ಚಳ್ಳಕೆರೆ: ಆಧುನಿಕತೆ ಹೆಸರಿನಲ್ಲಿ ನಾವೆಲ್ಲರೂ ನಮ್ಮ ಆರೋಗ್ಯವೂ ಸೇರಿದಂತೆ ಹಲವಾರು ವಿಷಯಗಳಲ್ಲಿ ಹಿನ್ನಡೆ ಅನುಭವಿಸುತ್ತಿದ್ದೇವೆ. ಆದ್ದರಿಂದ ಭವಿಷ್ಯವನ್ನು ಉತ್ತಮ ಪಡಿಸಿಕೊಳ್ಳಲು ಸದೃಢ ಆರೋಗ್ಯ ಮುಖ್ಯ. ಈ ನಿಟ್ಟಿನಲ್ಲಿ ಸ್ವದೇಶಿ ವಸ್ತುಗಳ ಉತ್ಪಾದನೆ ಮತ್ತು ಮಾರಾಟಕ್ಕೆ ಎಲ್ಲರೂ ಬೆಂಬಲಿಸಬೇಕೆಂದು ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಶಶಿಕಲಾ ಸುರೇಶ್ ಬಾಬು ಹೇಳಿದರು.
ನಗರದ ಬೆಂಗಳೂರು ರಸ್ತೆಯಲ್ಲಿ ಆರಂಭಗೊಂಡ ಸ್ವದೇಶಿ ಉತ್ಪನ್ನಗಳ ಮಾರಾಟ ಮಳಿಗೆ ಉದ್ಘಾಟಿಸಿ ಕಂಬಳಿ ಮಾರುಕಟ್ಟೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ನಾವು ನಗರ ಹಾಗೂ ಗ್ರಾಮೀಣ ಪ್ರದೇಶಗಳಲ್ಲಿ ಯಾರಾದರೂ ಶತಾಯುಷಿಗಳು ಇದ್ದಾರೆಯೇ ಎಂದು ನೋಡುವಂತಹ ಸ್ಥಿತಿ ಉಂಟಾಗಿದೆ. ಈ ಹಿಂದೆ ನಮ್ಮ ಪೂರ್ವಜರು 100 ರಿಂದ 120 ವರ್ಷಗಳ ತನಕ ಬದುಕಿದ ನಿದರ್ಶನಗಳಿವೆ. ಆರೋಗ್ಯವಂತರಾಗಿ, ಕ್ರಿಯಾಶೀಲವಾಗಿ ಕಾರ್ಯ ನಿರ್ವಹಿಸುತ್ತಿದ್ದರು.ಇಂದು ನಾವು ತುಂಬಾ ಅಶಕ್ತರಂತೆ ಕಾಣಲು ಮೂಲ ಕಾರಣ ಆಧುನಿಕ ವಸ್ತುಗಳು. ಆದ್ದರಿಂದ ಸ್ವದೇಶಿ ನಿರ್ಮಿತ ವಸ್ತುಗಳು ಹಾಗೂ ಸಾವಯವ ಗೊಬ್ಬರ ಬಳಕೆಯ ಬಗ್ಗೆ ಗಮನ ಹರಿಸಬೇಕಿದೆ ಎಂದರು.
ಮಂಜುನಾಥ ಸಾವಯವ ಮತ್ತು ಆರ್ಯುವೇದ ಕೇಂದ್ರದ ಮುಖ್ಯಸ್ಥ ಆರ್. ಮಲ್ಲೇಶಪ್ಪ ಮಾತನಾಡಿ, ಕಳೆದ ಒಂದು ವರ್ಷಗಳಿಂದ ಸ್ವದೇಶಿ ಗೃಹೋಪಯೋಗಿ ವಸ್ತುಗಳ ಬಳಕೆ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುತ್ತಿದ್ದೇವೆ. ಪ್ರತಿ ನಿತ್ಯ ಈ ವಸ್ತುಗಳ ಉಪಯೋಗದಿಂದ ಆರೋಗ್ಯ ಬದಲಾವಣೆಯ ಜೊತೆಗೆ ನೆಮ್ಮದಿಯ ಜೀವನ ನಡೆಸಬಹುದು ಎಂದು ತಿಳಿಸಿದರು.
ವ್ಯವಸ್ಥಾಪಕ ನಿರ್ದೇಶಕ ಕೆ.ಎಂ. ಸುರೇಶ್ ಮಾತನಾಡಿ, ಪ್ರಾರಂಭದ ಹಂತದಲ್ಲಿ ಸ್ವದೇಶಿ ವಸ್ತುಗಳ ಉತ್ಪಾದನೆಗೆ ಎಲ್ಲೆಡೆ ನೀರಸ ಪ್ರತಿಕ್ರಿಯೆ ವ್ಯಕ್ತವಾಗಿತ್ತು. ಆದಾಗ್ಯೂ ನಾವು ನಮ್ಮಲ್ಲೇ ಲಭ್ಯವಿರುವ ವಸ್ತುಗಳನ್ನು ಬಳಸಿಕೊಂಡು ಸ್ವದೇಶಿ ವಸ್ತುಗಳ ಉತ್ಪಾದನೆಗೆ ಮುಂದಾದೆವು. ಇಂದು ರಾಜ್ಯ ಮಟ್ಟದಲ್ಲಿ ಬೆಳೆದಿದ್ದು, ಲಕ್ಷಾಂತರ ಜನರ ಆರೋಗ್ಯ ಸುಧಾರಣೆಯಲ್ಲಿ ದೃಢ ಹೆಜ್ಜೆ ಇಟ್ಟಿದೆ ಎಂದರು.
ರೈತ ಸಂಘದ ಹಿರಿಯ ಉಪಾಧ್ಯಕ್ಷ ಕೆ.ಪಿ. ಭೂತಯ್ಯ, ಜಿಪಂ ಸದಸ್ಯ ಬಿ.ಪಿ. ಪ್ರಕಾಶ್‌ಮೂರ್ತಿ, ತಾಪಂ ಅಧ್ಯಕ್ಷ ಕೆ.ತಿಪ್ಪೇಸ್ವಾಮಿ, ನಗರಸಭಾ ಸದಸ್ಯೆ ಮಂಜುಳಾ ಪ್ರಸನ್ನಕುಮಾರ್, ಬಿ.ಎಸ್. ಅನುಸೂಯಮ್ಮ, ಕಂದಿಕೆರೆ ಸುರೇಶ್‌ಬಾಬು, ಎನ್. ಜಯರಾಂ, ಟಿ. ಮಲ್ಲಿಕಾರ್ಜುನ್, ಗಂಗಾಧರ, ಡಾ| ತಿಮ್ಮಾರೆಡ್ಡಿ, ಧನಂಜಯ, ಸಿ. ಲೋಕೇಶ್, ತ್ರಿಮೂರ್ತಿ ಮಾತನಾಡಿದರು.
ನಗರಸಭೆ ಅಧ್ಯಕ್ಷೆ ಸಿ.ಬಿ. ಜಯಲಕ್ಷ್ಮೀ ಕೃಷ್ಣಮೂರ್ತಿ ಅಧ್ಯಕ್ಷತೆ ವಹಿಸಿದ್ದರು. ಕುರುಗುಂಟೇಶ್ವರ ಸಾವಯವ ಕೃಷಿ ಕೇಂದ್ರದ ಅಧ್ಯಕ್ಷ ಎಂ. ಪಾತಲಿಂಗಪ್ಪ ಸ್ವಾಗತಿಸಿದರು. ಎಂ. ಸಂದೀಪ್ ವಂದಿಸಿದರು.