Advertisement

ಆಸ್ಟ್ರೇಲಿಯಾದಲ್ಲಿ ಹೆಚ್ಚಿದ ಪೊಲೀಸ್‌ ಗಸ್ತು

11:27 AM Jul 03, 2020 | mahesh |

ಸಿಡ್ನಿ: ಮೆಲ್ಬರ್ನ್ ಕೊರೊನಾ ವೈರಸ್‌ನ ಹಾಟ್‌ಸ್ಪಾಟ್‌ ಆಗಿರುವಂತೆ ಮತ್ತು ವಿವಿಧೆಡೆಗಳಲ್ಲಿ ಅಂತಾರಾಜ್ಯ ಗಡಿಗಳನ್ನು ತೆರೆದ ಹಿನ್ನೆಲೆಯಲ್ಲಿ ಆಸ್ಟ್ರೇಲಿಯನ್‌ ಪೊಲೀಸರು ಗಸ್ತನ್ನು ಇನ್ನಷ್ಟು ಹೆಚ್ಚಳಗೊಳಿಸಿದ್ದಾರೆ. ಆಸ್ಟ್ರೇಲಿಯಾದಲ್ಲಿ ವಿಕ್ಟೋರಿಯಾದ ಗಡಿ ಹೊರತಾಗಿ ಬೇರೆಲ್ಲ ರಾಜ್ಯಗಳ ಅಂತಾರಾಜ್ಯ ಗಡಿಗಳನ್ನು ತೆರೆಯಲಾಗಿದೆ.

Advertisement

ಮೆಲ್ಬರ್ನ್ ಸೇರಿದಂತೆ ವಿವಿಧ ನಗರಗಳ ಉಪನಗರಗಳಲ್ಲಿ ಪೊಲೀಸ್‌ ಗಸ್ತು ಹೆಚ್ಚಲಿದೆ. ಇದರೊಂದಿಗೆ ಸೀಲ್‌ಡೌನ್‌ ಘೋಷಿಸಲಾದ ಪ್ರದೇಶದಲ್ಲಿ ಪೊಲೀಸರು ಮನೆಗಳ ಮೇಲೆ ಡ್ರೋನ್‌ ಮೂಲಕ ಕಣ್ಗಾವಲು ಇಡಲಿದ್ದಾರೆ ಎಂದು ಪೊಲೀಸ್‌ ಮುಖ್ಯಸ್ಥರು ಹೇಳಿದ್ದಾರೆ. ರಾಜ್ಯ ಸರಕಾರಗಳು ಹೊಟೇಲ್‌ ಕ್ವಾರಂಟೈನ್‌ನಲ್ಲಿರುವವರ ತೀವ್ರ ನಿಗಾಕ್ಕೆ ಮುಂದಾಗಿದೆ. ವಿದೇಶದಿಂದ ಬಂದವರು ಹೊಟೇಲ್‌ ಕ್ವಾರಂಟೈನ್‌ನಲ್ಲಿದ್ದು, ಬಳಿಕ ಎರಡು ವಾರಗಳ ಅವಧಿ ಮುಗಿಯುವ ಮೊದಲೇ ಅವರು ಅಲ್ಲಿಂದ ತೆರಳಿದ್ದಾಗಿ ಹೇಳಲಾಗಿದೆ. ಆಸ್ಟ್ರೇಲಿಯಾದಲ್ಲಿ ಒಟ್ಟು 8 ಸಾವಿರ ಪ್ರಕರಣಗಳಿದ್ದು, 104 ಮಂದಿ ಈ ವರೆಗೆ ಮೃತಪಟ್ಟಿದ್ದಾರೆ.  7090 ಮಂದಿ ಚೇತರಿಸಿಕೊಂಡಿದ್ದಾರೆ.

ವಿಕ್ಟೋರಿಯಾದಲ್ಲಿ ಹೆಚ್ಚಾಗಿ ಕೋವಿಡ್‌ ಪ್ರಕರಣಗಳು ಕಾಣಿಸಿಕೊಂಡಿದ್ದು, ಗುರುವಾರ 77 ಹೊಸ ಪ್ರಕರಣಗಳು ಪತ್ತೆಯಾಗಿವೆ. ಕಳೆದ ಒಂದು ವಾರಗಳಿಂದ ಇಲ್ಲಿ ನಿತ್ಯ ಎರಡಂಕಿಯ ಪ್ರಕರಣಗಳು ಕಂಡುಬರುತ್ತಿವೆ. ಇಲ್ಲಿನ ಕ್ವಾರಂಟೈನ್‌ ವ್ಯವಸ್ಥೆ ಸಮರ್ಪಕವಾಗಿಲ್ಲವೇ ಎಂಬ ಸಂಶಯಗಳೂ ಮೂಡಿವೆ. ಜತೆಗೆ ವಿಕ್ಟೋರಿಯಾದಲ್ಲಿ ಇತ್ತಿಚೆಗೆ ಕಂಡು ಬಂದ ಪ್ರಕರಣಗಳು ಕೋವಿಡ್‌ ಮತ್ತೆ ಎರಡನೇ ಬಾರಿಗೆ ದಾಳಿ ಮಾಡಿದ ಸಂಶಯ ಮೂಡಿಸಿದೆ. ಇದೇ ವೇಳೆ ಉತ್ತರ ಆಸ್ಟ್ರೇಲಿಯಾದಲ್ಲಿ ಪ್ರವಾಸಿಗರೊಬ್ಬರಲ್ಲಿ ಕೋವಿಡ್‌ ಸೋಂಕು ಪತ್ತೆಯಾಗಿದೆ. ಇವರು ಮೆಲ್ಬರ್ನ್ನಿಂದ ಬಂದಿದ್ದರು ಎಂದು ಹೇಳಲಾಗಿದೆ. ಉತ್ತರ ಆಸ್ಟ್ರೇಲಿಯಾ ಹೆಚ್ಚು ಮಾನವರಿಲ್ಲದ ಪ್ರದೇಶವಾಗಿದ್ದು, ಇಲ್ಲಿಯೂ ಕೋವಿಡ್‌ ವೈರಸ್‌ ಪತ್ತೆಯಾಗಿರುವುದು ಅಲ್ಲಿನ ಜನರನ್ನು ಆತಂಕಕ್ಕೆ ದೂಡಿದೆ. ಸೋಂಕಿತ ವ್ಯಕ್ತಿಯನ್ನು ಐಸೋಲೇಶನ್‌ ವಾರ್ಡ್‌ಗೆ ದಾಖಲಿಸಲಾಗಿದೆ.

 

Advertisement

Udayavani is now on Telegram. Click here to join our channel and stay updated with the latest news.

Next