ಬೆಂಗಳೂರು: ಅಗ್ನಿ ದುರಂತವಾದ ಸಂದರ್ಭದಲ್ಲಿ ಸಮರ್ಥವಾಗಿ ಅಗ್ನಿಯನ್ನು ನಂದಿಸಲು ಹಾಗೂ ಜನರ ಪ್ರಾಣ ರಕ್ಷಣೆ ಮಾಡಲು ನಮ್ಮ ಸಾಮರ್ಥ್ಯ ಹೆಚ್ಚಾಗಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.
ಅವರು ಇಂದು ಕರ್ನಾಟಕ ರಾಜ್ಯ ಅಗ್ನಿಶಾಮಕ ಮತ್ತು ತುರ್ತು ಸೇವೆಗಳು ಇಲಾಖೆಯ ವತಿಯಿಂದ ವಿಧಾನಸೌಧದ ಬೃಹತ್ ಮೆಟ್ಟಿಲುಗಳ ಬಳಿ ಆಯೋಜಿಸಿರುವ 90 ಮೀಟರ್ ಏರಿಯಲ್ ಲ್ಯಾಡರ್ ಪ್ಲಾಟ್‍ಫಾರಂ ವಾಹನ’ ಲೋಕಾರ್ಪಣೆ ಹಾಗೂ ಹಸಿರು ದೀಪಾವಳಿ ಸಾರ್ವಜನಿಕ ಜಾಗೃತಿ ಜಾಥಾಕ್ಕೆ ಚಾಲನೆ ನೀಡಿ ಮಾತನಾಡಿದರು.
ಭಾರತದಲ್ಲಿ ಮುಂಬೈ ಹೊರತುಪಡಿಸಿದರೆ ಬೆಂಗಳೂರಿನಲ್ಲಿ ಮಾತ್ರ ಇಷ್ಟು ದೊಡ್ಡ ಏಣಿ ಇರುವ ವಾಹನಗಳನ್ನು ಪರಿಚಯಿಸಲಾಗಿದೆ. ಜನರ ರಕ್ಷಣೆ ಹಾಗೂ ಇನ್ನಷ್ಟು ಎತ್ತರದ ಕಟ್ಟಡಗಳ ನಿರ್ಮಾಣವನ್ನು ಇದು ಸಾಧ್ಯವಾಗಿಸಿದೆ. ನಗರ ಬೆಳೆಯಲು ಹಾಗೂ ಅಗ್ನಿ ದುರಂತಗಳನ್ನು ನಿಯಂತ್ರಣ ಮಾಡಲು 90 ಮೀಟರ್ ಏಣಿ ಉಪಯುಕ್ತವಾಗಿದೆ. ಈ ಕಾರ್ಯವನ್ನು ಸಾಧ್ಯವಾಗಿಸಿರುವ ಗೃಹ ಸಚಿವರು, ಗೃಹ ಇಲಾಖೆ ಹಾಗೂ ಅಗ್ನಿಶಾಮಕ ದಳದ ಎಲ್ಲಾ ಮುಖ್ಯಸ್ಥರನ್ನು ಅಭಿನಂದಿಸುವುದಾಗಿ ಮುಖ್ಯಮಂತ್ರಿಗಳು ತಿಳಿಸಿದರು.
ಇದನ್ನೂ ಓದಿ:‘ವಸುಂಧರ ದೇವಿ’ಯಾದ ಸೋನು ಗೌಡ
ವಾಹನದಲ್ಲಿ ಎತ್ತರಕ್ಕೆ ಹೋದ ಅನುಭವದ ಬಗ್ಗೆ ವಿವರಿಸಿದ ಮುಖ್ಯಮಂತ್ರಿಗಳು ವಿಧಾನಸೌಧದ ಗೋಪುರದಲ್ಲಿ ಶಿಲಾವಿನ್ಯಾಸವನ್ನು ಕಂಡು ಆಶ್ಚರ್ಯವಾಯಿತು. ಆ ಕಾಲದಲ್ಲಿ ಎಷ್ಟು ಶ್ರಮವಹಿಸಿ ಶಿಲೆಯನ್ನು ಕೊಂಡೊಯ್ದಿದ್ದಾರೆ. ಅಶೋಕ ಸ್ಥಂಭವನ್ನು ಹತ್ತಿರದಿಂದ ಕಂಡು ಸಂತೋಷವಾಯಿತು. ಅಗ್ನಿ ಅವಘಡಗಳಿಂದ ಜನರ ರಕ್ಷಣೆಯಾಗುತ್ತದೆ ಎನ್ನುವುದು ಸಮಾಧಾನಕರವಾದ ಸಂಗತಿಯಾಗಿದೆ ಎಂದರು.