Advertisement

ಸಾಮೂಹಿಕ ವಿವಾಹದ ಜಾಗೃತಿ ಹೆಚ್ಚಲಿ

01:04 PM May 08, 2017 | |

ದಾವಣಗೆರೆ: ದುಂದುವೆಚ್ಚಕ್ಕೆ ಕಡಿವಾಣ ಹಾಕುವಂತಹ ಸಾಮೂಹಿಕ ವಿವಾಹ ಹೆಚ್ಚಾಗಿ ನಡೆಯುವಂತಾಗಬೇಕು ಜೊತೆಗೆ ಜನರಲ್ಲೂ ಸಹ ಸರಳ ಸಾಮೂಹಿಕ ವಿವಾಹದ ಬಗ್ಗೆ ಜಾಗೃತಿ ಮೂಡಬೇಕು ಎಂದು ಶಾಸಕ ಶಾಮನೂರು ಶಿವಶಂಕರಪ್ಪ ಆಶಿಸಿದ್ದಾರೆ. 

Advertisement

ವೀರಶೈವ ಪಂಚಮಸಾಲಿ ಸಮಾಜ, ಹರ ಸೇವಾ ಸಂಸ್ಥೆ ಸಹಯೋಗದಲ್ಲಿ ಭಾನುವಾರ ದಾವಣಗೆರೆಯ ರೇಣುಕ ಮಂದಿರದಲ್ಲಿ ಏರ್ಪಡಿಸಿದ್ದ 14ನೇ ವರ್ಷದ ಸಾಮೂಹಿಕ ವಿವಾಹ ಮಹೋತ್ಸವ ಉದ್ಘಾಟಿಸಿ ಮಾತನಾಡಿದ ಅವರು, ಮನೆ ಕಟ್ಟಿ ನೋಡು, ಮದುವೆ ಮಾಡಿ ನೋಡು… ಎಂಬ ಮಾತಿನಂತೆ ಈಗ ಮದುವೆ ಮಾಡುವುದು ತುಂಬಾ ವೆಚ್ಚದಾಯಕ.

ಮಕ್ಕಳ ಮದುವೆಗಾಗಿ ಸಾಲ- ಸೋಲ ಮಾಡಿ, ತೀರಸಲಿಕ್ಕೆ ಕಷ್ಟಪಡುತ್ತಿರುವವ ಉದಾಹರಣೆ ಸಾಕಷ್ಟಿವೆ. ದುಂದುವೆಚ್ಚದ ಮದುವೆಗೆ ಕಡಿವಾಣ ಹಾಕುವಂತಹ ಸಾಮೂಹಿಕ ವಿವಾಹಗಳು ಎಲ್ಲಾ ಸಮಾಜದಲ್ಲಿ ಹೆಚ್ಚಾಗಿ ನಡೆಯಬೇಕು ಎಂದರು. ವೀರಶೈವ ಪಂಚಮಸಾಲಿ ಸಮಾಜ, ಹರ ಸೇವಾ ಸಂಸ್ಥೆ ಸಹಯೋಗದಲ್ಲಿ ಸಾಮೂಹಿಕ ವಿವಾಹದ ಮೂಲಕ ಕಳೆದ 13 ವರ್ಷದಲ್ಲಿ 1 ಸಾವಿರಕ್ಕೂ ಹೆಚ್ಚು ಮದುವೆ ಮಾಡಿರುವುದು ನಿಜಕ್ಕೂ ಶ್ಲಾಘನೀಯ. 

ಅನೇಕ ಸರಳ ಸಾಮೂಹಿಕ ವಿವಾಹ ಮಹೋತ್ಸವದಲ್ಲಿ ವಿಧಿ-ವಿಧಾನಗಳಿಲ್ಲದೆ ಮದುವೆ ಮಾಡಿಸಲಾಗುತ್ತದೆ. ವೀರಶೈವ ಪಂಚಮಸಾಲಿ ಸಮಾಜ, ಹರ ಸೇವಾ ಸಂಸ್ಥೆಯವರು ಅತಿ ಶಾಸ್ತ್ರ ಬದ್ಧವಾಗಿ ಪ್ರತಿಯೊಂದು ವಿಧಿ-ವಿಧಾನದ ಮೂಲಕ ಕನ್ನಡದಲ್ಲಿ ಮಂತ್ರ ಹೇಳಿ, ವಧು-ವರರಿಗೆ ಎಲ್ಲವನ್ನೂ ಅರ್ಥ ಮಾಡಿಸಿ, ಮದುವೆ ಮಾಡಿಸುವುದು ನಿಜಕ್ಕೂ ಶ್ಲಾಘನೀಯ ಕೆಲಸ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು. 

