Advertisement

ಗಡಿಭಾಗದಲ್ಲಿ ಹೆಚ್ಚಿದ ಕೋವಿಡ್ ; ರೈಲು ಪ್ರಯಾಣಿಕರ ಮೇಲೆ ವಿಶೇಷ ನಿಗಾ!

08:09 PM Aug 03, 2021 | Team Udayavani |

ಮಹಾನಗರ: ಕೇರಳ ಮತ್ತು ಮಹಾರಾಷ್ಟ್ರದಲ್ಲಿ ಕೊರೊನಾ ದೈನಂದಿನ ಪ್ರಕರಣಗಳು ಏರುಗತಿಯಲ್ಲಿ ಸಾಗುತ್ತಿದ್ದು, ದ.ಕ. ಜಿಲ್ಲೆಯಲ್ಲಿಯೂ ಕಠಿನ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ. ಕೋವಿಡ್‌ ಆರ್‌ಟಿಪಿಸಿಆರ್‌ ವರದಿ ಇಲ್ಲದೆ ರೈಲಿನಲ್ಲಿ ಮಂಗಳೂರಿಗೆ ಬಂದಿಳಿದ ಕೇರಳ ಮತ್ತು ಮಹಾರಾಷ್ಟ್ರ ಭಾಗದ ಪ್ರಯಾಣಿಕರನ್ನು ನಗರದಲ್ಲೇ ತಾತ್ಕಾಲಿಕ ಕ್ವಾರಂಟೈನ್‌ಗೆ ಒಳಪಡಿಸಲಾಗುತ್ತಿದೆ.

Advertisement

ಕೇರಳ ಮತ್ತು ಮಹಾರಾಷ್ಟ್ರದಲ್ಲಿ ಕೋವಿಡ್‌ ಪ್ರಕರಣ ದಿನದಿಂದ ದಿನಕ್ಕೆ ಏರಿಕೆ ಕಾಣುತ್ತಿರುವ ಹಿನ್ನೆಲೆಯಲ್ಲಿ ದ.ಕ.  ಗಡಿ ಪ್ರವೇಶಕ್ಕೆ ಬಿಗಿ ನಿಯಮ ಮಾಡಲಾಗಿದೆ. ಅದರಂತೆ ದ.ಕ. ಜಿಲ್ಲೆಯಿಂದ ಕಾಸರಗೋಡಿಗೆ ಒಂದು ವಾರಗಳವರೆಗೆ ಬಸ್‌ ಸಂಚಾರ ಸ್ಥಗಿತಗೊಳಿಸಲಾಗಿದೆ. ವಾಹನಗಳ ಮುಖೇನ ಕೇರಳ, ಮಹಾರಾಷ್ಟ್ರದಿಂದ ದ.ಕ. ಪ್ರವೇಶ ಪಡೆಯುವವರು ಲಸಿಕೆ ಪಡೆದಿದ್ದರೂ, ಕೋವಿಡ್‌ ಆರ್‌ಟಿಪಿಸಿಆರ್‌ ಪರೀಕ್ಷೆ ವರದಿ ಇರುವುದು ಕಡ್ಡಾಯ ಮಾಡಲಾಗಿದೆ. ಇದೀಗ ರೈಲಿನಲ್ಲಿ ಆಗಮಿಸುವವರ ಮೇಲೂ ಹೆಚ್ಚಿನ ನಿಗಾ ವಹಿಸಲಾಗಿದ್ದು, ಬಿಗಿ ನಿಯಮ ಜಾರಿಗೊಳಿಸಲಾಗಿದೆ.

ಆರ್‌ಟಿಪಿಸಿಆರ್‌ ಪ್ರಮಾಣ ಪತ್ರವಿಲ್ಲದೆ ಸೋಮವಾರ ಕೇರಳ ಮತ್ತು ಮಹಾರಾಷ್ಟ್ರ ದಿಂದ ಬಂದ 51 ಮಂದಿಯನ್ನು ಪುರಭವನ ದಲ್ಲಿ ತಾತ್ಕಾಲಿಕವಾಗಿ ಇರಿಸಲಾಗಿತ್ತು. ರಾತ್ರಿಯೇ ಅವರೆಲ್ಲರ ಗಂಟಲದ್ರವ ಮಾದರಿ ಸಂಗ್ರಹಿಸಿ, ವರದಿ ಬಂದ ಬಳಿಕ ನೆಗೆಟಿವ್‌ ಇದ್ದವರನ್ನು ಮನೆಗೆ ಕಳುಹಿ ಸಲಾಗಿತ್ತು. ಪಾಸಿಟಿವ್‌ ಬಂದವರನ್ನು ಕೋವಿಡ್‌ ಕೇರ್‌ ಸೆಂಟರ್‌ಗೆ ಸ್ಥಳಾಂತರ ಮಾಡಲು ನಿರ್ಧರಿಸಲಾಗಿದೆ. ಇನ್ನು, ಮಂಗಳವಾರ ಬೆಳಗ್ಗೆ ಸುಮಾರು 30ಕ್ಕೂ ಹೆಚ್ಚಿನ ಮಂದಿಯನ್ನು ಟೌನ್‌ಹಾಲ್‌ನಲ್ಲಿ ಕ್ವಾರಂಟೈನ್‌ಗೆ ಒಳಪಡಿಸಲಾಗಿದೆ. ಅವರಿಗೆ ಕೋವಿಡ್‌ ಟೆಸ್ಟ್‌ ನಡೆಸಲಾಗಿದ್ದು, ವಿಶೇಷ ನೆಲೆಯಲ್ಲಿ 8 ಗಂಟೆಯ ಒಳಗಾಗಿ ಪರೀಕ್ಷೆ ವರದಿ ಅವರ ಕೈ ಸೇರುವಂತೆ ವ್ಯವಸ್ಥೆ ಮಾಡಲಾಗಿದೆ.

