Advertisement

ವರುಣನ ಕೃಪೆ: ಕಬಿನಿ ಜಲಾಶಯದ ಒಳಹರಿವು ಹೆಚ್ಚಳ

02:56 PM Jul 09, 2023 | Team Udayavani |

ಮೈಸೂರು: ಕಳೆದೊಂದು ವಾರದಿಂದ ಕರಾವಳಿ, ಮಲೆನಾಡು ಮತ್ತು ಕೇರಳ ಭಾಗದಲ್ಲಿ ಮುಂಗಾರು ಬಿರುಸುಗೊಂಡಿದ್ದು, ಕೆಆರ್‌ಎಸ್‌ ಮತ್ತು ಕಬಿನಿಯಲ್ಲಿ ಒಳ ಹರಿವಿನ ಪ್ರಮಾಣ ಸುಧಾರಿಸಿದೆ. ಇತ್ತ ಮಳೆ ಇಲ್ಲದೆ ಕಂಗಾಲಾಗಿದ್ದ ರೈತರಲ್ಲಿ ಆಶಾ ಭಾವನೆ ಮೂಡಿದೆ.

Advertisement

ಕಾವೇರಿ ಕೊಳ್ಳದಲ್ಲಿ ಮುಂಗಾರು ಪೂರ್ವ ಮತ್ತು ಮುಂಗಾರು ಆರಂಭದಲ್ಲಿ ಮಳೆ ಕ್ಷೀಣಿಸಿದ ಪರಿಣಾಮ ಲಕ್ಷಾಂತರ ಹೆಕ್ಟೇರ್‌ನಲ್ಲಿ ರೈತರು ಬಿತ್ತಿದ್ದ ಬೆಳೆ ಒಣಗಿದ್ದಲ್ಲದೇ ಕಾವೇರಿ, ಕಪಿಲಾ ಮತ್ತು ಲಕ್ಷ್ಮಣ ತೀರ್ಥಾ ನದಿಗಳು ಬತ್ತಿ ಹೋಗಿ ದ್ದವು. ಇತ್ತ ಕೃಷ್ಣರಾಜ ಸಾಗರ ಮತ್ತು ಕಬಿನಿ ಜಲಾಶಯಗಳಲ್ಲೂ ನೀರಿನ ಸಂಗ್ರಹ ಮಟ್ಟ ಕನಿಷ್ಠ ಮಟ್ಟಕ್ಕೆ ಕುಸಿದಿದ್ದರಿಂದ ಭತ್ತದ ಬೆಳೆಗೆ ನೀರು ಇಲ್ಲದ ವಾತಾವರಣ ಸೃಷ್ಟಿಯಾಗಿತ್ತು. ಆದರೆ ಕಳೆದ ಮೂರ್‍ನಾಲ್ಕು ದಿನಗಳಿಂದ ಕೇರಳದ ವೈನಾಡು ಮತ್ತು ಪಶ್ಚಿಮ ಘಟ್ಟದಲ್ಲಿ ಅತಿಯಾದ ಮಳೆಯಾಗುತ್ತಿರುವ ಹಿನ್ನೆಲೆ ಕಬಿನಿ, ಕೆಆರ್‌ಎಸ್‌ ಗೆ ಒಳ ಹರಿವಿನ ಪ್ರಮಾಣ ಹೆಚ್ಚಿದ್ದು, ನಾಗರಹೊಳೆ – ಬಂಡೀಪುರ ಅರಣ್ಯ ವ್ಯಾಪ್ತಿಯ ವನ್ಯಜೀವಿಗಳ ಆತಂಕ ದೂರವಾಗಿದೆ.

