ಬೆಂಗಳೂರು: ರಾಜ್ಯದ ಬಹುತೇಕ ನದಿಗಳ ನೀರಿನ ಗುಣಮಟ್ಟ ‘ಸಿ’ ವರ್ಗಕ್ಕೆ ಹಾಗೂ ಕೆರೆಗಳ ನೀರಿನ ಗುಣಮಟ್ಟ ‘ಸಿ’ ಮತ್ತು ‘ಇ’ ವರ್ಗಕ್ಕೆ ತಲುಪಿದೆ ಎಂದು ರಾಜ್ಯ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿಯ ಅಧ್ಯಕ್ಷ ಸಿ.ಜಯರಾಂ ಕಳವಳ ವ್ಯಕ್ತಪಡಿಸಿದರು.
ರಾಜ್ಯದಲ್ಲಿ 125 ಕೆರೆಗಳ ನೀರಿನ ಗುಣಮಟ್ಟ ‘ಸಿ’ ಮತ್ತು ‘ಇ’ ವರ್ಗಕ್ಕೆ ಇಳಿದಿರುವುದು ಮಾಪನದಿಂದ ದೃಢಪಟ್ಟಿದೆ. ಅಪಾರ್ಟ್‌ಮೆಂಟ್‌ಗಳಲ್ಲಿ ಬಳಸಿದ ನೀರು ಕೆರೆಗೆ ಹೋಗುವುದನ್ನು ತಪ್ಪಿಸಲು 2 ಸಾವಿರ ಚ.ಮೀ ಹಾಗೂ 20 ಮನೆ ಒಳಗೊಂಡ ಅಪಾರ್ಟ್‌ಮೆಂಟ್‌ಗಳಲ್ಲಿ ನೀರು ಸಂಸ್ಕರಣ ಘಟಕ ಸ್ಥಾಪಿಸುವುದನ್ನು ಕಡ್ಡಾಯ ಮಾಡಿದ್ದೇವೆ ಎಂದರು.
ಮಾಲಿನ್ಯ ರೇಖೆ ದಾಟಿದ ನಾಲ್ಕು ನಗರಗಳು: ರಾಜ್ಯದ ಪ್ರಮುಖ ನಗರಗಳಲ್ಲಿ ವಾಯುಮಾಲಿನ್ಯದ ಗುಣಮಟ್ಟ ತಿಳಿಯಲು ಬೆಂಗಳೂರಿನಲ್ಲಿ ಏಳು ನಿರಂತರ ವಾಯು ಮಾಪನ ಕೇಂದ್ರ, 14 ಮಾನವ ಚಾಲಿತ ವಾಯು ಮಾಪನ ಕೇಂದ್ರ, ಜಿಲ್ಲೆಗಳಲ್ಲಿ ತಲಾ 22 ನಿರಂತರ ವಾಯು ಮಾಪನ ಕೇಂದ್ರ ಮತ್ತು ಮಾನವ ಚಾಲಿತ ಮಾಪನ ಕೇಂದ್ರ ಸ್ಥಾಪಿಸಲಾಗಿದೆ. ಬೆಂಗಳೂರು, ದಾವಣಗೆರೆ, ಹುಬ್ಬಳಿ-ಧಾರವಾಡ ಹಾಗೂ ಕಲಬುರಗಿ ನಗರಗಳು ವಾಯು ಮಾಲಿನ್ಯ ರೇಖೆ ಮೀರಿವೆ. ಈ 4 ನಗರಗಳ ವಾಯು ಮಾಲಿನ್ಯ ನಿಯಂತ್ರಿಸಲು ಮುಖ್ಯ ಕಾರ್ಯದರ್ಶಿ ಅಧ್ಯಕ್ಷತೆಯಲ್ಲಿ ಕಾರ್ಯಪಡೆ, ಪರಿಸರ ಹಾಗೂ ಜೀವಶಾಸ್ತ್ರ ಇಲಾಖೆಯ ಪ್ರಧಾನ ಕಾರ್ಯದರ್ಶಿ ಅಧ್ಯಕ್ಷತೆಯಲ್ಲಿ ವಾಯು ಗುಣಮಟ್ಟ ಮಾಪನ ಸಮಿತಿ ಹಾಗೂ ಸದಸ್ಯ ಕಾರ್ಯದರ್ಶಿಗಳ ಅಧ್ಯಕ್ಷತೆಯಲ್ಲಿ ಸಮನ್ವಯ ಸಮಿತಿ ರಚನೆ ಮಾಡಲಾಗಿದೆ ಎಂದರು.
