Advertisement

ಹೆಚ್ಚಿದೆ ಸಾಂಕ್ರಾಮಿಕ ರೋಗಗಳ ಭೀತಿ; ಆರೋಗ್ಯ ಇಲಾಖೆ-ಪುರಸಭೆ ಜಂಟಿ ಕಾರ್ಯಾಚರಣೆ

06:21 PM Nov 24, 2022 | Nagendra Trasi |

ಮುದ್ದೇಬಿಹಾಳ: ಪಟ್ಟಣದ ಕೆಲ ಬಡಾವಣೆಗಳಲ್ಲಿ, ಅದರಲ್ಲೂ ಮುಖ್ಯವಾಗಿ ಕೊಳಚೆ ಪ್ರದೇಶಗಳಲ್ಲಿ ಸಾಂಕ್ರಾಮಿಕ ರೋಗಗಳಾದ ಡೆಂಘೀ, ಚಿಕೂನ್‌ಗುನ್ಯಾ, ಮಲೇರಿಯಾ ಹಾವಳಿತ ಆತಂಕ ಸೃಷ್ಟಿಯಾಗಿದ್ದು ಆರೋಗ್ಯ ಇಲಾಖೆ ಮತ್ತು ಪುರಸಭೆ ಸಿಬ್ಬಂದಿ ಜಂಟಿ ಕಾರ್ಯಾಚರಣೆ ನಡೆಸಿ ಜನರಲ್ಲಿ ಆರೋಗ್ಯ ರಕ್ಷಣಾ ಸೂತ್ರಗಳ ಪಾಲನೆ ಕುರಿತು ಅರಿವು ಮೂಡಿಸಲು ಮುಂದಾಗಿದ್ದಾರೆ.

Advertisement

ಪಿಲೇಕೆಮ್ಮ ನಗರದ 11ನೇ ವಾರ್ಡ್‌ನಲ್ಲಿ ಸ್ವತ್ಛತೆ ಮರೀಚಿಕೆಯಂತಾಗಿದೆ. ಕೊಳಚೆ ಪ್ರದೇಶವಾಗಿರುವುದರಿಂದ ಸಹಜವಾಗಿ ಜನರಲ್ಲಿ ಆರೋಗ್ಯ ಮತ್ತು ಪರಿಸರ ರಕ್ಷಣೆಯ ಪ್ರಜ್ಞೆಯ ಕೊರತೆ ಇದೆ. ಮನೆಯ ಮುಂದೆ ತೆರೆದ ಬ್ಯಾರಲ್‌ ಮುಂತಾದವುಗಳಲ್ಲಿ ನೀರು ಸಂಗ್ರಹಿಸಬಾರದು ಎಂದು ಸಾಕಷ್ಟು ಬಾರಿ ತಿಳಿವಳಿಕೆ ನೀಡಿದ್ದರೂ ನೀರಿನ ಸಂಗ್ರಹ ಪರಿಣಾಮ ಲಾರ್ವಾಗಳ ಸಂತತಿ ಬೆಳೆಯಲು ಆಸ್ಪದ ನೀಡಿದಂತಾಗಿದೆ.

