ಕಲಬುರಗಿ: ಲೋಕ ಅದಾಲತ್‌ದಿಂದ ಸೂಕ್ತ ಮತ್ತು ತ್ವರಿತ ನ್ಯಾಯ ದೊರೆಯುತ್ತದೆಂಬ ಭರವಸೆ ವ್ಯಾಪಕವಾಗಿ ಬಲಗೊಳ್ಳುವುದರ ಜತೆಗೆ ಮಾನಸಿಕ ಬದಲಾವಣೆ ತರುವಲ್ಲಿ ಎಲ್ಲರೂ ಶ್ರಮಿಸಬೇಕೆಂದು ಕರ್ನಾಟಕ ಉಚ್ಚ ನ್ಯಾಯಾಲಯದ ನ್ಯಾಯಮೂರ್ತಿ ಹಾಗೂ ಕರ್ನಾಟಕ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರದ ಕಾರ್ಯನಿರ್ವಾಹಕ ಅಧ್ಯಕ್ಷ ಜಯಂತ ಪಟೇಲ್ ಕರೆ ನೀಡಿದರು.
ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾ ನ್ಯಾಯವಾದಿಗಳ ಸಂಘದ ಸಂಯುಕ್ತಾಶ್ರಯದಲ್ಲಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯದ ಆವರಣದಲ್ಲಿ ಶನಿವಾರ ಹಮ್ಮಿಕೊಂಡಿದ್ದ ರಾಷ್ಟ್ರೀಯ ಜನತಾ ನ್ಯಾಯಾಲಯ ಉದ್ಘಾಟಿಸಿ ಅವರು ಮಾತನಾಡಿದರು.
ನ್ಯಾಯ ಒದಗಿಸುವುದು ಮಾನಸಿಕ ವಿದ್ಯಮಾನ. ನ್ಯಾಯಾಲಯಗಳಿಗೆ ನ್ಯಾಯ ಪಡೆಯಲು ಆಗಮಿಸುವವರಿಗೆ ತ್ವರಿತ ಗತಿಯಲ್ಲಿ ನ್ಯಾಯ ದೊರಕಿಸಿ ಅವರು ಮಾನಸಿಕ ತೃಪ್ತಿ ಹೊಂದುವ ಹಾಗೆ ಮಾಡಬೇಕು. ನ್ಯಾಯ ಕೇಳಿ ಬರುವ ಕಕ್ಷಿದಾರರನ್ನು ಮಾನವೀಯ ದೃಷ್ಟಿಯಿಂದ ನೋಡಬೇಕು. ದೇಶದಲ್ಲಿ ಎಲ್ಲ ಹಂತದ ನ್ಯಾಯಾಲಯಗಳಲ್ಲಿ ನಡೆಸಲಾಗುವ ಲೋಕ ಅದಾಲತ್‌ನಲ್ಲಿ ಯಾವುದೇ ಶುಲ್ಕ ಪಡೆಯುವುದಿಲ್ಲ. ಅಭಿವೃದ್ಧಿ ಹೊಂದಿದ ದೇಶಗಳಲ್ಲಿ ಲೋಕ ಅದಾಲತ್‌ನಲ್ಲಿ ಇತ್ಯರ್ಥವಾಗುವ ಪ್ರಕರಣಗಳಿಗೆ ಪರಿಹಾರದ ಶೇ. 10ರಷ್ಟು ಶುಲ್ಕ ಪಡೆಯಲಾಗುತ್ತದೆ. ಲೋಕ ಅದಾಲತ್ ನಮ್ಮ ದೇಶದಲ್ಲಿ ಅತ್ಯಂತ ಯಶಸ್ವಿಯಾಗಿದ್ದು, ಎಲ್ಲರೂ ಇದರ ಪ್ರಯೋಜನ ಪಡೆಯಬೇಕು ಎಂದು ಕರೆ ನೀಡಿದರು.
ಪ್ರಧಾನ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶ ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಅಧ್ಯಕ್ಷ ಬಿ.ವಿ. ಪಾಟೀಲ, ರಾಜ್ಯ ವಕೀಲರ ಸಂಘದ ಸದಸ್ಯ ಕಾಶೀನಾಥ ಮೋತಕಪಲ್ಲಿ, ನ್ಯಾಯಧೀಶರಾದ ಭೀಮಾಶಂಕರ ಬಿರಾದಾರ, ನಿಂಗಪ್ಪ ಪರಶುರಾಮ ಕೋಪರಡೆ, ಭೈರಪ್ಪ ಶಿವಲಿಂಗಪ್ಪ ನಾಯಕ, ಪ್ರೇಮಾವತಿ ಮನಗೂಳಿ, ಎಚ್. ಗೋಪಾಲಕೃಷ್ಣ, ಎಸ್.ಎಲ್. ಚವ್ಹಾಣ, ಸರಸ್ವತಿ ದೇವಿ, ಜಿ.ಆರ್. ಶೆಟ್ಟರ, ಎಚ್.ಕೆ. ನವೀನ ಮತ್ತಿತರರು ಹಾಜರಿದ್ದರು. ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಎಸ್.ಆರ್. ಮಾಣಿಕ್ಯ ನಿರೂಪಿಸಿ, ವಂದಿಸಿದರು.
ಇದೇ ಸಂದರ್ಭದಲ್ಲಿ ಲೋಕದಾಲತ್‌ನಲ್ಲಿ ವಾಹನ ಅಪಘಾತ ಪ್ರಕರಣಗಳಲ್ಲಿ ಇತ್ಯರ್ಥಗೊಂಡ ಹಣಮಂತ, ಶ್ರೀದೇವಿ, ಮಹೇಶ, ಮಾಬರಾಯ, ಬಸವರಾಜ, ವಿರೇಶಗೌಡ ಅವರಿಗೆ ಪರಿಹಾರದ ಚೆಕ್ ವಿತರಿಸಲಾಯಿತು.