ನವದೆಹಲಿ: ರೈತರಿಗೆ ಕಡಿಮೆ ದರದಲ್ಲಿ ಪೋಷಕಾಂಶಯುಕ್ತ ರಸಗೊಬ್ಬರಗಳು ಲಭ್ಯವಾಗಿಸುವ ನಿಟ್ಟಿನಲ್ಲಿ ಯೂರಿಯಾ ಹೊರತಾದ ರಸಗೊಬ್ಬರಗಳ ಮೇಲಿನ ಸಬ್ಸಿಡಿ ಹೆಚ್ಚಳ ಮಾಡಲು ಕೇಂದ್ರ ಸಂಪುಟ ಸಭೆ ನಿರ್ಧರಿಸಿದೆ.
ನೈಟ್ರೋಜನ್ ಕಿಲೋಗೆ ರೂ. 18.90, ಪಾಸ್ಫರಸ್ ಕಿಲೋಗೆ ರೂ. 15.11, ಪೊಟ್ಯಾಷ್ ಕಿಲೋಗೆ ರೂ. 11.12, ಸಲ್ಫರ್ ಕಿಲೋಗೆ ರೂ. 3.56 ನಿಗದಿ ಪಡಿಸಲಾಗಿದೆ. ಇದರಿಂದಾಗಿ ಸರ್ಕಾರಕ್ಕೆ 2019-20ರ ವಿತ್ತ ವರ್ಷದಲ್ಲಿ ಒಟ್ಟು 22,875 ಕೋಟಿ ರೂ. ಹೊರೆಯಾಗಲಿದೆ. ರೈತರು ರಸಗೊಬ್ಬರಗಳನ್ನು ಹಿತಮಿತವಾಗಿ ಬಳಸಬೇಕು ಎಂಬ ಉದ್ದೇಶಕ್ಕೆ ಪೋಷಕಾಂಶಯುಕ್ತ ರಸಗೊಬ್ಬರಗಳ ಮೇಲೆ ವಾರ್ಷಿಕ ಆಧಾರದಲ್ಲಿ ಸಬ್ಸಿಡಿ ನೀಡಲು 2010ರಿಂದ ಆರಂಭಿಸಿತ್ತು. ಇದರಲ್ಲಿ ಯೂರಿಯಾ ಹೊರತಾಗಿ ಇತರ ಅಗತ್ಯ ಪೋಷಕಾಂಶಗಳ ಮೇಲೆ ಸಬ್ಸಿಡಿ ಒದಗಿಸಲಾಗುತ್ತದೆ.
ಜಡ್ಜ್ಗಳ ಸಂಖ್ಯೆ ಏರಿಕೆ: ಸುಪ್ರೀಂಕೋರ್ಟ್‌ನಲ್ಲಿ ಪ್ರಕರಣಗಳ ಹೊರೆಯನ್ನು ಕಡಿಮೆ ಮಾಡುವ ನಿಟ್ಟಿನಲ್ಲಿ, ನ್ಯಾಯಮೂರ್ತಿಗಳ ಹುದ್ದೆ ಸಂಖ್ಯೆಯನ್ನು 30ರಿಂದ 33ಕ್ಕೆ ಏರಿಕೆ ಮಾಡಲು ಕೇಂದ್ರ ಸಂಪುಟ ನಿರ್ಧರಿಸಿದೆ. ಸದ್ಯ ಸುಪ್ರೀಂಕೋರ್ಟ್‌ನಲ್ಲಿ ಮುಖ್ಯ ನ್ಯಾಯಮೂರ್ತಿ ಹೊರತುಪಡಿಸಿ 30 ನ್ಯಾಯಮೂರ್ತಿಗಳನ್ನು ನೇಮಿಸಲು ಅವಕಾಶವಿದೆ. ಕೇಂದ್ರ ಸರ್ಕಾರದ ಈ ನಿರ್ಧಾರದಿಂದ ಇನ್ನೂ ಮೂರು ನ್ಯಾಯಮೂರ್ತಿಗಳನ್ನು ನೇಮಿಸಬಹುದಾಗಿದೆ. 2016ರಲ್ಲಿ ಕೇಂದ್ರ ಸರ್ಕಾರವು ಹೈಕೋರ್ಟ್ ಜಡ್ಜ್ಗಳ ಹುದ್ದೆ ಸಂಖ್ಯೆಯನ್ನು 906 ರಿಂದ 1079ಕ್ಕೆ ಏರಿಕೆ ಮಾಡಿತ್ತು.
ಚಿಟ್ ಫಂಡ್ ತಿದ್ದುಪಡಿ ಮಸೂದೆ: ಬುಧವಾರ ಸಭೆ ಸೇರಿದ ಕೇಂದ್ರ ಸಂಪುಟ ಇತರ ಕೆಲವು ಮಹತ್ವದ ತೀರ್ಮಾನವನ್ನೂ ಕೈಗೊಂಡಿದೆ. ವಿದೇಶ ಹೂಡಿಕೆದಾರರಿಗೆ ವಿಶ್ವಾಸ ಮೂಡಿಸುವ ಉದ್ದೇಶದಿಂದ ವಿಶ್ವಸಂಸ್ಥೆಯ ಅಂತಾರಾಷ್ಟ್ರೀಯ ಚುಕ್ತಾ ಒಪ್ಪಂದಗಳಿಗೆ ಸಹಿ ಹಾಕಲು ಸಮ್ಮತಿ, ಚಿಟ್ ಫಂಡ್‌ನಲ್ಲಿ ಹೂಡಿಕೆ ಮಾಡಿದವರ ಹಿತಾಸಕ್ತಿಯನ್ನು ಕಾಪಾಡುವ ದೃಷ್ಟಿಯಿಂದ ಚಿಟ್ ಫಂಡ್ ತಿದ್ದುಪಡಿ ಮಸೂದೆಗೂ ಅನುಮೋದನೆ ನೀಡಲಾಗಿದೆ. ಇದೇ ವೇಳೆ ಬಾಹ್ಯಾಕಾಶ ಕ್ಷೇತ್ರದಲ್ಲಿ ರಷ್ಯಾ ಜೊತೆ ಸಂಬಂಧ ಸುಧಾರಣೆಗಾಗಿ ಮಾಸ್ಕೋದಲ್ಲಿ ತಾಂತ್ರಿಕ ಸಂಪರ್ಕ ಕೇಂದ್ರವನ್ನು ಇಸ್ರೋ ಸ್ಥಾಪಿಸಲು ಅನುಮತಿ ನೀಡಲಾಗಿದೆ.