ಮೂಲ್ಕಿ : ದಿನಕ್ಕೊಂದರಂತೆ ಸರಣಿ ಅಪಘಾತಗಳ ಮೂಲಕ ಅಪಘಾತ ತಾಣವಾಗಿ ಬೆಳೆದಿದೆ. ಮೂಲ್ಕಿ ಬಸ್ ನಿಲ್ದಾಣದ ಎದುರಿನ ಹೆದ್ದಾರಿಯಲ್ಲಿ ಅಡ್ಡವಾಗಿ ದಾಟುವ ಹೊಸಪೇಟೆ- ಪಂಚಮಹಲ್ ರಸ್ತೆ ಜಂಕ್ಷನ್. ಹೆದ್ದಾರಿ ಇಲಾಖೆ ಇಲ್ಲಿ ರಸ್ತೆಯನ್ನು ತಿರುವಿನಂತೆ ನಿರ್ಮಿಸಿರುವುದು ಅಪಘಾತಕ್ಕೆ ಕಾರಣ ಎನ್ನಲಾಗುತ್ತಿದೆ. ಇಲ್ಲಿ ನಿತ್ಯವೂ ಒಂದಲ್ಲ ಒಂದು ಅಪಘಾತಗಳು ನಡೆಯುತ್ತಿದ್ದರೂ ಪೊಲೀಸ್ ಇಲಾಖೆಯ ಟ್ರಾಫಿಕ್ ವಿಭಾಗದಿಂದ ಕಟ್ಟು ನಿಟ್ಟಿನ ಶಾಶ್ವತ ಕ್ರಮ ಇನ್ನೂ ಕೈಗೊಂಡಿಲ್ಲ. ಅಪಘಾತ ನಡೆದ ಒಂದೆರಡು ದಿನ ಮಾತ್ರ ಇಲ್ಲಿಗೆ ಪೊಲೀಸ್ ನಿಯೋಜನೆ ಮಾಡಲಾಗುತ್ತದೆ. ಮತ್ತೆ ಯಾರೂ ಇತ್ತ ನಿಗಾ ವಹಿಸುವುದೇ ಇಲ್ಲ.
ಕಳೆದ ಎರಡು ದಿನ ಇಲ್ಲಿ ನಡೆದ ಅಪಘಾತವನ್ನು ಕಣ್ಣಾರೆ ಕಂಡಿರುವ ಸ್ಥಳೀಯರು, ದಿನವಿಡೀ ಇರುವ ಕೆಲವು ರಿಕ್ಷಾ ಚಾಲಕರು, ವ್ಯಾಪಾರಿಗಳು ವಾಹನವೊಂದು ಬ್ರೇಕ್ ಹಾಕಿದಾಗ ಬರುವ ಸದ್ದಿನಿಂದಲೂ ಬೆಚ್ಚಿ ಬೀಳುವ ಪರಿಸ್ಥಿತಿ ಉಂಟಾಗಿದೆ ಎನ್ನುತ್ತಾರೆ ಶುಕ್ರವಾರ ನಡೆದ ಅಪಘಾತದಲ್ಲಿ ಲಾರಿ ಚಕ್ರದಡಿ ಬಿದ್ದಿದ್ದ ಮಹಿಳೆಯೊಬ್ಬರನ್ನು ರಕ್ಷಿಸಲಾಗದೇ ತಮ್ಮ ಅಸಹಾಯಕತೆಯಿಂದ ನೊಂದಿರುವ ಸ್ಥಳೀಯರು.
ಈ ಹಿಂದೆ ಸುರತ್ಕಲ್ ಉತ್ತರ ಟ್ರಾಫಿಕ್ ಠಾಣೆಯ ಹಿರಿಯ ಅಧಿಕಾರಿ ಆಗಿದ್ದ ಮಂಜುನಾಥ್ ಅವರು ಮೂಲ್ಕಿಯನ್ನು ಅತೀ ಪ್ರಾಮುಖ್ಯ ಅಪಘಾತ ಸ್ಥಳ ಎಂದು ಪರಿಗಣಿಸಿ, ಈ ಬಗ್ಗೆ ನಿತ್ಯವೂ ತನ್ನ ಗಮನ ಹರಿಸುತ್ತಿದ್ದರು. ಆದರೆ ಅವರು ಇಲ್ಲಿಂದ ತೆರಳಿದ ಮೇಲೆ ಯಾರೂ ಇತ್ತ ಕಡೆ ಬಂದಿಲ್ಲ ಎನ್ನಲಾಗುತ್ತಿದೆ.
