಕೋ. ರೂ. ಹೆಚ್ಚಳವಾಗಿದೆ. ಭಕ್ತರು ಹೆಚ್ಚಾಗಿ ಅರ್ಚನೆ, ವಿಶೇಷ ನೈವೇದ್ಯ ಪೂಜೆ ಸಹಿತ ಹೂವಿನ ಅಲಂಕಾರ ಸೇವೆಯನ್ನೇ ಮಾಡಿಸುತ್ತಿದ್ದಾರೆ. ಅಂಜನಾದ್ರಿ ದೇಗುಲದಲ್ಲಿ ಈ ಬಾರಿ 2.24 ಕೋ. ರೂ. ಸಂಗ್ರಹವಾಗಿದೆ. ಅಂದರೆ ಒಂದೇ ವರ್ಷದಲ್ಲಿ ಕಾಣಿಕೆ ಹುಂಡಿ ಹಣ ದ್ವಿಗುಣವಾಗಿದೆ. ಕಳೆದ ತಿಂಗಳು 28 ಲಕ್ಷ ರೂ. ಕಾಣಿಕೆ  ಬಂದಿತ್ತು.

Advertisement

ದೇವರಗುಡ್ಡದಲ್ಲೂ ಕಾಣಿಕೆ  ಹೆಚ್ಚಳ

ಹಾವೇರಿ: ರಾಣೆಬೆನ್ನೂರು ತಾಲೂಕಿನ ದೇವರಗುಡ್ಡ ಶ್ರೀ ಮಾಲತೇಶ  ದೇವಸ್ಥಾನದ ಹುಂಡಿಯಲ್ಲಿ ಕಳೆದ ತಿಂಗಳು 7.10 ಲಕ್ಷ ರೂ. ಸಂಗ್ರಹವಾಗಿತ್ತು. ಮುಂಬರುವ ಹುಣ್ಣಿಮೆ ಬಳಿಕ ಹುಂಡಿಯಲ್ಲಿ ಸಂಗ್ರಹಗೊಂಡ ಕಾಣಿಕೆಯನ್ನು ಎಣಿಕೆ ಮಾಡಲಾಗುವುದು.  ಭಕ್ತರ ಸಂಖ್ಯೆ ಹೆಚ್ಚಿದ್ದರಿಂದ ಪ್ರತಿ ತಿಂಗಳು ಹುಂಡಿಯಲ್ಲಿ ಸಂಗ್ರಹಗೊಳ್ಳುತ್ತಿದ್ದ ಕಾಣಿಕೆಗಿಂತ ಈ ಬಾರಿ ಶೇ.20-25ರಷ್ಟು ಹೆಚ್ಚಾಗುವ ಸಾಧ್ಯತೆಯಿದೆ ಎಂದು ಶ್ರೀ  ದೇವಸ್ಥಾನದ ಟ್ರಸ್ಟ್‌ ಇಒ ಶೇಖಪ್ಪ ಭಜಂತ್ರಿ ತಿಳಿಸಿದ್ದಾರೆ. ಬ್ಯಾಡಗಿ ತಾಲೂಕಿನ ಕದರಮಂಡಲಗಿ ಶ್ರೀ ಕಾಂತೇಶ(ಆಂಜನೇಯ) ದೇವಸ್ಥಾನದಲ್ಲೂ  ಒಂದು ತಿಂಗಳಿನಿಂದ ಭಕ್ತರ ಸಂಖ್ಯೆ ಹೆಚ್ಚಾಗಿದೆ.  ಮುಂದಿನ ಶ್ರಾವಣ ಮಾಸದಲ್ಲಿ ಹುಂಡಿಯ ಹಣದ ಎಣಿಕೆ ನಡೆಯಲಿದೆ.

