Advertisement

ಬಂಡೀಪುರದಲ್ಲಿ ಹುಲಿಗಳ ಸಂಖ್ಯೆ ಹೆಚ್ಚಳ: ಡಾ.ರಮೇಶ್‌

01:29 PM Oct 07, 2022 | Team Udayavani |

ಗುಂಡ್ಲುಪೇಟೆ: ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶ ಆರಂಭವಾಗಿ 50 ವರ್ಷ ಕಳೆದಿದೆ. ಆ ವೇಳೆ ಕೇವಲ 13 ಹುಲಿಗಳಿದ್ದವು. ಪ್ರಸ್ತುತವಾಗಿ 170ಕ್ಕೂ ಹೆಚ್ಚು ಹುಲಿಗಳಿವೆ. ಇದು ಬಂಡೀಪುರ ಅಭಯಾ ರಣ್ಯದ ಸಾಧನೆ ಎಂದು ಬಂಡೀಪುರ ಅರಣ್ಯ ಸಂರಕ್ಷಣಾಧಿಕಾರಿ ಡಾ.ರಮೇಶ್‌ ಕುಮಾರ್‌ ಹೇಳಿದರು.

Advertisement

ತಾಲೂಕಿನ ಬಂಡೀಪುರ ಹುಲಿ ಸಂರಕ್ಷಿತಾ ಪ್ರದೇಶದ ಮೇಲುಕಾಮನಹಳ್ಳಿ ಸಫಾರಿ ಕೌಂಟರ್‌ ಹತ್ತಿದ ನಡೆದ 68ನೇ ವನ್ಯಜೀವಿ ಸಪ್ತಾಹದ ಸಮಾರೋಪ ಸಮಾರಂಭದಲ್ಲಿ ಮಾತನಾಡಿದರು.

200ಕ್ಕೂ ಹೆಚ್ಚು ಚಿರತೆ, 3440 ಆನೆ: ಬಂಡೀಪುರದಲ್ಲಿ 200ಕ್ಕೂ ಹೆಚ್ಚು ಚಿರತೆಗಳಿದ್ದು, 3440 ಆನೆಗಳಿವೆ. ಹುಲಿ ಮತ್ತು ವನ್ಯ ಪ್ರಾಣಿಗಳ ಸಂಖ್ಯೆ ಹೆಚ್ಚಾಗಲು ಅರಣ್ಯ ಇಲಾಖೆ ಸಿಬ್ಬಂದಿ ಮತ್ತು ಸುತ್ತಲಿನ ಗ್ರಾಮಸ್ಥರು, ಸ್ವ-ಸಹಾಯ ಸಂಸ್ಥೆಗಳು ಪ್ರಮುಖ ಪಾತ್ರ ವಹಿಸಿವೆ ಎಂದರು.

136 ಗ್ರಾಮಗಳಿಗೆ ಎಲ್‌ಪಿಜಿ ಗ್ಯಾಸ್‌: ಬಂಡೀಪುರ ಸಫಾರಿಯ ಶಾಲಾ ಮಕ್ಕಳ ಪ್ರವಾಸಕ್ಕಾಗಿ ಜಿಲ್ಲಾಧಿಕಾರಿಗಳು ಎರಡು ಬಸ್‌ ವ್ಯವಸ್ಥೆ ಮಾಡಿದ್ದಾರೆ. ಈ ಹಿನ್ನೆಲೆಯಲ್ಲಿ ಶಾಲಾ ಮಕ್ಕಳಿಗಾಗಿಯೇ ಕ್ಯಾಂಪ್‌ ಮಾಡಲು ಉದ್ದೇಶಿಸಲಾಗಿದೆ. ದೇಶದಲ್ಲಿ ಮೊಟ್ಟ ಮೊದಲ ಬಾರಿಗೆ ಜನತೆಗೆ 136 ಗ್ರಾಮಗಳಿಗೆ ಎಲ್‌ ಪಿಜಿ ಗ್ಯಾಸ್‌ ನೀಡಲಾಗಿದ್ದು, ಸಿಲಿಂಡರ್‌ ಕೂಡ ವಿತರಿಸಲು ಯೋಜನೆ ರೂಪಿಸಲಾಗಿದೆ ಎಂದರು.

