Advertisement
ರೈತ ಸಂಘಟನೆಯೊಂದರ ನೇತೃತ್ವದಲ್ಲಿ ಎಫ್‌ಆರ್‌ಪಿಗೆ ಬೇಡಿಕೆ ಇಟ್ಟಿದ್ದ ರೈತರು ಶಾಂತವಾಗಿಯೇ ಕಾರ್ಖಾನೆ ಎದುರು ಧರಣಿಗೆ ಮುಂದಾಗಿದ್ದರು. ಈ ವೇಳೆ ಅಕ್ರಮ ಮರಳು ದಂಧೆಯೊಂದಿಗೆ ತಳುಕು ಹಾಕಿಕೊಂಡಿರುವ ರೈತ ಮುಖಂಡನೊಬ್ಬ ಮಾಡಿದ ಪ್ರಚೋದನಕಾರಿ ಭಾಷಣ ಕೆಲ ರೈತರಲ್ಲಿ ಆಕ್ರೋಶ ಹುಟ್ಟು ಹಾಕಿ ಅವರು ಕಾರ್ಖಾನೆಯೊಳಗೆ ನುಗ್ಗಿ, ಕಲ್ಲೆಸೆದಿದ್ದೂ ಅಲ್ಲದೆ ಕಬ್ಬು ನುರಿಸುವ ಯಂತ್ರದ ಕೇನ್ ಕ್ಯಾರಿಯರ್ ಮೇಲೆ ನಿಂತು ಕೆಲ ಹೊತ್ತು ಆತಂಕಸೃಷ್ಟಿಸಿದ್ದರು. ತಕ್ಷಣ ಯಂತ್ರ ಬಂದ್ ಮಾಡದಿದ್ದರೆ ಅವರೆಲ್ಲರೂ ಕಬ್ಬಿನ ಜಲ್ಲೆಗಳ ಸಮೇತ ಯಂತ್ರದ ಬಾಯಿಯೊಳಗೆ ಸಿಕ್ಕು ನುಜ್ಜುಗುಜ್ಜಾಗಿ ಪ್ರಾಣ ಕಳೆದುಕೊಳ್ಳುವ ಸಂಭವ ಇತ್ತು.
Related Articles
Advertisement
ಕಟಾವು ಪ್ರಕ್ರಿಯೆ ಸ್ಥಗಿತ: ಅ.7ರಂದು ಕಾರ್ಖಾನೆಯಲ್ಲಿ ಬಾಯ್ಲರ್ ಪ್ರದೀಪನ ಮಾಡಲಾಗಿತ್ತು. ಅ. 12ರಿಂದ 2022-23ನೇ ಸಾಲಿನ ಹಂಗಾಮಿಗೆ ಕಬ್ಬು ನುರಿಸಲು ಚಾಲನೆ ನೀಡಲಾಗಿತ್ತು. ಇದಕ್ಕಾಗಿ ಕಾರ್ಖಾನೆಯವರು ಕಬ್ಬು ಕಟಾವು ತಂಡಗಳನ್ನು ಗೊತ್ತುಪಡಿಸಿ, ಆಯಾ ಭಾಗದ ರೈತರ ಜಮೀನುಗಳಿಗೆ ಕಾರ್ಮಿಕರನ್ನು ನಿಯೋಜಿಸಿ ಕಬ್ಬು ಕಟಾವು ಪ್ರಾರಂಭಿಸಿದ್ದರು.
ಕಟಾವು ಮಾಡಿದ ಕಬ್ಬನ್ನು ಯಥಾವಕಾಶ ಕಾರ್ಖಾನೆಗೆ ಸಾಗಿಸಲು ಟ್ರ್ಯಾಕ್ಟರ್, ಲಾರಿಗಳನ್ನು ಬಳಸಲಾಗುತ್ತಿತ್ತು. ಅ. 29ರ ಮಧ್ಯಾಹ್ನ 12 ಗಂಟೆಯಿಂದ ಕಾರ್ಖಾನೆಯಲ್ಲಿ ಕಬ್ಬು ನುರಿಸುವ ಕಾರ್ಯ ಬಂದ್ ಆಗಿರುವುದರಿಂದ ರೈತರ ಜಮೀನುಗಳಿಂದ ಕಬ್ಬು ಹೊತ್ತು ತಂದ ವಾಹನಗಳು ಕಾರ್ಖಾನೆ ಆವರಣದಲ್ಲೇ ನಿಲ್ಲುವಂತಾಗಿದೆ. ಹೀಗೆ ನಿಂತ ಕಬ್ಬು ಬಿಸಿಲಿಗೆ ಸಿಕ್ಕು ರಸ ಉತ್ಪಾದಿಸುವ ಸಾಮರ್ಥ್ಯ ಕಡಿಮೆಯಾಗುವ ಆತಂಕ ಹುಟ್ಟು ಹಾಕಿದೆ.
