ಬೆಂಗಳೂರು: ಜಿಲ್ಲಾ ಹಾಗೂ ತಾಲೂಕು ಪಂಚಾಯಿತಿಗಳಿಗೆ ಅಭಿವೃದ್ಧಿಗಾಗಿ ರಾಜ್ಯ ಸರ್ಕಾರ ನೀಡುವ ಅನುದಾನ ಹೆಚ್ಚಿಸುವ ಹಾಗೂ ಆಲೂಗಡ್ಡೆ ಮತ್ತು ಸಿರಿಧಾನ್ಯ ಬೆಳೆಯುವ ರೈತರಿಗೆ ವಿಶೇಷ ಪ್ರೋತ್ಸಾಹ ಧನದ ಪ್ಯಾಕೇಜ್ ಘೋಷಿಸಲಾಗಿದೆ.
Advertisement
ಸಂಪುಟ ಸಭೆ ನಂತರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಕೃಷ್ಣ ಬೈರೇಗೌಡ, ರಾಜ್ಯದ 30 ಜಿಪಂಗಳಿಗೆ ಹಾಲಿ ನೀಡುತ್ತಿರುವ 4 ಕೋಟಿ ರೂ. ಮೊತ್ತವನ್ನು ಎಂಟು ಕೋಟಿ ರೂ.ವರೆಗೆ ಹೆಚ್ಚಿಸಲು ತೀರ್ಮಾನಿಸಲಾಗಿದೆ. ಹೆಚ್ಚುವರಿ ಅನುದಾನ ಬಿಡುಗಡೆಗೆ ಭೌಗೋಳಿಕ ವಿಸ್ತೀರ್ಣ ಹಾಗೂ ಜನಸಂಖ್ಯೆ ಆಧಾರದ ಮಾನದಂಡ ನಿಗದಿಪಡಿಸಲಾಗಿದೆ. 177 ತಾಪಂಗಳಿಗೆ ಪ್ರಸ್ತುತ ನೀಡುತ್ತಿರುವ 1 ಕೋಟಿ ರೂ. ಮೊತ್ತ ಪ್ರಸಕ್ತ ಸಾಲಿಗೆ 2 ಕೋಟಿ ರೂ.ಗೆ ಏರಿಸಲಾಗಿದೆ. 2020-21ನೇ ಸಾಲಿನಲ್ಲಿ ಗರಿಷ್ಠ 3 ಕೋಟಿ ರೂ.ವರೆಗೆ ಹೆಚ್ಚಿಸಿ ಭೌಗೋಳಿಕ ವಿಸ್ತೀರ್ಣ ಹಾಗೂ ಜನಸಂಖ್ಯೆ ಮಾನದಂಡ ನಿಗದಿಪಡಿಸಲು ತೀರ್ಮಾನಿಸಲಾಗಿದೆ ಎಂದು ವಿವರಿಸಿದರು. ಆಲೂಗಡ್ಡೆ ಬೆಳೆಯುವ ರೈತರಿಗೆ ಪ್ರೋತ್ಸಾಹ ನೀಡಲು 2 ಹೆಕ್ಟೇರ್ ಮಿತಿಗೆ ಒಳಪಟ್ಟು ಪ್ರತಿ ಹೆಕ್ಟೇರ್‌ಗೆ ಬಿತ್ತನೆ ಬೀಜ ಖರೀದಿಗೆ 7500 ರೂ., ಕೀಟನಾಶಕ, ಗೊಬ್ಬರ ಖರೀದಿಗೆ 7200 ರೂ.ನಂತೆ ಪ್ರೋತ್ಸಾಹ ಧನಕ್ಕಾಗಿ 25.50 ಕೋಟಿ ರೂ.ಮೀಸಲಿಡಲಾಗಿದೆ ಎಂದು ಹೇಳಿದರು. ಅದೇ ರೀತಿ ನವಣೆ, ಸಾಮೆ, ಬರುಗು ಸೇರಿ ಸಿರಿಧಾನ್ಯ ಬೆಳೆಯುವ ರೈತರಿಗೆ ಪ್ರೋತ್ಸಾಹ ನೀಡಲು ಪ್ರತಿ ಹೆಕ್ಟೇರ್‌ಗೆ 10 ಸಾವಿರ ರೂ. ನೀಡಲು ಸಂಪುಟ ಒಪ್ಪಿಗೆ ನೀಡಿದೆ
ಎಸ್‌ಟಿ ಮೀಸಲು ಪರಿಷ್ಕರಣೆಗೆ ಆಯೋಗ ರಚನೆ
ಎಸ್‌ಟಿ ಮೀಸಲಾತಿ ಪರಿಷ್ಕರಣೆ ಸಂಬಂಧ ಗುರುವಾರದ ಸಂಪುಟ ಸಭೆಯಲ್ಲಿ ಚರ್ಚೆ ನಡೆದು ಆಯೋಗ ರಚಿಸಲು ಮುಖ್ಯಮಂತ್ರಿಗೆ ಅಧಿಕಾರ ನೀಡಲಾಗಿದೆ. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಚಿವ ಕೃಷ್ಣ ಬೈರೇಗೌಡ, ಜನಸಂಖ್ಯೆಗೆ ಅನುಗುಣವಾಗಿ ಪರಿಶಿಷ್ಟ ಪಂಗಡದ ಮೀಸಲಾತಿ ಪರಿಷ್ಕರಣೆ ಸಂಬಂಧ ಇತ್ತೀಚೆಗೆ ಹೋರಾಟ ನಡೆದಿತ್ತು. ಉಪ ಮುಖ್ಯಮಂತ್ರಿ ಸ್ಥಳಕ್ಕೆ ಭೇಟಿ ನೀಡಿ ಮಾತುಕತೆ ನಡೆಸಿದ್ದರು. ಆ ವಿಚಾರ ಸಂಪುಟ ಸಭೆಯಲ್ಲಿ ಚರ್ಚೆಯಾಗಿ ಮೀಸಲಾತಿ ಪರಿಷ್ಕರಣೆ ಸಂಬಂಧ ಸಾಧಕ-ಬಾಧಕ ಕುರಿತು ಅಧ್ಯಯನ ನಡೆಸಲು ಆಯೋಗ ರಚನೆಗೆ ಮುಖ್ಯಮಂತ್ರಿಯವರಿಗೆ ಅಧಿಕಾರ ನೀಡಲು ತೀರ್ಮಾನಿಸಲಾಯಿತು ಎಂದು ಹೇಳಿದರು.