Advertisement

ಕೊಲ್ಲಿ ದೇಶಗಳ ಕರಾವಳಿ ಜನರಲ್ಲಿ ಹೆಚ್ಚಿದ ಆತಂಕ!

01:43 AM Jan 09, 2020 | mahesh |

ಮಂಗಳೂರು: ಇರಾಕ್‌ನಲ್ಲಿರುವ ಅಮೆರಿಕದ ಮಿಲಿಟರಿ ನೆಲೆಗಳ ಮೇಲೆ ಇರಾನ್‌ ಕ್ಷಿಪಣಿ ದಾಳಿ ನಡೆಸಿದ ಹಿನ್ನೆಲೆಯಲ್ಲಿ ಮಧ್ಯ ಪ್ರಾಚ್ಯ ದೇಶಗಳಲ್ಲಿ ಯುದ್ಧದ ಕಾರ್ಮೋಡ ಮತ್ತಷ್ಟು ದಟ್ಟವಾಗಿದ್ದು, ಕುವೈಟ್‌, ಇರಾಕ್‌, ದುಬಾೖ, ಸೌದಿ ಅರೆಬಿಯಾದಂಥ ಕೊಲ್ಲಿ ದೇಶಗಳಲ್ಲಿ ನೆಲೆಸಿರುವ ಭಾರತೀಯರಿಗೆ ಇದೀಗ ಆತಂಕ ಶುರುವಾಗಿದೆ. ಅದರಲ್ಲೂ ಕರ್ನಾಟಕ ಕರಾವಳಿಯ ಅಧಿಕ ಮಂದಿ ಕೊಲ್ಲಿ ರಾಷ್ಟ್ರಗಳಲ್ಲಿದ್ದು, ಅವರು ಮತ್ತವರ ಕುಟುಂಬಗಳ ಸದಸ್ಯರು ಹೆಚ್ಚು ಕಳವಳಕ್ಕೆ ಈಡಾಗಿದ್ದಾರೆ.

Advertisement

ಕುವೈಟ್‌, ಸೌದಿ ಅರೇಬಿಯಾ, ಇರಾನ್‌, ಇರಾಕ್‌ ರಾಷ್ಟ್ರಗಳು ಅಕ್ಕ-ಪಕ್ಕದಲ್ಲಿದ್ದು, ಈ ದೇಶಗಳಲ್ಲಿ ಮಂಗಳೂರು ಸಹಿತ ಕರ್ನಾಟಕದ ಸಾವಿರಾರು ಮಂದಿ ವಿವಿಧ ಉದ್ಯೋಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಅವರ ಪೈಕಿ ಅನೇಕರ ಕುಟುಂಬಸ್ಥರೂ ಅಲ್ಲೇ ನೆಲೆಸಿವೆೆ. ತಾಯ್ನಾಡಿನಲ್ಲಿರುವ ಅವರ ಕುಟುಂಬದವ‌ರು – ಬಂಧುಗಳು ಮಧ್ಯ ಪ್ರಾಚ್ಯ ದೇಶಗಳಲ್ಲಿ ಆಗು ತ್ತಿರುವ ಬೆಳವಣಿಗೆಗಳಿಂದ ಆತಂಕಿತ ರಾಗಿದ್ದಾರೆ.