ರಾಯಚೂರಿನಲ್ಲೂ ಹುಂಡಿ ಭರ್ತಿ

ರಾಯಚೂರು:  ಮಾನ್ವಿಯ ನೀರಮಾನ್ವಿಯ ಯಲ್ಲಮ್ಮದೇವಿ ದೇವಸ್ಥಾನದ ಹುಂಡಿಯಲ್ಲಿ ಈವರೆಗೆ 11,63,462 ರೂ. ಕಾಣಿಕೆ  ಸಂಗ್ರಹವಾಗಿದೆ. ಕಳೆದ ವರ್ಷ 15.31 ಲಕ್ಷ ರೂ. ಸಂಗ್ರಹವಾಗಿತ್ತು. ಕಾಯಿ ಮಾರಾಟ, ಮಂಗಳಾರತಿ, ಹರಾಜು, ಅಂಗಡಿ ಜಾಗಕ್ಕೆ ಬಾಡಿಗೆಯಿಂದ ಈವರೆಗೆ 42.85 ಲಕ್ಷ ರೂ. ಆದಾಯ ಬಂದಿದೆ. ಕಳೆದ ವರ್ಷ 37.37 ಲಕ್ಷ ರೂ. ಆದಾಯ ಬಂದಿತ್ತು. ತಾಲೂಕಿನ ಸೂಗೂರೇಶ್ವರ ಸ್ವಾಮಿ ದೇವಸ್ಥಾನದಲ್ಲಿ ಕಳೆದ ಐದು ತಿಂಗಳಲ್ಲಿ 23,92,508 ರೂ. ಸಂಗ್ರಹವಾಗಿದೆ. ಇನ್ನಿತರ ಸೇವೆಗಳು, ಮಳಿಗೆಗಳು ಸಹಿತ ಇನ್ನಿತರ ಮೂಲಗಳಿಂದಲೂ ದೇವಸ್ಥಾನಕ್ಕೆ ಲಕ್ಷಾಂತರ ರೂ. ಆದಾಯವಿದೆ.

ಆದಾಯ ಮಾಹಿತಿ ನೀಡದ ಶಿರಸಿ ಮಾರಿಕಾಂಬಾ

ಕಾರವಾರ: ತಾಂತ್ರಿಕ ಕಾರಣ ನೀಡಿ ಜಿಲ್ಲೆಯ ಎ ದರ್ಜೆ ದೇವಾಲಯಗಳಾದ ಶಿರಸಿ ಮಾರಿಕಾಂಬಾ ದೇವಿಯ ಆಡಳಿತ ಮಂಡಳಿ ಹಾಗೂ ಇಡಗುಂಜಿ ಮಹಾಗಣಪತಿ ದೇವಸ್ಥಾನಗಳು ಆದಾಯದ ಮಾಹಿತಿ ನೀಡಿಲ್ಲ. ಈ ಬಗ್ಗೆ ಸರಕಾರಕ್ಕೆ ಮುಜರಾಯಿ ಇಲಾಖೆ ಪತ್ರ ಸಹ ಬರೆದಿದೆ.

ಈ ವ್ಯಾಪ್ತಿಯ “ಎ” ದರ್ಜೆಯ ದೇವಾಲಯಗಳ ಪೈಕಿ ಭಟ್ಕಳದ ದುರ್ಗಾಪರಮೇಶ್ವರಿ ದೇವಸ್ಥಾನ  2022-23ರಲ್ಲಿ 2,34,75,180 ರೂ. ಆದಾಯ ಗಳಿಸಿ ಪ್ರಥಮ ಸ್ಥಾನದಲ್ಲಿದೆ. ಶಿರಸಿಯ ಮಂಜುಗುಣ ವೆಂಕಟರಮಣ ದೇವಸ್ಥಾನದ ಆದಾಯ 1,74,47,000 ರೂ. ಆಗಿದೆ.  ಉಚಿತ ಬಸ್‌ ಪ್ರಯಾಣದ ಬಳಿಕ ಗೋಕರ್ಣ, ಮುರುಡೇಶ್ವರ, ಶಿರಸಿ ಮಾರಿಕಾಂಬಾ ದೇವಾಲಯಗಳಿಗೆ  ಬರುವ ಮಹಿಳೆಯರ ಸಂಖ್ಯೆ ಹೆಚ್ಚಿದೆ. ಸಹಜವಾಗಿ ದೇವಸ್ಥಾನಗಳ ಹುಂಡಿಗೆ ಬೀಳುವ ಹಣ ಶೇ.25 ಹೆಚ್ಚಾಗಿರಬಹುದು ಎಂಬುದು ಮುಜರಾಯಿ ಇಲಾಖೆಯ ಅಂದಾಜು.

