ಕೆಜಿಎಫ್: ಬಡವರಿಗೆ ಕಡಿಮೆ ಬೆಲೆಯಲ್ಲಿ ಉತ್ತಮ ದರ್ಜೆಯ ಔಷಧಿ ಕೊಡಬೇಕೆಂದು ಪ್ರಧಾನಿ ಮೋದಿ ಜಾರಿಗೆ ತಂದ ಜನೌಷಧಿ ಕೇಂದ್ರಗಳನ್ನು ಹೆಚ್ಚು ಮಾಡಬೇಕು ಎಂದು ಜಿಲ್ಲಾ ಆರೋಗ್ಯಾಧಿಕಾರಿಗಳಿಗೆ ಸಂಸದ
ಎಸ್. ಮುನಿಸ್ವಾಮಿ ಸೂಚಿಸಿದರು.
ನಗರದ ಸರ್ಕಾರಿ ಸಾರ್ವಜನಿಕ ಆಸ್ಪತ್ರೆಯಲ್ಲಿ ಜನೌಷಧಿ ಕೇಂದ್ರದ ಐದನೇ ವಾರ್ಷಿಕೋತ್ಸವ ಮತ್ತು ಪ್ರಧಾನಿ ನರೇಂದ್ರ ಮೋದಿ ನೇರ ಭಾಷಣವನ್ನು ಸಾರ್ವಜನಿಕ ವಾಗಿ ವೀಕ್ಷಿಸಿ ಮಾತನಾಡಿದ ಅವರು, ಆರೋಗ್ಯದ ಮುಂದೆ ದುಡ್ಡು ಮುಖ್ಯವಲ್ಲ. ದೇಶದ ಕಟ್ಟ ಕಡೆಯ ವ್ಯಕ್ತಿ ಕೂಡ ಆರೋಗ್ಯ ದಿಂದರಬೇಕು ಎಂಬುದು ಪ್ರಧಾನಿಯವರ ಆಶಯವಾಗಿದೆ ಎಂದು ಹೇಳಿದರು.
ಭಾರತದಲ್ಲಿ 5 ಸಾವಿರಕ್ಕೂ ಹೆಚ್ಚು ಜನೌಷಧಿ ಕೇಂದ್ರ ತೆರೆಯಲಾಗಿದೆ. ರೋಗಿಗಳು ತಮ್ಮ ಔಷಧಿ ಬಿಲ್‌ನಲ್ಲಿ ಶೇ.60 ರಿಂದ 70 ರಷ್ಟು ಕಡಿಮೆ ಬೆಲೆಯಲ್ಲಿ ಔಷಧಿ ಕೊಳ್ಳುತ್ತಿದ್ದಾರೆ. ದೇಶದಲ್ಲಿ ಎಷ್ಟೋ ಪ್ರಧಾನ ಮಂತ್ರಿಗಳು ಬಂದು ಹೋದರು. ಆದರೆ, ಟೀ ಮಾರುತ್ತಿದ್ದ ಪ್ರಧಾನಿಗೆ ಜನರ ಕಷ್ಟ ಚೆನ್ನಾಗಿ ಗೊತ್ತು. ಆದ್ದರಿಂದಲೇ ಬಡವರ ಬಗ್ಗೆ ಕಾಳಜಿ ವಹಿಸಿದ್ದಾರೆ ಎಂದು ಹೇಳಿದರು. ಕೋಲಾರ ಜಿಲ್ಲೆಯಲ್ಲಿ ಏಳು ಜನೌಷಧಿ ಕೇಂದ್ರಗಳು ಇವೆ. ಇನ್ನೂ ಹೆಚ್ಚಿನ ಸಂಖ್ಯೆಯಲ್ಲಿ ಆಗಬೇಕು. ಫಾರ್ಮಸಿ ಮುಗಿಸಿರುವ ನಿರುದ್ಯೋಗಿಗಳಿಗೆ ಹೋಬಳಿ ಮಟ್ಟದಲ್ಲಿ ಜನೌಷಧಿ ಕೇಂದ್ರ ಸ್ಥಾಪಿಸಬೇಕು. ಅದರಲ್ಲಿ 700ಕ್ಕೂ ಹೆಚ್ಚು ಔಷಧಿಗಳು ಸಿಗುತ್ತಿವೆ. ದೇಶದ ಆರೋಗ್ಯ ಕಾಪಾಡುವುದು ಎಲ್ಲರ ಕರ್ತವ್ಯ. ಸಾಮಾನ್ಯ ಜನರಿಗೆ ಅರಿವು ಮೂಡಿಸಿ ಇಂತಹ ಕೇಂದ್ರಗಳಲ್ಲಿ ಔಷಧಿ ಖರೀದಿ ಮಾಡಬೇಕು ಎಂದರು.
ಜಿಲ್ಲಾ ಆರೋಗ್ಯಾಧಿಕಾರಿ ಡಾ.ವಿಜಯ ಕುಮಾರ್, ಜಿಲ್ಲಾ ಶಸ್ತ್ರ ಚಿಕಿತ್ಸಕ ಡಾ.ಶಿವ ಕುಮಾರ್, ಬಿಜೆಪಿ ಜಿಲ್ಲಾಧ್ಯಕ್ಷ ವೇಣು ಗೋಪಾಲ್, ಜನೌಷಧಿ ಕೇಂದ್ರದ ಸುರೇಶ್, ಜಿಪಂ ಸದಸ್ಯರಾದ ಜಯಪ್ರಕಾಶ್ ನಾಯ್ಡು, ಬಿ.ವಿ ಮಹೇಶ್, ಮುಖಂಡರಾದ ಸುರೇಶ್ ನಾರಾಯಣ್ ಕುಟ್ಟಿ, ಕಮಲ್, ಗ್ರಾಮಾಂತರ ಪ್ರಧಾನ ಕಾರ್ಯದರ್ಶಿ ಹೇಮಾರೆಡ್ಡಿ, ಕಾರ್ಯದರ್ಶಿ ರಾಮಕೃಷ್ಣ ರೆಡ್ಡಿ(ಹೆಗಡೆ), ಎಸ್ಸಿ ಮೋರ್ಚಾ ಅಧ್ಯಕ್ಷ ಕೃಷ್ಣಮೂರ್ತಿ ಹಾಜರಿದ್ದರು.