Advertisement

ಕರಾವಳಿಯಲ್ಲಿ ಹೆಚ್ಚುತ್ತಿದೆ ಆತಂಕ; ಮುನ್ನೆಚ್ಚರಿಕೆ ಅತ್ಯಗತ್ಯ

12:30 PM Jun 24, 2020 | mahesh |

ಮಹಾನಗರ: ಕೋವಿಡ್ ಸೋಂಕಿನ ಆತಂಕ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು, ದ.ಕ. ಜಿಲ್ಲೆಯಲ್ಲಿ ಮಂಗಳವಾರ ಓರ್ವ ವೃದ್ಧ ಸಾವನ್ನಪ್ಪಿದ್ದಾರೆ. ರಾಜ್ಯ ರಾಜಧಾನಿ ಬೆಂಗಳೂರಿನಲ್ಲಂತೂ ಕೋವಿಡ್ ಸಮುದಾಯಕ್ಕೆ ವ್ಯಾಪಿಸುವ ಭೀತಿ ಎದುರಾಗಿದೆ. ಹೀಗಿರುವಾಗ, ನಾನಾ ರೀತಿಯಲ್ಲಿ ಬೆಂಗಳೂರಿನ ನೇರ ಸಂಪರ್ಕ ಹೊಂದಿರುವ ಮಂಗಳೂರು ಸಹಿತ ಕರಾವಳಿ ಭಾಗದ ಜನರು ಈ ಹಂತದಲ್ಲಿ ಸೋಂಕು ಹರಡದಂತೆ ಸಾಕಷ್ಟು ಮುಂಜಾಗ್ರತ ಕ್ರಮ ತೆಗೆದುಕೊಳ್ಳುವುದು ಅತ್ಯಗತ್ಯ.

Advertisement

ಬೆಂಗಳೂರಿಗೆ ಹೋಲಿಸಿದರೆ ದ.ಕ. ಜಿಲ್ಲೆಯಲ್ಲಿ ಕೊರೊನಾ ನಿಯಂತ್ರಣದಲ್ಲಿದ್ದು ಹೊರ ರಾಜ್ಯ, ವಿದೇಶದ ಸಂಪರ್ಕ ಇರುವ ಮಂದಿಗೆ ಪಾಸಿಟಿವ್‌ ಕಂಡುಬರುತ್ತಿದೆ. ಪ್ರಕರಣದ ಮೂಲ ಪತ್ತೆಗೂ ಅಷ್ಟೇನೂ ಕಷ್ಟವಿಲ್ಲ. ದ.ಕ. ಜಿಲ್ಲೆಯಲ್ಲಿ ಈ ವರೆಗೆ 435 ಪಾಸಿಟವ್‌ ಪ್ರಕರಣ ದಾಖಲಾಗಿದ್ದು, 250 ಮಂದಿ ಗುಣಮುಖರಾಗಿ ಬಿಡುಗಡೆಗೊಂಡಿದ್ದಾರೆ. ಒಟ್ಟು 9 ಮಂದಿ ಕೊರೊನಾ ದಿಂದ ಮೃತಪಟ್ಟಿದ್ದಾರೆ. ಜಿಲ್ಲೆಯಲ್ಲಿ ಜೂ. 1ರಿಂದ ಲಾಕ್‌ಡೌನ್‌ ಮತ್ತಷ್ಟು ಸಡಿಲಗೊಂಡಿದ್ದು, ಜಿಲ್ಲೆ, ಹೊರ ಜಿಲ್ಲೆಗೆ ಬಸ್‌ ಸಂಚಾರ ಆರಂಭಗೊಂಡಿದೆ. ಇದೀಗ ಹೊರ ರಾಜ್ಯಕ್ಕೂ ಕೂಡ ಸಂಚಾರ ಶುರುವಾಗಿದೆ. ಬಸ್‌, ಮಾರುಕಟ್ಟೆ, ದಿನಸಿ ಅಂಗಡಿ ಸಹಿತ ನಗರದಲ್ಲಿ ದಿನದಿಂದ ದಿನಕ್ಕೆ ಸಾರ್ವಜನಿಕ, ವಾಹನ ಸಂಚಾರ ಹೆಚ್ಚಾಗುತ್ತಿದೆ. ಆದರೆ, ಬೆಂಗಳೂರಿನಂಥ ಮಹಾನಗರದಲ್ಲಿ ಕೊರೊನಾ ಸೋಂಕು ವ್ಯಾಪಕವಾಗುತ್ತಿರುವುದನ್ನು ಗಮನಿಸುವಾಗ, ಇತ್ತ ಮಂಗಳೂರಿನ ಜನರು ಕೂಡ ಈ ವಿಚಾರದಲ್ಲಿ ಹೆಚ್ಚಿನ ಮುತುವರ್ಜಿ ವಹಿಸಬೇಕಾಗುತ್ತದೆ.

