Advertisement

ಮತದಾನ ಪ್ರಮಾಣ ಏರಿಕೆ ಉತ್ತಮ ಬೆಳವಣಿಗೆ

07:48 PM Jan 25, 2023 | Team Udayavani |

ಬೆಂಗಳೂರು: ವರ್ಷದಿಂದ ವರ್ಷಕ್ಕೆ ಮತದಾನದ ಪ್ರಮಾಣ ಹೆಚ್ಚಾಗುತ್ತಿರುವುದು ಉತ್ತಮ ಬೆಳವಣಿಗೆಯಾಗಿದೆ. ಮತದಾನ ನಮ್ಮ ಹಕ್ಕು ಮಾತ್ರವಲ್ಲದೇ ಕರ್ತವ್ಯವೂ ಆಗಿದೆ ಎಂದು ರಾಜ್ಯಪಾಲ ಥಾವರ್‌ ಚಂದ್‌ ಗೆಹ್ಲೋಟ್ ಹೇಳಿದರು.

Advertisement

ಟೌನ್‌ಹಾಲ್‌ನಲ್ಲಿ ಬುಧವಾರ ಹಮ್ಮಿಕೊಂಡಿದ್ದ “ರಾಷ್ಟ್ರೀಯ ಮತದಾರರ ದಿನಾಚರಣೆ-2023′ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ಆಸ್ಟ್ರೇಲಿಯಾ, ಪೇರು, ಅರ್ಜೆಂಟೀನಾ ಸಹಿತ ಹಲವು ದೇಶಗಳಲ್ಲಿ ಮತದಾನ ಕಡ್ಡಾಯವಾಗಿದೆ. ಮತದಾನ ಮಾಡದಿದ್ದರೆ ಶಿಕ್ಷೆ ಮತ್ತು ದಂಡ ವಿಧಿಸಲಾಗುತ್ತದೆ. ಭಾರತದಲ್ಲಿ ಸಾಕಷ್ಟು ಚರ್ಚೆಗಳ ಬಳಿಕ ಮತದಾನ ಕಡ್ಡಾಯ ಮಾಡದಿರಲು ತೀರ್ಮಾನಿಸಲಾಗಿದೆ ಎಂದು ಹೇಳಿದರು.

ಕರ್ನಾಟಕ ಚುನಾವಣ ಆಯೋಗದಿಂದ ಯಾವುದೇ ಅರ್ಹ ಮತದಾರರ ಹೆಸರನ್ನು ಬಿಟ್ಟು ಹೋಗಬಾರದು ಎಂಬುದನ್ನು ಗಮನದಲ್ಲಿಟ್ಟುಕೊಂಡು ಅರ್ಹರ ಹೆಸರನ್ನು ಮತದಾರರ ಪಟ್ಟಿಯಲ್ಲಿ ಸೇರಿಸುವ ಮತ್ತು ಅನರ್ಹರ ಹೆಸರನ್ನು ತೆಗೆದುಹಾಕುವ ಕೆಲಸವನ್ನು ಮಾಡಲಾಗುತ್ತಿದೆ. ಚುನಾವಣೆಯನ್ನು ಸುಗಮವಾಗಿ ಮತ್ತು ಭಾಗವಹಿಸುವಂತೆ ಮಾಡಲು ಎಲ್ಲ ಮತಗಟ್ಟೆಗಳಲ್ಲಿ ವಿವಿಧ ರೀತಿಯ ಅಗತ್ಯ ಸೌಲಭ್ಯಗಳನ್ನು ಕೈಗೊಳ್ಳಲಾಗಿದೆ. ಮತದಾನಕ್ಕೆ ಅಗತ್ಯವಾದ ಸಖೀ ಮತಗಟ್ಟೆಗಳು, ದಿವ್ಯಾಂಗ ಮತಗಟ್ಟೆಗಳನ್ನು ಸ್ಥಾಪಿಸಲಾಗಿದೆ. ಸಾರಿಗೆ, ಗಾಲಿಕುರ್ಚಿಗಳು, ಸ್ವಯಂಸೇವಕರು, ಸೈನ್‌ ಇಂಟಪ್ರಿಟರ್‌ಗಳು, ಮ್ಯಾಗ್ನಿಫೈಯಿಂಗ್‌ ಲೆನ್ಸಗಳು ಮತ್ತು ಪೋಸ್ಟಲ್‌ ಬ್ಯಾಲೆಟ್‌ ಇತ್ಯಾದಿಗಳಿಗೆ ವ್ಯವಸ್ಥೆಗಳನ್ನು ಮಾಡಲಾಗಿದೆ. ದೇಶದ ಪ್ರತಿಯೊಬ್ಬ ಮತದಾರರು ಜಾಗೃತರಾಗಿರಬೇಕು ಮತ್ತು ದೇಶದ ಹಿತಕ್ಕಾಗಿ, ದೇಶದ ಅಭಿವೃದ್ಧಿಗಾಗಿ ಮತ ಚಲಾಯಿಸಬೇಕು ಎಂದರು.

