Advertisement

ಗ್ರಾಮಗಳಲ್ಲಿ ಹೆಚ್ಚಿದ ಶ್ವಾನ ಸಂಕಟ

04:44 PM Nov 30, 2018 | |

ಬೆಳಗಾವಿ: ಬೀದಿ ನಾಯಿಗಳ ಕಾಟದಿಂದ ಗ್ರಾಮೀಣ ಭಾಗದ ಜನ ಆತಂಕಗೊಂಡಿದ್ದು, ಜೀವ ಕೈಯಲ್ಲಿ ಹಿಡಿದು ಸಂಚರಿಸುವಂತಾಗಿದೆ. ಎಲ್ಲಿ ನೋಡಿದರಲ್ಲಿ ಗುಂಪು ಕಟ್ಟಿಕೊಂಡು ಬರುವ ಬೀದಿ ನಾಯಿಗಳು ಮಕ್ಕಳು, ವೃದ್ಧರ ಮೇಲೆ ದಾಳಿ ನಡೆಸಿ ಅಟ್ಟಹಾಸ ಮೆರೆಯುತ್ತಿವೆ. ತಾಲೂಕಿನ ಬಹುತೇಕ ಎಲ್ಲ ಕಡೆಯೂ ಬೀದಿ ನಾಯಿಗಳ ಹಾವಳಿಯಿಂದ ಜನ ಬೇಸತ್ತಿದ್ದಾರೆ. ಆಹಾರ ಅರಸಿ ಬರುವ ನಾಯಿಗಳ ದಂಡು ಸಾರ್ವಜನಿಕರ ಆತಂಕಕ್ಕೆ ಕಾರಣವಾಗಿವೆ. ಪಂತ ಬಾಳೇಕುಂದ್ರಿ ಗ್ರಾಮದಲ್ಲಿ ಮಗುವಿನ ಮೇಲೆ ದಾಳಿ ನಡೆಸಿ ಕೊಂದಿರುವ ನಾಯಿಗಳ ರಾಕ್ಷಸೀ ಕೃತ್ಯಕ್ಕೆ ಜನ ಆತಂಕದಲ್ಲಿದ್ದಾರೆ.

Advertisement

ನಾಯಿಗಳ ರಾಕ್ಷಸಿ ಕೃತ್ಯ: ನಗರ ಪ್ರದೇಶದಲ್ಲಿ ಹೆಚ್ಚಿನ ಸಂಖ್ಯೆಯ ನಾಯಿಗಳು ಗುಂಪುಗೂಡಿಕೊಂಡು ಒಂಟಿ ಮಹಿಳೆ, ಮಕ್ಕಳ ಮೇಲೆ ದಾಳಿ ಮಾಡುವುದು ಸಹಜ ಎನ್ನುವಂತಾಗಿದ್ದು, ಈ ಕೃತ್ಯ ಈಗ ಗ್ರಾಮೀಣ ಭಾಗಕ್ಕೂ ಕಾಲಿಟ್ಟಿದೆ. ತಾಲೂಕಿನ ಮೋದಗಾ, ಪಂತ ಬಾಳೇಕುಂದ್ರಿ, ಬಾಳೇಕುಂದ್ರಿ ಕೆ.ಎಚ್‌. ಹೊನ್ನಿಹಾಳ, ಸಾಂಬ್ರಾ, ಮುತಗಾ, ಮಾರೀಹಾಳ, ಬಸವನಕುಡಚಿ ಸೇರಿದಂತೆ ರಾಜ್ಯ ಹೆದ್ದಾರಿಗುಂಟ ಇರುವ ಹಳ್ಳಿಗಳಲ್ಲಿ ನಾಯಿ ಹಾವಳಿ ಹೆಚ್ಚಾಗಿದೆ.

