ಬೆಳಗಾವಿ: ಸಾರ್ವಜನಿಕರು ಖಾಸಗಿ ವಾಹನಗಳಿಗಿಂತ ಸರ್ಕಾರಿ ವಾಹನಗಳನ್ನು ಹೆಚ್ಚು ಬಳಕೆ ಮಾಡಬೇಕು. ಖಾಸಗಿ ವಾಹನಗಳಿಗಿಂತ ಸರ್ಕಾರಿ ವಾಹನಗಳು ಅತೀ ಹೆಚ್ಚು ಸುರಕ್ಷತೆ ಜೊತೆಗೆ ಅಪಘಾತ ರಹಿತವಾಗಿವೆ ಎಂದು ಜಲಸಂಪನ್ಮೂಲ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಗೋವಿಂದ ಎಂ. ಕಾರಜೋಳ ಹೇಳಿದರು.
ನಗರ ಕೇಂದ್ರ ಬಸ್ ನಿಲ್ದಾಣದ ಆವರಣದಲ್ಲಿ ಬುಧವಾರ ನಡೆದ ಬೆಳಗಾವಿ ವಿಭಾಗ ವಾಯವ್ಯ ಕರ್ನಾಟಕ ರಸ್ಥೆ ಸಾರಿಗೆ ಸಂಸ್ಥೆಯ ಅಪಘಾತ ರಹಿತ ಚಾಲಕರಿಗೆ ಬೆಳ್ಳಿ ಪದಕ ವಿತರಿಸಿ ಅವರು ಮಾತನಾಡಿದರು.
ಖಾಸಗಿ ವಾಹನಗಳ ಜೊತೆ ಸರ್ಕಾರಿ ವಾಹನಗಳು ಪೈಪೋಟಿ ನಡೆಸುವ ಪರಿಸ್ಥಿತಿ ಸೃಷ್ಟಿಯಾಗಿದೆ. ಖಾಸಗಿ ವಾಹನಗಳಲ್ಲಿ ಯಾವುದೇ ಉತ್ತಮ ಗುಣಮಟ್ಟದ ಸುರಕ್ಷಿತ ವ್ಯವಸ್ಥೆ ಇರುವುದಿಲ್ಲ. ಖಾಸಗಿ ವಾಹನಗಳ ಅಪಘಾತಗಳು ಜಾಸ್ತಿ ಆಗುತ್ತಿವೆ. ಸುರಕ್ಷತೆ ದೃಷ್ಟಿಯಿಂದ ಸಾರ್ವಜನಿಕರು ಸರ್ಕಾರಿ ವಾಹನಗಳ ಬಳಕೆ ಮಾಡಬೇಕು. ಸರ್ಕಾರಿ ವಾಹನಗಳು ಉತ್ತಮ ಸುರಕ್ಷಿತ ವ್ಯವಸ್ಥೆ ಹೊಂದಿವೆ ಎಂದು ಹೇಳಿದರು.
ಉತ್ತಮ ಸೇವೆ ಮಾಡಿ ಬೆಳ್ಳಿ ಮತ್ತು ಬಂಗಾರದ ಪದಕ ಪಡೆದ ಚಾಲಕರಿಗೆ ಮತ್ತು ಇಂಧನ ಉಳಿತಾಯ ಮಾಡಿದ ಚಾಲಕರಿಗೆ ಅಭಿನಂದನೆ ಸಲ್ಲಿಸಿದ ಸಚಿವರು, ಬೆಳ್ಳಿ ಮತ್ತು ಬಂಗಾರ ಪದಕ ನೀಡುತ್ತಿರುವುದು ಉತ್ತಮ ಯೋಜನೆಯಾಗಿದೆ. ಕಾರಣ ಬೇರೆ ಚಾಲಕರು ಇದನ್ನು ಮಾದರಿಯಾಗಿ ಇಟ್ಟುಕೊಂಡು ಇನ್ನೂ ಉತ್ತಮ ರೀತಿ ಕಾರ್ಯನಿರ್ವಹಿಸಲು ಸಜ್ಜಾಗಬೇಕು ಎಂದು ಕಿವಿಮಾತು ಹೇಳಿದರು.