ದೇಶ ತೊರೆಯಲು ತಯಾರಿ
ಈ ಕುರಿತು ಸದ್ಯ ಕುವೈಟ್‌ ಹಾಗೂ ದುಬಾೖಯಲ್ಲಿ ನೆಲೆಸಿರುವ ಮಂಗಳೂರು ಮೂಲದ ಕೆಲವರು ಅಲ್ಲಿನ ಯುದ್ಧ ಕಾರ್ಮೋಡದ ಪರಿಸ್ಥಿತಿ ಬಗ್ಗೆ “ಉದಯವಾಣಿ’ ಜತೆ ಮಾತನಾಡಿದ್ದಾರೆ. “ಇರಾನ್‌ ಈಗ ಅಮೆರಿಕದ ಮಿಲಿಟರಿ ನೆಲೆಗಳ ಕ್ಷಿಪಣಿ ದಾಳಿ ನಡೆಸಿದ ಬಳಿಕ ಕುವೈಟ್‌ ಮಾತ್ರವಲ್ಲ ಅಕ್ಕ-ಪಕ್ಕದ ದೇಶದಲ್ಲಿ ನೆಲೆಸಿರುವ ಎಲ್ಲ ಭಾರತೀಯರಲ್ಲಿಯೂ ಆತಂಕ ಶುರುವಾಗಿದೆ. ಅದರಲ್ಲಿಯೂ ಬಹಳ ಹತ್ತಿರವಾಗಿರುವ ಕುವೈಟ್‌ ಮೇಲೂ ಇರಾನ್‌ ಈ ಸಂದರ್ಭದಲ್ಲಿ ಸೇಡು ತೀರಿಸಲು ಯತ್ನಿಸಬಹುದು ಎನ್ನುವ ಭೀತಿ ನಮಗೆಲ್ಲ ಇದೆ. ಅಮೆರಿಕ ಮಿಲಿಟರಿ ನೆಲೆಗಳ ಮೇಲಿನ ಇರಾನ್‌ ದಾಳಿ ಅನಂತರ ಬುಧವಾರ ಬೆಳಗ್ಗಿನಿಂದ ನಮ್ಮೆಲ್ಲ ಕಚೇರಿಗಳಲ್ಲಿ ಆ ಬಗ್ಗೆಯೇ ಎಲ್ಲರೂ ಮುಂದೇನಾಗ
ಬಹುದು ಎನ್ನುವ ರೀತಿ ಆತಂಕದ ಮಾತುಗಳನ್ನಾಡುತ್ತಿದ್ದಾರೆ. ಕೆಲವರೆಲ್ಲ ಈಗಾಗಲೇ ಯುದ್ಧ ಘೋಷಣೆ ಆತಂಕದಡಿ ದೇಶ ಬಿಟ್ಟು ಬರುವುದಕ್ಕೆ ಪೂರ್ವ ತಯಾರಿ ನಡೆಸಿದ್ದಾರೆ. ಇನ್ನು ಕೆಲವರು ಮೊದಲು ತಮ್ಮ ಕುಟುಂಬಸ್ಥರನ್ನು ತಾಯ್ನಾಡಿಗೆ ಕಳುಹಿಸುವುದಕ್ಕೆ ಸನ್ನದ್ಧರಾಗುತ್ತಿದ್ದಾರೆ. ಅಷ್ಟೇಅಲ್ಲ, ಫಿಲಿಫೈನ್ಸ್‌ ದೇಶವು ಈಗಾಗಲೇ ತಮ್ಮ ಪ್ರಜೆಗಳನ್ನು ಇರಾಕ್‌ನಿಂದ ತುರ್ತಾಗಿ ಕರೆಸಿಕೊಳ್ಳುವ ತೀರ್ಮಾನ ಮಾಡಿರುವುದು ಕೂಡ ಭಾರತೀಯರ ಆತಂಕ ಹೆಚ್ಚಿಸಿದೆ’ ಎಂದು ಕರಾವಳಿ ಮೂಲದ ಕುವೈಟ್‌ ಉದ್ಯೋಗಿಯೊಬ್ಬರು ಹೇಳಿದ್ದಾರೆ.

ದುಬಾೖಯಲ್ಲೂ ಆತಂಕ
ಇನ್ನೊಂದೆಡೆ ದುಬಾೖಯಲ್ಲಿಯೂ ನೆಲೆಸಿರುವ ಭಾರತೀಯರು ಅಮೆರಿಕ-ಇರಾನ್‌ ಸಂಘರ್ಷದಿಂದ ಆತಂಕಕ್ಕೆ ಒಳಗಾಗಿದ್ದಾರೆ. “ಸದ್ಯಕ್ಕೆ ಇಲ್ಲಿ ಎಲ್ಲವೂ ಸಹಜವಾಗಿಯೇ ಇದೆ. ಆದರೆ ಇರಾನ್‌ನ ಕ್ಷಿಪಣಿ ದಾಳಿ ಅನಂತರ ಇಲ್ಲಿಯೂ ಭಾರತೀಯರಲ್ಲಿ ಮುಂದೇನಾಗಬಹುದು? ಯುದ್ಧ ಘೋಷಣೆಯಾದರೆ ತತ್‌ಕ್ಷಣಕ್ಕೆ ಸ್ವದೇಶಕ್ಕೆ ಹೇಗೆ ವಾಪಾಸ್‌ ಹೋಗುವುದು ಎನ್ನುವ ಬಗ್ಗೆ ಹೆದರಿಕೆ ಶುರುವಾಗಿರುವುದು ನಿಜ. ಇಲ್ಲಿಯ ವರೆಗೆ ಭಾರತೀಯ ರಾಯಭಾರ ಕಚೇರಿಯಿಂದಲೂ ನಮಗೆ ಯಾವುದೇ ಮುನ್ನೆಚ್ಚರಿಕೆಯ ಸಂದೇಶ ಬಂದಿಲ್ಲ’ ಎಂದು ಕಳೆದ 13 ವರ್ಷಗಳಿಂದ ದುಬಾಯಿನಲ್ಲಿ ಕೆಲಸ ಮಾಡುತ್ತಿರುವ ಉದ್ಯೋಗಿಯೊಬ್ಬರು ಅಭಿಪ್ರಾಯಪಟ್ಟಿದ್ದಾರೆ.

