Advertisement

ಹೆಚ್ಚಿದ “ತೈಲ’ಬಿಸಿ: ಕೇಂದ್ರಕ್ಕೆ ಬೆಲೆ ಇಳಿಸುವ ಒತ್ತಡ

06:00 AM Jan 24, 2018 | Team Udayavani |

ನವದೆಹಲಿ: ಇತ್ತೀಚೆಗಷ್ಟೆ ಪುಟಿದೆದ್ದು ಗಣನೀಯ ಹೆಚ್ಚಳ ಕಂಡಿದ್ದ ಡೀಸೆಲ್‌ ಹಾಗೂ ಪೆಟ್ರೋಲ್‌ ಬೆಲೆ ದೇಶಾದ್ಯಂತ ಮತ್ತೆ ಏರಿಕೆ ಕಂಡಿದ್ದು, ಬೆಂಗಳೂರಿನಲ್ಲಿ ಪ್ರತಿ ಲೀಟರ್‌ ಡೀಸೆಲ್‌ಗೆ ಸುಮಾರು 64.26 ರೂ. ಹಾಗೂ ಪೆಟ್ರೋಲ್‌ ಪ್ರತಿ ಲೀಟರ್‌ಗೆ 74.00 ರೂ. ಆಗಿದೆ. ಇದು, 2014ರಲ್ಲಿ ಕೇಂದ್ರದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದ ಮೇಲೆ ಆಗಿರುವ ದಾಖಲೆಯ ಏರಿಕೆ. ಇದರ ಹೊರೆ ಜನಸಾಮಾನ್ಯರ ಮೇಲೆ ಬೀಳುವುದನ್ನು ತಪ್ಪಿಸಲು ತೈಲಗಳ ಮೇಲೆ ಹೇರುವ ಅಬಕಾರಿ ಸುಂಕವನ್ನು ಇಳಿಸುವ ಒತ್ತಡಕ್ಕೆ ಕೇಂದ್ರ ಸರ್ಕಾರ ಸಿಲುಕಿದೆ.

Advertisement

ಭಾರತಕ್ಕೆ ಕಚ್ಚಾ ತೈಲ ಸರಬರಾಜು ಮಾಡುವ ಅತಿ ದೊಡ್ಡ ಕಂಪನಿಗಳಾದ ಬ್ರೆಂಟ್‌ ಮತ್ತು ಯುಎಸ್‌ ವೆಸ್ಟ್‌ ಟೆಕ್ಸಾಸ್‌ ಕಂಪನಿಗಳು ಕ್ರಮವಾಗಿ ಪ್ರತಿ ಬ್ಯಾರೆಲ್‌ ಕಚ್ಚಾ ತೈಲದ ಬೆಲೆಯನ್ನು ಕ್ರಮವಾಗಿ 69.41 ಡಾಲರ್‌ ಹಾಗೂ 63.99 ಡಾಲರ್‌ಗೆ ಹೆಚ್ಚಿಸಿರುವುದೇ ಇದಕ್ಕೆ ಕಾರಣ. ಕಳೆದ ಡಿಸೆಂಬರ್‌ ಮಧ್ಯಭಾಗದಿಂದ ಈವರೆಗೆ ಭಾರತದಲ್ಲಿ ಡೀಸೆಲ್‌ ಬೆಲೆ 4.86 ರೂ. ಹೆಚ್ಚಾಗಿದ್ದರೆ, ಪೆಟ್ರೋಲ್‌ ಬೆಲೆಯಲ್ಲಿ 3.31 ರೂ. ಏರಿಕೆಯಾಗಿದೆ.

ಪರಿಷ್ಕೃತ ದರ ಜಾರಿಗೊಂಡ ನಂತರ, ದೆಹಲಿಯಲ್ಲಿ ಪ್ರತಿ ಲೀಟರ್‌ ಡೀಸೆಲ್‌ ಬೆಲೆ 63.20 ರೂ. ಆಗಿದ್ದು, ಪೆಟ್ರೋಲ್‌ ಬೆಲೆ ಪ್ರತಿ ಲೀಟರ್‌ಗೆ 72.38 ರೂ. ಆಗಿದೆ. ಇನ್ನು, ವ್ಯಾಟ್‌ ಅಧಿಕವಿರುವ ಮುಂಬೈನಲ್ಲಿ ಡೀಸೆಲ್‌ ಪ್ರತಿ ಲೀಟರ್‌ಗೆ 67.30 ರೂ. ಆಗಿದ್ದರೆ, ಪೆಟ್ರೋಲ್‌ಗೆ 80.25 ರೂ. ಆಗಿದ್ದು ದಾಖಲೆ ನಿರ್ಮಿಸಿದೆ.