ಈ ಭಾಗದಲ್ಲಿ ಬಳ್ಳಾರಿ ನಾಲಾ ಹರಿದು ಹೋಗುವ ಮೂರು ಹಳ್ಳಗಳಿವೆ. ಇಲ್ಲಿಯೇ ಜನರು ತ್ಯಾಜ್ಯ ಎಸೆಯುತ್ತಾರೆ. ತ್ಯಾಜ್ಯ ಆಹಾರಕ್ಕಾಗಿ ನಾಯಿಗಳ ದಂಡೇ ಈ ಹಳ್ಳಗಳತ್ತ ಬರುತ್ತದೆ. ಹೀಗಾಗಿ ಮೋದಗಾ, ಬಾಳೆಕುಂದ್ರಿ, ಸಾಂಬ್ರಾ ಹಾಗೂ ಮುತಗಾ, ಶಿಂಧೋಳ್ಳಿ ಕ್ರಾಸ್‌ವರೆಗೂ ನಾಯಿಗಳು ಓಡಾಡುತ್ತಿರುತ್ತವೆ. ಜೊತೆಗೆ ಸಂಚರಿಸುವ ದ್ವಿಚಕ್ರ ವಾಹನಗಳ ಮೇಲೂ ಎಗರಿ ಗಾಯಗೊಳಿಸಿದ ಉದಾಹರಣೆಗಳಿವೆ.

ತ್ಯಾಜ್ಯ ಮಾಂಸ, ಮುಸುರಿ, ಹೊಟೇಲ್‌ನಲ್ಲಿ ಅಳಿದುಳಿದ ತಿಂಡಿ ಪದಾರ್ಥಗಳು ಸೇರಿದಂತೆ ಇತರ ಆಹಾರ ಪಾದಾರ್ತಗಳನ್ನು ಹಳ್ಳಗಳಲ್ಲಿ ಎಸೆಯುವುದರಿಂದ ನಾಯಿಗಳ ಸಂಖ್ಯೆ ಹೆಚ್ಚಾಗುತ್ತಿದೆ. ಇಡೀ ರಾತ್ರಿ ಹೊತ್ತಿನಲ್ಲಿ ಈ ಸೇತುವೆ ಕೆಳಭಾಗದಲ್ಲಿಯೇ 200ಕ್ಕೂ ಹೆಚ್ಚು ನಾಯಿಗಳು ಗುಂಪು ಕಟ್ಟಿಕೊಂಡು ಇರುತ್ತವೆ. ಅದರಂತೆ ಹಗಲು ಹೊತ್ತಿನಲ್ಲಿ ಗ್ರಾಮಗಳಿಗೆ ಲಗ್ಗೆ ಇಟ್ಟಿರುತ್ತವೆ. ಇದು ಕಳೆದ ಒಂದು ವರ್ಷದಿಂದಲೂ ಸಾಮಾನ್ಯವಿದ್ಯಮಾನ ಎನ್ನುವಂತಾಗಿದ್ದರೂ ಗ್ರಾಮ ಪಂಚಾಯಿತಿಯವರು ಈ ಬಗ್ಗೆ ತಲೆ ಕೆಡಿಸಿಕೊಂಡಿಲ್ಲ.

ಬೇರೆ ಬೇರೆ ಕಡೆಯಿಂದ ತಂದು ಇಲ್ಲಿ ನಾಯಿಗಳನ್ನು ಬಿಡಲಾಗುತ್ತಿದೆಯೇ ಎಂಬ ಆರೋಪ ಕೇಳಿ ಬಂದಿದೆ. ಲಾರಿಗಳಲ್ಲಿ ತುಂಬಿಕೊಂಡು ಬೀದಿ ನಾಯಿಗಳನ್ನು ರಾಜ್ಯ ಹೆದ್ದಾರಿಗಳಲ್ಲಿ ತಂದು ಬಿಡಲಾಗುತ್ತಿದೆ. 10-20 ನಾಯಿಗಳನ್ನು ತಂದು ಬಾಳೇಕುಂದ್ರಿ ಹಾಗೂ ಸಾಂಬ್ರಾ ಬಳಿಯ ಬಳ್ಳಾರಿ ನಾಲಾ ಸೇತುವೆ ಕಡೆ ತಂದು ಬಿಡಲಾಗುತ್ತಿದೆ. ಈ ನಾಯಿಗಳೇ ಗ್ರಾಮದಲ್ಲಿ ಜನರ ಮೇಲೆ ಅಟ್ಟಹಾಸ ಮೆರೆಯುತ್ತಿವೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.

