Advertisement

ಹೆಚ್ಚುತ್ತಿರುವ ಕೋವಿಡ್ ಪ್ರಕರಣ ; ಪರೀಕ್ಷೆಗೆ ಖಾಸಗಿ ಆಸ್ಪತ್ರೆಗಳ ಮೊರೆ ಹೋದ ಸರಕಾರ

06:35 AM May 23, 2020 | mahesh |

ಮಂಗಳೂರು: ರಾಜ್ಯದಲ್ಲಿ ಕೋವಿಡ್ ಪ್ರಕರಣಗಳ ಸಂಖ್ಯೆ ದಿನೇದಿನೇ ಹೆಚ್ಚುತ್ತಿರುವ ಕಾರಣ ಸರಕಾರವು ಇದೀಗ ಕೋವಿಡ್ ಪರೀಕ್ಷೆಗೆ ಖಾಸಗಿ ಆಸ್ಪತ್ರೆಗಳ ಮೊರೆ ಹೋಗಿದೆ. ಹೀಗಾಗಿ, ಹೆಚ್ಚುವರಿ ಸ್ಯಾಂಪಲ್‌ಗ‌ಳನ್ನು ಪರೀಕ್ಷೆಗೆ ಖಾಸಗಿ ಲ್ಯಾಬ್‌ಗಳಿಗೆ ಕಳುಹಿಸಿ ಅದರ ವೆಚ್ಚವನ್ನೂ ಸರಕಾರವೇ ಭರಿಸುತ್ತಿದೆ.

Advertisement

ಕಳೆದೆರಡು ವಾರಗಳ ಹಿಂದೆ ಕೆಲವೇ ಕೆಲವು ಖಾಸಗಿ ವೈದ್ಯಕೀಯ ಕಾಲೇಜುಗಳಲ್ಲಿ ಕೋವಿಡ್ ಪತ್ತೆ ಪ್ರಯೋಗಾಲಯ ತೆರೆಯಲು ಸರಕಾರದಿಂದ ಅವಕಾಶ ನೀಡಲಾಗಿತ್ತು. ಆದರೆ, ಪ್ರಸ್ತುತ ರಾಜ್ಯದಲ್ಲಿ ಹೆಚ್ಚು ಕೋವಿಡ್ ಪ್ರಕರಣಗಳು ಕಂಡು ಬರುತ್ತಿರುವ ಎಲ್ಲ ಜಿಲ್ಲೆಗಳಲ್ಲಿಯೂ ಖಾಸಗಿ ವೈದ್ಯಕೀಯ ಕಾಲೇಜುಗಳಲ್ಲಿ ಕೋವಿಡ್ ಪತ್ತೆ ಪ್ರಯೋಗಾಲಯ ತೆರೆಯಲು ಅನುಮತಿ ನೀಡಲಾಗುತ್ತಿದೆ. ಇದೀಗ ಜಿಲ್ಲೆಯಲ್ಲಿರುವ ಎಂಟು ಖಾಸಗಿ ವೈದ್ಯಕೀಯ ಕಾಲೇಜುಗಳಲ್ಲಿ ಕೋವಿಡ್ ಪರೀಕ್ಷಾ ಲ್ಯಾಬ್‌ಗಳನ್ನು ಕಡ್ಡಾಯವಾಗಿ ಪ್ರಾರಂಭಿಸಲು ಸೂಚಿಸಲಾಗಿದೆ.

ಸರಕಾರದಿಂದ 2,250 ರೂ. ಪಾವತಿ
ಮಂಗಳೂರಿನ ಯೇನಪೊಯ ವೈದ್ಯಕೀಯ ಕಾಲೇಜಿನಲ್ಲಿ ಈಗಾಗಲೇ ಕೋವಿಡ್ ಪರೀಕ್ಷಾ ಲ್ಯಾಬ್‌ ಕಾರ್ಯಾರಂಭವಾಗಿದ್ದು, ಮಂಗಳೂರಿನ ಫಾದರ್‌ ಮುಲ್ಲರ್‌ ಆಸ್ಪತ್ರೆ ಯಲ್ಲಿಯೂ ಪರೀಕ್ಷಾ ಲ್ಯಾಬ್‌ ಪ್ರಾಯೋಗಿಕವಾಗಿ ಪ್ರಾರಂಭಗೊಂಡಿದೆ. ದೇರಳಕಟ್ಟೆ ಕೆ.ಎಸ್‌. ಹೆಗ್ಡೆ ವೈದ್ಯಕೀಯ ಕಾಲೇಜು ಮತ್ತು ಮಂಗಳೂರು ಕೆಎಂಸಿಗೂ ಪ್ರಯೋಗಾಲಯ ತೆರೆಯಲು ಸರಕಾರ ಈಗಾಗಲೇ ಅನುಮತಿ ನೀಡಿದೆ. ಪ್ರಯೋ ಗಾಲಯಗಳ ಆರಂಭಕ್ಕೆ ಜಿಲ್ಲೆಗೆ ರಾಷ್ಟ್ರೀಯ ಆರೋಗ್ಯ ಮಿಷನ್‌ ಸದ್ಯ 50 ಲಕ್ಷ ರೂ.ಗಳನ್ನು ಬಿಡುಗಡೆಗೊಳಿಸಿದೆ. ಐಸಿಎಂಆರ್‌ನ ಮಾರ್ಗಸೂಚಿಗಳ ಪ್ರಕಾರ ಪ್ರತಿ ವ್ಯಕ್ತಿಯ ಗಂಟಲು ದ್ರವ ಮಾದರಿ ಪರೀಕ್ಷೆಗೆ ಖಾಸಗಿ ಆಸ್ಪತ್ರೆಗಳಿಗೆ ಸರಕಾರ 2250 ರೂ.ಗಳನ್ನು ಪಾವತಿಸಲಿದೆ. 24 ಗಂಟೆ ಅವಧಿಯೊಳಗೆ ಎಲ್ಲರ ಗಂಟಲು ದ್ರವ ಮಾದರಿ ಲಭ್ಯವಾಗಬೇಕೆಂಬ ಕಾರಣದಿಂದ ರಾಜ್ಯದ ಎಲ್ಲ ಜಿಲ್ಲೆಗಳಲ್ಲಿಯೂ ಈ ವ್ಯವಸ್ಥೆ ಮಾಡಲಾಗುತ್ತಿದೆ ಎಂದು ದ.ಕ. ಜಿಲ್ಲಾ ಆರೋಗ್ಯಾಧಿಕಾರಿ ಡಾ| ರಾಮಚಂದ್ರ ಬಾಯರಿ ತಿಳಿಸಿದ್ದಾರೆ.

