ಹೊಸದಿಲ್ಲಿ/ಬೆಂಗಳೂರು: ಒಮಿಕ್ರಾನ್ ಆತಂಕದ ನಡುವೆಯೇ ದೇಶದಲ್ಲಿ ಕೊರೊನಾ ಪ್ರಕರಣಗಳ ಸಂಖ್ಯೆಯಲ್ಲಿ ಭಾರೀ ಹೆಚ್ಚಳವಾಗಿದೆ. ಗುರುವಾರ ಒಟ್ಟು 13,154 ಕೇಸುಗಳು ಪತ್ತೆಯಾಗಿದ್ದು, ಇದು ಆತಂಕಕ್ಕೆಡೆ ಮಾಡಿಕೊಟ್ಟಿದೆ. 33 ದಿನಗಳ ಬಳಿಕ ದೇಶದಲ್ಲಿ 10 ಸಾವಿರಕ್ಕೂ ಹೆಚ್ಚು ಪ್ರಕರಣ ದೃಢಪಟ್ಟಿವೆ. ಮಹಾರಾಷ್ಟ್ರ ಮತ್ತು ದಿಲ್ಲಿಯಲ್ಲಿ ಮೂರನೇ ಅಲೆ ಶುರುವಾಗಿದೆ ಎಂದು ಅಲ್ಲಿನ ಸರಕಾರಗಳು ತಿಳಿಸಿವೆ.
ಕೇಂದ್ರ ಆರೋಗ್ಯ ಇಲಾಖೆಯ ಜಂಟಿ ಕಾರ್ಯದರ್ಶಿ ಲವ ಅಗರ್ವಾಲ್ ಅವರು ಪತ್ರಿಕಾಗೋಷ್ಠಿ ನಡೆಸಿ, ದೇಶದಲ್ಲಿ ಕೊರೊನಾ ಕೇಸುಗಳಲ್ಲಿ ಹೆಚ್ಚಳವಾಗುತ್ತಿರುವ ಬಗ್ಗೆ ಮಾಹಿತಿ ನೀಡಿದರು. ಒಮಿಕ್ರಾನ್‌ನಿಂದಲೇ ಪ್ರಕರಣ ಗಳ ಸಂಖ್ಯೆ 13 ಸಾವಿರಕ್ಕೂ ಹೆಚ್ಚು ದಾಖಲಾಗಿವೆ. ಅಲ್ಲದೆ, ಕೊರೊನಾ ಹೆಚ್ಚಳವಾಗುತ್ತಿರುವ ಕರ್ನಾಟಕ ಸಹಿತ ಎಂಟು ರಾಜ್ಯಗಳಿಗೆ ಕೇಂದ್ರ ಸರಕಾರ ಪತ್ರ ಬರೆದು ಅಗತ್ಯ ನಿಯಂತ್ರಣ ಕ್ರಮ ಕೈಗೊಳ್ಳುವಂತೆ ಸೂಚಿಸಿದೆ ಎಂದರು.
ಬೆಂಗಳೂರು, ಗುರುಗ್ರಾಮ, ಚೆನ್ನೈ, ಕೋಲ್ಕತಾ, ಅಹ್ಮದಾಬಾದ್‌ನಲ್ಲಿ ಕೇಸುಗಳ ಸಂಖ್ಯೆಯಲ್ಲಿ ಹೆಚ್ಚಳವಾಗುತ್ತಿದೆ. ಅದರಲ್ಲೂ ಮುಂಬಯಿ ಮತ್ತು ದಿಲ್ಲಿಯಲ್ಲಿ ಅತಿ ವೇಗದಲ್ಲಿದೆ ಎಂದು ಅಗರ್ವಾಲ್ ತಿಳಿಸಿದರು.
ದಿಲ್ಲಿ, ಮಹಾರಾಷ್ಟ್ರ, ಕೇರಳ, ಗುಜರಾತ್, ರಾಜಸ್ಥಾನ ಮತ್ತು ತೆಲಂಗಾಣದ 14 ಜಿಲ್ಲೆಗಳಲ್ಲಿ ಪಾಸಿಟಿವಿಟಿ ದರ ಶೇ.5ರಿಂದ 10ರ ಒಳಗಿದೆ. ಅಲ್ಲದೆ ಅಹ್ಮದಾಬಾದ್ ಮತ್ತು ಬೆಂಗಳೂರಿನಲ್ಲಿ ಒಮಿಕ್ರಾನ್ ಪ್ರಕರಣಗಳ ಸಂಖ್ಯೆ ಹೆಚ್ಚಾಗುತ್ತಿದೆ. ಮಹಾರಾಷ್ಟ್ರ, ದಿಲ್ಲಿ, ತಮಿಳುನಾಡು, ಕರ್ನಾಟಕ ಸಹಿತ ಕೆಲವು ರಾಜ್ಯಗಳಲ್ಲಿ ಗುರುವಾರ ಪ್ರಕರಣಗಳು ಹೆಚ್ಚಾಗಿವೆ ಎಂದು ತಿಳಿಸಿದರು.
Related Articles
ಒಮಿಕ್ರಾನ್ 961ಕ್ಕೆ ಏರಿಕೆ ಈ ಮಧ್ಯೆ ದೇಶದಲ್ಲಿ ಒಮಿಕ್ರಾನ್ ಕೇಸುಗಳ ಸಂಖ್ಯೆ ಗುರುವಾರ 961ಕ್ಕೆ ಏರಿಕೆಯಾಗಿದೆ.
ದೇಶದಲ್ಲಿ ಮೊದಲ ಒಮಿಕ್ರಾನ್ ಸಾವು :
ದೇಶದಲ್ಲಿ ಒಮಿಕ್ರಾನ್‌ನಿಂದಾಗಿ ಮೊದಲ ಸಾವಾಗಿದೆ. ಮಹಾರಾಷ್ಟ್ರದ ಪುಣೆಯ ಪಿಂಪ್ರಿ ಚಿಂಚವಾಡ ನಗರ ಪಾಲಿಕೆಯ ವ್ಯಾಪ್ತಿಯಲ್ಲಿರುವ ಯಶವಂತರಾವ್ ಚವಾಣ್ ಆಸ್ಪತ್ರೆಯಲ್ಲಿ ನೈಜೀರಿಯಾದ 52 ವರ್ಷದ ವ್ಯಕ್ತಿ ಡಿ.28ರಂದು ಹೃದಯಾಘಾತದಿಂದ ಮೃತಪಟ್ಟಿದ್ದಾರೆ. ಈ ವ್ಯಕ್ತಿ ಸಕ್ಕರೆ ಕಾಯಿಲೆಯ ಕಾರಣದಿಂದಾಗಿ ಹೃದಯಾಘಾತವಾಗಿದೆ ಎಂದು ಆಸ್ಪತ್ರೆ ಹೇಳಿತ್ತು. ಆದರೆ ರಾಷ್ಟ್ರೀಯ ವೈರಾಲಜಿ ಕೇಂದ್ರಕ್ಕೆ ಕಳುಹಿಸಲಾಗಿದ್ದ ಅವರ ಸ್ಯಾಂಪಲ್‌ನಲ್ಲಿ ಒಮಿಕ್ರಾನ್ ದೃಢಪಟ್ಟಿದೆ.