ಕರ್ನಾಟಕದವರಿಗೆ ಪ್ರಶಸ್ತಿ: ವನ್ಯಜೀವಿ ಛಾಯಾಗ್ರಾಹಕ ತಿಪ್ಪೇಸ್ವಾಮಿ ಮಾತನಾಡಿ, 1973ರಲ್ಲಿ ನಮ್ಮ ಬಂಡೀಪುರ ಸಂಕ್ಷಿತ ಅರಣ್ಯ ಪ್ರಾರಂಭವಾಯಿತು. ಅಲ್ಲಿಂದ ಇಲ್ಲಿಯವರೆಗೂ ತನ್ನ ಸೊಬಗನ್ನು ಅಭಯಾರಣ್ಯ ದ್ವಿಗುಣ ಗೊಳಿಸುತ್ತಲೆ ಬಂದಿದೆ. ವನ್ಯಜೀವಿ ಛಾಯಾಗ್ರಾಹಕರಲ್ಲಿ ಅತಿ ಹೆಚ್ಚು ಮಂದಿ ಕರ್ನಾಟಕದವರೇ. ಅಂತಾರಾಷ್ಟ್ರೀಯ ಮಟ್ಟದಲ್ಲಿ ನಡೆಯುವ ಛಾಯಾಗ್ರಾಹಕ ಸ್ಪರ್ಧೆಯಲ್ಲಿ ಅಧಿಕ ಮಂದಿ ಕರ್ನಾಟಕದವರಿಗೆ ಪ್ರಶಸ್ತಿ ಲಭಿಸಿರುವುದು
ಹೆಮ್ಮೆಯ ಸಂಗತಿ ಎಂದರು.

Advertisement

ಮಕ್ಕಳಿಗೆ ಬಹುಮಾನ ವಿತರಣೆ: ಈ ಸಂದರ್ಭದಲ್ಲಿ ವಲಯ ಮಟ್ಟದಲ್ಲಿ ಆಯೋಜಿಸಲಾಗಿದ್ದ ವಿಭಾಗೀಯ ಸ್ಪರ್ಧೆಯಲ್ಲಿ ವಿಜೇತರಾಗಿದ್ದ ಮಕ್ಕಳಿಗೆ ಬಹುಮಾನ ವಿತರಣೆ ಮಾಡಲಾಯಿತು. ಇಲಾಖೆ ವತಿಯಿಂದ ವನ್ಯಜೀವಿ ಛಾಯಾಗ್ರಾಹಕ ಸ್ಪರ್ಧೆ ಆಯೋಜಿಸಲಾಗಿತ್ತು. ಇದರಲ್ಲಿ ಮಾಂಸಾಹಾರಿ ಮತ್ತು ಸಸ್ಯಾಹಾರಿ, ಪಕ್ಷಿ ಸಂಕುಲ ಕುರಿತಂತೆ ಛಾಯಾಗ್ರಹಣ ಸ್ಪರ್ಧೆಯಲ್ಲಿ ಹವ್ಯಾಸಿ ಛಾಯಾಗ್ರಾಹಕರ ಜೊತೆಯಲ್ಲೇ ಇಲಾಖೆಯ ಸಿಬ್ಬಂದಿಯೂ ಸಹ ಬಹುಮಾನ ಪಡೆದು
ಕೊಂಡರು. ಸಸ್ಯಾಹಾರಿ ಮತ್ತು ಮಾಂಸಹಾರಿ ವನ್ಯಪ್ರಾಣಿಗಳ ಉತ್ತಮ ಛಾಯಾಚಿತ್ರ ಸೆರೆ ಹಿಡಿದ ಸ್ಪರ್ದಿಗಳಿಗೆ ಪ್ರಶಸ್ತಿ ವಿತರಣೆ ಮಾಡಲಾಯಿತು.

ಕಾರ್ಯಕ್ರಮದಲ್ಲಿ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಡಾ.ಮಾಲತಿ ಪ್ರಿಯ, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯ ನಿರ್ವಾಹಣಾಧಿಕಾರಿ ಕೆ.ಎಂ.ಗಾಯತ್ರಿ, ಹಂಗಳ
ಗ್ರಾಪಂ ಅಧ್ಯಕ್ಷ ಎಚ್‌.ಎಂ.ಮಲ್ಲಪ್ಲ, ಉಪಾಧ್ಯಕ್ಷೆ ಗೀತಾ, ಜಂಟಿ ನಿರ್ದೇಶಕ ರಾಜೇಂದ್ರ, ತಾಪಂ ಇಓ ಶ್ರೀಕಂಠರಾಜೇ ಅರಸ್‌, ವನ್ಯ ಜೀವಿ ಪರಿಪಾಲಕ ಎಂ.ಕೆ.ನಂಜುಂಡರಾಜೇ ಅರಸ್‌, ಎಸಿಎಫ್ ಪರಮೇಶ್‌, ನವೀನ್‌ ಕುಮಾರ್‌, ರವೀಂದ್ರ, ಆರ್‌ ಎಫ್ಓ ನಾಗೇದ್ರ ನಾಯಕ, ಡಾ.ಲೋಕೇಶ್‌, ಶ್ರೀನಿವಾಸನಾಯಕ ಸೇರಿದಂತೆ ಅರಣ್ಯ ಇಲಾಖೆ ಸಿಬ್ಬಂದಿ, ಶಾಲಾ ಮಕ್ಕಳು ಹಾಗೂ ಸುತ್ತಲಿನ ಗ್ರಾಮಸ್ಥರು ಹಾಜರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next