Advertisement
ಇತ್ತೀಚೆಗೆ ತಾಪಮಾನ ಗರಿಷ್ಠ 42 ಡಿಗ್ರಿ ಸೆಲ್ಸಿಯಸ್‌ನಷ್ಟು ದಾಖಲಾಗುತ್ತಿದ್ದು ಇತ್ತ ಪಶ್ಚಿಮ ಘಟ್ಟದಿಂದ ಹರಿಯುವಕರಾವಳಿಗಳ ಜೀವನದಿ ನೇತ್ರಾವತಿ ಸೇರಿದಂತೆ ಮೃತ್ಯುಂಜಯ, ಸೋಮಾವತಿ, ಫಲ್ಗುಣಿ, ಕಪಿಲ ನದಿಗಳ ಒಡಲು ಬರಿದಾಗಿದೆ. ಕಳೆದ ವರ್ಷ ಅತೀ ಹೆಚ್ಚು ಕಿಂಡಿ ಅಣೆಕಟ್ಟು ನಿರ್ಮಾಣ ಕಾರ್ಯವಾದರೂ ನೀರಿನ ಒಳ ಹರಿವು ಕ್ಷೀಣಿಸಿದೆ. ಒಂದೆರಡು ಮಳೆಯಾದರೂ ನೀರು ಶೇಖರಣೆಯಾಗುವಷ್ಟು ಆಗಿಲ್ಲ.
ಧರ್ಮಸ್ಥಳ ಸ್ನಾನಘಟ್ಟದಲ್ಲೂ ನೀರಿನ ಹರಿವು ಕ್ಷೀಣಿಸಿದ್ದು, ಕಿಂಡಿ ಅಣೆಕಟ್ಟಿನಲ್ಲಿ ಶೇಖರಣೆಯಾಗಿರುವ ನೀರಿನಿಂದ ಅಲ್ಪ ಪ್ರಮಾಣದಲ್ಲಿ ಭಕ್ತರಿಗೆ ಸ್ನಾನಕ್ಕೆ ಲಭ್ಯ ವಾಗುತ್ತಿದೆ. ಉಳಿದಂತೆ ಶಿಶಿಲ ಶಿಶಿಲೇಶ್ವರ ಮತ್ದ್ಯ ಕ್ಷೇತ್ರಕ್ಕೂ ನೀರಿನ ಆತಂಕ ಎದುರಾಗಿದೆ. ಬೆಳ್ತಂಗಡಿ ಪ. ಪಂ. ವ್ಯಾಪ್ತಿಗೆ ಹರಿಯುವ ಸೋಮಾವತಿ ನದಿ ಸಂಪೂರ್ಣ ಬತ್ತಿದೆ. ಕೃಷಿ ಚಟುವಟಿಕೆಗೆ ನೀರಿನ ಬರ ಎದುರಾಗಿದ್ದು ಕೊಳವೆ ಬಾವಿಗಳ ಮಟ್ಟ ಸಂಪೂರ್ಣ ಕುಸಿದಿದೆ. ಕೃಷಿಕರು, ಹೈನುಗಾರರು ಇದರಿಂದ ನೇರವಾಗಿ ತೊಂದರೆಗೀಡಾಗಿದ್ದಾರೆ. ಪಟ್ಟಣದಲ್ಲಿ 17 ಕೊಳವೆ ಬಾವಿ ಆಶ್ರಯ
ಬೆಳ್ತಂಗಡಿ ನಗರದಲ್ಲಿ 2011ರ ಜನಗಣತಿಯಂತೆ 7,746 ಜನಸಂಖ್ಯೆಯಿದ್ದರೆ, ಪ್ರಸ್ತುತ ಅಂದಾಜು 8,300 ಜನಸಂಖ್ಯೆಯಿದೆ. ವಾಸ್ತವ್ಯ-1,685, ವಾಸ್ತವ್ಯೇತರ-50, ವಾಣಿಜ್ಯ/ಕೈಗಾರಿಕೆ-94 ಸೇರಿ ಒಟ್ಟು 1,829 ನಳ್ಳಿ ನೀರಿನ ಸಂಪರ್ಕವಿದೆ. ಹಿಂದೆ ನಗರಕ್ಕೆ 5 ಲಕ್ಷ ನೀರಿನ ಆವಶ್ಯಕತೆಯಿದ್ದರೆ ಪ್ರಸಕ್ತ 11 ಲಕ್ಷ ಲೀಟರ್ ನೀರಿನ ಆವಶ್ಯಕತೆಯಿದೆ. ಇದಕ್ಕೆ ಪ್ರತೀ ದಿನ ನದಿಯಿಂದ 0.35 ಎಎಲ್‌ಡಿ ಹಾಗೂ ಕೊಳವೆ ಬಾವಿಯಿಂದ 0.7 ಎಂಎಲ್‌ಡಿ ನೀರು ಸಂಗ್ರಹಿಸಲಾಗುತ್ತಿತ್ತು. ಆದರೆ ನದಿ ನೀರು ಬತ್ತಿದ್ದರಿಂದ ಎ.20ರಿಂದ ನದಿ ನೀರು ಆಶ್ರಯಿಸುತ್ತಿಲ್ಲ. ಪಟ್ಟಣ ವ್ಯಾಪ್ತಿಯ 17 ಕೊಳವೆ ಬಾವಿಗಳಿಂದಲೇ ಸಂಪೂರ್ಣ 1.1 ಎಂಎಲ್‌ಡಿ ನೀರು ಸಂಗ್ರಹಿಸಬೇಕಾಗಿದೆ.
