Advertisement

ಬಾಬಾ ರಾಮದೇವ್‌ ಯೋಗಾಸನ ಕಲಿಯಲು ಹೆಚ್ಚಿದ ಆಸಕ್ತಿ

10:17 PM Nov 17, 2019 | Sriram |

ಉಡುಪಿ: ಯೋಗಗುರು ಬಾಬಾ ರಾಮದೇವ್‌ ಅವರ ಯೋಗ ಶಿಬಿರದಲ್ಲಿ ರವಿವಾರ ಪಾಲ್ಗೊಂಡವರ ಸಂಖ್ಯೆ ಹೆಚ್ಚಿಗೆ ಕಂಡುಬಂತು. ಶನಿವಾರ ಮೊದಲ ದಿನವಾದ ಕಾರಣದಿಂದ ಮತ್ತು ಬಾಯಿಯಿಂದ ಬಾಯಿಗೆ ಮಾಹಿತಿ ಬೆಳೆದು ಎರಡನೆಯ ದಿನ ಮೊದಲ ದಿನಕ್ಕಿಂತ ಉತ್ತಮ ಪ್ರತಿಕ್ರಿಯೆ ಕಂಡು ಬಂತು.

Advertisement

ರಾಜಾಂಗಣ ಪಾರ್ಕಿಂಗ್‌ ಪ್ರದೇಶದಲ್ಲಿ ವೇದಿಕೆ ಸಿದ್ಧಪಡಿಸಲಾಗಿದ್ದು ಶನಿವಾರ ಹಾಕಲಾದ ಆವರಣದಲ್ಲಿ ಒಂದಿಷ್ಟು ಜನರನ್ನು ಕೂಡಿಸಲು ಅವಕಾಶವಿತ್ತು. ಆದರೆ ರವಿವಾರ ಆವರಣದ ಸ್ಥಳಾವಕಾಶ ಸಾಕಾಗದೆ ಅವರಣ ಪರದೆಯನ್ನು ಬಿಚ್ಚಬೇಕಾಗಿ ಬಂತು.

ಮೊದಲ ದಿನ ಕೇವಲ ಪರ್ಯಾಯ ಶ್ರೀ ಪಲಿಮಾರು ಮಠದ ಶ್ರೀವಿದ್ಯಾಧೀಶತೀರ್ಥ ಶ್ರೀಪಾದರು ಮಾತ್ರ ಪಾಲ್ಗೊಂಡಿದ್ದರೆ, ಎರಡನೆಯ ದಿನ ರಾಮದೇವ್‌ ಬಾಬಾ ಬರುವ ಮುನ್ನವೇ 89ರ ಹರೆಯದ ಶ್ರೀ ಪೇಜಾವರ ಮಠದ ಶ್ರೀವಿಶ್ವೇಶತೀರ್ಥ ಶ್ರೀ ಪಾದರು ಆಸೀನರಾಗಿದ್ದರು. ಅನಂತರ ಶ್ರೀಪಲಿಮಾರು ಕಿರಿಯ ಶ್ರೀ ವಿದ್ಯಾರಾಜೇಶ್ವರತೀರ್ಥ ಶ್ರೀಪಾದರು, ಸ್ವತಃ ಯೋಗಪಟುವಾದ ಶ್ರೀಪೇಜಾವರ ಕಿರಿಯ ಶ್ರೀ ವಿಶ್ವಪ್ರಸನ್ನತೀರ್ಥ ಶ್ರೀಪಾದರು ಆಗಮಿಸಿದರು.

ಶ್ರೀ ವಿದ್ಯಾರಾಜೇಶ್ವರತೀರ್ಥ ಶ್ರೀಪಾದರು ಕೆಲವು ಆಸನಗಳನ್ನು ರಾಮದೇವ್‌ ಅವರನ್ನು ನೋಡಿ ಮಾಡಿದರೆ, ಶ್ರೀ ವಿಶ್ವಪ್ರಸನ್ನತೀರ್ಥ ಶ್ರೀಪಾದರು ಸ್ಥೂಲಾಸನ ವನ್ನು ಪ್ರದರ್ಶಿಸಿದರು.

ಅಮೂಲ್ಯ ಸೇವೆ
ಮನಸ್ಸಿನ ಏಕಾಗ್ರತೆಗೆ, ದೈಹಿಕ ನೈರ್ಮಲ್ಯ, ಆರೋಗ್ಯ ವೃದ್ಧಿಗೆ ಪತಂಜಲಿ ಮಹರ್ಷಿಗಳು ಯೋಗಾಸನವೆಂಬ ಪರಿಹಾರವನ್ನು ಕೊಟ್ಟರು. ಬಾಬಾ ರಾಮದೇವ್‌ ಅವರು “ಆಧುನಿಕ ಪತಂಜಲಿ’ಯಾಗಿ ಅಮೂಲ್ಯ ಸೇವೆಯನ್ನು ಮುಂದುವರಿಸುತ್ತಿದ್ದಾರೆ ಎಂದು ಪೇಜಾವರ ಶ್ರೀಗಳು ಬಣ್ಣಿಸಿದರು.

Advertisement

ಆರೋಗ್ಯವೇ ಭಾಗ್ಯ ಎಂಬ ಮಾತು ಎಲ್ಲರಿಗೂ ಗೊತ್ತಿದೆ. ಆದರೆ ಇದು ಕೈಗೆಟಕಲು ಯೋಗದ ಸಹಯೋಗ ಅತ್ಯವಶ್ಯ. ಆರೋಗ್ಯಪೂರ್ಣ ಜೀವನಕ್ಕೆ ಯೋಗ ಅಗತ್ಯ. ಯೋಗದ ಸಾತ್‌ ಇಲ್ಲವಾದರೆ ರೋಗದ ಸಾತ್‌ ಬರುತ್ತದೆ ಎಂದು ಪೇಜಾವರ ಕಿರಿಯ ಶ್ರೀಗಳು ಅಭಿಪ್ರಾಯಪಟ್ಟರು.

Advertisement

Udayavani is now on Telegram. Click here to join our channel and stay updated with the latest news.

Next