Advertisement

ಸಂತಾನಶಕ್ತಿ ಹರಣ ಮಾಡುವ ಕಾರ್ಯಾಚರಣೆ ಆರಂಭಿಸಿದರೆ ನಾಯಿಗಳ ಸಂಖ್ಯೆ ಕ್ಷೀಣಿಸುತ್ತದೆ. ಈ ನಿಟ್ಟಿನಲ್ಲಿ ಜಿಪಂ ಹಾಗೂ ಗ್ರಾಪಂನವರು ಕೂಡಲೇ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಜನರು ಆಗ್ರಹಿಸಿದ್ದಾರೆ. ಪಂತ ಬಾಳೇಕುಂದ್ರಿ ಗ್ರಾಮದ ಮನೆ ಹಿತ್ತಲಲ್ಲಿ ಮಗು ಆಟ ಆಡುತ್ತಿದ್ದಾಗ ರಾಕ್ಷಸರಂತೆ ಎಗರಿದ ನಾಯಿಗಳು ಕಚ್ಚಿ ತಿಂದು ಬಲಿ ಪಡೆದಿವೆ. ಹೀಗಾಗಿ ಕೂಡಲೇ ಸ್ಥಳಕ್ಕೆ ಪಿಡಿಒ ಜಿ.ಐ. ಬರಗಿ ಭೇಟಿ ನೀಡಿ ಪರಿಶೀಲಿಸಿದ್ದಾರೆ. ಈ ಬಗ್ಗೆ ವಿಶೇಷ ಸಬೆ ಕರೆದು ಮಗುವಿನ ಕುಟುಂಬಕ್ಕೆ ಪರಿಹಾರ ಧನ ನೀಡಲು ಸಾಧ್ಯವೇ ಎಂಬುದನ್ನು ಚರ್ಚಿಸಿ ಸೂಕ್ತ ಕ್ರಮ ಕೈಗೊಳ್ಳುವುದಾಗಿ ಸಾಂತ್ವನ ಹೇಳಿದ್ದಾರೆ.

ನಾಯಿಗಳ ಅಟ್ಟಹಾಸಕ್ಕೆ ಕಂದಮ್ಮನ ಬಲಿ
ಬೆಳಗಾವಿ: ಬೀದಿ ನಾಯಿ ದಾಳಿಯಿಂದ ಗಂಭೀರ ಗಾಯಗೊಂಡು ಚಿಕಿತ್ಸೆ ಪಡೆಯುತ್ತಿದ್ದ ಎರಡು ವರ್ಷದ ಮಗು ಚಿಕಿತ್ಸೆ ಫಲಕಾರಿಯಾಗದೇ ಗುರುವಾರ ಮೃತಪಟ್ಟಿದೆ. ಪಂತ ಬಾಳೇಕುಂದ್ರಿ ಗ್ರಾಮದ ಅಬ್ಟಾಸಅಲಿ ಯೂನುಸ್‌ ಸನದಿ ಎಂಬ ಮಗು ಮೃತಪಟ್ಟಿದೆ. ಮನೆಯ ಹಿತ್ತಲಲ್ಲಿ ಆಟ ಆಡುತ್ತಿದ್ದಾಗ ಏಕಾಏಕಿ ಒಂದು ನಾಯಿ ದಾಳಿಯಿಟ್ಟು ಮಗುವನ್ನು ಕಚ್ಚಿ ಎಳೆದೊಯ್ದಿದೆ. ಆಗ ಅಲ್ಲಿದ್ದ 10ಕ್ಕೂ ಹೆಚ್ಚು ಬೀದಿ ನಾಯಿಗಳು ಮಗುವಿನ ಮೇಲೆ ದಾಳಿ ನಡೆಸಿ ಸಿಕ್ಕ ಸಿಕ್ಕಲ್ಲಿ ಕಚ್ಚಿವೆ. ಸಂಪೂರ್ಣ ಮೈ, ಕೈ, ಕಾಲು ಕಚ್ಚಿ ತಿಂದು ಹಾಕಿವೆ. ಅಲ್ಲಿದ್ದ ಕೆಲ ಸಣ್ಣ ಮಕ್ಕಳು ನಾಯಿಗಳನ್ನು ಹೊಡೆಯಲು ಪ್ರಯತ್ನಿಸಿದರೂ ಇವರ ಮೇಲೆಯೂ ಎಗರಿದಾಗ ಮಕ್ಕಳೆಲ್ಲ ಭಯಗೊಂಡು ಓಡಿ ಹೋಗಿವೆ.