ಸುಧಾರಿಸಿದ ಕಪಿಲೆ: ಮುಂಗಾರು ಆರಂಭವಾಗಿ ತಿಂಗಳಾದರೂ ನಿರೀಕ್ಷಿತ ಪ್ರಮಾಣದ ಮಳೆಯಾಗದ ಹಿನ್ನೆಲೆ ಕಪಿಲಾ ನದಿ ಸೊರಗಿದ್ದಲ್ಲದೇ ಕಬಿನಿ ಜಲಾಶಯಕ್ಕೆ ವಾರದ ಹಿಂದೆ 1250 ಕ್ಯೂಸೆಕ್‌ ನಷ್ಟು ಮಾತ್ರ ಒಳಹರಿವಿನ ಪ್ರಮಾಣವಿತ್ತು. ಆದರೆ ಕಳೆದ ಮೂರ್ನಾಲ್ಕು ದಿನಗಳಿಂದ ವೈನಾಡು ಭಾಗದಲ್ಲಿ ಉತ್ತಮ ಮಳೆಯಾಗುತ್ತಿ ರುವ ಹಿನ್ನೆಲೆ ಮಂಗಳವಾರ 2421 ಕ್ಯೂಸೆಕ್‌, ಬುಧವಾರ 3431 ಕ್ಯೂಸೆಕ್‌, ಗುರುವಾರ 10781 ಕ್ಯೂಸೆಕ್‌ಗೆ ಹೆಚ್ಚಾಗಿತ್ತು. ಶುಕ್ರವಾರ ಈ ಪ್ರಮಾಣ 17 ಸಾವಿರ, ಶನಿವಾರ 17 ಸಾವಿರ ಕ್ಯೂಸೆಕ್‌ಗೆ ಏರಿಕೆಯಾಗಿದೆ. ಈ ಮೂಲಕ ಕಬಿನಿ ಜಲಾಶ ಯದ ನೀರಿನ ಮಟ್ಟ 2263.88 ಅಡಿಗೆ ಏರಿಕೆ ಯಾಗಿದೆ.

ಕಬಿನಿ ಭರ್ತಿಗೆ 18 ಟಿಎಂಸಿ ನೀರು ಬೇಕಿದೆ: ಸದ್ಯಕ್ಕೆ ಒಳಹರಿವಿನ ಪ್ರಮಾಣ 17 ಸಾವಿರ ಕ್ಯೂಸೆಕ್‌ ಇದ್ದು, 24 ಗಂಟೆ ನಿರಂತರವಾಗಿ ಈ ಪ್ರಮಾಣದ ನೀರು ಡ್ಯಾಂಗೆ ಹರಿದು ಬಂದರೆ 1.7 ಟಿಎಂಸಿ ನೀರು ಒಂದು ದಿನಕ್ಕೆ ಸಂಗ್ರಹವಾಗಲಿದೆ. ಇದೇ ಪ್ರಮಾಣದಲ್ಲಿ ಮಳೆ ಬಿದ್ದರೆ ಹದಿ ನೈದು ದಿನಗಳಲ್ಲಿ ಡ್ಯಾಂ ಭರ್ತಿಯಾಗಲಿದೆ. ಸದ್ಯಕ್ಕೆ ಜಲಾಶಯದಲ್ಲಿ 08 ಟಿಎಂಸಿಯಷ್ಟು ನೀರಿದ್ದು, ಡ್ಯಾಂ ಭರ್ತಿಗೆ 18 ಟಿಎಂಸಿಯಷ್ಟು ನೀರು ಹರಿದು ಬರಬೇಕಿದೆ. ಹೀಗೆ ಮಳೆ ಮುಂದುವರೆದು ಡ್ಯಾಂ ಭರ್ತಿ ಯಾದರೆ ಮೈಸೂರು ನಗರ, ಎಚ್‌.ಡಿ.ಕೋಟೆ, ನಂಜನಗೂಡು ತಾಲೂಕಿಗೆ ಕುಡಿಯುವ ನೀರಿನ ಸಮಸ್ಯೆ ತಗ್ಗಲಿದೆ. ಜತೆಗೆ ಈ ಎರಡೂ ತಾಲೂಕಿನ ಕೃಷಿ ಭೂಮಿಗೆ ನೀರುಣಿಸಲು ಅನುಕೂಲವಾಗಲಿದೆ.

ಕೆಆರ್‌ಎಸ್‌ನಲ್ಲೂ ಹೆಚ್ಚಿದ ಒಳಹರಿವು: ಕರಾವಳಿ ಮತ್ತು ಮಲೆನಾಡು ಭಾಗದಲ್ಲಿ ಭಾರಿ ಮಳೆ ಯಾಗುತ್ತಿರುವ ಹಿನ್ನೆಲೆ ಕೊಡಗಿನಲ್ಲಿಯೂ ಕಳೆದ ನಾಲ್ಕೈದು ದಿನಗಳಿಂದ ಉತ್ತಮ ಮಳೆಯಾಗು ತ್ತಿದ್ದು, ಕಾವೇರಿ ನದಿ ನೀರಿನ ಮಟ್ಟ ಏರಿಕೆ ಕಂಡಿದೆ. ವಾರದ ಹಿಂದೆ 500 ರಿಂದ 600 ಕ್ಯೂಸೆಕ್‌ ಇದ್ದ ಒಳಹರಿವಿನ ಪ್ರಮಾಣ ಗುರುವಾರ 1444 ಹಾಗೂ ಶುಕ್ರವಾರ 3966, ಶನಿವಾರ 15,436 ಕ್ಯೂಸೆಕ್‌ಗೆ ಏರಿಕೆಯಾಗಿದೆ. ಸದ್ಯಕ್ಕೆ ಜಲಾಶಯದ ನೀರಿನ ಮಟ್ಟ 83.85 ಅಡಿಗೆ ಏರಿಕೆಯಾಗಿದೆ.