ಶಿವಮೊಗ್ಗ ದೇಗುಲಗಳಿಗೆ ಹೆಚ್ಚದ  ಶಕ್ತಿ

ಶಿವಮೊಗ್ಗ: ಶಕ್ತಿ ಯೋಜನೆ ಪ್ರಾರಂಭದ ಬಳಿಕ  ಜಿಲ್ಲೆಯ ಯಾವುದೇ ದೇವಸ್ಥಾನಗಳಿಗೆ ಭಕ್ತರ ಸಂಖ್ಯೆ ಹೆಚ್ಚಳವಾಗಿಲ್ಲ. ಶೇ.70ಕ್ಕಿಂತ ಅಧಿಕ ಖಾಸಗಿ ಬಸ್‌ಗಳೇ ಜಿಲ್ಲೆಯ ಜನರಿಗೆ ಆಧಾರವಾಗಿದ್ದು  “ಎ’ ಗ್ರೇಡ್‌ ದೇವಸ್ಥಾನಗಳಾಗಿರುವ ಶಿಕಾರಿಪುರದ ಹುಚ್ಚರಾಯಸ್ವಾಮಿ, ಸಾಗರದ ಮಾರಿಕಾಂಬಾ, ಸೊರಬದ ಚಂದ್ರಗುತ್ತಿ ರೇಣುಕಾಂಬಾ, ಹಣಗೆರೆ ಕಟ್ಟೆ ದೇವಸ್ಥಾನಗಳಲ್ಲಿ ಭಕ್ತರ ಸಂಖ್ಯೆ ಎಂದಿನಂತೆಯೇ ಇದೆ. ಜು.3ರಂದು ಹುಚ್ಚರಾಯಸ್ವಾಮಿ ದೇವಸ್ಥಾನದ ಹುಂಡಿ ಎಣಿಕೆ ಮಾಡಲಾಗಿದ್ದು, ಅಂದಾಜು 30 ಲಕ್ಷ ರೂ. ಸಂಗ್ರಹವಾಗಿದೆ. ತೀರ್ಥಹಳ್ಳಿ ತಾಲೂಕಿನ ಹಣಗೆರೆ ಕಟ್ಟೆ ದೇವಸ್ಥಾನದಲ್ಲಿ ಜೂ.3ರಂದು ಹುಂಡಿ ಎಣಿಕೆ ಮಾಡಲಾಗಿದ್ದು, ಅಂದಾಜು 62 ಲಕ್ಷ ರೂ. ಸಂಗ್ರಹವಾಗಿದೆ. ಸಾಗರದ ಮಾರಿಕಾಂಬಾ ದೇವಸ್ಥಾನದಲ್ಲಿ  3 ಲಕ್ಷ ರೂ. ಸಂಗ್ರಹವಾಗಿತ್ತು. ಬಳಿಕ ಜಾತ್ರೆಯೂ ನಡೆದಿದ್ದು, ಆ ಬಳಿಕ ಎಣಿಕೆ ಮಾಡಿಲ್ಲ.