ಆತಂಕದ ವಾತಾವರಣವಿದೆ
“ಕುವೈಟ್‌ನಲ್ಲಿ ಇರುವ ಭಾರತೀಯರಿಗೆ ಈ ತನಕ ಅಲ್ಲಿನ ಸರಕಾರದಿಂದ ಸುರಕ್ಷತೆಗೆ ಸಂಬಂಧಿಸಿ ಅಥವಾ ದೇಶ ತೊರೆಯಲು ಸಿದ್ಧರಾಗ ಬೇಕೆಂಬುದಾಗಿ ಯಾವುದೇ ಸೂಚನೆಗಳು ಅಥವಾ ಆದೇಶಗಳು ಬಂದಿಲ್ಲ. ಆದರೆ ಇಲ್ಲಿನ ಬೆಳವಣಿಗೆಗಳನ್ನು ಗಮನಿಸಿದರೆ ನಮಗೆ ಆತಂಕ ಉಂಟಾಗುತ್ತಿದೆ’ ಎಂದು ಕುವೈಟ್‌ನಲ್ಲಿ ಉದ್ಯೋಗದಲ್ಲಿರುವ ಮಂಗಳೂರಿನ ಓರ್ವ ಮಹಿಳೆ “ಉದಯವಾಣಿ’ಗೆ ತಿಳಿಸಿದ್ದಾರೆ.

Advertisement

ಇರಾಕಿಗೆ ಪ್ರಯಾಣಿಸದಿಲು ಭಾರತೀಯರಿಗೆ ಮನವಿ
ಇರಾಕ್‌ನಲ್ಲಿ ಪ್ರಸ್ತುತ ನೆಲೆಸಿರುವ ಉದ್ವಿಗ್ನ ಪರಿಸ್ಥಿತಿ ಹಿನ್ನೆಲೆಯಲ್ಲಿ ಭಾರತೀಯರು ಇರಾಕ್‌ ಪ್ರವಾಸ ಕೈಗೊಳ್ಳಬಾರದು ಹಾಗೂ ಇರಾಕ್‌ನಲ್ಲಿ ಈಗಾಗಲೇ ಇರುವ ಭಾರತೀಯರು ಕೂಡ ತಾವಿರುವ ಜಾಗಬಿಟ್ಟು ದೇಶದ ಇತರೆಡೆ ಓಡಾಟ ನಡೆಸಬಾರದು ಎಂಬುದಾಗಿ ಭಾರತೀಯ ರಾಯಭಾರ ಕಚೇರಿ ಸಲಹೆ ಮಾಡಿದೆ. ನಮ್ಮ ಭಾರತೀಯ ರಾಯಭಾರ ಇಲಾಖೆಯು ಕೊಲ್ಲಿ ರಾಷ್ಟ್ರಗಳಲ್ಲಿ ದುಡಿಯುತ್ತಿರುವ ಭಾರತೀಯರ ಸುರಕ್ಷತೆ ಬಗ್ಗೆ ಹೆಚ್ಚಿನ ಆದ್ಯತೆ, ನಿಗಾ ವಹಿಸುತ್ತಿದೆ ಎಂದು ಕರ್ನಾಟಕ ಪ್ರಾದೇಶಿಕ ಪ್ರೊಟೆಕ್ಟರ್‌ ಆಫ್‌ ಎಮಿಗ್ರೆಂಟ್ಸ್‌ (ವಿದೇಶಕ್ಕೆ ತೆರಳುವವರ ರಕ್ಷಣಾಧಿಕಾರಿ) ಶುಭಂ ಸಿಂಗ್‌ ಅವರು “ಉದಯವಾಣಿ’ಗೆ ತಿಳಿಸಿದ್ದಾರೆ.

ಈ ಹಿಂದೆ 1990- 91ರಲ್ಲಿ ಇರಾಕ್‌ ದೇಶವು ಕುವೈಟ್‌ ಮೇಲೆ ಆಕ್ರಮಣ ನಡೆಸಿದ ಸಂದರ್ಭ ಸಂಭವಿಸಿದ ಯುದ್ಧದಲ್ಲಿ ಸಾವಿರಾರು ಮಂದಿ ಉದ್ಯೋಗ ಕಳೆದುಕೊಂಡಿಡು ಸ್ವದೇಶಕ್ಕೆ ವಾಪಸಾಗಿದ್ದರು. ಇದರಿಂದಾಗಿ ರಾಜ್ಯದ ಕರಾವಳಿಯ ಆರ್ಥಿಕತೆ ಮೇಲೆ ದೊಡ್ಡ ಹೊಡೆತ ಬಿದ್ದಿತ್ತು. ಕುವೈಟ್‌ನಿಂದ ವಾಪಸ್‌ ಬಂದವರು ಮಂಗಳೂರಿನಲ್ಲಿ “ಕುವೈಟ್‌ ಸಂತ್ರಸ್ತರ ವೇದಿಕೆ’ಯನ್ನು ಹುಟ್ಟುಹಾಕಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next