Advertisement

ಮೈಸೂರು ಜಿಲ್ಲೆಗಿಲ್ಲ ವಾಡಿಕೆ ಮಳೆ: ಜಿಲ್ಲೆಯಲ್ಲಿ ಕಳೆದ ಬಾರಿಗೆ ಹೋಲಿಕೆ ಮಾಡಿದರೆ ಈ ವರ್ಷ ಜೂನ್‌ ಮತ್ತು ಜುಲೈ ಮೊದಲ ವಾರ ದಲ್ಲಿ ಬೀಳುವ ವಾಡಿಕೆ ಮಳೆ ಬಿದ್ದಿಲ್ಲ. ಜೂನ್‌ನಲ್ಲಿ ವಾಡಿಕೆಯಂತೆ 94 ಮಿ.ಮೀ.ನಷ್ಟು ಮಳೆಯಾಗಬೇಕಿತ್ತು. ಆದರೆ 60 ಮಿ.ಮೀ.ನಷ್ಟು ಮಳೆಯಾಗಿದೆ. ಜುಲೈ ಮೊದಲ ವಾರದಲ್ಲಿ 20 ಮಿ.ಮೀ. ನಷ್ಟು ಮಾತ್ರ ಮಳೆಯಾಗಿದೆ. ಸದ್ಯಕ್ಕೆ ದ್ವಿದಳ, ತಂಬಾಕು ಬೆಳೆಗೆ ಅನುಕೂಲವಾಗಿದ್ದರೂ, ಭತ್ತ, ರಾಗಿ, ಕಬ್ಬು ಬೆಳೆಗೆ ನೀರಿನ ಕೊರತೆ ಎದುರಾಗಿದೆ.

ಕೇರಳ ವೈನಾಡು ಭಾಗದಲ್ಲಿ ಉತ್ತಮ ಮಳೆಯಾಗುತ್ತಿರುವುದರಿಂದ ಕಪಿಲಾ ನದಿ ನೀರಿನ ಮಟ್ಟ ಹೇಚ್ಚಾಗಿದೆ. ಜತೆಗೆ ಕಬಿನಿ ಜಲಾಶಯಕ್ಕೆ ಒಳಹರಿವು ಹೆಚ್ಚಾಗಿದೆ. ಈ ಪ್ರಮಾಣ ಮತ್ತಷ್ಟು ಹೆಚ್ಚುವ ಸಾಧ್ಯತೆ ಇದೆ. ●ಜನಾರ್ಧನ್‌, ಸಹಾಯಕ ಕಾರ್ಯ ನಿರ್ವಾಹಕ ಎಂಜಿನಿಯರ್‌ ಕಬಿನಿ ಜಲಾಶಯ

ಕರಾವಳಿ ಮತ್ತು ಮಲೆನಾಡು ಭಾಗದಲ್ಲಿ ಉತ್ತಮ ಮಳೆಯಾಗುತ್ತಿ ರುವ ಹಿನ್ನೆಲೆ ಕೊಡಗಿನಲ್ಲೂ ಮಳೆ ಹೆಚ್ಚಾಗಿದೆ. ಇದರಿಂದ ಕಾವೇರಿ ನದಿಯ ನೀರಿನ ಪ್ರಮಾಣ ಹೆಚ್ಚಿದೆ. ಆದರೆ ಮೈಸೂರು ಜಿಲ್ಲೆಗೆ ವಾಡಿಕೆ ಮಳೆ ಬಿದ್ದಿಲ್ಲ. ತುಂತುರು ಮಳೆ ಮತ್ತು ಮೋಡ ಕವಿದ ವಾತಾವರಣವಷ್ಟೇ ಇದೆ. ● ಡಾ.ಸಿ.ಗೋವಿಂದರಾಜು, ವಿಜ್ಞಾನಿಗಳು ಸಾವಯವ ಕೃಷಿ ಸಂಶೋಧನಾ ಕೇಂದ್ರ ನಾಗನಹಳ್ಳಿ

-ಸತೀಶ್‌ ದೇಪುರ

Advertisement

Udayavani is now on Telegram. Click here to join our channel and stay updated with the latest news.

Next