Advertisement

ಹೆಚ್ಚುತ್ತಿರುವ ಸೈಬರ್ ಕೈಚಳಕ : ಕೆವೈಸಿಗೆ ಬದ್ದವಾಗುವುದು ಕಡ್ಡಾಯ ಮಾಡಿರುವುದು ಯಾಕೆ ?

03:49 PM Mar 27, 2022 | Team Udayavani |

ಬೆಂಗಳೂರು: ದೇಶದ ಹಲವು ಕಡೆಗಳಲ್ಲಿ ಮಾತ್ರವಲ್ಲದೆ ರಾಜ್ಯದಲ್ಲಿ ಕೂಡ ಸೈಬರ್ ಕೈಚಳಕ ತೋರುವ ಯತ್ನಗಳು ಹೆಚ್ಚುತ್ತಿದ್ದು, ಆತಂಕಕ್ಕೆ ಕಾರಣವಾಗಿದ್ದು, ಪೊಲೀಸರಿಗೆ ಹೊಸ ತಲೆನೋವಾಗಿ ಪರಿಣಮಿಸಿವೆ. ಸೈಬರ್ ವಂಚನೆಯ ಇಂತಹ ಯಾವುದೇ ಯತ್ನ ಕಂಡು ಬಂದಲ್ಲಿ 112 ಕ್ಕೆ ಕರೆ ಮಾಡಬಹುದಾಗಿದೆ.

Advertisement

ಎಸ್‌ಎಂಎಸ್‌, ಇ-ಮೇಲ್‌ ಸೇರಿ ಹಲವು ದಾರಿಗಳಲ್ಲಿ ಮೋಸಗಾರರು ಜನರನ್ನು ಸಂಪರ್ಕಿಸಿ, ಕೆವೈಸಿ ಅಪ್‌ಡೇಟ್‌ ಮಾಡಿಕೊಡುವುದಾಗಿ ಹೇಳುತ್ತಾರೆ. ಅಪ್‌ಡೇಟ್‌ ಮಾಡದಿದ್ದರೆ, ಖಾತೆ ನಿಷ್ಕ್ರಿಯವಾಗುತ್ತದೆ ಎಂದು ಹೆದರಿಸುವುದು ಸಾಮಾನ್ಯವಾಗಿದೆ. ಖಾತೆ ಸಂಖ್ಯೆ, ಲಾಗ್‌ಇನ್‌ ಮಾಹಿತಿ, ಒಟಿಪಿ, ಪಿನ್‌ನಂತಹ ಮಾಹಿತಿಯನ್ನು ಪಡೆದು ಖಾತೆಯ ಸಂಪೂರ್ಣ ಹಿಡಿತವನ್ನು ಸಾಧಿಸಿ ಹಣ ವರ್ಗಾವಣೆ ಮಾಡಿಕೊಳ್ಳುವ ಕುರಿತು ದೂರುಗಳು ಹೆಚ್ಚಾಗಿ ಕೇಳಿಬರುತ್ತಿವೆ.

ಕೆವೈಸಿ ಅಪ್‌ಡೇಟ್‌ ನೆಪದಲ್ಲಿ ಮೋಸ ಮಾಡುತ್ತಿರುವವರ ಸಂಖ್ಯೆ ಹೆಚ್ಚಾಗಿದ್ದು, ಈ ಬಗ್ಗೆ ಎಚ್ಚರವಾಗಿರಿ ಎಂದು ರಿಸರ್ವ್‌ ಬ್ಯಾಂಕ್‌ ಆಫ್ ಇಂಡಿಯಾ ಎಚ್ಚರಿಕೆ ನೀಡಿದೆ.

ಕೆವೈಸಿ ಅಪ್‌ಡೇಟ್‌ ಮಾಡುವಂತೆ ಅಪರಿಚಿತ ನಂಬರ್‌ನಿಂದ ಬಂದ ಸಂದೇಶ ನಂಬಿ ಮಹಿಳೆಯೊಬ್ಬರು 70 ಸಾವಿರ ರೂ. ಕಳೆದುಕೊಂಡಿದ್ದಾರೆ. ಈ ಸಂಬಂಧ ಆಗ್ನೇಯ ವಿಭಾಗದ ಸೆನ್‌ ಠಾಣೆಯಲ್ಲಿ ದೂರು ದಾಖಲಾಗಿದೆ. ಬಿಟಿಎಂ ಲೇಔಟ್‌ ನಿವಾಸಿ ದೂರುದಾರರಾದ ಪ್ರೀತಿ ಅವರಿಗೆ ಕೆಲ ದಿನಗಳ ಹಿಂದೆ ಅಪರಿಚಿತ ನಂಬರ್‌ನಿಂದ ಸಂದೇಶವೊಂದು ಬಂದಿದ್ದು, ಕೆವೈಸಿ ಅಪ್‌ಡೇಟ್‌ ಮಾಡುವಂತೆ ತಿಳಿಸಿ ದ್ದಾರೆ. ಅದನ್ನು ನಂಬಿದ ಪ್ರೀತಿ, ಲಿಂಕ್‌ ತೆರೆದು, ಬ್ಯಾಂಕ್‌ನ ಮಾಹಿತಿ ಭರ್ತಿ ಮಾಡಿದ ಕೆಲವೇ ಕ್ಷಣಗಳಲ್ಲಿ ಅವರ ಖಾತೆ ಯಲ್ಲಿದ್ದ 70, 429 ರೂ. ಕಡಿತಗೊಂಡಿದೆ. ಈ ಹಿನ್ನೆ ಲೆಯಲ್ಲಿ ಪ್ರೀತಿ ಅವರು ದೂರು ನೀಡಿದ್ದು, ತನಿಖೆ ನಡೆಯುತ್ತಿದೆ ಎಂದು ಸೆನ್‌ ಠಾಣೆ ಪೊಲೀಸರು ಹೇಳಿದ್ದಾರೆ.