ಇದನ್ನರಿತ ಆರೋಗ್ಯ ಇಲಾಖೆ ಮತ್ತು ಪುರಸಭೆ ಸಿಬ್ಬಂದಿ ತಾಲೂಕು ಆರೋಗ್ಯಾಧಿಕಾರಿ ಡಾ| ಸತೀಶ ತಿವಾರಿ, ತಾಲೂಕು ಆರೋಗ್ಯ ಕ್ಷೇತ್ರ ಶಿಕ್ಷಣಾಧಿಕಾರಿ ಅನುಸೂಯಾ ತೇರದಾಳ, ನಗರ ಆರೋಗ್ಯ ನಿರೀಕ್ಷಣಾಧಿಕಾರಿ ಎಂ.ಎಸ್‌. ಗೌಡರ, ಪುರಸಭೆಯ ಆರೋಗ್ಯ ವಿಭಾಗದ ಸಿಬ್ಬಂದಿಗಳಾದ ಜಾವೀದ್‌ ನಾಯ್ಗೋಡಿ, ಮಹಾಂತೇಶ ಕಟ್ಟಿಮನಿ ಉಸ್ತುವಾರಿಯಲ್ಲಿ ಮನೆ ಮನೆಗೂ ಭೇಟಿ ಕೊಟ್ಟು ಸ್ವತ್ಛತೆಯ ಅರಿವು ಮೂಡಿಸಿದರು. 11ನೇ ವಾರ್ಡ್ ನ 4 ವರ್ಷದ ಬಾಲಕಿ ಝಾರಾ ಮೂಲಿಮನಿ, 5 ವರ್ಷದ ಬಾಲಕಿ ಝೇಬಾ ಮೂಲಿಮನಿ ಡೆಂಘೀ ರೋಗದ ಸಂಶಯದಿಂದಾಗಿ ವಿಜಯಪುರದ ಉಸ್ತಾದ ಆಸ್ಪತ್ರೆಯಲ್ಲಿ ದಾಖಲಾಗಿದ್ದಾರೆ. ತಿಂಗಳ ಹಿಂದೆ ಇದೇ ಬಡಾವಣೆಯ 8 ತಿಂಗಳ ಹಸುಳೆಯೊಂದು ಬಹು ಅಂಗ ವೈಕಲ್ಯದಿಂದಾಗಿ ಸಾವನ್ನಪ್ಪಿತ್ತು. ಈ ಮಗು ಡೆಂಘೀಯಿಂದಲೇ ಸಾವನ್ನಪ್ಪಿದೆ ಎಂದು ಪುಕಾರು ಹಬ್ಬಿಸಲಾಗಿತ್ತು. ಈ ಪ್ರಕರಣಗಳು ಆರೋಗ್ಯ ಇಲಾಖೆ ಮತ್ತು ಪುರಸಭೆಯವರು ಎಚ್ಚೆತ್ತುಕೊಂಡು ತುರ್ತು ಕ್ರಮ ಕೈಗೊಳ್ಳಲು ದಾರಿ ಮಾಡಿಕೊಟ್ಟಂತಾಗಿತ್ತು.

ನಗರ ವ್ಯಾಪ್ತಿಯ ಆಶಾ ಕಾರ್ಯಕರ್ತೆಯರ ಮೂಲಕ ಆರೋಗ್ಯ ಇಲಾಖೆಯು ಶಂಕಿತ ವಾರ್ಡಗಳಲ್ಲಿ ಸಮೀಕ್ಷೆ ನಡೆಸಿದೆ. ಸಮೀಕ್ಷೆಯ ಸಂದರ್ಭ ಹಲವಾರು ಮನೆಗಳ ಎದುರು ನೀರಿನ ಸಂಗ್ರಹದಲ್ಲಿ ಲಾರ್ವಾ ಇರುವುದು ಪತ್ತೆಯಾಗಿದೆ. 2-3 ಮನೆಯವರು ಇಂಥ ಲಾರ್ವಾ ಇರುವ ನೀರಿನ ಸಂಗ್ರಹಾಗಾರ ತೆರವುಗೊಳಿಸಲು ಆಸ್ಪದ ನೀಡದೆ ಆಶಾ ಕಾರ್ಯಕರ್ತೆಯರೊಂದಿಗೆ ವಾಗ್ವಾದ ನಡೆಸಿದ ಘಟನೆಗಳೂ ನಡೆದಿದ್ದವು. ಈ ಹಿನ್ನೆಲೆ ಅಧಿಕಾರಿಗಳೇ ಅಂಥ ಮನೆಗಳಿಗೆ ಭೇಟಿ ನೀಡಿ ಲಾರ್ವಾದಿಂದ ಉಂಟಾಗುವ ಸಮಸ್ಯೆಗಳ ಬಗ್ಗೆ ಜಾಗೃತಿ ಮೂಡಿಸಿ ನೀರಿನ ಸಂಗ್ರಹಾಗಾರ ಸ್ವತ್ಛಗೊಳಿಸುವಂತೆ ಮನವೊಲಿಸುವ ಕಾರ್ಯ ನಡೆಸಿದರು.

