Advertisement

ಆದಾಯ ತೆರಿಗೆ ಸಂಗ್ರಹದಲ್ಲಿ ಹೆಚ್ಚಳ

12:38 PM Mar 24, 2019 | Lakshmi GovindaRaju |

ಬೆಂಗಳೂರು: ಕಳೆದ ಆರ್ಥಿಕ ವರ್ಷಕ್ಕೆ ಹೋಲಿಸಿದರೆ ಪ್ರಸಕ್ತ ವರ್ಷದಲ್ಲಿ ಆದಾಯ ತೆರಿಗೆ ಸಂಗ್ರಹದಲ್ಲಿ ಹೆಚ್ಚಳವಾಗಿದೆ.

Advertisement

ಈ ಕುರಿತು ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಗೋವಾ ಮತ್ತು ಕರ್ನಾಟಕ ವಿಭಾಗದ ಆದಾಯ ತೆರಿಗೆ ಪ್ರಧಾನ ಆಯುಕ್ತ ಬಿ.ಆರ್‌.ಬಾಲಕೃಷ್ಣನ್‌, 2017 - 18ನೇ ಸಾಲಿನಲ್ಲಿ ಒಟ್ಟು 1,03,745 ರೂ. ಸಂಗ್ರಹಿಸಲಾಗಿತ್ತು.

2018-19ನೇ ಸಾಲಿನಲ್ಲಿ 1,11,152 (ಮಾ.22ರವರೆಗೆ) ತೆರಿಗೆ ಸಂಗ್ರಹಿಸಲಾಗಿದೆ. ಹಾಗೆಯೇ ಆದಾಯ ತೆರಿಗೆ ಮರುಪಾವತಿಯಲ್ಲಿಯೂ ಗಣನೀಯ ಪ್ರಮಾಣದಲ್ಲಿ ಅಧಿಕವಾಗಿದೆ. ಕಳೆದ ವರ್ಷ 12,451 ಕೋಟಿ ರೂ., ಪ್ರಸಕ್ತ ವರ್ಷದಲ್ಲಿ 15,340 ಕೋಟಿ ರೂ.ಅಧಿಕವಾಗಿದೆ ಎಂದು ಹೇಳಿದರು.

ಕಳೆದ ವಿಧಾನಸಭೆ ಚುನಾವಣೆಯಲ್ಲಿ ವಿಶೇಷ ಕಾರ್ಯಾಚರಣೆ ನಡೆಸಿ 36.95 ಕೋಟಿ ರೂ.ನಗದು, ಆರು ಕೋಟಿ ರೂ.ಮೌಲ್ಯದ ಚಿನ್ನಾಭರಣ ಜಪ್ತಿ ಮಾಡಲಾಗಿತ್ತು. ಹಾಗೆಯೇ ಚುನಾವಣಾ ಅಭ್ಯರ್ಥಿಗಳಿಗೆ ಹಣ ಸಂದಾಯ ಮಾಡುತ್ತಿದ್ದ ಗುತ್ತಿಗೆದಾರರ ಮೇಲೆ ದಾಳಿ ನಡೆಸಿ ಆರು ಕೋಟಿ ರೂ.ಮೌಲ್ಯದ ಬೇನಾಮಿ ಮೌಲ್ಯದ ಲಾಕರ್‌ ವಶಕ್ಕೆ ಪಡೆಯಲಾಗಿತ್ತು.

ಚುನಾವಣಾ ಪ್ರಚಾರದ ವೇಳೆ ಮಾಜಿ ಸಚಿವರೊಬ್ಬರು ಹಾಗೂ ಬೆಂಬಲಿಗರಿಗೆ ಸೇರಿದ 62 ಲಕ್ಷ ರೂ.ಗಳನ್ನು ವಶಕ್ಕೆ ಪಡೆದುಕೊಂಡಿದ್ದು, ತನಿಖೆ ನಡೆಯುತ್ತಿದೆ ಎಂದು ಬಾಲಕೃಷ್ಣನ್‌ ಹೇಳಿದರು.

Advertisement

ಲೋಕಸಭೆ ಚುನಾವಣೆಗೆ ಹದ್ದಿನ ಕಣ್ಣು: ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ಪ್ರತಿ ಜಿಲ್ಲೆಯಲ್ಲಿಯೂ ನೋಡಲ್‌ ಅಧಿಕಾರಿ ನೇತೃತ್ವದಲ್ಲಿ ತಂಡ ರಚಿಸಲಾಗಿದೆ.

ಪ್ರತಿ ಜಿಲ್ಲೆಯಲ್ಲಿಯೂ ಡೆಪ್ಯೂಟಿ ಕಮಿಷನರ್‌, ಇಬ್ಬರು ಐಟಿ ಅಧಿಕಾರಿಗಳು ಸೇರಿ10 ಮಂದಿಯ ವಿಚಕ್ಷಣಾ ದಳ ಕಾರ್ಯ ನಿರ್ವಹಿಸಲಿದೆ. ಬೆಂಗಳೂರು, ಮಂಗಳೂರು, ಹುಬ್ಬಳ್ಳಿ, ಕಲಬುರಗಿ, ಹಾಗೂ ಗೋವಾದ ಪಣಜಿಯನ್ನು ಸೂಕ್ಷ್ಮ ಪ್ರದೇಶಗಳೆಂದು ಪರಿಗಣಿಸಲಾಗಿದೆ.

ಪ್ರತಿನಿತ್ಯ 10-12 ಕರೆಗಳು: ಲೋಕಸಭೆ ಚುನಾವಣೆಯಲ್ಲಿ ಅಕ್ರಮ ಹಣ ಹಾಗೂ ಚಿನ್ನಾಭರಣ ಸಾಗಾಟ ತಡೆಯುವ ಸಲುವಾಗಿ ಸಾರ್ವಜನಿಕರಿಂದ ಮಾಹಿತಿ ಪಡೆಯಲು ತೆರೆದಿರುವ 24*7 ಸಹಾಯವಾಣಿ ಕೇಂದ್ರಕ್ಕೆ ಪ್ರತಿನಿತ್ಯ 10-12 ಕರೆಗಳು ಬರುತ್ತಿವೆ.

ಈ ಕರೆಗಳನ್ನು ಆಧರಿಸಿ ಇದುವರೆಗೂ ಮೂರು ಕಡೆ ದಾಳಿ ನಡೆಸಿದ್ದು, 4.04 ಕೋಟಿ ರೂ.ಜಪ್ತಿ ಮಾಡಲಾಗಿದೆ. ಹಾಗೆಯೇ ಚುನಾವಣಾ ಅಭ್ಯರ್ಥಿಗಳ ಅಫಿಡವಿಟ್‌ಗಳ ಪರಿಶೀಲನೆ, ಬ್ಯಾಂಕ್‌ಗಳಲ್ಲಿ ಹಣದ ವರ್ಗಾವಣೆ ಮೇಲೆ ನಿಗಾ ವಹಿಸಲಾಗಿದೆ ಎಂದು ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next