ಈ ಮೂರೂ ಸಮಿತಿಗಳಿಗೆ ಬೆಂಗಳೂರಿನಲ್ಲಿ ವಾಯು ಮಾಲಿನ್ಯ ನಿಯಂತ್ರಿಸಲು 44 ಅಂಶಗಳ ಅಲ್ಪಾವಧಿ ಮತ್ತು ದೀರ್ಘಾವಧಿ ಕಾರ್ಯ ಯೋಜನೆ ಅನುಷ್ಠಾನಕ್ಕೆ ಇಲಾಖೆಗೆ ಸೂಚನೆ ನೀಡಲಾಗಿದೆ. ಹುಬ್ಬಳ್ಳಿ-ಧಾರವಾಡ, ದಾವಣಗೆರೆ ಹಾಗೂ ಕಲಬುರಗಿಯಲ್ಲಿ ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ಕಾರ್ಯಪಡೆ ರಚಿಸಿ 27 ಅಂಶಗಳ ಅಲ್ಪಾವಧಿ, ದೀರ್ಘಾವಧಿ ಯೋಜನೆಗಳ ಅನುಷ್ಠಾನಕ್ಕೆ ಸೂಚನೆ ನೀಡಿದ್ದೇವೆ. ಬೆಂಗಳೂರಿನಲ್ಲಿ ಮೆಟ್ರೋ ಸಂಚಾರ ಆರಂಭವಾದ ನಂತರ ಸಾರ್ವಜನಿಕರು ಸ್ವಂತ ವಾಹನ ಬಳಕೆ ಕಡಿಮೆ ಮಾಡಿದ್ದಾರೆ ಮತ್ತು ಆ ಮಾರ್ಗಗಳಲ್ಲಿ ಶೇ.11ರಷ್ಟು ವಾಯು ಮಾಲಿನ್ಯ ಇಳಿಮುಖವಾಗಿದೆ ಎಂದರು.
Advertisement
ಅರಣ್ಯ, ಜೀವ ಪರಿಸ್ಥಿತಿ ಮತ್ತು ಪರಿಸರ ಇಲಾಖೆಯಿಂದ ನಗರದ ಚೌಡಯ್ಯ ಸ್ಮಾರಕ ಭವನದಲ್ಲಿ ಹಮ್ಮಿಕೊಂಡಿದ್ದ ವಿಶ್ವ ಪರಿಸರ ದಿನಾಚರಣೆ ಹಾಗೂ ರಾಜ್ಯ ಪರಿಸರ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಮಾತನಾಡಿದ ಅವರು, ರಾಜ್ಯದ 98 ಕೇಂದ್ರಗಳಲ್ಲಿ ನದಿ ನೀರಿನ ಗುಣಮಟ್ಟ ಮಾಪನ ಮಾಡಲಾಗುತ್ತಿದೆ. ಬಹುತೇಕ ಕೇಂದ್ರಗಳಲ್ಲಿ ನೀರಿನ ಗುಣಮಟ್ಟ ಸಿ’ ವರ್ಗಕ್ಕೆ ಒಳಪಟ್ಟಿದ್ದು ಕಂಡು ಬಂದಿದೆ. ನದಿಗಳ ಮಾಲಿನ್ಯ ಮಾಪನಕ್ಕೆ ಸಂಬಂಧಿಸಿದಂತೆ ರಿಯಲ್ ಟೈಮ್ ವಾಟರ್ ಕ್ವಾಲಿಟಿ ಮಾನಿಟರಿಂಗ್ ಮಾಡಲು ಕಾವೇರಿ ನದಿಯ ಸತ್ಯಗಾಲು ಸೇತುವೆ ಹಾಗೂ ಕೃಷ್ಣ ನದಿಯ ರಾಯಚೂರು ಶಕ್ತಿನಗರದ ಬಳಿ 2 ಕೇಂದ್ರ ತೆರೆಯಲಾಗಿದೆ ಎಂದರು.
