Advertisement

ಅಪ್ಪು ಪ್ರೇರಣೆಯಿಂದ ಅಂಗಾಂಗ ದಾನ ಹೆಚ್ಚಳ

03:15 PM Oct 29, 2022 | Team Udayavani |

ಬೆಂಗಳೂರು: ಖ್ಯಾತ ನಟ ಪುನೀತ್‌ ರಾಜ್‌ಕುಮಾರ್‌ (ಅಪ್ಪು) ಅವರು ನಮ್ಮನ್ನೆಲ್ಲ ಅಗಲಿ ಒಂದು ವರ್ಷವೇ ಕಳೆಯಿತು. ಆದರೆ, ಅವರ ನೆನಪುಗಳು ಮಾತ್ರ ಇನ್ನೂ ಸದಾ ಹಸಿಯಾಗಿವೆ.

Advertisement

ಪುನೀತ್‌ ನಟನೆಗೆ ಮಾತ್ರ ಸೀಮಿತವಾಗದೇ, ಪರೋಕ್ಷವಾಗಿ ವಿವಿಧ ರೀತಿಯ ಸಮಾಜ ಸೇವೆಯಲ್ಲಿ ತೊಡಗಿದ್ದರು. ಸಾವಿನ ನಂತರ ಕಣ್ಣುಗಳನ್ನು ದಾನ ಮಾಡಿ, ನಾಲ್ಕು ಜನರಿಗೆ ಬೆಳಕಾಗಿರುವುದು ನಮಗೆಲ್ಲಾ ಗೊತ್ತೇ ಇದೆ.  ಅವರ ಸ್ಫೂರ್ತಿ, ಪ್ರೇರಣೆಯಿಂದ ಪುನೀತ್‌ ಅವರ ಅಭಿಮಾನಿಗಳು ಸೇರಿದಂತೆ ನಾಡಿನಾದ್ಯಂತ ಸಹಸ್ರಾರು ಮಂದಿ ನೇತ್ರದಾನ ಮಾತ್ರವಲ್ಲದೇ, ಅಂಗಾಗ ದಾನ ಹಾಗೂ ಅನ್ನದಾನ ಮಾಡಲು ಮುಂದಾಗಿದ್ದಾರೆ.

ಪುನೀತ್‌ ಅವರನ್ನು ಒಬ್ಬ ದೇವರಂತೆ ಕಾಣುವ ನಾಡಿನ ಅಭಿಮಾನಿಗಳು ಅವರ ದಾರಿಯಲ್ಲಿ ನಡೆಯುತ್ತಿದ್ದಾರೆ. ಕಳೆದ ಒಂದು ವರ್ಷದಲ್ಲಿ ಪ್ರತಿ ತಿಂಗಳು 10ರಿಂದ 15 ಜನರು ನೇತ್ರದಾನ ಮಾಡುತ್ತಿದ್ದು, ಒಂದು ವರ್ಷದಲ್ಲಿ 150ಕ್ಕೂ ಹೆಚ್ಚು ಜನ ತಮ್ಮ ಕಣ್ಣುಗಳನ್ನು ದಾನ ಮಾಡಿದ್ದಾರೆ ಎಂದು ಮಿಂಟೋ ಕಣ್ಣಿನ ಆಸ್ಪತ್ರೆಯ ಸುಜಾತ ರಾಥೋಡ್‌ ತಿಳಿಸುತ್ತಾರೆ. ಕೋವಿಡ್‌ ನಂತರ ಕಣ್ಣುಗಳನ್ನು ದಾನ ಮಾಡುವವರ ಸಂಖ್ಯೆ ಹೆಚ್ಚಾಗಿದ್ದು, ಪುನೀತ್‌ ಸಾವಿನ ನಂತರ ಮತ್ತಷ್ಟು ಜಾಸ್ತಿಯಾಗಿದೆ. ಅದರಲ್ಲೂ 30-35 ವರ್ಷದ ಯುವಕರು ಅಧಿಕ ಸಂಖ್ಯೆಯಲ್ಲಿದ್ದಾರೆ. ಒಂದು ವರ್ಷದಲ್ಲಿ 2500ಕ್ಕೂ ಹೆಚ್ಚು ಜನ ನೇತ್ರದಾನ ಮಾಡಲು ಪ್ಲೆಡ್ಜ್(ಪ್ರತಿಜ್ಞೆ) ಮಾಡಿದ್ದಾರೆ ಎಂದು ತಿಳಿಸಿದರು.