ಸಾರ್ವಜನಿಕರ ಜೀವ ಉಳಿಸುವ ಜೊತೆಗೆ ಉತ್ತಮ ಸೇವೆ ನೀಡಿದ್ದಾರೆ. ಮುಂದಿನ ದಿನಗಳಲ್ಲಿ ಎಲ್ಲ ಚಾಲಕರು ಬೆಳ್ಳಿ ಮತ್ತು ಬಂಗಾರದ ಪದಕ ಪಡೆಯಬೇಕು ಎಂದರು. ಸಾರಿಗೆ ಸಂಸ್ಥೆ ಕರೊನಾ ಪರಿಸ್ಥಿತಿಯಿಂದ ನಷ್ಟವನ್ನು ಅನುಭವಿಸುತ್ತಿದ್ದು, ಸಂಸ್ಥೆಯವರು ಜವಾಬ್ದಾರಿ ಮತ್ತು ಕರ್ತವ್ಯ ಅರ್ಥ ಮಾಡಿಕೊಂಡು ನಷ್ಟದಿಂದ ಹೇಗೆ ಹೊರತರಬೇಕು ಎಂದು ಚಿಂತನೆ ಮಾಡಬೇಕು ಎಂದು ಸಚಿವ ಗೋವಿಂದ ಕಾರಜೋಳ ಹೇಳಿದರು.
ಬೆಳಗಾವಿ ವಿಭಾಗ ವಾ.ಕ.ರ.ಸಾ. ಸಂಸ್ಥೆಯ ವಿಭಾಗೀಯ ನಿಯಂತ್ರಣಾ ಧಿಕಾರಿ ಪಿ.ವೈ.ನಾಯಕ್ ಸ್ವಾಗತಿಸಿ ಅಪರಾಧ, ಅಪಘಾತ ಇಲ್ಲದೇ ಉತ್ತಮ ರೀತಿ ಕಾರ್ಯ ನಿರ್ವಹಿಸಿದ 125 ಜನ ಚಾಲಕರಿಗೆ ಬೆಳ್ಳಿ ಪದಕ, 5 ಜನ ಚಾಲಕರಿಗೆ ಬಂಗಾರದ ಪದಕ ವಿತರಿಸಲಾಗಿದೆ. ಮುಂದಿನ ದಿನಗಳಲ್ಲಿ ಪದಕ ವಿಜೇತರ ಸಂಖ್ಯೆ ಹೆಚ್ಚಾಗಬೇಕು, ಚಾಲಕರು ಉತ್ತಮ ಸೇವೆ ಸಲ್ಲಿಸಬೇಕು ಎಂದರು.
ಇದಕ್ಕೂ ಮುನ್ನ ಬೆಳಗಾವಿ ವಿಭಾಗದ ಸಿಬ್ಬಂದಿ ಹಾಗೂ ಸಿಬ್ಬಂದಿ ಮಕ್ಕಳಿಂದ ರಸಮಂಜರಿ ಕಾರ್ಯಕ್ರಮ ನಡೆಯಿತು. ಬೆಳಗಾವಿ ಉತ್ತರ ಶಾಸಕರಾದ ಅನಿಲ ಬೆನಕೆ, ಅಪರ ಜಿಲ್ಲಾಧಿಕಾರಿ ಅಶೋಕ ದುಡಗುಂಟಿ, ಕರ್ನಾಟಕ ಕೊಳಗೇರಿ ಅಭಿವೃದ್ದಿ ಮಂಡಳಿಯ ಅಧ್ಯಕ್ಷರಾದ ಮಹೇಶ ಕುಮಠಳ್ಳಿ, ಹುಬ್ಬಳ್ಳಿ ವಾ.ಕ.ರ.ಸಾ. ಕೇಂದ್ರ ಕಚೇರಿಯ ಅಧ್ಯಕ್ಷರಾದ ವ್ಹಿ.ಎಸ್ .ಪಾಟೀಲ, ಉಪಾಧ್ಯಕ್ಷರಾದ ಡಾ.ಬಸವರಾಜ ಎಸ್.ಕೆಲಗಾರ ಉಪಸ್ಥಿತರಿದ್ದರು.