ಗದಗ ದೇಗುಲಗಳಿಗೂ ಹೆಚ್ಚಿದ ದೇಣಿಗೆ

ಗದಗ: ಶಕ್ತಿ ಯೋಜನೆ ಜಾರಿಗೊಂಡ ದಿನದಿಂದ ಜಿಲ್ಲೆಯ ಧಾರ್ಮಿಕ ಕ್ಷೇತ್ರಗಳಿಗೆ ಭೇಟಿ ನೀಡುವ ಭಕ್ತಾದಿಗಳ ಸಂಖ್ಯೆಯಲ್ಲಿ ಹೆಚ್ಚಳ ಕಂಡು ಬರುತ್ತಿದೆ. ನಗರದ ಐತಿಹಾಸಿಕ ವೀರನಾರಾಯಣ ದೇವಸ್ಥಾನ, ತ್ರಿಕೂಟೇಶ್ವರ ದೇವಸ್ಥಾನ, ತೋಂಟದಾರ್ಯ ಮಠ, ವೀರೇಶ್ವರ ಪುಣ್ಯಾಶ್ರಮ, ಲಕ್ಷೆ ¾àಶ್ವರದ ಸೋಮೇಶ್ವರ ದೇವಸ್ಥಾನ, ಗಜೇಂದ್ರಗಡದ ಕಾಲಕಾಲೇಶ್ವರ ದೇವಸ್ಥಾನ, ಮುಂಡರಗಿ ಸಿಂಗಟಾಲೂರಿನ ವೀರಭದ್ರೇಶ್ವರ ದೇವಸ್ಥಾನ ಸಹಿತ ಹಲವು ದೇವಸ್ಥಾನಗಳಲ್ಲಿ ಭಕ್ತಾದಿಗಳ ಸಂಖ್ಯೆ ಹೆಚ್ಚಾಗಿದ್ದು, ದೇವಸ್ಥಾನದ ಹುಂಡಿಗೆ ಹಾಕುವ ಕಾಣಿಕೆಯೂ ಹೆಚ್ಚಾಗುತ್ತಿದೆ.  ಗದಗ ನಗರದ ವೀರನಾರಾಯಣ ದೇವಸ್ಥಾನ, ತ್ರಿಕೂಟೇಶ್ವರ ದೇವಸ್ಥಾನ, ಲಕ್ಷೆ$¾àಶ್ವರದ ಸೋಮೇಶ್ವರ  ಸಹಿತ ಅನೇಕ ದೇವಸ್ಥಾನಗಳಲ್ಲಿ ಹುಂಡಿ ಎಣಿಕೆ ಪ್ರಕ್ರಿಯೆ ನಡೆದಿಲ್ಲ.

ಗಣಿ ನಾಡಿನಲ್ಲಿ ಕೋಟಿ ದಾಟಿದ ಹುಂಡಿ ಸಂಗ್ರಹ

ಬಳ್ಳಾರಿ: ಪ್ರಸಕ್ತ ಸಾಲಿನಲ್ಲಿ ಹಂಪಿ ವಿರೂಪಾಕ್ಷೇಶ್ವರ ದೇವಸ್ಥಾನ ಹೊರತುಪಡಿಸಿದರೆ ಉಳಿದೆಲ್ಲ ಪ್ರಮುಖ ದೇವಸ್ಥಾನಗಳ ಹುಂಡಿಗಳಲ್ಲಿ ಕಳೆದ ಸಾಲಿಗಿಂತ ಹೆಚ್ಚು ಸಂಗ್ರಹವಾಗಿದೆ. ಬಳ್ಳಾರಿಯ ಎ ದರ್ಜೆ ವ್ಯಾಪ್ತಿಯ ಕನಕದುರ್ಗಮ್ಮ ದೇವಸ್ಥಾನ   2022-23ರಲ್ಲಿ 1.34 ಕೋಟಿ ರೂ. ಸಂಗ್ರಹವಾಗಿದ್ದು, ಹಿಂದಿನ ವರ್ಷಕ್ಕಿಂತ 7.39 ಲಕ್ಷ ರೂ. ಜಾಸ್ತಿ ಸಂಗ್ರಹವಾಗಿದೆ.  ವಿಜಯನಗರ ಜಿಲ್ಲೆಯ ಮೈಲಾರಲಿಂಗ ದೇವಸ್ಥಾನದ ಹುಂಡಿಯಲ್ಲಿ 1,97,64,756 ರೂ, ಸಂಗ್ರಹವಾಗಿದ್ದು, 41,69,419 ರೂ. ದೇಣಿಗೆ ಸಂಗ್ರಹವಾಗಿದೆ. ಕೊಟ್ಟೂರಿನ ಗುರುಬಸವೇಶ್ವರ ದೇವಸ್ಥಾನದಲ್ಲಿ  ಈ ಬಾರಿ ಹುಂಡಿಯಲ್ಲಿ 1.43 ಕೋಟಿ ರೂ. ಮತ್ತು 36.40 ಲಕ್ಷ ರೂ. ದೇಣಿಗೆ ಸಂಗ್ರಹವಾಗಿದೆ.

