ದೇಶದಲ್ಲಿ ಮುಂದಿನ ಖಾರಿಫ್ ಅವಧಿಯಲ್ಲಿ ಏಕದಳ ಮತ್ತು ದ್ವಿದಳ ಧಾನ್ಯ ಬೆಳೆಗಳಲ್ಲಿ ವೈವಿಧ್ಯತೆಯನ್ನು ಸಾಧಿಸಲು ಮತ್ತು ಹೆಚ್ಚಿನ ಪ್ರದೇಶದಲ್ಲಿ ಬಿತ್ತನೆ ನಡೆಸುವಂತೆ ರೈತರನ್ನು ಪ್ರೇರೇಪಿಸುವ ದೃಷ್ಟಿಯಿಂದ ಕೇಂದ್ರ ಸರಕಾರ ಮುಂಗಾರು ಆರಂಭಕ್ಕೂ ಮುನ್ನವೇ ಮುಂಬರುವ ಸಾಲಿನ ಖಾರಿಫ್ ಬೆಳೆಗಳಿಗೆ ಕನಿಷ್ಠ ಬೆಂಬಲ ಬೆಲೆಯನ್ನು ಹೆಚ್ಚಿಸುವ ನಿರ್ಧಾರ ಕೈಗೊಂಡಿದೆ. ಬುಧವಾರ ಪ್ರಧಾನಿ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಆರ್ಥಿಕ ವ್ಯವಹಾರಗಳಿಗಾಗಿನ ಕೇಂದ್ರ ಸಂಪುಟ ಸಮಿತಿ ಸಭೆಯಲ್ಲಿ ಈ ನಿರ್ಧಾರವನ್ನು ಕೈಗೊಳ್ಳಲಾಗಿದೆ.
ಕೃಷಿ ಬೆಳೆಗಳ ವೆಚ್ಚ ಮತ್ತು ಬೆಲೆಗಳ ಆಯೋಗದ ಶಿಫಾರಸುಗಳನ್ನು ಆಧರಿಸಿ ಸರಕಾರ ಕನಿಷ್ಠ ಬೆಂಬಲ ಬೆಲೆಯಲ್ಲಿ ಈ ಹೆಚ್ಚಳ ಮಾಡಲು ತೀರ್ಮಾನಿಸಲಾಗಿದೆ. ಅದರಂತೆ ದೇಶದ ಪ್ರಮುಖ ಆಹಾರ ಬೆಳೆಯಾದ ಭತ್ತಕ್ಕೆ ಕನಿಷ್ಠ ಬೆಂಬಲ ಬೆಲೆಯನ್ನು ಕ್ವಿಂಟಾಲ್‌ಗೆ 2,040 ರೂ.ಗಳಿಂದ 2,183ರೂ.ಗಳಿಗೆ ಹೆಚ್ಚಿಸಲಾಗಿದೆ. ಎ ಗ್ರೇಡ್ ತಳಿಗೆ ಕ್ವಿಂ.ಗೆ 2,060ರೂ.ಗಳಿಂದ 2,203 ರೂ.ಗಳಿಗೆ ಏರಿಕೆ ಮಾಡಲಾಗಿದೆ. ಬಾಜ್ರಾಗೆ ಪ್ರತೀ ಕ್ವಿಂ.ಗೆ 2,350 ರೂ.ಗಳಿಂದ 2,500ರೂ. ಗಳಿಗೆ ಮತ್ತು ರಾಗಿಗೆ ಕ್ವಿಂ.ಗೆ 3,578 ರೂ.ಗಳಿಂದ 3,846 ರೂ.ಗಳಿಗೆ ಹೆಚ್ಚಿಸಲಾಗಿದೆ. ದ್ವಿದಳ ಧಾನ್ಯಗಳ ಕನಿಷ್ಠ ಬೆಂಬಲ ಬೆಲೆಯನ್ನು ಕೂಡ ಹೆಚ್ಚಿಸುವ ನಿರ್ಧಾರ ಕೈಗೊಂಡಿರುವ ಕೇಂದ್ರ ಸರಕಾರ ತೊಗರಿಗೆ ಕ್ವಿಂ.ಗೆ 6,600ರಿಂದ 7,000ರೂ.ಗಳಿಗೆ, ಹೆಸರು ಕಾಳಿಗೆ ಕ್ವಿಂ.ಗೆ 7,755ರಿಂದ 8,558 ರೂ.ಗಳಿಗೆ ಹಾಗೂ ಉದ್ದಿಗೆ ಕ್ವಿಂ.ಗೆ 6,600ರಿಂದ 6,650 ರೂ.ಗಳಿಗೆ ಹೆಚ್ಚಿಸಲಾಗಿದೆ.