ದಂಪತಿ ಒಬ್ಬರನ್ನು ಒಬ್ಬರು ಚೆನ್ನಾಗಿ ಅರಿತುಕೊಳ್ಳಬೇಕು. ಗಂಡನಿಗೆ ಕೋಪ ಬಂದಾಹ ಹೆಂಡತಿ ಸುಮ್ಮನಿರಬೇಕು. ಹೆಂಡತಿಗೆ ಕೋಪ ಬಂದಾಗ ಗಂಡ ಸುಮ್ಮನಿರಬೇಕು. ಪರಸ್ಪರ ಹೊಂದಾಣಿಕೆಯಿಂದ ಒಳ್ಳೆಯ ಸುಗಮವಾದ ಜೀವನ ನಡೆಸಬೇಕು. ಮಕ್ಕಳನ್ನು ಒಳ್ಳೆಯ ವಿದ್ಯಾವಂತರನ್ನಾಗಿ ಮಾಡುವ ಮೂಲಕ ದೇಶಕ್ಕೆ ಕಾಣಿಕೆ ನೀಡಬೇಕು ಎಂದರು. 

Advertisement

ವೀರಶೈವ ಪಂಚಮಸಾಲಿ ಸಮಾಜದ ರಾಜ್ಯ ಗೌರವ ಅಧ್ಯಕ್ಷ ಬಾವಿ ಬೆಟ್ಟಪ್ಪ ಮಾತನಾಡಿ, ದಾವಣಗೆರೆಯ ವೀರಶೈವ ಪಂಚಮಸಾಲಿ ಸಮಾಜ, ಹರ ಸೇವಾ ಸಂಸ್ಥೆ ಸಾಮೂಹಿಕ ಮದುವೆ ಮಾಡುವ ಮೂಲಕ ಕಳೆದ 13 ವರ್ಷದಲ್ಲಿ 1 ಸಾವಿರಕ್ಕೂ ಹೆಚ್ಚು ಜೋಡಿಗಳಿಗೆ ಹೊಸ ಬದುಕನ್ನು ಕಟ್ಟಿಕೊಳ್ಳುವ ಅವಕಾಶ ಮಾಡಿಕೊಡುವ ಮೂಲಕ ರಾಜ್ಯಕ್ಕೆ ಮಾದರಿಯಾಗಿದ್ದಾರೆ ಎಂದರು. 

ವೀರಶೈವ ಪಂಚಮಸಾಲಿ ಸಮಾಜವನ್ನು ಪ್ರವರ್ಗ 2-ಎಗೆ ಸೇರಿಸಬೇಕು ಎಂಬುದು ಸಮಾಜದ ಪ್ರಮುಖ ಬೇಡಿಕೆಯಾಗಿದೆ. ಸಮಾಜವನ್ನು ಪ್ರವರ್ಗ 2-ಎಗೆ ಸೇರಿಸುವ ಪ್ರಕ್ರಿಯೆ ನಡೆಯುತ್ತಿದೆ. ಆದಷ್ಟು ಬೇಗ ಬೇಡಿಕೆ ಈಡೇರಲಿದೆ. ಹರಿಹರದ ಪೀಠದಲ್ಲಿ ನೂತನ ಕಟ್ಟಡಗಳ ಉದ್ಘಾಟನೆ ಹಾಗೂ ಸಮಾಜಕ್ಕೆ ಸ್ವಾಮೀಜಿಯವರನ್ನ ನೇಮಿಸುವ ಕೆಲಸ ಕೆಲವೇ ದಿನಗಳಲ್ಲಿ ಆಗಲಿದೆ.