ದೇಗುಲಗಳ ಹುಂಡಿ ಎಣಿಕೆ ನಡೆದಿಲ್ಲ

ದಾವಣಗೆರೆ:  ಜಿಲ್ಲೆಯಲ್ಲಿ ಚನ್ನಗಿರಿ ತಾಲೂಕಿನ ಜೋಳದಾಳ್‌ನ ಅಮ್ಮನಗುಡ್ಡ  “ಎ’ ಶ್ರೇಣಿ, ಹರಿಹರದ ಹರಿಹರೇಶ್ವರ ದೇವಸ್ಥಾನ “ಬಿ’ ಶ್ರೇಣಿಯದ್ದಾಗಿದೆ. ಧಾರ್ಮಿಕ ದತ್ತಿ ಇಲಾಖೆ ಆಯುಕ್ತರ ಆದೇಶದ ಅನ್ವಯ “ಎ’ ಶ್ರೇಣಿ ದೇವಸ್ಥಾನದ ಹುಂಡಿ ಎಣಿಕೆ ಮಾಡಲಾಗುತ್ತದೆ. ಹಾಗಾಗಿ  “ಎ’ ಶ್ರೇಣಿ ದೇವಸ್ಥಾನದ ಹುಂಡಿ ಎಣಿಕೆ ನಡೆದಿಲ್ಲ.  “ಬಿ’ ಶ್ರೇಣಿಯ ಹರಿಹರದ ಹರಿಹರೇಶ್ವರ ದೇವಸ್ಥಾನದ ಹುಂಡಿ ಎಣಿಕೆಯೂ ಆಗಿಲ್ಲ ಎಂದು ಧಾರ್ಮಿಕ ದತ್ತಿ ಇಲಾಖೆ ಸಹಾಯಕ ನಿರ್ದೇಶಕಿ ಹೊನ್ನಮ್ಮ ತಿಳಿಸಿದ್ದಾರೆ.

ತಿಂಗಳ ಹುಂಡಿ ಕಾಣಿಕೆಯಲ್ಲಿ ಹೆಚ್ಚಳ

ಕೊಲ್ಲೂರು: ಕೊಲ್ಲೂರು ಶ್ರೀ ಮೂಕಾಂಬಿಕಾ ದೇಗುಲದಲ್ಲಿ ಜೂ. 12ರಿಂದ ಜು. 11ರ ವರೆಗೆ ಹುಂಡಿಯಲ್ಲಿ 1,15,92,639 ಕೋಟಿ ರೂ. ಕಾಣಿಕೆ ರೂಪದಲ್ಲಿ ಸಂಗ್ರಹವಾಗಿದೆ.  2022ರ ಜೂ. 16ರಿಂದ ಜು. 14ರ ತನಕ ಸಂಗ್ರಹವಾದ ಮೊತ್ತ 86,37,613 ರೂಪಾಯಿ. 2022ರ ಎ.1ರಿಂದ ಜೂ. 30ರ ವರೆಗೆ 15,24,25,606 ರೂ. ಸಂಗ್ರಹವಾಗಿತ್ತು. 2023ರ ಎ. 1ರಿಂದ ಜೂ. 30ರ ವರೆಗೆ ಸಂಗ್ರಹವಾದ ಒಟ್ಟು ಆದಾಯ 17,93,28,864 ಆಗಿದೆ. ಚಂಡಿಕಾ ಹೋಮ, ಇನ್ನಿತರ ಸೇವೆಗಳಲ್ಲಿ ಯಾವುದೇ ಬದಲಾವಣೆ ಕಂಡುಬಂದಿಲ್ಲ.