ಮುಂಬರುವ ಮುಂಗಾರು ಅವಧಿಯಲ್ಲಿ ಬೆಳೆಯಲಾಗುವ ಈ ಬೆಳೆಗಳನ್ನು ಸರಕಾರವು ಏಜೆನ್ಸಿಗಳ ಮೂಲಕ ರೈತರಿಂದ ನಿಗದಿಪಡಿಸಿದ ಕನಿಷ್ಠ ಬೆಲೆಗೆ ಖರೀದಿಸಲಿದೆ. ಆ ಮೂಲಕ ಬೆಳೆಗಳಿಗೆ ಮಾರುಕಟ್ಟೆಯಲ್ಲಿ ಸೂಕ್ತ ಬೆಲೆ ಸಿಗದೆ ರೈತರು ಸಂಕಷ್ಟಕ್ಕೀಡಾಗುವುದು ತಪ್ಪಲಿದೆ. ಇದರಿಂದ ದೇಶದಲ್ಲಿ ಆಹಾರ ಧ್ಯಾನ್ಯಗಳ ಉತ್ಪಾದನ ಪ್ರಮಾಣ ವೃದ್ಧಿಯಾಗುವುದರ ಜತೆಯಲ್ಲಿ ರೈತರು ಸ್ವಾವಲಂಬಿ ಬದುಕು ಸಾಗಿಸಲು ಸಾಧ್ಯವಾಗಲಿದೆ. ದೇಶದ ಕೃಷಿ ವಲಯವು ಬಹುತೇಕ ಮಳೆಯಾಶ್ರಿತವಾಗಿರುವುದರಿಂದ ಮುಂಗಾರು ಹಂಗಾಮಿನಲ್ಲಿ ಕೃಷಿ ಬೆಳೆಗಳ ಉತ್ಪಾದನೆಗೆ ಹೆಚ್ಚಿನ ಮಹತ್ವವಿದೆ. ಇದು ಕೇವಲ ಆಹಾರ ಉತ್ಪಾದನೆ ಮಾತ್ರವಲ್ಲದೆ ದೇಶದ ಆರ್ಥಿಕತೆಯಲ್ಲೂ ಪ್ರಮುಖ ಪಾತ್ರವನ್ನು ವಹಿಸುತ್ತದೆ.
ಪ್ರಸಕ್ತ ಸಾಲಿನಲ್ಲಿ ಅಂದರೆ 2022-23ನೇ ಸಾಲಿನಲ್ಲಿ ದೇಶದಲ್ಲಿ ದಾಖಲೆಯ 330.5 ಮಿಲಿಯನ್ ಟನ್‌ಗಳಷ್ಟು ಆಹಾರ ಬೆಳೆಗಳ ಉತ್ಪಾದನೆಯನ್ನು ಅಂದಾಜಿಸಲಾಗಿದೆ. ಕಳೆದ ವರ್ಷಕ್ಕೆ ಹೋಲಿಸಿದರೆ ಇದು 14.9 ಮಿಲಿಯನ್ ಟನ್‌ಗಳಷ್ಟು ಅಧಿಕವಾಗಿದೆ. ಕಳೆದ 5 ವರ್ಷಗಳಲ್ಲಿಯೇ ಗರಿಷ್ಠ ಏರಿಕೆಯಾಗಿದೆ.
ಇದೇ ವೇಳೆ ಈ ಬಾರಿ ಮುಂಗಾರು ಮಳೆ ಕೊಂಚ ವಿಳಂಬಗೊಂಡಿದ್ದು ಮುಂದಿನ ಮೂರ್‍ನಾಲ್ಕು ದಿನಗಳಲ್ಲಿ ಕೇರಳವನ್ನು ನೈಋತ್ಯ ಮಾರುತಗಳು ಪ್ರವೇಶಿಸಲಿವೆ ಎಂದು ಭಾರತೀಯ ಹವಾಮಾನ ಇಲಾಖೆ ತಿಳಿಸಿದೆ. ಈ ಬಾರಿ ಜೂನ್-ಸೆಪ್ಟಂಬರ್ ಅವಧಿಯಲ್ಲಿ ಎಲ್ ನಿನೋ ಮುಂಗಾರು ಮಳೆಯ ಮೇಲೆ ಪ್ರತಿಕೂಲ ಪರಿಣಾಮ ಬೀರುವ ಸಾಧ್ಯತೆ ಇದೆಯಾದರೂ ಒಟ್ಟಾರೆ ದೇಶದಲ್ಲಿ ವಾಡಿಕೆಯಷ್ಟು ಮಳೆಯಾಗಲಿದೆ ಎಂದು ಹವಾಮಾನ ತಜ್ಞರು ಆಶಯ ವ್ಯಕ್ತಪಡಿಸಿದ್ದಾರೆ. ಹೀಗಾಗಿ ಈ ಬಾರಿಯೂ ಆಹಾರ ಬೆಳೆಗಳ ಸಹಿತ ಕೃಷಿ ಉತ್ಪಾದನ ಪ್ರಮಾಣದಲ್ಲಿ ಹೆಚ್ಚೇನೂ ಏರಿಳಿತ ಕಾಣಲಾರದು ಎಂದು ನಿರೀಕ್ಷಿಸಲಾಗಿದೆ.