ಕುಷ್ಟಗಿ: ಮಣ್ಣಿನ ಗಣೇಶ ಮೂರ್ತಿ ಮುಂದೆ ಕಣ್ಣು ಕೊರೈಸುವ ಆಕರ್ಷಕ ಬಣ್ಣದ ಪಿಒಪಿ ಗಣೇಶ ಮಂಕಾಗಿದ್ದು, ಪರಿಸರ ಸ್ನೇಹಿ ಗಣೇಶ ಮೂರ್ತಿಯ ಬೇಡಿಕೆ ಹೆಚ್ಚಿದೆ.
ಗಣೇಶ ಚತುರ್ಥಿ ಇನ್ನು ಕೇವಲ ಎರಡೇ ದಿನ ಬಾಕಿ ಇದ್ದರೂ, ಪಿಒಪಿ ಗಣೇಶನ ಮೂರ್ತಿಗಳ ಮಾರಾಟಕ್ಕೆ ಸದ್ದು ಗದ್ದಲ ಇಲ್ಲದಂತಾಗಿದೆ. ಮಣ್ಣಿನ ಮೂರ್ತಿಗಳ ಬಗ್ಗೆ ಪರಿಸರ ಪ್ರಜ್ಞೆ ಮೂಡುತ್ತಿದ್ದು, ಪಿಒಪಿ ಗಣೇಶ ಮೂರ್ತಿಗಿಂತ ಮಣ್ಣಿನ ಗಣಪನ ಮೂರ್ತಿಗೆ ಬೇಡಿಕೆ ಕಂಡು ಬಂದಿದೆ. ಈ ಬೆಳವಣಿಗೆಯ ಹಿನ್ನೆಲೆಯಲ್ಲಿ ಗಣೇಶ ಮೂರ್ತಿ ಪ್ರತಿಷ್ಠಾಪಿಸುವವರು ಗಣೇಶ ಮೂರ್ತಿ ತಯಾರಿಸುವವ ಮನೆಗೆ ಖುದ್ದಾಗಿ ಹೋಗಿ ಮುಂಗಡ ಬುಕ್ಕಿಂಗ್ ಮಾಡುತ್ತಿದ್ದಾರೆ.
11 ರೂ. ಕನಿಷ್ಠ ಬೆಲೆಗೆ ಮಾರಿದ್ದೆ: ಇಲ್ಲಿನ ಇಂದಿರಾ ಕಾಲೋನಿಯ ನಿವಾಸಿ ಎಚ್ಚರಪ್ಪ ಬಡಿಗೇರ ಅವರು, ಮೂಲತಃ ರೋಣ ತಾಲೂಕಿನ ನೆಲ್ಲೂರು ಗ್ರಾಮದವರು. 2005ರಲ್ಲಿ ಅಕ್ಕಸಾಲಿಗ ವಂಶಪಾರಂಪರೆ ವೃತ್ತಿಯಲ್ಲಿ ಕುಷ್ಟಗಿ ಪಟ್ಟಣಕ್ಕೆ ಬಂದು ನೆಲೆಸಿದ್ದು, ಅಲ್ಲಿಂದ ಇಲ್ಲಿಯವರೆಗೂ ಪ್ರತಿ ವರ್ಷ ಮಣ್ಣಿನ ಮೂರ್ತಿಗಳ ಗಣೇಶ ತಯಾರಿಸುವುದು ಅವರ ಕುಲಕಸುಬಾಗಿದೆ.