ಇದೆ ರೀತಿಯಲ್ಲಿ ಹಲವಾರು ಈಗಾಗಲೇ ವಂಚನೆಗೆ ಒಳಗಾಗಿದ್ದು, ಜನರು ಯಾವುದೇ ದಾಖಲೆಗಳನ್ನು ಅಪ್‌ಡೇಟ್‌ ಮಾಡುವ ಮುನ್ನ ಸೂಕ್ಷ್ಮವಾಗಿ ಗಮನಿಸಬೇಕು ಎಂದು ಎಚ್ಚರಿಕೆ ನೀಡಿದ್ದಾರೆ.

Advertisement

ಕೆವೈಸಿ ಎಂದರೇನು?

ಕೆವೈಸಿ ಎಂದರೆ “ನೋ ಯುವರ್ ಕಸ್ಟಮರ್” (ನಿಮ್ಮ ಗ್ರಾಹಕರನ್ನು ಅರಿತುಕೊಳ್ಳಿ) ಎನ್ನುವಸಂಕ್ಷಿಪ್ತ ರೂಪವಾಗಿದೆ. ಹಣಕಾಸು ಸಂಸ್ಥೆಯಲ್ಲಿ ಖಾತೆ ತೆರೆಯುವಿಕೆ ಪ್ರಕ್ರಿಯೆ ನಡೆಸುವಾಗ ಇದನ್ನು ಗ್ರಾಹಕರ ಗುರುತಿಸುವಿಕೆ ಪ್ರಕ್ರಿಯೆಗಾಗಿ ಬಳಸಿ ಕೊಳ್ಳಲಾಗುತ್ತದೆ. ಹೂಡಿಕೆದಾರರ ಗುರುತು ಮತ್ತು ವಿಳಾಸಕ್ಕೆ ಸಂಬಂಧಿಸಿದ ಪ್ರಮುಖ ದಾಖಲೆಗಳಾದ ಭಾವಚಿತ್ರವುಳ್ಳ ಗುರುತಿನ ಚೀಟಿಗಳಾದ ಪ್ಯಾನ್ ಕಾರ್ಡ್‌, ಆಧಾರ್ ಕಾರ್ಡ್‌ ಇತ್ಯಾದಿ ಮತ್ತು ವಿಳಾಸ ದಾಖಲೆ ಮತ್ತು ಇನ್‌ಪರ್ಸನ್‌ ಪರಿಶೀಲನೆ (IPV) ಮೂಲಕ ಕೆವೈಸಿ ಖಾತ್ರಿ ಪಡಿಸುವ ಪ್ರಕ್ರಿಯೆ ನಡೆಯುತ್ತದೆ.

2 ವಿಭಾಗ

ಸಮಾನ ಕೆವೈಸಿ
ಕೇಂದ್ರೀಯ ಕೆವೈಸಿ ರಿಜಿಸ್ಟ್ರಿ ಶಿಫಾರಸು ಮಾಡಿದಂತೆ ಹೂಡಿಕೆದಾರರ ಪ್ರಾಥಮಿಕ ಮತ್ತು ಸಮಾನ ಕೆವೈಸಿ ವಿವರಗಳನ್ನು ಒಳಗೊಂಡಿರುತ್ತದೆ. ಇದನ್ನು ಎಲ್ಲ ನೋಂದಾಯಿತ ಹಣಕಾಸು ಮಧ್ಯವರ್ತಿಗಳು ಬಳಕೆ ಮಾಡುತ್ತಾರೆ.

ಹೆಚ್ಚುವರಿ ಕೆವೈಸಿ
ಮ್ಯೂಚುವಲ್‌ಫಂಡ್‌, ಸ್ಟಾಕ್ ಬ್ರೋಕರ್, ಹೂಡಿಕೆದಾರರ ಖಾತೆಯನ್ನು ತೆರೆಯುವ ಡೆಪಾಸಿಟರಿ ಭಾಗಿದಾರನಂತಹ ಹಣಕಾಸು ಮಧ್ಯವರ್ತಿಗಳು ಪ್ರತ್ಯೇಕವಾಗಿ ಹೆಚ್ಚುವರಿ ಕೆವೈಸಿ ಮಾಹಿತಿಯನ್ನು ಪಡೆಯಬಹುದು.

ಕಡ್ಡಾಯ
2002 ರ ಹಣ ದುರ್ಬಳಕೆ ತಡೆ ಕಾಯ್ದೆ ಮತ್ತು ಅದರ ಅಡಿಯಲ್ಲಿ ರೂಪಿಸಲಾಗಿರುವ ನಿಯಮಗಳು, ಹಣ ದುರ್ಬಳಕೆ ತಡೆಯ (AML) ಮಾನದಂಡಗಳ ಪ್ರಕಾರ ಉಗ್ರ ಚಟುವಟಿಕೆಗಾಗಿ ಹಣಕಾಸು ನೆರವಿನ ವಿರುದ್ಧ ಹೋರಾಟ(CFT)  ಸೆಕ್ಯುರಿಟಿ ಮಾರ್ಕೆಟ್‌ ಮಧ್ಯವರ್ತಿಗಳ ಹೊಣೆಗಾರಿಕೆ ಕುರಿತ ಸೆಬಿ ಮಾಸ್ಟರ್‌ ಸರ್ಕ್ಯುಲರ್ ಪ್ರಕಾರ ಕೆವೈಸಿಗೆ ಬದ್ಧವಾಗುವುದು ಕಡ್ಡಾಯವಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next