ಮುದ್ದೇಬಿಹಾಳದಲ್ಲಿ ಒಂದು ಚಿಕೂನ್‌ ಗುನ್ಯಾ, 2 ಡೆಂಘೀ ಪ್ರಕರಣ ಪತ್ತೆಯಾಗಿರುವ ಹಿನ್ನೆಲೆ ಅಗತ್ಯ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳುವಂತೆ ತಂಗಡಗಿ ಪ್ರಾಥಮಿಕ ಆರೋಗ್ಯ ಕೇಂದ್ರದ ಆರೋಗ್ಯಾಧಿಕಾರಿಯವರು ಪುರಸಭೆಗೆ ಪತ್ರ ಬರೆದಿದ್ದಾರೆ. ಪಿಲೇಕೆಮ್ಮ ನಗರ, ಮಹಾಂತೇಶ ನಗರ ಬಡಾವಣೆಗಳಲ್ಲಿ ಸಮಸ್ಯೆ ಇರುವುದನ್ನು ಗಮನಕ್ಕೆ ತಂದಿದ್ದಾರೆ. ಸಾರ್ವಜನಿಕರ ಆರೋಗ್ಯದ ಹಿತದೃಷ್ಟಿಯಿಂದ ನಿಯಂತ್ರಣ ಕ್ರಮ ಕೈಗೊಳ್ಳುವಂತೆ ಪತ್ರದ ಮೂಲಕ ಕೋರಲಾಗಿದೆ. ಈ ವಾರ್ಡ್‌ಗಳಲ್ಲಿ ಫಾಗಿಂಗ್‌, ಘನತ್ಯಾಜ್ಯ ವಿಲೇವಾರಿ, ಕುಡಿವ ನೀರಿನ ಮೂಲಗಳಿಗೆ ಕ್ಲೋರಿನೇಶನ್‌, ಕುಡಿವ ನೀರಿನ ಪೈಪ್‌ ಲೈನ್‌ ಸೋರಿಕೆ ತಡೆಗಟ್ಟಲು ದುರಸ್ತಿ ಮುಂತಾದ ಕ್ರಮ ಕೈಗೊಳ್ಳುವಂತೆ ಸೂಚಿಸಲಾಗಿದೆ.

Advertisement

4.5 ಲೀಟರ್‌ ಡೀಸೆಲ್‌ಗೆ 250 ಎಂಎಲ್‌ ಪೆರಿಥ್ರಿಮ್‌ ಕೀಟನಾಶಕ ದ್ರಾವಣ ಸೇರಿಸಿ ಕ್ರಮವಾಗಿ 1, 4, 7 ಮತ್ತು 10ನೇ ದಿನದಂದು ಬೆಳಗ್ಗೆ, ಸಂಜೆ ಫಾಗಿಂಗ್‌ ಮಾಡಬೇಕು. ಈಡಿಸ್‌ ಲಾರ್ವಾ ಕಂಡು ಬಂದಿರುವ ಏರಿಯಾಗಳ ಜನರಿಗೆ ಸಾಂಕ್ರಾಮಿಕ ರೋಗ ಕುರಿತ ಜಾಗೃತಿ ಮೂಡಿಸಿದ್ದು ಸ್ವಚ್ಛತೆ ಕಾಪಾಡಲು ವ್ಯಾಪ್ರಕ ಪ್ರಚಾರ ನಡೆಸುವಂತೆ ತಿಳಿಸಲಾಗಿದೆ.

ಪಿಲೇಕೆಮ್ಮ ನಗರ, ಮಹೆಬೂಬ ನಗರ, ಮಹಾಂತೇಶ ನಗರ, ಶಾರದಾ ಶಾಲೆಯ ಹಿಂಭಾಗ ಸೇರಿ ಕೆಲ ಬಡಾವಣೆಗಳಲ್ಲಿ ಡೆಂಘೀ, ಚಿಕೂನ್‌ ಗುನ್ಯಾ ಪ್ರಕರಣಗಳು ಖಚಿತಗೊಂಡಿವೆ. ಆರೋಗ್ಯ ಇಲಾಖೆ ಸಿಬ್ಬಂದಿ ಲಾರ್ವಾ, ಜ್ವರ ಸಮೀಕ್ಷೆ ನಡೆಸಿ ಸ್ವಯಂ ರಕ್ಷಣಾ ಕ್ರಮ ಅನುಸರಿಸಲು ಮಾಹಿತಿ ನೀಡಿದ್ದಾರೆ. ಪುರಸಭೆಯವರು ಇಂಥ ಬಡಾವಣೆಗಳಲ್ಲಿ ಕೀಟನಾಶಕ ಸಿಂಪರಣೆ, ಫಾಗಿಂಗ್‌ ಸೇರಿ ಹಲವು ಕ್ರಮ ಕೈಗೊಳ್ಳುವುದರ ಜೊತೆಗೆ ಸ್ವಚ್ಛತೆ ಕುರಿತು ಕಸ ವಿಲೇವಾರಿ
ವಾಹನಗಳಲ್ಲಿರುವ ಮೈಕ್‌ ಮೂಲಕ ಪ್ರಚಾರ ಮಾಡುವಂತೆ ತಾಲೂಕು ಆರೋಗ್ಯಾಧಿಕಾರಿಯವರೂ ಪುರಸಭೆಗೆ ಸೂಚನೆ ನೀಡಿದ್ದಾರೆ.