ತಮ್ಮ ಸಹೋದರ ಮಾವನಿಂದ ಗಣೇಶ ಮೂರ್ತಿಗಳ ತಯಾರಿಸುವುದನ್ನು ಕಲಿತ ಎಚ್ಚರಪ್ಪ ಬಡಿಗೇರ ಅವರು, ಅಕ್ಕಸಾಲಿಗ ಒಂದೇ ವೃತ್ತಿಗೆ ಅಂಟಿಕೊಂಡಿಲ್ಲ. ಬಾಣಸಿಗ ಹಾಗೂ ಗಣೇಶ ಮೂರ್ತಿಗಳನ್ನು ತಯಾರಿಸಿ ಆರ್ಥಿಕವಾಗಿ ಸಮತೋಲನ ಕಾಯ್ದುಕೊಂಡಿದ್ದಾರೆ. ಅವರೇ ಹೇಳುವ ಪ್ರಕಾರ 2008ರಲ್ಲಿ ಗಣೇಶ ಮೂರ್ತಿಗಳನ್ನು ಮಾರುಕಟ್ಟೆಯಲ್ಲಿಟ್ಟರೂ, ಪಿಒಪಿ ಗಣೇಶ ಮೂರ್ತಿ ಮಾರಾಟದ ಮುಂದೆ ನಮ್ಮ ಮಣ್ಣಿನ ಗಣೇಶ ಮೂರ್ತಿಗಳ ಬೇಡಿಕೆ ಕಂಡು ಬಾರದ ಹಿನ್ನೆಲೆಯಲ್ಲಿ 11 ರೂ. ತೀರ ಕನಿಷ್ಠ ಬೆಲೆಗೆ ಮಾರಾಟ ಮಾಡಿದ್ದು, ಮರೆಯುವ ಹಾಗಿಲ್ಲ ಎಂದು ಸ್ಮರಿಸಿದರು. ಪಿಒಪಿ ಗಣಪತಿ ಲಗ್ಗೆಯಿಂದ ಬೇಸರಗೊಂಡು ಎರಡು ವರ್ಷ ಗಣೇಶ ಮೂರ್ತಿ ತಯಾರಿಸುವುದನ್ನೇ ಕೈ ಬಿಟ್ಟಿದೆ. ನಂತರ ವಂಶಪಾರಂಪರೆ ವೃತ್ತಿ ಕೈ ಬಿಡಬಾರದು ಎನ್ನುವ ದೃಷ್ಟಿಯಿಂದ ಆದಾಯ ಬಂದಷ್ಟು ಬರಲಿ ಎಂದು ಮಣ್ಣಿನ ಗಣೇಶ ಮೂರ್ತಿ ತಯಾರಿಸುವುದು ಮುಂದುವರೆಸಿದ್ದು, ಮನೆಯಲ್ಲಿ ತಯಾರಿಸಿ ಮಾಡುತ್ತಿರುವೆ ಎಂದು ಹೇಳಿದರು.
Advertisement
ಸೆ.2ರ ಗೌರಿ ಗಣೇಶ ಹಬ್ಬದ ಪ್ರಯುಕ್ತ ಪಟ್ಟಣದಲ್ಲಿ ಈ ಹೊತ್ತಿಗೆ ಮಾರುಕಟ್ಟೆಯಲ್ಲಿ ಪಿಒಪಿ ಗಣೇಶ ಮೂರ್ತಿಗಳದ್ದೆ ಭರ್ಜರಿ ಮಾರಾಟ ಕಂಡು ಬರುತ್ತಿತ್ತು. ಈ ಸಂಧರ್ಭದಲ್ಲಿ ಪಿಒಪಿ ಗಣೇಶ ಮಾರಾಟದ ಸಂದರ್ಭದಲ್ಲಿ ಸಾಂಪ್ರದಾಯಿಕ ಕರಕುಶಲ ಕಲೆ ಮಣ್ಣಿನ ಮೂರ್ತಿಗಳ ಬೇಡಿಕೆ ಕಳೆಗುಂದಿತ್ತು. ಇದೀಗ ಬದಲಾದ ಸನ್ನಿವೇಶದಲ್ಲಿ ಪರಿಸರಕ್ಕೆ ಮಾರಕವಾಗಿರುವ ಪಿಒಪಿ ಗಣೇಶ ಮೂರ್ತಿ ಮಾರಾಟ ಮಾಡಿದರೆ ಸಂಬಂಧಿಸಿದ ಅಧಿಕಾರಿಗಳು ವಶಪಡಿಸಿಕೊಳ್ಳುವ ಭೀತಿಯ ಹಿನ್ನೆಲೆಯಲ್ಲಿ ಪಿಒಪಿ ಗಣೇಶ ಮೂರ್ತಿಗಳು ಮಾರುಕಟ್ಟೆಗೆ ಲಗ್ಗೆ ಇಟ್ಟಿಲ್ಲ.