ಮಹಿಳೆಯರಿಗೆ ಪ್ರತ್ಯೇಕ ವ್ಯವಸ್ಥೆ:

ಆರ್‌ಟಿಪಿಸಿಆರ್‌ ವರದಿ ಇಲ್ಲದೆ ರೈಲಿನಲ್ಲಿ ಆಗಮಿಸಿದ ಮಹಿಳೆಯರಿಗೆ ತಾತ್ಕಾಲಿಕವಾಗಿ ಪ್ರತ್ಯೇಕ ಕ್ವಾರಂಟೈನ್‌ ವ್ಯವಸ್ಥೆ ಮಾಡಲಾಗಿದೆ. ನಗರದ ರೊಸಾರಿಯೋ ಶಾಲೆ, ಅತ್ತಾವರ ಶಾಲೆಯಲ್ಲಿ ವ್ಯವಸ್ಥೆ ಮಾಡಲಾಗಿದೆ. ಕೆಪಿಟಿಯಲ್ಲಿ ಹೆಚ್ಚುವರಿ ಕೊಠಡಿಗಳನ್ನು ಇರಿಸಿಕೊಳ್ಳಲಾಗಿದೆ.

Advertisement

ಇದು ಯಾವ ಲಾಜಿಕ್‌?:

ರೈಲಿನಲ್ಲಿ ಮುಂಬಯಿಯಿಂದ ಆಗಮಿಸಿ ಪುರಭವನದಲ್ಲಿ ತಾತ್ಕಾಲಿಕ ಕ್ವಾರಂಟೈನ್‌ ಆಗಿದ್ದ ಮಂಗಳೂರು ಮೂಲದವರೊಬ್ಬರು “ಉದಯವಾಣಿ’ಗೆ ಪ್ರತಿಕ್ರಿಯಿಸಿ, “ನಾನು ಮೀಟಿಂಗ್‌ ಕಾರಣದಿಂದ ಮುಂಬಯಿಗೆ ಹೋಗಿದ್ದೆ. ಮಂಗಳೂರಿಗೆ ಬಂದಿಳಿಯಲು ಆರ್‌ಟಿಪಿಸಿಆರ್‌ ಕಡ್ಡಾಯ ಎಂಬ ಮಾಹಿತಿ ನನಗೆ ಇರಲಿಲ್ಲ. ಮಂಗಳೂರು ರೈಲ್ವೇ ನಿಲ್ದಾಣದ ಮುಖ್ಯ ದ್ವಾರದಲ್ಲಿ ಮಾತ್ರ ಬಿಗಿ ತಪಾಸಣೆ ಮಾಡಲಾಗಿದೆ. ರೈಲು ನಿಲ್ದಾಣದಿಂದ ಒಳದಾರಿಯಲ್ಲಿ ಕೆಲವರು ತೆರಳಿದ್ದಾರೆ. ಇನ್ನು, ಮುಂಬಯಿಯಿಂದ ಆಗಮಿಸಿದವರಲ್ಲಿ ಸುರತ್ಕಲ್‌, ಉಡುಪಿಯಲ್ಲಿ ಕೆಲವು ಪ್ರಯಾಣಿಕರು ಇಳಿದಿದ್ದು, ಅವರಿಗೆ ಯಾವುದೇ ರೀತಿಯ ತಪಾಸಣೆ ಇರಲಿಲ್ಲ. ಇದು ಯಾವ ಲಾಜಿಕ್‌ ಎಂದು ತಿಳಿಯುತ್ತಿಲ್ಲ’ ಎನ್ನುತ್ತಾರೆ.

ಕೇರಳ, ಮಹಾರಾಷ್ಟ್ರದಲ್ಲಿ ಕೋವಿಡ್‌ ಪ್ರಕರಣಗಳು ಹೆಚ್ಚಾಗುತ್ತಿವೆ. ದ.ಕ. ಜಿಲ್ಲೆಯಲ್ಲಿಯೂ ಕೊರೊನಾ ತಡೆ ಅನಿವಾರ್ಯವಾಗಿದ್ದು, ರೈಲಿನಲ್ಲಿ ಆಗಮಿ ಸುವವರ ಮೆಲೆ ನಿಗಾ ಇಡಲಾಗಿದೆ. ಆರ್‌ಟಿಪಿಸಿಆರ್‌ ಕಡ್ಡಾಯಗೊಳಿಸಲಾಗಿದ್ದು, ಇ ಲ್ಲದವರನ್ನು ತಾತ್ಕಾಲಿಕವಾಗಿಟೌನ್‌ಹಾಲ್‌ನಲ್ಲಿ ಕ್ವಾರಂಟೈನ್‌ಗೆ ಒಳಪಡಿಸಲಾಗಿದ್ದು, ಅಲ್ಲಿ ಕೊರೊನಾ ಪರೀಕ್ಷೆ ನಡೆಸಲಾಗುತ್ತಿದೆ. ಇನ್ನು, ಸುರತ್ಕಲ್‌, ಮೂಲ್ಕಿ, ಉಡುಪಿ ರೈಲ್ವೇ ನಿಲ್ದಾಣದಲ್ಲಿಯೂ ಇದೇ ರೀತಿ ತಪಾಸಣೆ ನಡೆಯುತ್ತಿದೆ.-ಗುರುಪ್ರಸಾದ್‌, ತಹಶೀಲ್ದಾರರು ಮಂಗಳೂರು

Advertisement

Udayavani is now on Telegram. Click here to join our channel and stay updated with the latest news.

Next