ಇದರ ಜೊತೆಗೆ ಅದಾಗಲೇ ರೈತರ ಜಮೀನಿನಲ್ಲಿ ಕಟಾವು ಪ್ರಕ್ರಿಯೆಯಲ್ಲಿ ತೊಡಗಿರುವ ಕಾರ್ಮಿಕರು ಕೆಲಸವಿಲ್ಲದೆ ಕೂಡುವಂತಾಗಿದ್ದು ಮಾತ್ರವಲ್ಲದೆ ಕಟಾವು ಮಾಡಿದ ಕಬ್ಬನ್ನು ಸಾಗಿಸಲಾಗಿದೆ ಜಮೀನಿನಲ್ಲೇ ಹಾಕಿದ್ದಾರೆ. ಇದರಿಂದಲೂ ಕಬ್ಬಿನಲ್ಲಿರುವ ರಸ ಉತ್ಪಾದನೆಯ ಸಕ್ಕರೆ ಅಂಶ ಕಡಿಮೆ ಆಗುವ ಆತಂಕ ಸೃಷ್ಟಿಯಾಗಿದೆ. ಕಬ್ಬು ಕಟಾವು ಮಾಡುವುದು, ವಾಹನಗಳಿಗೆ ಹೇರುವುದು, ವಾಹನಗಳು ಕಾರ್ಖಾನೆಯ ಕೇನ್ ಕ್ಯಾರಿಯರ್‌ಗೆ ತಂದು ಹಾಕುವುದು, ಕ್ಯಾರಿಯರ್ ಮೂಲಕ ಕಬ್ಬು ನುರಿಸು ರಸ ಮಾಡಿ ಅದನ್ನು ಸಕ್ಕರೆ ಪ್ರಕ್ರಿಯೆಗೆ ಕಳಿಸುವುದು, ಕಬ್ಬು ಇಳಿಸಿ ಖಾಲಿಯಾದ ವಾಹನಗಳು ಮತ್ತೇ ನಿಗದಿತ ಜಮೀನಿಗೆ ಮರಳಿ ಕಬ್ಬು ಹೇರಿಕೊಂಡು ಕಾರ್ಖಾನೆಗೆ ಬರುವುದು ಇದು ನಿರಂತರ ಪ್ರಕ್ರಿಯೆ. ಸದ್ಯ ಕಬ್ಬು ನುರಿಸುವ ಕಾರ್ಯ ಬಂದ್ ಆಗಿರುವುದರಿಂದ ಇವೆಲ್ಲ ಪ್ರಕ್ರಿಯೆಗಳು ನಿಂತು ಹೋಗಿರುವುದು ಸಮಸ್ಯೆಗೆ ಕಾರಣ ಎನ್ನಲಾಗುತ್ತಿದೆ.
ಕಾರ್ಖಾನೆಯ ಸ್ಥೂಲ ನೋಟಆರಂಭದಲ್ಲಿ ದಿನಕ್ಕೆ 3500 ಟನ್ ಕಬ್ಬು ನುರಿಸುವ ಸಾಮರ್ಥ್ಯ (3500ಟಿಸಿಡಿ) ಹೊಂದಿದ್ದ ಕಾರ್ಖಾನೆಯನ್ನು ರೈತರ ಪ್ರೋತ್ಸಾಹ ಪರಿಗಣಿಸಿ 10000 ಟಿಸಿಡಿ ಸಾಮರ್ಥ್ಯಕ್ಕೆ ಅಪ್‌ಗ್ರೇಡ್ ಮಾಡಲಾಗಿದೆ. ವಾರ್ಷಿಕ ಕಬ್ಬು ಹಂಗಾಮು ಮುಗಿಯುವ 150 (ಇದು ವ್ಯತ್ಯಾಸವಾಗಬಹುದು) ದಿನಗಳವರೆಗೂ ಅಂದಾಜು 15 ಲಕ್ಷ ಟನ್‌ವರೆಗೆ ಕಬ್ಬು ನುರಿಸುವ ಗುರಿ ಹಾಕಿಕೊಳ್ಳಲಾಗುತ್ತದೆ. 2021-22ನೇ ಸಾಲಿನಲ್ಲಿ 10.68 ಲಕ್ಷ ಟನ್ ಕಬ್ಬು ನುರಿಸಿ 98362 ಟನ್ ಸಕ್ಕರೆ ಉತ್ಪಾದಿಸಿದ್ದು ಈ ಪ್ರಮಾಣ ಶೇ.10.18ರಷ್ಟಿದೆ. ವಿಜಯಪುರ ಜಿಲ್ಲೆಯ ಮುದ್ದೇಬಿಹಾಳ, ತಾಳಿಕೋಟೆ, ಬಸವನಬಾಗೇವಾಡಿ, ಇಂಡಿ ತಾಲೂಕುಗಳು ಮಾತ್ರವಲ್ಲದೆ ಬಾಗಲಕೋಟೆ ಜಿಲ್ಲೆಯ ಹುನಗುಂದ, ಇಳಕಲ್ಲ, ನಿಡಗುಂದಿ ತಾಲೂಕು ಸೇರಿ ಅಕ್ಕಪಕ್ಕದ ಜಿಲ್ಲೆ, ತಾಲೂಕುಗಳ ರೈತರು ಕಾರ್ಖಾನೆಗೆ ಕಬ್ಬು ಪೂರೈಸುತ್ತಾರೆ. ಪ್ರಸ್ತುತ ಮುದ್ದೇಬಿಹಾಳ ತಾಲೂಕು ವ್ಯಾಪ್ತಿಯೊಂದರಲ್ಲೇ 10 ಲಕ್ಷ ಟನ್ ಕಬ್ಬು ಬೆಳೆಯಲಾಗುತ್ತಿದೆ. 