ಎಲ್ಲಾ ಕಾರ್ಯಕ್ಕೂ ಸಮಾಜ ಬಾಂಧವರು ಹೆಚ್ಚಿನ ಸಹಕಾರ ನೀಡಬೇಕು ಎಂದು ಮನವಿ ಮಾಡಿದರು. ಅಧ್ಯಕ್ಷತೆ ವಹಿಸಿದ್ದ ಹರ ಸೇವಾ ಸಂಸ್ಥೆ ಅಧ್ಯಕ್ಷ ಬಿ.ಸಿ. ಉಮಾಪತಿ ಮಾತನಾಡಿ, ಪ್ರತ್ಯೇಕವಾಗಿರುವ ವೀರಶೈವ ಧರ್ಮದಲ್ಲಿನ 36 ಒಳ ಪಂಗಡಗಳ ಆಚರಣೆ, ಧಾರ್ಮಿಕ ಪದ್ಧತಿ, ವಿಧಿ- ವಿಧಾನ ಒಂದೇ ಆಗಿವೆ. ವೀರಶೈವ ಮಹಾಸಭಾ ನವೆಂಬರ್‌ನಲ್ಲಿ ಬೆಂಗಳೂರಿನಲ್ಲಿ ಹಮ್ಮಿಕೊಂಡಿರುವ ಹೋರಾಟಕ್ಕೆ ಎಲ್ಲ ರೀತಿಯ ಸಹಕಾರ ನೀಡಲಾಗುವುದು.

ನಾವೆಲ್ಲರೂ ನಮ್ಮ ಮುಂದಿನ ಪೀಳಿಗೆಯವರಿಗೆ ಸರ್ಕಾರದಿಂದ ಸೌಲಭ್ಯ ದೊರೆಯುವಂತಾಗಲು ಹೋರಾಟಕ್ಕೆ ಸಹಕರಿಸಬೇಕು ಎಂದು ಮನವಿ ಮಾಡಿದರು. ವೀರಶೈವ ಪಂಚಮಸಾಲಿ ಸಮಾಜ ಅಲ್ಪಸಂಖ್ಯಾತ ಸಮಾಜ. ನಮ್ಮಲ್ಲೂ ಸಾಕಷ್ಟು ಸಂಖ್ಯೆಯಲ್ಲಿ ಬಡವರು ಇದ್ದಾರೆ. ಇತರೆ ಅಲ್ಪಸಂಖ್ಯಾತ ಸಮಾಜಕ್ಕೆ ನೀಡಿದಂತೆ ಎಲ್ಲ ರೀತಿಯ ಸೌಲಭ್ಯವನ್ನ ವೀರಶೈವ ಪಂಚಮಸಾಲಿ ಸಮಾಜಕ್ಕೂ ನೀಡಬೇಕು.

ನಮ್ಮ ಸಮಾಜ ಒಳಗೊಂಡಂತೆ ಎಲ್ಲಾ ಸಮಾಜ, ಧರ್ಮದಲ್ಲಿನ ಆರ್ಥಿಕ ಹಿಂದುಳಿದವರಿಗೆ ಸರ್ಕಾರ ಮೀಸಲಾತಿ ಸೌಲಭ್ಯ ನೀಡಬೇಕು ಎಂದು ಒತ್ತಾಯಿಸಿದರು. ನಮ್ಮ ಹಕ್ಕು, ಸೌಲಭ್ಯ ಪಡೆಯುವಂತಾಗಲು, ಸಾಮಾಜಿಕ, ರಾಜಕೀಯ ಮತ್ತು ಆರ್ಥಿಕ ಕ್ಷೇತ್ರದಲ್ಲಿ ಮುಂದೆ ಬರುವಂತಾಗಲು ಸಮಾಜ ಬಾಂಧವರು ಮಕ್ಕಳನ್ನು ಉತ್ತಮ, ಉನ್ನತ ವಿದ್ಯಾವಂತರನ್ನಾಗಿ ಮಾಡಬೇಕು. ಸಮಾಜ ಬಾಂಧವರು ಸಹ ಕೆಲಸಕ್ಕೆ ಹೆಚ್ಚಿನ ಮಹತ್ವ ನೀಡಬೇಕು. ಯುವ ಜನಾಂಗ ದುಶ್ಚಟ, ವ್ಯಸನದಿಂದ ದೂರ ಇರಬೇಕು ಎಂದು ತಿಳಿಸಿದರು.  

Advertisement

Udayavani is now on Telegram. Click here to join our channel and stay updated with the latest news.

Next