Related Articles
ಬೇಸಗೆ ಆರಂಭದ ಮೊದಲು ಪ.ಪಂ.ಬೆಳಗ್ಗೆ 6ರಿಂದ ಮಧ್ಯಾಹ್ನ 2ರ ವರೆಗೆ ಅಂದರೆ ದಿನಕ್ಕೆ ಒಟ್ಟು 8 ತಾಸು ನೀರು ಪೂರೈಕೆ ಮಾಡುತ್ತಿತ್ತು. ಆದರೆ ಈಗ ನೀರಿನ ಲಭ್ಯತೆಯ ಆಧಾರದಲ್ಲಿ ಬೆಳಗ್ಗೆ 7ರಿಂದ 10ರ ವರೆಗೆ 3 ತಾಸು ಮಾತ್ರ ನೀರು ನೀಡುತ್ತಿದೆ. ಮೇ ತಿಂಗಳು ಮಳೆ ಬಾರದಿದ್ದರೆ ಪರಿಸ್ಥಿತಿ ಬಿಗಡಾಯಿಸಲಿದೆ. ಪಟ್ಟಣ ವ್ಯಾಪ್ತಿಯಲ್ಲಿ ಸುದೆಮುಗೇರು, ಕೆಲ್ಲಗುತ್ತು, ಅಚ್ಚಿನಡ್ಕ, ಕೆಲ್ಲಕೆರೆಯಲ್ಲಿ ಕಾಲನಿಗಳಿವೆ. ನಳ್ಳಿ ನೀರಿನ ಸಂಪರ್ಕದ ಶೇ.50ರಷ್ಟು ನೀರು ಈ ವ್ಯಾಪ್ತಿಗೆ ಬೇಕಾಗಿದೆ. ಆದರೆ ನೀರು ಸಮರ್ಪಕ ಲಭ್ಯವಾಗುತ್ತಿಲ್ಲ ಎಂಬ ದೂರು ಕೇಳಿಬರುತ್ತಿದೆ. ವಿದ್ಯುತ್ ಅಭಾವ, ತ್ರಿ ಫೇಸ್ ವಿದ್ಯುತ್ ಕೊರತೆ ಸೇರಿದಂತೆ ಮನೆಮಂದಿ ಸಂಪ್ ನಿರ್ಮಾಣ ಮಾಡದೆ ಇರುವುದರಿಂದ ಸಮಸ್ಯೆ ಉಂಟಾಗುತ್ತಿದೆ ಎಂದು ಪಟ್ಟಣ ಪಂಚಾಯತ್ ಅಧಿಕಾರಿಗಳು ತಿಳಿಸಿದ್ದಾರೆ.