ಕಣ್ಣುಗಳನ್ನು ಮಾತ್ರವಲ್ಲದೇ, ದೇಹದ ಅಂಗಾಂಗ ದಾನ ಮಾಡುವವರ ಸಂಖ್ಯೆಯೂ ಅಧಿಕವಾಗಿದೆ. ಕಿಡ್ನಿ, ಲಿವರ್‌, ಹೃದಯ, ಶ್ವಾಸಕೋಶ, ಮೆದುಳು, ಸಣ್ಣ ಕರಳನ್ನು ದಾನ ಮಾಡಿದ್ದಾರೆ. ಇದುವರೆಗೂ ಒಟ್ಟು 33,866 ದಾನಿಗಳು ವಿವಿಧ ಅಂಗಾಂಗಳ ದಾನ ಮಾಡುವುದಾಗಿ ಪ್ರತಿಜ್ಞೆ(ಪ್ಲೆಡ್ಜ್) ಮಾಡಿದ್ದು, ಇದರಲ್ಲಿ 2020ರಲ್ಲಿ 35 ಜನ ದಾನಿಗಳು 167 ಅಂಗಾಂಗಗಳನ್ನು ದಾನ ಮಾಡಿದ್ದರೆ, 2021ರಲ್ಲಿ 70 ಜನ ದಾನಿಗಳು 284 ಅಂಗಾಂಗಗಳನ್ನು ದಾನ ಮಾಡಿದ್ದಾರೆ. ಅಷ್ಟೇ ಅಲ್ಲದೇ, 2022ರಲ್ಲಿ ಅಕ್ಟೋಬರ್‌ ತಿಂಗಳವರೆಗೆ 112 ದಾನಿಗಳು 563 ಅಂಗಾಂಗಗಳನ್ನು ದಾನ ಮಾಡಿದ್ದಾರೆ. ಅದರಲ್ಲಿ 174 ಕಾರ್ನಿಯಾ, 163 ಕಿಡ್ನಿ, 97 ಲಿವರ್‌, 32 ಹೃದಯದ ಭಾಗವನ್ನು ದಾನ ಮಾಡಿರುವ ಬಗ್ಗೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ವೆಬ್‌ಸೈಟ್‌ “ಜೀವಸಾರ್ಥಕತೆ’ಯಲ್ಲಿ ದಾಖಲಾಗಿದೆ.

85 ಸಾವಿರ ಜನರಿಂದ ನೇತ್ರದಾನಕ್ಕೆ ಪ್ರತಿಜ್ಞೆ : ಅಕ್ಟೋಬರ್‌ನಲ್ಲಿ ಅಪ್ಪು ಅವರು ತಮ್ಮ ಎರಡು ಕಣ್ಣುಗಳನ್ನು ದಾನ ಮಾಡಿ, ನಾಲ್ವರಿಗೆ ಬೆಳಕಾದರು. ನಂತರ ನಾರಾಯಣ ನೇತ್ರಾಲ ಯದ ಮುಂದೆ ಪ್ರತಿಜ್ಞೆ ಮಾಡಲು ಸಾವಿರಾರು ಜನ ಸಾಲಿನಲ್ಲಿ ನಿಂತಿರುವುದು ಆಶ್ಚರ್ಯವಾಯಿತು. ಆಗ ತಕ್ಷಣವೇ ಆನ್‌ಲೈನ್‌ ಪ್ಲೆಡ್ಜ್ ವ್ಯವಸ್ಥೆ ಕಲ್ಪಿಸಲಾಯಿತು. 8884018800 ನಂಬರ್‌ಗೆ ಮಿಸ್‌ಕಾಲ್‌ ಕೊಟ್ಟು ನೇತ್ರದಾನ ಪ್ಲೆಡ್ಜ್ ಮಾಡಬಹುದು. ಕಳೆದ 28 ವರ್ಷದಲ್ಲಿ 68 ಸಾವಿರ ಜನರು ಪ್ಲೆಡ್ಜ್ ಮಾಡಿದ್ದರು ಹಾಗೂ 65 ಸಾವಿರ ಕಣ್ಣುಗಳನ್ನು ಸಂಗ್ರಹ ಮಾಡಿದ್ದೇವೆ. ಆದರೆ ಕಳೆದ ಒಂದು ವರ್ಷದಲ್ಲಿ 85 ಸಾವಿರ ಜನರು ನೇತ್ರದಾನಕ್ಕೆ ಪ್ಲೆಡ್ಜ್ ಮಾಡಿರುವುದು ದಾಖಲೆಯಾಗಿದೆ. ಜತೆಗೆ ಸಾವಿರಾರು ಜನರು ತಮ್ಮ ಕಣ್ಣುಗಳನ್ನು ದಾನ ಮಾಡಿದ್ದಾರೆ ಎಂದು ನಾರಾಯಣ ನೇತ್ರಾಲಯದ ವ್ಯವಸ್ಥಾಪಕ ನಿರ್ದೇಶಕ ಡಾ|ಭುಜಂಗಶೆಟ್ಟಿ ಮಾಹಿತಿ ನೀಡಿದ್ದಾರೆ.

Advertisement

ಅಂಗಾಂಗ ದಾನಕ್ಕೆ ಸಂಪರ್ಕಿಸಿ: ಅಂಗಾಂಗ ದಾನ ಮಾಡಲು ಇಚ್ಛಿಸಿದರವರು, https://www.jeevasartthakathe.karnataka.gov.in  ವೆಬ್‌ಸೈಟ್‌ಗೆ ಭೇಟಿ ನೀಡಬಹುದಾಗಿದೆ ಅಥವಾ 9845006768 ಸಂಪರ್ಕಿಸಬಹುದಾಗಿದೆ.

ಪುನೀತ್‌ ಸಾವಿನ ನಂತರ ಕಣ್ಣು ಹಾಗೂ ಅಂಗಾಂಗ ದಾನ ಮಾಡುವವರ ಸಂಖ್ಯೆ ಹೆಚ್ಚಾಗಿದ್ದು, ಅದರಲ್ಲೂ ಯುವಕರು ಮುಂದಿದ್ದಾರೆ. ಇದಕ್ಕೆ ಪುನೀತ್‌ ಸ್ಫೂರ್ತಿಯಾಗಿದ್ದಾರೆ. -ಡಾ.ಮಾನಸ ಎಚ್‌.ವಿ, ನೇತ್ರತಜ್ಞರು

-ಭಾರತಿ ಸಜ್ಜನ್‌

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next