Related Articles
Advertisement
ಇದ್ದಲ್ಲಿಗೆ ಬಂದು ಖರೀದಿ: ಮಣ್ಣೆತ್ತಿನ ಅಮಾವಾಸ್ಯೆಯ ದಿನದಿಂದ ಹನುಮಸಾಗರ ಬಳಿ ಕೆರೆಯ ಮಣ್ಣನ್ನು ತಂದು ಹದಗೊಳಿಸಿ, ಮೂರ್ತಿ ತಯಾರಿಸಲಾಗುತ್ತಿದ್ದು, ವರ್ಷಕ್ಕೆ 100 ಗಣೇಶ ಮೂರ್ತಿ ಮಾಡುತ್ತಿದ್ದೇವೆ. ಇತ್ತೀಚಿನ ವರ್ಷಗಳಲ್ಲಿ ತಯಾರಿಸಿದ ಗಣೇಶ ಮೂರ್ತಿಗಳು ಮಾರಾಟವಾಗುತ್ತಿವೆ. ಗಣೇಶ ಮೂರ್ತಿ ಪ್ರತಿಷ್ಠಾಪಿಸುವವರು ಮನೆಗೆ ಬಂದು ಮುಂಗಡ ಬುಕ್ಕಿಂಗ್ ಮಾಡುತ್ತಿದ್ದು, 350 ರೂ.ನಿಂದ 2ಸಾವಿರ ರೂ.ವರೆಗೆ ಗಣೇಶ ಮೂರ್ತಿ ಮಾರಾಟವಾಗುತ್ತಿದೆ. ಸರಾಸರಿ ಆದಾಯ 50 ಸಾವಿರದಲ್ಲಿ ಖರ್ಚು ವೆಚ್ಚ ತೆಗೆದರೆ 30ಸಾವಿರ ರೂ. ಉಳಿಯುತ್ತದೆ. ನಮ್ಮಂತಹ ಕಲಾವಿದರನ್ನು ಪ್ರೋತ್ಸಾಹಿಸುವ ವಾತವರಣ ನಿರ್ಮಾಣವಾಗಿದೆ. ಮಣ್ಣಿನ ಗಣೇಶ ಮೂರ್ತಿ ಸಿಗುವ ಆತ್ಮ ಸಂತೋಷ, ಅಚ್ಚುಪಡಿಯ ಪಿಒಪಿ ಗಣೇಶ ಮೂರ್ತಿಗಳ ತಯಾರಿಕೆಯಿಂದ ಸಿಗುವುದಿಲ್ಲ. ತಾವು ಗಣೇಶ ಮೂರ್ತಿ ತಯಾರಿಸಿದರೆ ಮನೆಯವರು ಬಣ್ಣ ಹಚ್ಚಿ ಕೆಲಸದಲ್ಲಿ ಸಹಕರಿಸುತ್ತಾರೆ ಎಂದು ಎಚ್ಚರಪ್ಪ ಬಡಿಗೇರ ತಿಳಿಸಿದರು.
ಬಲಮುರಿ ವಿಘ್ನ:
ಎಷ್ಟೇ ಹಣ ಕೊಟ್ಟರೂ ಬಲಮುರಿ ಗಣೇಶ ಮೂರ್ತಿ ತಯಾರಿಸುವುದಿಲ್ಲ. ಒಂದು ವೇಳೆ ತಯಾರಿಸಿದವರಿಗೆ ಅಶುಭ. ಖರೀಸಿದವರಿಗೆ ಶುಭ ತರುತ್ತದೆ ಎನ್ನುವುದು ನಂಬಿಕೆ ಇದೆ. ಇದನ್ನು ಅಕ್ಷರಶಃ ಪಾಲಿಸಿಕೊಂಡು ಬಂದಿದ್ದೇವೆ. ಯಾವುದೇ ಕಾರಣಕ್ಕೂ ಬಲಮುರಿ ಗಣೇಶ ಮೂರ್ತಿ ತಯಾರಿಸುವುದಿಲ್ಲ. ದುರಾಸೆಯಿಂದ ಬಲಮುರಿ ಗಣೇಶ ತಯಾರಿಸಿದವರು ವಿಘ್ನಗಳನ್ನು ಅನುಭವಿಸಿದ್ದಾರೆ. • ಎಚ್ಚರಪ್ಪ ಬಡಿಗೇರ, ಗಣೇಶ ಮೂರ್ತಿ ತಯಾರಕ
•ಮಂಜುನಾಥ ಮಹಾಲಿಂಗಪುರ