ಕೆಲವು ಬಾರಿ ಹೋಮ್ ಗಾರ್ಡ್ ಸಿಬಂದಿಯನ್ನು ಇಲ್ಲಿಯ ಟ್ರಾಫಿಕ್ ನಿರ್ವಹಣೆಗಾಗಿ ನಿಯುಕ್ತಿಗೊಳಿಸಲಾಗುತ್ತಿತ್ತು. ಇದರಿಂದ ಇಲ್ಲಿಗೆ ಯಾವುದೇ ರೀತಿಯ ಪ್ರಯೋಜನ ಆಗದಿದ್ದರೂ ಕೆಲವು ಹಿರಿಯ ವಯಸ್ಸಿನ ಜನ ರಸ್ತೆ ದಾಟುವಲ್ಲಿ ಸ್ವಲ್ಪ ಮಟ್ಟಿಗೆ ಪ್ರಯೋಜನವಾಗುತ್ತಿತ್ತು. ಈ ಬಗ್ಗೆ ಟ್ರಾಫಿಕ್ ವಿಭಾಗದ ಪೊಲೀಸರನ್ನು ಕೇಳಿದರೆ, ಮಂಗಳೂರಿನ ಬಹುತೇಕ ಪ್ರದೇಶವನ್ನು ನಮ್ಮ ವ್ಯಾಪ್ತಿಗೆ ಕೊಡಲಾಗಿದೆ. ಹೀಗಾಗಿ ಸಿಬಂದಿ ಸಮಸ್ಯೆ ಹೆಚ್ಚಾಗಿದೆ ಎನ್ನುವ ಉತ್ತರ ಸಿಗುತ್ತಿದೆ. ಇತ್ತ ಮೂಲ್ಕಿ ಠಾಣೆಯ ಸಿಬಂದಿಯೂ ಈ ಬಗ್ಗೆ ತಲೆ ಕೆಡಿಸುವಂತಿಲ್ಲ. ಕಾರಣ ಇಲ್ಲಿ ಸಾರಿಗೆ ಸಂಚಾರ ವಿಭಾಗವೇ ಇಲ್ಲ ಎಂಬುದು ಪ್ರಮುಖ ಕಾರಣವಾಗಿದೆ.
ಟ್ರಾಫಿಕ್ ಉಪ ಠಾಣೆ ಅಗತ್ಯ
ಪೊಲೀಸ್ ಇಲಾಖೆಯೇ ಎಲ್ಲದಕ್ಕೂ ಜವಾಬ್ದಾರಿ ಎನ್ನುವ ಆರೋಪವನ್ನು ಎಲ್ಲರೂ ಮಾಡುತ್ತಾರೆ. ಮೂಲ್ಕಿಗೆ ಒಂದು ಟ್ರಾಫಿಕ್ ಉಪಠಾಣೆಯನ್ನು ಕೊಟ್ಟರೆ ಇಲ್ಲಿಯ ಸಿಬಂದಿಗೆ ಟ್ರಾಫಿಕ್ ನಿರ್ವಹಣೆ ಮಾಡುವುದು ಸುಲಭವಾಗುತ್ತದೆ. ಟ್ರಾಫಿಕ್ ನಿರ್ವಹಣೆಯ ಹೆಚ್ಚುವರಿ ಜವಾಬ್ದಾರಿಯನ್ನು ಕನಿಷ್ಠ ಮೂಲ್ಕಿ ನಗರ ಪಂಚಾಯತ್ ವ್ಯಾಪ್ತಿಗಾದರೂ ಕೊಟ್ಟರೆ ಸಮಸ್ಯೆ ಪರಿಹರಿಸಿಕೊಳ್ಳಬಹುದು.
- ಸುನಿಲ್ ಆಳ್ವ, ಅಧ್ಯಕ್ಷರು,
ನಗರ ಪಂಚಾಯತ್ ಮೂಲ್ಕಿ
ಸಭೆ ನಡೆಸಿ ಕ್ರಮ
ಹೆಚ್ಚುವರಿ ಸಿಬಂದಿ ನಿಯೋಜನೆ ಮಾಡಲಾಗಿದೆ. ಹೆದ್ದಾರಿ ದಾಟಲು ಜನರಿಗೆ ಪ್ರತ್ಯೇಕ ವ್ಯವಸ್ಥೆ ಮಾಡಬೇಕಾಗಿತ್ತು. ಜಂಕ್ಷನ್‌ನಲ್ಲಿ ಜನ ಜಂಗುಳಿ ಇರುವ ಕಾರಣ ಹೈಮಾಸ್ಟ್ ಲೈಟ್ ಮತ್ತು ಬ್ಲಿಂಕರ್‌ಗಳನ್ನು ಅಳ ವಡಿಸಿ ಹೆದ್ದಾರಿಯಲ್ಲಿ ಬರುವ ವಾಹನಗಳಿಗೆ ತೀವ್ರತೆ ತಿಳಿಯುವಂತೆ ಕ್ರಮ ಜರಗಿಸಬೇಕಾಗಿದೆ. ಸ್ಥಳೀಯಾಡಳಿತ ಮತ್ತು ನಾಗರಿಕರೊಂದಿಗೆ ಸಭೆ ನಡೆಸಿ ಈ ಬಗ್ಗೆ ಹೆದ್ದಾರಿ ಇಲಾಖೆಯ ಗಮನ ಸೆಳೆಯಲಾಗುವುದು.
–
ಅಮಾನುಲ್ಲಾ, ಇನ್‌ಸ್ಪೆಕ್ಟರ್,
ಮಂಗಳೂರು ಪಾಂಡೇಶ್ವರ ಪಶ್ಚಿಮ
ಮತ್ತು ಉತ್ತರ ಟ್ರಾಫಿಕ್ ವಿಭಾಗ