Related Articles
Advertisement
ಉಪ ಸಭಾಪತಿ ಧರ್ಮೇಗೌಡ, ಸಂಸದ ತೇಜಸ್ವಿ ಸೂರ್ಯ, ಶಾಸಕ ಅಶ್ವಥ್ ನಾರಾಯಣ, ವಿಧಾನ ಪರಿಷತ್ ಸದಸ್ಯ ಟಿ.ಎ.ಶರವಣ, ಅರಣ್ಯ ಪರಿಸರ ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿ ಸಂಗೀತ ದವೆ, ಪ್ರಧಾನ ಅರಣ್ಯ ಸಂರಕ್ಷಣಾಧಿಕಾರಿ ಅಜಯ್ ಮಿಶ್ರಾ, ಪೋಸ್ಟ್ ಮಾಸ್ಟರ್ ಜನರಲ್ ಕರ್ನಲ್ ಅರವಿಂದ ವರ್ಮಾ ಉಪಸ್ಥಿತರಿದ್ದರು.
ಸಮಾರಂಭದಲ್ಲಿ 2019ರ ವಿಶ್ವ ಪರಿಸರ ದಿನಾಚರಣೆಯ ಸ್ಮರಣಿಕೆಯಾಗಿ ವಿಶೇಷ ಅಂಚೆ ಲಕೋಟೆಯನ್ನು ಬಿಡುಗಡೆ ಮಾಡಿ ಸಾಧಕರಿಗೆ ಪರಿಸರ ಪ್ರಶಸ್ತಿ ನೀಡಿ ಸನ್ಮಾನಿಸಲಾಯಿತು.
ಅಧಿಕಾರಿಗಳ ವಿರುದ್ಧ ಧರ್ಮೇಗೌಡ ಆಕ್ರೋಶ:
ಅರಣ್ಯ ಇಲಾಖೆಯ ಅಧಿಕಾರಿಗಳ ಬೇಜವಾಬ್ದಾರಿಯಿಂದ ರಾಜ್ಯದಲ್ಲಿ ಉತ್ತಮ ಮಳೆ ಆಗುವ ಆಗುಂಬೆಯಲ್ಲೂ ಮಳೆ ಕಡಿಮೆಯಾಗಿದೆ. ಭೂಮಿಯ ಸಾರ ಹೀರುವ ನೀಲಗಿರಿ ಮತ್ತು ಅಕೇಶಿಯಾ ಮರಗಳನ್ನು ಅಧಿಕಾರಿಗಳೇ ಬೆಳೆಸುತ್ತಿದ್ದಾರೆ. ಈ ಮೂಲಕ ಇಡೀ ರಾಜ್ಯದಲ್ಲಿ ಬರ ಆವರಿಸಲು ಸಹಕಾರ ಮಾಡುತ್ತಿದ್ದಾರೆ. ಪರಿಸರ ಉಳಿಸಲು ಅರಣ್ಯ ಇಲಾಖೆ ಅಧಿಕಾರಿಗಳು ಹಾಕಿಕೊಂಡಿರುವ ಕಾರ್ಯಕ್ರಮಗಳ ಬಗ್ಗೆ ಇನ್ನಾದರೂ ಆತ್ಮ್ಮಾವಲೋಕನ ಮಾಡಿಕೊಳ್ಳಬೇಕು. ಪರಿಸರ ಉಳಿಸಲು ಕೈಗೊಂಡ ಕಾರ್ಯಕ್ರಮಗಳ ಪ್ರಗತಿಯ ಬಗ್ಗೆ ಅವಲೋಕಿಸಬೇಕು. ಬೆಂಗಳೂರು ನಗರದಲ್ಲಿ ಶೇ.35.1ರಷ್ಟು ಪ್ಲಾಸ್ಟಿಕ್ ತ್ಯಾಜ್ಯ ಉತ್ಪಾದನೆಯಾಗುತ್ತಿದ್ದು, ಇದರ ವಿಲೇವಾರಿಯೇ ಸಮಸ್ಯೆಯಾಗಿದೆ. ಇದೆ ಪರಿಸ್ಥಿತಿ ಮುಂದುವರಿದರೆ ಬೆಂಗಳೂರಿನಲ್ಲಿ ಜನಜೀವನ ನಡೆಸಲು ಸಾಧ್ಯವೇ ಎಂದು ಉಪಸಭಾಪತಿ ಧರ್ಮೇಗೌಡ ಪ್ರಶ್ನಿಸಿದರು.