ನವದೆಹಲಿ: ದೇಶದಲ್ಲಿ 9 ವರ್ಷದಿಂದ 13 ವರ್ಷ ವಯೋಮಿತಿಯ ಮಕ್ಕಳು ಸ್ಮಾರ್ಟ್‌ಫೋನ್ ಬಳಕೆ ಮಾಡುತ್ತಿದ್ದಾರೆ ಎಂದು ಶೇ.55ರಷ್ಟು ಪೋಷಕರು ಒಪ್ಪಿಕೊಂಡಿದ್ದಾರೆ. ಇದರ ಜತೆಗೆ ನಗರ ವ್ಯಾಪ್ತಿಯಲ್ಲಿ ಇರುವ 9-17 ವರ್ಷ ವಯಸ್ಸಿನ ಶೇ.40 ಮಂದಿ ಮಕ್ಕಳು ಸಾಮಾಜಿಕ ಜಾಲತಾಣಗಳು, ವೀಡಿಯೊ ಮತ್ತು ಆನ್‌ಲೈನ್ ಗೇಮ್ ಗೀಳು ಅಂಟಿಸಿಕೊಂಡಿದ್ದಾರೆ ಎಂದು ಪೋಷಕರು ಚಿಂತೆ ವ್ಯಕ್ತಪಡಿಸಿದ್ದಾರೆ.
ದೇಶದ ವಿವಿಧ ಭಾಗಗಳಲ್ಲಿ ಲೋಕಲ್‌ಸರ್ಕಲ್ ಎಂಬ ಸಂಸ್ಥೆ ನಡೆಸಿದ ಅಧ್ಯಯನದಲ್ಲಿ ಈ ಮಾಹಿತಿ ಲಭ್ಯವಾಗಿದೆ. ಇನ್ನೊಂದು ಆಘಾತಕಾರಿ ಅಂಶವೆಂದರೆ ಶೇ.44 ಮಂದಿ ಸಣ್ಣ ಮಕ್ಕಳ ಹೆತ್ತವರು ಕೂಡ ಮೊಬೈಲ್‌ನಲ್ಲಿ ಜಾಲತಾಣ, ಗೇಮ್ಸ್‌ಗಳತ್ತ ಆಕರ್ಷಿತರಾಗಿದ್ದಾರೆ ಎಂದು ದೂರಿಕೊಂಡಿದ್ದಾರೆ. 13-17 ವರ್ಷ ನಡುವಿನ ಶೇ.62 ಮಂದಿ ಮಕ್ಕಳು 3 ಗಂಟೆ ಅಥವಾ ಅದಕ್ಕಿಂತ ಹೆಚ್ಚಿನ ಸಮಯ ಜಾಲತಾಣಗಳಲ್ಲಿ ಮುಳುಗಿದ್ದಾರೆ ಎಂಬ ಮಾಹಿತಿ ಸಂಗ್ರಹಿಸಿದೆ.
ಕೊರೊನಾ ಕಾರಣ: 9-13 ವರ್ಷ ನಡುವಿನ ಶೇ.49 ಮಕ್ಕಳು 3 ಗಂಟೆಗಿಂತಲೂ ಹೆಚ್ಚಿನ ಅವಧಿಯನ್ನೂ ಇದೇ ಮಾದರಿಯಲ್ಲಿ ಕಳೆಯುತ್ತಾರೆ. ಕೊರೊನಾ ಅವಧಿಯಲ್ಲಿ ಆನ್‌ಲೈನ್ ಕ್ಲಾಸ್ ಕಾರಣಕ್ಕಾಗಿ ಮಕ್ಕಳಿಗೆ ಸ್ಮಾರ್ಟ್‌ಫೋನ್ ತೆಗೆದು ಕೊಡಬೇಕಾಯಿತು. ನಂತರದ ದಿನಗಳಲ್ಲಿ ಅದು ಗೀಳಾಗಿ ಪರಿವರ್ತನೆಯಾಯಿತು ಎಂದು ಹೆತ್ತವರು ಹೇಳಿಕೊಂಡಿದ್ದಾರೆ.
13 ವರ್ಷ ಇರಲಿ: ಆನ್‌ಲೈನ್ ಕ್ಲಾಸ್ ಮತ್ತು ಸಾಮಾಜಿಕ ಜಾಲತಾಣಗಳ ಬಳಕೆ ಮಾಡಲು 13 ವರ್ಷ ಮತ್ತು 15 ವರ್ಷ ಎಂದು ಕಾನೂನಾತ್ಮಕವಾಗಿ ನಿಗದಿ ಮಾಡಬೇಕು ಎಂದು ಶೇ.68ರಷ್ಟು ಹೆತ್ತವರು ಸರ್ಕಾರಗಳಿಗೆ ಮನವಿ ಮಾಡಿದ್ದಾರೆ.