Advertisement

ಸಿಟಿಯಲ್ಲಿ ಗುಣಮುಖ ಪ್ರಮಾಣ ಹೆಚ್ಚಳ

07:25 AM Aug 04, 2020 | Suhan S |

ಬೆಂಗಳೂರು: ನಗರದಲ್ಲಿ ಸೋಮವಾರ 1,497 ಕೋವಿಡ್ ಸೋಂಕಿನ ಪ್ರಕರಣಗಳು ದಾಖಲಾಗಿವೆಯಾದರೂ, 2,693 ಮಂದಿ ಕೋವಿಡ್‌ ನಿಂದ ಚೇತರಿಸಿಕೊಂಡು ವಿವಿಧ ಆರೈಕೆ ಕೇಂದ್ರಗಳಿಂದ ಬಿಡುಗಡೆಯಾಗಿದ್ದಾರೆ!

Advertisement

ಬಿಡುಗಡೆಯಾದವರಲ್ಲಿ 1,590 ಪುರುಷರು ಹಾಗೂ 1,103 ಮಹಿಳೆಯರು ಇದ್ದಾರೆ. ಇದರಿಂದಾಗಿ ಒಟ್ಟಾರೆ ಬಿಡುಗಡೆಗೆ ಆಗಿರುವವರ ಸಂಖ್ಯೆ 23,603ಕ್ಕೆ ಏರಿಕೆಯಾಗಿದೆ. ಕಳೆದ ಕೆಲವು ದಿನಗಳಿಂದ ಸೋಂಕಿತರ ಸಂಖ್ಯೆ ಎರಡು ಸಾವಿರದ ಸರಾಸರಿಯಲ್ಲಿತ್ತು. ಜುಲೈ 29 ರಂದು 2,270 ಸೋಂಕಿತ ಪ್ರಕರಣ  ಗಳು ದೃಢಪಟ್ಟಿದ್ದವು. ಇಲ್ಲಿಂದ ಆರಂಭವಾಗಿದ್ದ ಏರಿಕೆ ಪ್ರಮಾಣ ಇದೀಗ 1,497 ಕ್ಕೆ ಇಳಿಕೆಯಾಗಿದೆ. ಆದರೂ ನಗರದಲ್ಲೀಗ ಒಟ್ಟಾರೆ 60,998 ಸೋಂಕಿತ ಪ್ರಕರಣಗಳಿದ್ದು ಈ ಸಂಖ್ಯೆ 61 ಸಾವಿರದ ಗಡಿ ರೇಖೆ ಸಮೀಪಿಸಿದೆ.

ಕಳೆದ ಭಾನುವಾರ 2,331ಜನರು ಕೋವಿಡ್‌ 19 ಸೋಂಕಿನಿಂದ ಚೇತರಿಸಿಕೊಂಡು ವಿವಿಧ ಆರೈಕೆ ಕೇಂದ್ರಗಳಿಂದ ಬಿಡುಗಡೆಯಾಗಿದ್ದರು. ಜುಲೈ 30 ರಂದು 1,912 ಮಂದಿ ಕೋವಿಡ್ ಸೋಂಕಿನಿಂದ ಗುಣಮುಖರಾಗಿ ಮನೆಗೆ ಮರಳಿದ್ದರು. ಹಾಗೆಯೇ ಆ.1 ರಂದು 1,683 ಜನರು ಆರೈಕೆ ಕೇಂದ್ರಗಳಿಂದ ಚೇತರಿಸಿಕೊಂಡಿದ್ದರು. ಈಗ ಮತ್ತೆ 2,693 ಮಂದಿ ಬಿಡುಗಡೆ ಆಗುವ ಮೂಲಕ ನಗರದಲ್ಲೀಗ ಕೋವಿಡ್ ಸೋಂಕಿನಿಂದ ಚೇತರಿಸಿಕೊಂಡು ವಿವಿಧ ಆಸ್ಪತ್ರೆಗಳಲ್ಲಿ ಬಿಡುಗಡೆಯಾದ ವರ ಸಂಖ್ಯೆ 23,603ಕ್ಕೆ ಏರಿಕೆಯಾಗಿದೆ.