Advertisement
ಚುನಾವಣೆ ನೀತಿ ಸಂಹಿತೆ ಅಡ್ಡಿಟಾಸ್ಕ್ಫೋರ್ಸ್ನಡಿ ಪಟ್ಟಣ ಸೇರಿದಂತೆ ಪಂಚಾಯತ್ ವ್ಯಾಪ್ತಿಯಲ್ಲಿ ಕೊಳವೆ ಬಾವಿ ಕೊರೆಯಲಾಗಿದೆ. ಆದರೆ ಪಂಪ್‌ಸೆಟ್ ಅಳವಡಿಸಿಲ್ಲ, ನೀತಿ ಸಂಹಿತೆಯಿಂದ ಅಳವಡಿಸಲು ಸಾಧ್ಯವಾಗಿಲ್ಲ ಎನ್ನುತ್ತಾರೆ ಅಧಿಕಾರಿಗಳು. ಪ.ಪಂ. ವ್ಯಾಪ್ತಿಯ ಸಂತೆಕಟ್ಟೆಯಲ್ಲಿ ರಸ್ತೆ ಮತ್ತು ಚರಂಡಿ ಅಂಚಿನಲ್ಲೆ ಬೋರ್‌ವೆಲ್ ಕೊರೆಯಲಾಗಿದೆ. ಇಲ್ಲಿ ವಾಹನಗಳು ಢಿಕ್ಕಿಯಾಗುತ್ತಿದೆ. ಬೇಜವಾಬ್ದಾರಿ ವರ್ತನೆಯಿಂದ ಸರಕಾರದ ಅನುದಾನವನ್ನು ಪೋಲು ಮಾಡಲಾಗುತ್ತಿದೆ. ಕೊಳವೆಬಾವಿ ನೀರು ಬತ್ತಿದೆ
ಬಹುತೇಕ ಮಂದಿ ಸ್ವಂತ ಜಮೀನು ಉಳ್ಳವರು ಖಾಸಗಿ ಕೊಳವೆ ಬಾವಿ ಆಶ್ರಯಿಸಿದ್ದಾರೆ. ತಾಲೂಕಿನಲ್ಲಿ ಸಾವಿವಾರು ಬೋರ್‌ವೆಲ್‌ಗಳಿವೆ. ಆದರೂ ಈಗಿದ್ದ ಕೊಳವೆಬಾವಿ ನೀರು ಬತ್ತಿದೆ. ಕೃಷಿಗೆ ನೀರಿನ ಆವಶ್ಯಕತೆಯಿಂದ ಹೊಸ ಕೊಳವೆಬಾವಿ ಮತ್ತು ರೀಚಾರ್ಜ್ ಮಾಡಲು ಏಜೆನ್ಸಿಗಳಿಗೆ ಬಹಳಷ್ಟು ಬೇಡಿಕೆ ಉಂಟಾಗಿದೆ. ಪ್ರಸಕ್ತ 800ರಿಂದ 1,000 ಅಡಿ ವರೆಗೆ ಕೊರೆದ ಉದಾಹರಣೆಗಳಿವೆ. ಮತ್ತೊಂದೆಡೆ ತಾಪಮಾನ ಏರಿಕೆಯಿಂದ ಕೂಲಿಯಾಳುಗಳು ಸಿಗುತ್ತಿಲ್ಲ, ಕಟ್ಟಡ ನಿರ್ಮಾಣ ಸಹಿತ ದಿನ ನೌಕರರು ಊರು ತೊರೆದಿದ್ದಾರೆ. ಪೋಲು ಮಾಡದಂತೆ ಮನವಿ
ಕೊಳವೆಬಾವಿ ಅಂತರ್ಜಲ ಬತ್ತಿಹೋದರೆ ಪರಿಸ್ಥಿತಿ ವಿಕೋಪಕ್ಕೆ ತೆರಳುವ ಸಾಧ್ಯತೆ ಇದೆ. ಪ್ರಸ್ತುತ ಪಟ್ಟಣಕ್ಕೆ 11 ಲಕ್ಷ ಲೀಟರ್
ನೀರು ಪೂರೈಕೆ ಮಾಡಲಾಗುತ್ತಿದೆ. ಮುಂದಿನ ಒಂದು ತಿಂಗಳು ಜನ ಸಾಮಾನ್ಯರು ನಳ್ಳಿ ಸಂಪರ್ಕ ನೀರನ್ನು ಮಿತವಾಗಿ ಬಳಸಿ.
ಎ.ಎಚ್.ಮುಜಾವರ, ಮುಖ್ಯಾಧಿಕಾರಿ ಪ.ಪಂ.ಬೆಳ್ತಂಗಡಿ *ಚೈತ್ರೇಶ್ ಇಳಂತಿಲ