ಮಗುವಿನ ತಂದೆ ಯೂನುಸ್‌ ಬುಧವಾರ ದಿನಗೂಲಿ ಕೆಲಸಕ್ಕೆ ಹಾಗೂ ತಾಯಿ ಸಮೀನಾ ಹೊಲಕ್ಕೆ ಹೋದಾಗ ಮಗು ಮನೆಯಲ್ಲಿಯೇ ಇತ್ತು. ಮಗುವಿನ ಚಿಕ್ಕಮ್ಮ ಹಾಗೂ ದೊಡ್ಡಮ್ಮ ಊರಿನಿಂದ ಬಂದಿದ್ದರು. ಹೀಗಾಗಿ ಇವರ ಹತ್ತಿರ ಮಗುವನ್ನು ಬಿಟ್ಟು ಹೋಗಿದ್ದರು. ಆದರೆ ಮಗು ಹಿತ್ತಲಿಗೆ ಹೋದಾಗ ನಾಯಿಗಳು ದಾಳಿ ನಡೆಸಿದ್ದು ಯಾರಿಗೂ ಗೊತ್ತಾಗಿಲ್ಲ.

ಸುಮಾರು 5 ಗಂಟೆ ಬಳಿಕ ಮಗುವನ್ನು ಹುಡುಕಾಡಲು ಶುರು ಮಾಡಿದಾಗ ಮಗು ನಾಪತ್ತೆಯಾಗಿದ್ದು ಗೊತ್ತಾಗಿದೆ. ಹಿತ್ತಲಲ್ಲಿ ತಿಪ್ಪೆ ಗುಂಡಿಯಲ್ಲಿ ಮಗು ಬಿದ್ದಿದ್ದನ್ನು ಪಾಲಕರು ಗಮನಿಸಿದ್ದಾರೆ. ಮಗುವಿನ ಕೈ ಕಾಲು, ಎದೆ, ಹೊಟ್ಟೆ ಭಾಗಕ್ಕೆ ನಾಯಿಗಳ ಹಲ್ಲಿನ ಗುರುತುಗಳು ಬಿದ್ದಿವೆ. ಅನ್ನನಾಳ ಸೇರಿದಂತೆ ಬಹುತೇಕ ಒಳ ಭಾಗದವರೆಗೂ ನಾಯಿಗಳು ಕಚ್ಚಿವೆ. ಜತೆಗೆ ತಲೆಯ ಸಂಪೂರ್ಣ ಭಾಗವನ್ನು ನಾಯಿಗಳು ತಿಂದು ಹಾಕಿದ್ದವು. ಹಣೆಯ ಭಾಗದವರೆಗೂ ಕೂದಲು ಸಮೇತ ತಿಂದು ತಲೆಯ ಮೆಲ್ಭಾಗದ ಮಾಂಸ ಕಾಣಿಸುತ್ತಿತ್ತು.