ಪಟ್ಟಣದ ಕೆಲವು ಬಡಾವಣೆಗಳಲ್ಲಿ ಸಾಂಕ್ರಾಮಿಕ ರೋಗಗಳು ಹೆಚ್ಚಾಗುತ್ತಿರುವುದು ಗಮನಕ್ಕೆ ಬಂದ ಕೂಡಲೇ ಪುರಸಭೆಯಲ್ಲಿರುವ ಆರೋಗ್ಯ ವಿಭಾಗದ ಸಿಬ್ಬಂದಿಯನ್ನು ಎಚ್ಚರಿಸಿ ಕಾರ್ಯೋನ್ಮುಖರಾಗುವಂತೆ ಮಾಡಲಾಗಿದೆ. ಬೇಜವಾಬ್ದಾರಿ ಸಿಬ್ಬಂದಿಗೆ ಈಗಾಗಲೇ ಬಿಸಿ ಮುಟ್ಟಿಸಲಾಗಿದೆ. ಸಾರ್ವಜನಿಕರು ಕೂಡಾ ಸ್ವಯಂ ರಕ್ಷಣಾ ಕ್ರಮಗಳನ್ನು ಪಾಲಿಸಿ ಸುತ್ತಲಿನ ಪರಿಸರ ಸ್ವಚ್ಛವಾಗಿಸಿಕೊಳ್ಳಲು ಹೆಚ್ಚಿನ ಆದ್ಯತೆ ನೀಡಬೇಕು.
ಬಿ.ಎಸ್‌. ಕಡಕಭಾವಿ, ತಹಶೀಲ್ದಾರ

ರೋಗ ಸಮೀಕ್ಷೆ, ನಿಯಂತ್ರಣ, ಮುಂಜಾಗ್ರತಾ ಕ್ರಮಗಳ ಕುರಿತು ನಮ್ಮ ಕೆಲಸವನ್ನು ನಾವು ಮಾಡಿದ್ದೇವೆ. ಪುರಸಭೆಯ ಆರೋಗ್ಯ ವಿಭಾಗದ ಸಿಬ್ಬಂದಿ ಹೆಚ್ಚು ಮುತುವರ್ಜಿ ವಹಿಸಿ ಫಾಗಿಂಗ್‌ ಸೇರಿದಂತೆ ಅಗತ್ಯ ಸ್ವಚ್ಛತಾ ಕ್ರಮಗಳನ್ನು ಪಾಲಿಸಬೇಕು. ಜನರಲ್ಲೂ ತಮ್ಮ ಸುತ್ತಲಿನ ಪರಿಸರದಲ್ಲಿ ಸ್ವತ್ಛತೆ ಕಾಪಾಡುಕೊಳ್ಳುವ ಆರೋಗ್ಯ ಪ್ರಜ್ಞೆ ಮೂಡಬೇಕು. ಸಧ್ಯ ಯಾವುದೇ ಸಾಂಕ್ರಾಮಿಕ ರೋಗದ ಆತಂಕ ಇಲ್ಲ. ಡಿಸೆಂಬರ್‌ ಅಂತ್ಯದವರೆಗೂ ಎಲ್ಲರೂ ಜಾಗೃತರಾಗಿರಬೇಕು.
ಡಾ| ಸತೀಶ ತಿವಾರಿ,
ತಾಲೂಕು ಆರೋಗ್ಯಾಧಿಕಾರಿ

ಜನರಿಗೆ ಸೊಳ್ಳೆಗಳಿಂದ ಹರಡುವ ಸಾಂಕ್ರಾಮಿಕ ಕಾಯಿಲೆಗಳ ಕುರಿತು ಜಾಗೃತಿ ಮೂಡಿಸಲಾಗುತ್ತಿದೆ. ತಾಲೂಕು ಆರೋಗ್ಯಾಧಿಕಾರಿ, ವೈದ್ಯಾಧಿಕಾರಿ, ಪುರಸಭೆಯ ಆರೋಗ್ಯ ವಿಭಾಗದವರು ಶಂಕಿತ ಬಡಾವಣೆಗಳಿಗೆ ಭೇಟಿ ನೀಡಿ ಮುಂಜಾಗರೂಕತಾ ಕ್ರಮ ಕೈಗೊಳ್ಳಲಾಗಿದೆ. ಡೆಂಘೀ, ಚಿಕೂನ್‌ಗುನ್ಯಾ, ಮಲೇರಿಯಾ, ಆನೆಕಾಲು ರೋಗ ಇವು ಸೊಳ್ಳೆಗಳಿಂದ ಬರುವಂತಹ ರೋಗಗಳಾಗಿದ್ದು ಸಾರ್ವಜನಿಕರು ಜಾಗೃತರಾಗಿರಬೇಕು.
ಎಂ.ಎಸ್‌. ಗೌಡರ,
ಆರೋಗ್ಯ ನಿರೀಕ್ಷಣಾಧಿಕಾರಿ

ಡಿ.ಬಿ. ವಡವಡಗಿ

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next