ತಿಂಗಳಲ್ಲಿ ಹೆಚ್ಚಿದ ಶ್ರೀಕಂಠೇಶ್ವರನ ಆದಾಯ

ಮೈಸೂರು: ನಂಜನಗೂಡು ಶ್ರೀಕಂಠೇಶ್ವರ ದೇಗುಲದಲ್ಲಿ ಕಳೆದ ಬುಧವಾರ ನಡೆದ ಹುಂಡಿ ಎಣಿಕೆಯಲ್ಲಿ 1.77 ಕೋಟಿ ರೂ. ಸಂಗ್ರಹವಾಗಿದ್ದು, ಕಳೆದ ತಿಂಗಳಿಗಿಂತ 22 ಲಕ್ಷ ರೂ. ಹೆಚ್ಚಿನ ಆದಾಯ ಬಂದಿದೆ. ಕಳೆದ ತಿಂಗಳ ಎಣಿಕೆ ಕಾರ್ಯದಲ್ಲಿ 1.55 ಕೋಟಿ ರೂ. ಸಂಗ್ರಹವಾಗಿತ್ತು.  ಇತ್ತ ಶ್ರೀಕಂಠಸ್ವಾಮಿ ದರ್ಶನ ಪಡೆದ ಭಕ್ತರು ಹುಂಡಿಗೆ ಹಾಕುತ್ತಿರುವ ಹಣದ ಪ್ರಮಾಣದಲ್ಲೂ ಏರಿಕೆಯಾಗಿದೆ. ಮೈಸೂರು ಚಾಮುಂಡಿ ಬೆಟ್ಟದ ಶ್ರೀ ಚಾಮುಂಡೇಶ್ವರಿ ದೇವಾಲಯದಲ್ಲಿ ಆಷಾಢ ಮಾಸದ ಕಡೆಯ ಶಕ್ರವಾರ ಈಗಷ್ಟೇ ಮುಗಿದಿರುವುದರಿಂದ ಒಂದೆರೆಡು ದಿನಗಳಲ್ಲಿ ಹುಂಡಿ ಎಣಿಕೆ ಕಾರ್ಯ ನಡೆಯಲಿದೆ.

ಮಾದಪ್ಪನ ಸನ್ನಿಧಿಯಲ್ಲಿ ಕೋಟಿ ಸಂಗ್ರಹ

ಚಾಮರಾಜನಗರ/ಹಾಸನ/ಕೋಲಾರ:  ಮಲೆ ಮಹದೇಶ್ವರ ಸ್ವಾಮಿ ದೇವಾಲಯದಲ್ಲಿ  ಈ  ತಿಂಗಳ 6ರಂದು ನಡೆದ ಹುಂಡಿ  ಎಣಿಕೆಯಲ್ಲಿ 2.47 ಕೋಟಿ ರೂ. ಸಂಗ್ರಹವಾಗಿತ್ತು. ಇದೇ ವರ್ಷದ ಮೇ ತಿಂಗಳಲ್ಲಿ (ಒಟ್ಟು 32 ದಿನಗಳು) ನಡೆದ ಹುಂಡಿ ಎಣಿಕೆಯಲ್ಲಿ 2.53 ಕೋಟಿ ರೂ.  ಸಂಗ್ರಹವಾಗಿತ್ತು.  ಕಳೆದ ವರ್ಷದ ಜೂನ್‌ಗೆ ಹೋಲಿಸಿದರೆ ಈ ಬಾರಿಯ ಜೂನ್‌ ತಿಂಗಳಲ್ಲಿ 77 ಲಕ್ಷ ರೂ. ಹೆಚ್ಚು  ಸಂಗ್ರಹವಾಗಿದೆ. ಉಚಿತ ಪ್ರಯಾಣದ  ಪರಿಣಾಮ ಮಲೆ ಮಹದೇಶ್ವರ ಬೆಟ್ಟದಲ್ಲಿ ಜೂ. 18ರಂದು ಒಂದೇ ದಿನ ವಿವಿಧ ಸೇವೆಗಳಿಂದ 90.49 ಲಕ್ಷ ರೂ.ಸಂಗ್ರಹವಾಗಿ ಹೊಸ ದಾಖಲೆ ಸೃಷ್ಟಿಯಾಗಿತ್ತು. ಇದು ಕೇವಲ ವಿವಿಧ ಸೇವೆಗಳಿಂದ ಬಂದಿರುವ ಆದಾಯವಾಗಿದ್ದು, ಗೋಲಕದ ಹಣ ಇದರಲ್ಲಿ ಸೇರಿಲ್ಲ ಎಂಬುದು ವಿಶೇಷ.