ಪಾಲಕರು ಕೂಡಲೇ ಸ್ಥಳೀಯ ಮೋದಗಾ ಗ್ರಾಮದ ನಿರ್ಮಲ ನಗರ ಕಾರ್ಡಿನಲ್‌ ಗ್ರೇಸಿಯಸ್‌ ಆಸ್ಪತ್ರೆಗೆ ಕರೆದುಕೊಂಡು ಹೋಗಿ, ನಂತರ ಹೆಚ್ಚಿನ ಚಿಕಿತ್ಸೆಗೆ ನಗರದ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದರು. ತಲೆಯ ಭಾಗಕ್ಕೆ ಬೇರೆ ಚರ್ಮ ಜೋಡಿಸುವ ತಯಾರಿಯೂ ನಡೆದಿತ್ತು. ಬುಧವಾರ ಇಡೀ ರಾತ್ರಿ ಮಗುವಿಗೆ ಚಿಕಿತ್ಸೆ ನೀಡಿದರೂ ಫಲಕಾರಿಯಾಗದೇ ಕಡಿಮೆ ರಕ್ತದೊತ್ತಡದಿಂದಾಗಿ ಮಗು ಗುರುವಾರ ಬೆಳಗಿನ ಜಾವ ಅಸುನೀಗಿದೆ. ಈ ಕುರಿತು ಮಾರೀಹಾಳ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 

ಗ್ರಾಮದಲ್ಲಿ ಬೀದಿ ನಾಯಿಗಳ ಹಾವಳಿ ಹೆಚ್ಚಾಗಿದೆ. ಅನೇಕ ತಿಂಗಳುಗಳಿಂದ ನಾಯಿಗಳು ಬಹುತೇಕ ಜನರ ಮೇಲೆ ದಾಳಿ ನಡೆಸಿವೆ. ಯರಗಟ್ಟಿ ಸೇರಿದಂತೆ ಬೇರೆ ಬೇರೆ ಕಡೆಯಿಂದ ಲಾರಿ ತುಂಬಿಕೊಂಡು ನಾಯಿಗಳನ್ನು ನಮ್ಮ ಸುತ್ತಲಿನ ಗ್ರಾಮಗಳಲ್ಲಿ ತಂದು ಬಿಡಲಾಗುತ್ತಿದೆ. ಈ ಬಗ್ಗೆ ಸಂಬಂಧಿಸಿದ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಸೂಕ್ತ ಕ್ರಮ ಕೈಗೊಳ್ಳಬೇಕು. 
. ಮಹ್ಮದಗೌಸ ಸನದಿ,
ಮೃತ ಮಗುವಿನ ದೊಡ್ಡಪ್ಪ

ಗ್ರಾಮದಲ್ಲಿ ಬೀದಿ ನಾಯಿಗಳು ದಾಳಿ ನಡೆಸಿ ಮಗು ಬಲಿ ಪಡೆದಿರುವ ಬಗ್ಗೆ ಸ್ಥಳಕ್ಕೆ ಭೇಟಿ ನೀಡಿ ಮಾಹಿತಿ ಪಡೆದುಕೊಳ್ಳಲಾಗಿದೆ. ಗ್ರಾಮದಲ್ಲಿರುವ ಸುಮಾರು 200ಕ್ಕೂ ಹೆಚ್ಚು ಬೀದಿ ನಾಯಿಗಳ ಸ್ಥಳಾಂತರಕ್ಕೆ ಕ್ರಮ ಕೈಗೊಳ್ಳಲಾಗುವುದು. ಈಗಾಗಲೇ ಮಹಾನಗರ ಪಾಲಿಕೆ ಅಧಿಕಾರಿಗಳ ಗಮನಕ್ಕೆ ತರಲಾಗಿದೆ. ಟೆಂಡರ್‌ ಬಂದ ಬಳಿಕ ಕಾರ್ಯಾಚರಣೆ ನಡೆಸುವುದಾಗಿ ತಿಳಿಸಿದ್ದಾರೆ.
. ಜಿ.ಐ. ಬರಗಿ, ಪಿಡಿಒ, ಪಂತ ಬಾಳೇಕುಂದ್ರಿ

ಭೈರೋಬಾ ಕಾಂಬಳೆ 

Advertisement

Udayavani is now on Telegram. Click here to join our channel and stay updated with the latest news.

Next