ಕಳೆದ ಐದು ದಿನಗಳಲ್ಲಿ 117 ಮಂದಿ ಬಲಿ!: ಹೊಸದಾಗಿ ನಗರದಲ್ಲಿ ಸೋಂಕಿಗೆ 14 ಮಂದಿ ಪುರುಷರು ಮತ್ತು 13 ಮಂದಿ ಮಹಿಳೆಯರು ಸೇರಿದಂತೆ 27 ಮಂದಿ ಅಸುನೀಗಿದ್ದಾರೆ. ಇದರಲ್ಲಿ ಕಫ ಮತ್ತು ಉಸಿರಾಟದ ತೊಂದರೆಯಿಂದ ಬಳಲುತ್ತಿದ್ದ 34 ವರ್ಷದ ಯುವಕ ಕೂಡ ಸೇರಿದ್ದಾನೆ. ಇದರೊಂದಿಗೆ ಕೊರೊನಾ ಸೋಂಕಿಗೆ ಸಾವಿಗೀಡಾದವರ ಸಂಖ್ಯೆ 1,104 ಕ್ಕೆ ಏರಿದೆ. ಬೆಂಗಳೂರಿನಲ್ಲಿ ಕಳೆದ ಐದು ದಿನಗಳಲ್ಲಿ 117 ಮಂದಿ ಕೋವಿಡ್‌-19 ಸೋಂಕಿಗೆ ಬಲಿಯಾಗಿದ್ದು,ಪ್ರತಿದಿನ ಸಾವಿನ ಸಂಖ್ಯೆ 20ರ ಮೇಲೆಯೇ ಇದೆ. ಜುಲೈ 30 ರಂದು 22, ಜುಲೈ 31 ರಂದು 20, ಆಗಸ್ಟ್‌ 1 ರಂದು 27 ಮಂದಿಯನ್ನು ಮಹಾಮಾರಿ ಬಲಿತೆಗೆದುಕೊಂಡಿತ್ತು. ಸಾವಿನ ಪ್ರಮಾಣ ಶೇ.1.81 ರಷ್ಟಿದೆ. ನಗರದಲ್ಲಿ ಒಟ್ಟಾರೆ 36,290 ಸಕ್ರಿಯ ಪ್ರಕರಣಗಳಿದ್ದು ಅವರೆಲ್ಲರೂ ವಿವಿಧ ಆಸ್ಪತ್ರೆ,ಆರೈಕೆ ಕೇಂದ್ರ ಮತ್ತು ಮನೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಹಾಗೆಯೇ ಕೋವಿಡ್ ಸೋಂಕಿನಿಂದ ಬಳಲುತ್ತಿರುವ 330 ಮಂದಿ ವಿವಿಧ ಆಸ್ಪತ್ರೆಗಳ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

6,725 ಮಂದಿಗೆ ಪರೀಕ್ಷೆ: ಈಗ ಒಟ್ಟು ಪಾಸಿಟಿವ್‌ ರೇಟ್‌ ಶೇ.17.7ರಷ್ಟು ಇದ್ದು, ಆಕ್ಟೀವ್‌ ರೇಟ್‌ ಶೇ.59 ರಷ್ಟಿದೆ. ಅಲ್ಲದೆ 6,725 ಜನರನ್ನು ಪರೀಕ್ಷೆ ಗೆ ಒಳಪಡಿಸಲಾಗಿದೆ. ನಗರ ದಲ್ಲಿ ಒಟ್ಟು 22,902 ಕಂಟೈನ್ಮೆಂಟ್‌ ವಲಯ ವಿದ್ದು ಇದರಲ್ಲಿ 11,872 ಸಕ್ರಿಯ ಕಂಟೈನ್ಮೆಂಟ್‌ ವಲಯಗಳಿವೆ. ಬೆಂಗಳೂರು ದಕ್ಷಿಣದಲ್ಲಿ ಅತಿ ಹೆಚ್ಚು ಅಂದರೆ 6,717 ಸಕ್ರಿಯ ಕಂಟೈನ್ಮೆಂಟ್‌ ವಲಯಗಳಿವೆ. ಹಾಗೆಯೇ ದಾಸರಹಳ್ಳಿ ಕಡಿಮೆ ಅಂದರೆ 4,18 ಸಕ್ರಿಯ ಕಂಟೈನ್ಮೆಂಟ್‌ ವಲಯಗಳಿವೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next