ದೇಶದ ನಾಯಕತ್ವದಲ್ಲಿ ಯುವಕರ ಪಾತ್ರ ಮುಖ್ಯ
ಪ್ರಜಾಪ್ರಭುತ್ವದ ಸಂಕೇತವಾದ ಭಾರತೀಯ ಸಂವಿಧಾನದಲ್ಲಿ ಸ್ವತಂತ್ರ ಚುನಾವಣ ಆಯೋಗ ಮತ್ತು ಚುನಾವಣ ಪ್ರಕ್ರಿಯೆಯ ಪರಿಕಲ್ಪನೆಯು ಸಮಾನತೆ ಮತ್ತು ಸ್ವಾತಂತ್ರÂದ ಹಕ್ಕಿನೊಂದಿಗೆ ಪ್ರತಿಯೊಬ್ಬ ವ್ಯಕ್ತಿಯ ಮತವನ್ನು ಪ್ರಮುಖವಾಗಿಸುತ್ತದೆ. 18ರಿಂದ 24 ವರ್ಷದೊಳಗಿನ ಹೆಚ್ಚಿನ ಯುವಕರು ಮತ್ತು ಇತರ ಕೆಲವರು ಮತದಾನದಲ್ಲಿ ಹೆಚ್ಚು ಆಸಕ್ತಿ ವಹಿಸುವುದಿಲ್ಲ ಎಂದು ಅನೇಕ ಅಂಕಿ-ಅಂಶಗಳು ತೋರಿಸುತ್ತವೆ. ಯುವಕರು ಮುಂದೆ ಬಂದು ದೇಶದ ನಾಯಕತ್ವದಲ್ಲಿ ತಮ್ಮ ಪಾತ್ರವನ್ನು ನಿರ್ವಹಿಸಬೇಕು. ಚುನಾವಣೆಗಳಲ್ಲಿ ಮತದಾನ ಗಣರಾಜ್ಯಕ್ಕೆ ಯಜ್ಞವಿದ್ದಂತೆ. ಒಂದು ವೋಟು ಹಾಕದಿದ್ದರೆ ಏನಾಗುತ್ತದೋ ಎಂದು ಕೆಲವರು ಚುನಾವಣ ಸಮಯದಲ್ಲಿ ತಮ್ಮ ಮತವನ್ನು ಬಳಸುವುದಿಲ್ಲ. ಹಲವು ಬಾರಿ ಗೆಲುವು ಅಥವಾ ಸೋಲಿನ ನಿರ್ಧಾರವು ಕೇವಲ ಒಂದು ಮತವನ್ನು ಅವಲಂಬಿಸಿರುತ್ತದೆ.

ಪ್ರಜಾಪ್ರಭುತ್ವವು ಜನರಿಂದ ಮತ್ತು ಜನರಿಗಾಗಿ ನಡೆಸುವ ಸರಕಾರವಾಗಿದೆ. ಪ್ರಜಾಪ್ರಭುತ್ವವು ಆಡಳಿತದಲ್ಲಿ ಸಾರ್ವಜನಿಕರು ನೇರವಾಗಿ ಅಥವಾ ಪರೋಕ್ಷವಾಗಿ ಭಾಗವಹಿಸುವ ಆಡಳಿತ ವ್ಯವಸ್ಥೆಯಾಗಿದೆ. ಚುನಾವಣ ಪ್ರಕ್ರಿಯೆಯಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳಲು ನಮ್ಮ ಸಂವಿಧಾನವು ಮತದಾರರಿಗೆ ಜವಾಬ್ದಾರಿಯನ್ನು ಕೊಟ್ಟಿದೆ ಎಂದರು.

Advertisement

ವಿವಿಧ ಚಟುವಟಿಕೆ
ಭಾರತದ ಚುನಾವಣ ಆಯೋಗವು ಸ್ವೀಪ್‌ ಅಡಿಯಲ್ಲಿ ವಿವಿಧ ಚಟುವಟಿಕೆಗಳನ್ನು ನಡೆಸುತ್ತದೆ ಅಂದರೆ ವ್ಯವಸ್ಥಿತ ಮತದಾರರ ಶಿಕ್ಷಣ ಮತ್ತು ಚುನಾವಣ ಭಾಗವಹಿಸುವಿಕೆ. ಹೊಸ ಮತದಾರರಲ್ಲಿ ನೋಂದಣಿ ಮತ್ತು ಮತದಾನದ ಬಗ್ಗೆ ಜಾಗೃತಿ ಮೂಡಿಸಲು, ಮತದಾರರ ಶಿಕ್ಷಣ ಮತ್ತು ಮಾಹಿತಿಗಾಗಿ ವಿಶೇಷ ಅಭಿಯಾನಗಳನ್ನು ಸಹ ಆಯೋಜಿಸಲಾಗಿದೆ. ಎಲೆಕ್ಟ್ರಾನಿಕ್‌ ಮಾಧ್ಯಮ, ಇವಿಎಂ, ವಿವಿ-ಪಿಇಟಿ ಇತ್ಯಾದಿಗಳ ಮೂಲಕ ಮತದಾರರ ಶಿಕ್ಷಣಕ್ಕಾಗಿ ಕೈಗೊಂಡ ಕ್ರಮವು ಭಾರತದ ಚುನಾವಣ ಆಯೋಗವನ್ನು ವಿಶ್ವ ಮಟ್ಟದಲ್ಲಿ ಗುರುತಿಸುವಂತೆ ಮಾಡಿದ್ದು, ಶ್ಲಾಘನೀಯ ಕಾರ್ಯವಾಗಿದೆ. ಮತದಾರರ ಗುರುತಿನ ಚೀಟಿಯು ಒಂದು ಕ್ರಾಂತಿಕಾರಿ ಹೆಜ್ಜೆ ಹಾಗೂ ಪ್ರಜಾಪ್ರಭುತ್ವದ ಮೈಲಿಗಲ್ಲಾಗಿದೆ ಎಂದರು.

ಕರ್ನಾಟಕದ ಮುಖ್ಯ ಚುನಾವಣಾಧಿಕಾರಿ ಮನೋಜ್‌ ಕುಮಾರ್‌ ಮೀನಾ, ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್‌ ಗಿರಿನಾಥ್‌ ಮತ್ತಿತರರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next