ಹೊಸದಿಲ್ಲಿ/ಬೀಜಿಂಗ್: ಜಗತ್ತಿಗೇ ಕೊರೊನಾ ಹಬ್ಬಿಸಿದ ಕುಖ್ಯಾತಿ ಹೊಂದಿರುವ ಚೀನದಲ್ಲಿ ಎರಡು ವರ್ಷಗಳ ಅನಂತರವೂ ಸೋಂಕಿನ ಭೀತಿ ಕಾಣಿಸಿ ಕೊಂಡಿದೆ.
ಆ ದೇಶದ ಈಶಾನ್ಯ ಭಾಗದ ಚಾಂಗ್‌ಚುನ್ ಎಂಬ ನಗರ ಸೇರಿದಂತೆ ಹಲವು ಸ್ಥಳಗಳಲ್ಲಿ ದಿಢೀರನೆ ಸೋಂಕಿನ ಸಂಖ್ಯೆಯಲ್ಲಿ ಹೆಚ್ಚಾಗಿದೆ. ಇದರಿಂದಾಗಿ ಸ್ಥಳೀಯ ಆಡಳಿತ ಚಾಂಗ್‌ಚುನ್‌ನಲ್ಲಿ ಲಾಕ್‌ಡೌನ್ ಘೋಷಿಸಿದೆ.
ಸ್ಥಳೀಯ ನಿವಾಸಿಗಳು ಅಗತ್ಯವಿಲ್ಲದೆ ಮನೆಯಿಂದ ಹೊರಗೆ ಬರುವಂತಿಲ್ಲ ಮತ್ತು ಎಲ್ಲರೂ 3 ಹಂತಗಳ ಪರೀಕ್ಷೆಗೆ ಒಳಗಾಗಬೇಕು ಎಂದು ಆದೇಶಿಸಲಾಗಿದೆ. ಜತೆಗೆ ವರ್ಕ್ ಫ್ರಂ ಹೋಮ್ ಅನ್ನೂ ಅನುಷ್ಠಾನಗೊಳಿಸುವಂತೆ ಸರಕಾರಿ ಮತ್ತು ಖಾಸಗಿ ಕಚೇರಿಗಳಿಗೆ ಸೂಚಿಸಲಾಗಿದೆ.
ಜಿನ್ ಎಂಬ ಪ್ರಾಂತ್ಯದಲ್ಲಿ 98 ಕೇಸುಗಳು ದೃಢಪಟ್ಟಿವೆ. ಶಾಂಘೈನಲ್ಲಿ ಕೂಡ ಒಮಿಕ್ರಾನ್ ರೂಪಾಂತರಿ ಸಂಖ್ಯೆ ತಡೆಗಟ್ಟುವ ನಿಟ್ಟಿನಲ್ಲಿ ಲಾಕ್‌ಡೌನ್ ಮತ್ತು ಇತರ ಪ್ರತಿಬಂಧಕ ಕ್ರಮಗಳನ್ನು ಜಾರಿ ಮಾಡಿದ್ದಾರೆ. ರಾಜಧಾನಿ ಬೀಜಿಂಗ್‌ನಲ್ಲಿ ಜನವಸತಿ ಪ್ರದೇಶಗಳಲ್ಲಿ ಲಾಕ್‌ಡೌನ್ ಮಾದರಿ ಕ್ರಮಗಳನ್ನು ಜಾರಿ ಮಾಡಲಾಗಿದೆ.
ನಿರೀಕ್ಷೆಗೂ ಮೀರಿ ಸೋಂಕು ಸಂಖ್ಯೆ ಪತ್ತೆಯಾಗಿರುವುದರಿಂದ ಪರೀಕ್ಷೆ ನಡೆಸಲು ರ್ಯಾಪಿಡ್ ಆ್ಯಂಟಿಜೆನ್ ಟೆಸ್ಟ್ ಅನ್ನು ಇದೇ ಮೊದಲ ಬಾರಿಗೆ ಬಳಕೆಗೆ ಮಾಡಲು ಚೀನ ಸರಕಾರ ನಿರ್ಧರಿಸಿದೆ.
ವರದಿ ತಿರಸ್ಕರಿಸಿದ ಕೇಂದ್ರ: ದೇಶದಲ್ಲಿ ಕೊರೊನಾದಿಂದಾಗಿ 2020ರ ಜನವರಿ ಯಿಂದ 2021ರ ಡಿಸೆಂಬರ್ ಅವಧಿಯಲ್ಲಿ 41 ಲಕ್ಷ ಮಂದಿ ಅಸುನೀಗಿದ್ದಾರೆ ಎಂಬ ಲ್ಯಾನ್ಸೆಟ್ ಅಧ್ಯಯನ ವರದಿಯನ್ನು ಕೇಂದ್ರ ಸರಕಾರ ತಿರಸ್ಕರಿಸಿದೆ. ಇದೊಂದು ಊಹಾತ್ಮಕ ಮತ್ತು ತಪ್ಪು ಮಾಹಿತಿಯಿಂದ ಕೂಡಿದ ವರದಿ ಎಂದು ಟೀಕಿಸಿದೆ. ಆ ವರದಿಯ ಪ್ರಕಾರ ಜಗತ್ತಿನಲ್ಲಿ ಸೋಂಕಿ ನಿಂದಾಗಿ 1.8 ಕೋಟಿ ಮಂದಿ ಅಸುನೀಗಿದ್ದಾರೆ.