ಆರಂಭವಾದರೂ ಒತ್ತಡ
ಉಡುಪಿ ಜಿಲ್ಲೆಯವರ ಮಾದರಿಗಳ ಪರೀಕ್ಷೆ ಮಣಿಪಾಲ ಕೆಎಂಸಿಯಲ್ಲಿ ಈಗಾಗಲೇ ನಡೆಯುತ್ತಿದೆಯಾದರೂ, ಆರಂಭಿಕ ಹಂತದಲ್ಲಿ ಕೇವಲ ಸುಮಾರು 30 ಮಾದರಿಗಳನ್ನಷ್ಟೇ ಅಲ್ಲಿ ಪರೀಕ್ಷೆಗೊಳಪಡಿಸಲಾಗುತ್ತಿದೆ. ಮುಂದೆ ತುಸು ಹೆಚ್ಚಾಗಬಹುದು. ಉ.ಕನ್ನಡದ ಸರಕಾರಿ ವೈದ್ಯಕೀಯ ಕಾಲೇಜಿಗೂ ಪ್ರಯೋಗಾಲಯ ಆರಂಭಕ್ಕೆ ಅನುಮತಿ ಸಿಕ್ಕಿದೆ. ಆದಾಗ್ಯೂ ಉಡುಪಿ ಮತ್ತು ಉ.ಕನ್ನಡ ಜಿಲ್ಲೆಯಲ್ಲಿ ಕೊರೊನಾ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಅಲ್ಲಿಯ ಪ್ರಯೋಗಾಲಯಕ್ಕೂ ಒತ್ತಡ ಬೀಳುವ ಸಾಧ್ಯತೆ ಹೆಚ್ಚಿದೆ.

ದಿನದಲ್ಲಿ ಗರಿಷ್ಠ 200 ಮಾದರಿ ಪರೀಕ್ಷೆ
ಈಗಾಗಲೇ 580 ಮಾದರಿಗಳು ಪರೀಕ್ಷೆಗೆ ಬಾಕಿ ಇವೆ. ಪ್ರತಿದಿನ 100ಕ್ಕೂ ಹೆಚ್ಚು ಮಂದಿಯ ಗಂಟಲು ದ್ರವ ಮಾದರಿಗಳು ಪರೀಕ್ಷೆಗೆ ಬರುವುದರಿಂದ ಎಲ್ಲವನ್ನು ಒಂದೇ ದಿನದಲ್ಲಿ ಮುಗಿಸಲು ಸಾಧ್ಯವಾಗುತ್ತಿಲ್ಲ. ಮಂಗಳೂರಿನಲ್ಲಿ 24 ಗಂಟೆ ಅವಧಿಯಲ್ಲಿ ಗರಿಷ್ಠ 200 ಮಾದರಿಗಳನ್ನು ಪರೀಕ್ಷಿಸಲು ಸಾಧ್ಯವಾಗುತ್ತದೆ.

Advertisement

ಜಿಲ್ಲೆಯ ನಾಲ್ಕು ಖಾಸಗಿ ವೈದ್ಯಕೀಯ ಕಾಲೇಜುಗಳಲ್ಲಿ ಕೋವಿಡ್ ವೈರಾಣು ಪತ್ತೆ ಪ್ರಯೋಗಾಲಯ ಆರಂಭಕ್ಕೆ ಅನುಮತಿ ಸಿಕ್ಕಿದ್ದು, ಈ ಪೈಕಿ ಯೇನಪೊಯದಲ್ಲಿ ಈಗಾಗಲೇ ಕಾರ್ಯಾಚರಿಸುತ್ತಿದೆ. ಇನ್ನುಳಿದ ಮೂರು ಪ್ರಯೋಗಾಲಯಗಳು ಶೀಘ್ರವೇ ಕಾರ್ಯಾಚರಿಸಲಿವೆ. ಖಾಸಗಿಯವರಿಗೆ ನಿಮ್ಹಾನ್ಸ್‌ ಸಹಿತ ವಿವಿಧೆಡೆ ತರಬೇತಿ ನೀಡಲಾಗಿದೆ.
-ಡಾ| ರಾಮಚಂದ್ರ ಬಾಯರಿ, ಜಿಲ್ಲಾ ಆರೋಗ್ಯಾಧಿಕಾರಿ, ದ.ಕ.

Advertisement

Udayavani is now on Telegram. Click here to join our channel and stay updated with the latest news.

Next