ಬಜೆಟ್‌ನಲ್ಲಿ ಇಳಿಕೆ?
ತೈಲ ಬೆಲೆಯೇರಿಕೆಯ ಬಿಸಿ ಜನತೆಗಷ್ಟೇ ಅಲ್ಲ, ಇನ್ನು ಕೆಲವೇ ದಿನಗಳಲ್ಲಿ ಬಜೆಟ್‌ ಮಂಡಿಸಲಿರುವ ಕೇಂದ್ರ ಸರ್ಕಾರಕ್ಕೂ ತಟ್ಟಿದೆ. ಈಗಾಗಲೇ,  ಕೇಂದ್ರ ವಿತ್ತ ಸಚಿವ ಅರುಣ್‌ ಜೇಟಿÉ ಅವರಿಗೆ ಸಲ್ಲಿಸಲಾಗಿರುವ ಬಜೆಟ್‌ ಪೂರ್ವ ಪ್ರಸ್ತಾವನೆಯಲ್ಲಿ ತೈಲ ಬೆಲೆ ಇಳಿಸುವ ವಿಚಾರವನ್ನೂ ಸೇರಿಸಲಾಗಿದೆ.  ಕೇಂದ್ರ ಪೆಟ್ರೋಲಿಯಂ ಇಲಾಖೆ ಕಾರ್ಯದರ್ಶಿ ಕೆ.ಡಿ. ತ್ರಿಪಾಠಿ, ಸೋಮವಾರವೇ ಈ ಬಗ್ಗೆ ತಿಳಿಸಿದ್ದಾರೆ. ಆದರೆ, ಪ್ರಸ್ತಾವನೆಯ ವಿವರಗಳನ್ನು ಅವರು ಬಿಟ್ಟುಕೊಟ್ಟಿಲ್ಲ.

ಇಕ್ಕಟ್ಟಿನಲ್ಲಿ ಸರ್ಕಾರ
2014ರ ನವೆಂಬರ್‌ನಿಂದ 2016ರ ಜನವರಿ ಅವಧಿಯಲ್ಲಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ತೈಲಬೆಲೆ ಇಳಿದಿದ್ದರೂ ಕೇಂದ್ರ ಸರ್ಕಾರ ಮಾತ್ರ ಆ ಅವಧಿಯಲ್ಲಿ 9 ಬಾರಿ ತೈಲ ಬೆಲೆ ಏರಿಸಿತ್ತು. 2017ರ ಅಕ್ಟೋಬರ್‌ನಲ್ಲಿ ಒಮ್ಮೆ ಮಾತ್ರ ತೈಲಗಳ ಮೇಲಿನ ಅಬಕಾರಿ ಸುಂಕವನ್ನು ಕೊಂಚ ಮಾತ್ರ ಇಳಿಕೆ ಮಾಡಲಾಗಿತ್ತು. ಇದರ ಫ‌ಲವಾಗಿ, ದೆಹಲಿಯಲ್ಲಿ ಡೀಸೆಲ್‌ ದರ ಪ್ರತಿ ಲೀಟರ್‌ಗೆ 59.14 ರೂ. ಹಾಗೂ ಪೆಟ್ರೋಲ್‌ ದರ ಪ್ರತಿ ಲೀಟರ್‌ಗೆ 70.88 ರೂ. ಆಗಿತ್ತು. ಆದರೆ, ಸರ್ಕಾರದ ಬೊಕ್ಕಸಕ್ಕಾದ ನಷ್ಟ ಅಪಾರವಾಗಿತ್ತು. ಅಬಕಾರಿ ಸುಂಕ ಇಳಿಸಿದ್ದರಿಂದ, 2017-18ರ ಹಣಕಾಸು ವರ್ಷದಲ್ಲಿ ಸರ್ಕಾರಕ್ಕೆ ವಾರ್ಷಿಕ 26 ಸಾವಿರ ಕೋಟಿ ರೂ. ಹೊರೆಯಾಗಲಿದೆ ಎಂದು ಹೇಳಲಾಗಿದೆ. ಅಲ್ಲದೆ, ಅಬಕಾರಿ ಸುಂಕ ಇಳಿಸಿದ ತಿಂಗಳಿನಿಂದ (2017ರ ಅಕ್ಟೋಬರ್‌) ಈ ವರ್ಷ ಮಾರ್ಚ್‌ 31ರವರೆಗೆ 13,000 ಕೋಟಿ ರೂ. ನಷ್ಟವಾಗಲಿದೆ ಎಂದು ಅಂದಾಜಿಸಲಾಗಿದೆ. ಹೀಗಿದ್ದರೂ, ಪುನಃ ಅಬಕಾರಿ ಸುಂಕವನ್ನು ಇಳಿಸುವ ಒತ್ತಡಕ್ಕೆ ಕೇಂದ್ರ ಸರ್ಕಾರ ಸಿಲುಕಿರುವುದು, ಅದನ್ನು ಮತ್ತೆ ಇಕ್ಕಟ್ಟಿಗೆ ಸಿಲುಕುವಂತೆ ಮಾಡಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next