ಆದಾಯ ಹೆಚ್ಚಿಸಿಕೊಂಡ ರಂಗಪ್ಪ

ಯಳಂದೂರು ತಾಲೂಕಿನ ಬಿಳಿಗಿರಿರಂಗನಬೆಟ್ಟ  ದೇಗುಲದಲ್ಲಿ  ಕಳೆದ ಮಾರ್ಚ್‌ನಲ್ಲಿ ಹುಂಡಿ ಎಣಿಕೆ ನಡೆದ ಸಂದರ್ಭದಲ್ಲಿ 3 ತಿಂಗಳ ಅವಧಿಯಲ್ಲಿ 31 ಲಕ್ಷ ರೂ. ಸಂಗ್ರಹವಾಗಿತ್ತು. ಜು.12ರಂದು ಎಣಿಕೆ ನಡೆದಿದ್ದು, ಹುಂಡಿಯಲ್ಲಿ 42.11 ಲಕ್ಷ  ರೂ. ಏರಿಕೆಯಾಗಿದ್ದು, 11 ಲಕ್ಷ ರೂ.ಗೂ ಅಧಿಕ ಏರಿಕೆಯಾಗಿದೆ.

ಹಾಸನದ ಬೇಲೂರು ತಾಲೂಕಿನ ಚನ್ನಕೇಶವ ದೇವಾಲಯದಲ್ಲಿ ಪ್ರಸಕ್ತ ಸಾಲಿನಲ್ಲಿ ಎಣಿಕೆ ಮಾಡಿದ ಹುಂಡಿಯಲ್ಲಿ 35,06,204 ರೂ. ಸಂಗ್ರಹವಾಗಿದೆ. ವಿವಿಧ ಸೇವೆಗಳಲ್ಲಿ 8,24,720 ರೂ., ಮಳಿಗೆಗಳ ಬಾಡಿಗೆ 2,22,000 ರೂ., ವಿವಿಧ ಹರಾಜುಗಳಿಂದ 23,65,000 ರೂ.ಆದಾಯ ಬಂದಿದೆ.

ಆಂಜನೇಯನ ಆದಾಯವೂ ಏರಿಕೆ

ಕೋಲಾರ ಜಿಲ್ಲೆಯ ಮುಜರಾಯಿ ದೇವಾಲಯಗಳಲ್ಲಿ ಕಳೆದ ಸಾಲಿಗೆ ಹೋಲಿಸಿದಲ್ಲಿ ಈ ಬಾರಿ ಹುಂಡಿ ಆದಾಯ ಕಡಿಮೆಯಾಗಿದೆ. ಆದರೆ ಮುಳಬಾಗಿಲು ನಗರದ ಪ್ರಸಿದ್ಧ ಆಂಜನೇಯ ಸ್ವಾಮಿ ದೇವಾಲಯ ಹುಂಡಿ ಆದಾಯ ಮಾತ್ರ ಹಿಂದಿನ ಸಾಲಿಗಿಂತ 4 ಲಕ್ಷ ರೂ.ಗೂ ಹೆಚ್ಚು ಸಂಗ್ರಹವಾಗಿದೆ. ಜಿಲ್ಲೆಯ 6 ಎ ವರ್ಗದ ದೇವಾಲಯಗಳ ಪೈಕಿ ಮುಳಬಾಗಿಲು ಆಂಜನೇಯಸ್ವಾಮಿ ದೇವಾಲಯದ ಆದಾಯ ಮಾತ್ರವೇ 23.32 ಲಕ್ಷ ರೂ.ಗಳಿಂದ 27.30 ಲಕ್ಷಕ್ಕೇರಿರುವ ಮೂಲಕ ಹಿಂದಿನ ಸಾಲಿಗಿಂತಲೂ 4 ಲಕ್ಷ ರೂ.ಗಳ ಹೆಚ್ಚಿನ ಆದಾಯ ಗಳಿಕೆಯಾಗಿದೆ.

 

Advertisement

Udayavani is now on Telegram. Click here to join our channel and stay updated with the latest news.

Next