ಸಾಮಾಜಿಕ ಅಂತರವಿಲ್ಲ; ಮಾಸ್ಕ್ ಕೂಡ ಇಲ್ಲ
ಬೆಂಗಳೂರಿನ ಸ್ಥಿತಿಯನ್ನು ನೋಡಿದಾಗ ಮಂಗಳೂರಿನ ಜನರು ಕೂಡ ಈ ವಿಚಾರದಲ್ಲಿ ಹೆಚ್ಚಿನ ಮುತುವರ್ಜಿ ವಹಿಸುವುದು ಅತ್ಯಗತ್ಯವಾಗಿದೆ. ಆದರೆ ನಗರದ ಹೆಚ್ಚಿನ ಸಿಟಿ ಬಸ್‌ಗಳಲ್ಲಿ ಬೆಳಗ್ಗೆ ಮತ್ತು ಸಂಜೆ ಹೊತತ್ತು ಪ್ರಯಾಣಿಕರು ಸಾಮಾಜಿಕ ಅಂತರ ಅಥವಾ ಸರಕಾರದ ನಿಯಮ ಮರೆತು ಪ್ರಯಾಣಿಸುವ ದೃಶ್ಯ ಸಾಮಾನ್ಯವಾಗಿದೆ. ಇದು ಅಪಾಯಕ್ಕೆ ಎಡೆ ಮಾಡಿಕೊಡುವ ಸಾಧ್ಯತೆಯಿದೆ. ಇನ್ನು, ಸಾರ್ವಜನಿಕ ಪ್ರದೇಶದಲ್ಲಿ ಸುತ್ತಾಡುವಾಗ ಮಾಸ್ಕ್ ಕಡ್ಡಾಯವಾಗಿದ್ದರೂ ಹೆಚ್ಚಿನವರು ಪಾಲನೆ ಮಾಡದಿರುವುದು ಕಾಣುತ್ತಿದೆ. ಇದರ ಜತೆ ಅಂತರ್‌ ಜಿಲ್ಲೆ ಮತ್ತು ರಾತ್ರಿ ಬಸ್‌ ಸಂಚಾರ ಕೂಡ ಆರಂಭವಾಗಿದೆ.

ಸದ್ಯಕ್ಕೆ ಬೆಂಗಳೂರಿಗೆ ಬರಬೇಡಿ
ಕೊರೊನಾ ಪ್ರಕರಣ ಬೆಂಗಳೂರಿನಲ್ಲಿ ಸಮುದಾಯ ಹಂತ ತಲುಪುತ್ತಿದ್ದು, ಬೆಂಗಳೂರಿನಲ್ಲಿರುವ ಕರಾವಳಿಗರು ಜಾಲತಾಣಗಳಲ್ಲಿ ಅರಿವು ಮೂಡಿಸುತ್ತಿದ್ದಾರೆ. ಕರಾವಳಿ ಸೇರಿದಂತೆ ಬೇರೆ ಪ್ರದೇಶದಲ್ಲಿ ಇರುವವರು ಸದ್ಯಕ್ಕೆ ಬೆಂಗಳೂರಿಗೆ ಬರಬೇಡಿ. ಬೆಂಗಳೂರಿನಲ್ಲಿ ಕೊರೊನಾ ನಿಯಂತ್ರಣಕ್ಕೆ ಸಿಗುತ್ತಿಲ್ಲ. ಇದೇ ಕಾರಣಕ್ಕೆ ಸದ್ಯದ ಮಟ್ಟಿಗೆ ನೀವು ಇರುವಲ್ಲಿಯೇ ಸುರಕ್ಷಿತವಾಗಿರಿ ಎಂಬ ಸಂದೇಶ ಸಾರುತ್ತಿದ್ದಾರೆ.

ಇರಲಿ ಎಚ್ಚರ
 ಅಗತ್ಯ ಇದ್ದರೆ ಮಾತ್ರ ಮನೆಯಿಂದ ಹೊರ ಬನ್ನಿ
 ಬಸ್‌ಗಳಲ್ಲಿ ಸಂಚರಿಸುವಾಗ ಸಾಮಾಜಿಕ ಅಂತರ ಕಾಯ್ದುಕೊಳ್ಳಿ
 ಸಾರ್ವಜನಿಕವಾಗಿ ಸುತ್ತಾಡುವಾಗ ಕಡ್ಡಾಯವಾಗಿ ಮಾಸ್ಕ್ ಧರಿಸಿ
 ಹೆಚ್ಚು ಜನಸಂದಣಿ ಸೇರುವ ಪ್ರದೇಶಕ್ಕೆ ಹೋಗಬೇಡಿ
 ಕೋವಿಡ್ ಲಕ್ಷಣ ಕಾಣಿಸಿಕೊಂಡರೆ ಫೀವರ್‌ ಕ್ಲಿನಿಕ್‌, ಆರೋಗ್ಯ ಕೇಂದ್ರಗಳಿಗೆ ಭೇಟಿ ನೀಡಿ
 ಯಾವುದೇ ರೀತಿಯ ಸಹಾಯಕ್ಕಾಗಿ ಜಿಲ್ಲಾಡಳಿತದ 1077 ಸಹಾಯವಾಣಿಗೆ ಕರೆ ಮಾಡಿ

Advertisement
Advertisement

Udayavani is now on Telegram. Click here to join our channel and stay updated with the latest news.

Next