33000 ಎಕರೆ ಕಬ್ಬಿನ ಪ್ರದೇಶ ಇದ್ದು ಕಾರ್ಖಾನೆಯ ವ್ಯಾಪ್ತಿಯಲ್ಲಿ ಒಟ್ಟು 53000 ಎಕರೆ ಪ್ರದೇಶ ಇದೆ. ಒಮ್ಮೆ ಕಾರ್ಖಾನೆ ಕಬ್ಬು ನುರಿಸಲುಪ್ರಾರಂಭಿಸಿದರೆ ನಿರಂತರ ಚಾಲೂ ಸ್ಥಿತಿಯಲ್ಲಿ ಇರಬೇಕಾಗುತ್ತದೆ. ನಡುವೆ ಬಂದ್ ಆದಲ್ಲಿ ಅದರ ಪರಿಣಾಮ ನೇರವಾಗಿ ಕಬ್ಬು ಬೆಳೆಗಾರರು ಮತ್ತು ಕಾರ್ಮಿಕರು ಅನುಭವಿಸಬೇಕಾಗುತ್ತದೆ. ವಿಜಯಪುರ ಜಿಲ್ಲಾಧಿಕಾರಿಯವರ ಕಚೇರಿಯಲ್ಲಿ ನಡೆದ ಕಾರ್ಖಾನೆ ಪ್ರತಿನಿಧಿಗಳು ಮತ್ತು ರೈತ ಮುಖಂಡರ ಸಭೆಯಲ್ಲಿ ಪೊಲೀಸ್ ಭದ್ರತೆಯೊಂದಿಗೆ ಕಾರ್ಖಾನೆ ಪ್ರಾರಂಭಿಸಲು ಜಿಲ್ಲಾ ಧಿಕಾರಿಯವರು ಸೂಚಿಸಿದ್ದಾರೆ. ನಾವು ಸರ್ಕಾರದ ಸೂಚನೆಯಂತೆ ನಡೆದುಕೊಳ್ಳುತ್ತಿದ್ದೇವೆ.
ವೆಂಕಟೇಶ ಪಾಟೀಲ, ವ್ಯವಸ್ಥಾಪಕ
ನಿರ್ದೇಶಕರು, ಬಾಲಾಜಿ ಸಕ್ಕರೆ ಕಾರ್ಖಾನೆ ರೈತ ಮುಖಂಡರು ಕಾರ್ಖಾನೆಯ ತೂಕದ ಯಂತ್ರದ ಬಗ್ಗೆ ಸಂಶಯ ವ್ಯಕ್ತಪಡಿಸಿದ್ದು ಸಕ್ಕರೆ ಇಲಾಖೆಯ ಕಮೀಷನರ್‌ಗೆ ಪತ್ರ ಬರೆದು ಪರಿಶೀಲನೆ ನಡೆಸುವಂತೆ ಕೋರುವುದಾಗಿ ಜಿಲ್ಲಾಧಿಕಾರಿಯವರು ತಿಳಿಸಿದ್ದಾರೆ. ಸದ್ಯಕ್ಕೆ ಕಾರ್ಖಾನೆಯವರು ಸರ್ಕಾರ ನಿಗದಿಪಡಿಸಿದ ಎಫ್‌ಆರ್‌ಪಿ ನೀಡುತ್ತಿದ್ದಾರೆ.
ಬಿ.ಎಸ್. ಕಡಕಭಾವಿ, ತಹಶೀಲ್ದಾರ್ ಹೋರಾಟ ಕಾನೂನಾತ್ಮಕವಾಗಿ ನಡೆದಿಲ್ಲ. ಶನಿವಾರ ನಡೆದ ಅಹಿತಕರ ಘಟನೆ ಒಪ್ಪುವಂಥದ್ದಲ್ಲ. ಹೋರಾಟದ ರೂಪು ರೇಷೆ ಗೊತ್ತಿಲ್ಲದವರು ಗದ್ದಲ ಮಾಡಿದ್ದಾರೆ. ಕಾರ್ಖಾನೆಯವರು ಮಾನವೀಯತೆಯಿಂದ ರೈತರ ಬೇಡಿಕೆ ಒಪ್ಪಬಹುದಾಗಿದೆ. ಹೀಗಾಗಿ ಹೋರಾಟಕ್ಕೆ ನೀಡಿದ್ದ ಬೆಂಬಲ ಹಿಂಪಡೆಯುತ್ತಿದ್ದೇವೆ.
ಅರವಿಂದ ಕುಲಕರ್ಣಿ, ಪ್ರಧಾನ
ಕಾರ್ಯದರ್ಶಿ, ಅಖಂಡ ಕರ್ನಾಟಕ ರೈತ ಸಂಘ ಡಿ.ಬಿ. ವಡವಡಗಿ