Advertisement

ಕೋವಿಡ್‌ನಿಂದ ಮೃತಪಟ್ಟವರ ಸಂಖ್ಯೆ ಹೆಚ್ಚಳ: ಸಾರ್ವಜನಿಕರು ಜಾಗ್ರತೆ ಪಾಲಿಸಲು ಕರೆ

07:03 PM Oct 19, 2020 | mahesh |

ಕಾಸರಗೋಡು: ಕೋವಿಡ್‌ನಿಂದ ಮೃತಪಟ್ಟವರ ಸಂಖ್ಯೆ ಹೆಚ್ಚಳಗೊಳ್ಳುತ್ತಿರುವ ಹಿನ್ನೆಲೆಯಲ್ಲಿ ಸಾರ್ವಜನಿಕರು ಜಾಗರೂಕತೆ ಪಾಲಿಸಬೇಕು ಎಂದು ಜಿಲ್ಲಾ ವೈದ್ಯಾಧಿಕಾರಿ (ಆರೋಗ್ಯ) ಡಾ| ಎ.ವಿ. ರಾಮದಾಸ್‌ ತಿಳಿಸಿದರು.

Advertisement

ಫೆ. 3ರಂದು ಮೊದಲ ಕೇಸು ವರದಿಯಾದಂದಿನಿಂದ ಜು. 17ರ ವರೆಗೆ ಕಾಸರಗೋಡು ಜಿಲ್ಲೆಯಲ್ಲಿ ಕೊರೊನಾದಿಂದಾಗಿ ಒಂದು ಸಾವು ವರದಿಯಾಗಿರಲಿಲ್ಲ. ಆದರೆ ಜು. 17ರಿಂದ ಅ. 15ರ ವರೆಗೆ ಜಿಲ್ಲೆಯಲ್ಲಿ 142 ಮಂದಿ ಮೃತಪಟ್ಟಿದ್ದಾರೆ. ಮೃತರಲ್ಲಿ ಬಹುಪಾಲು ಮಂದಿ 60 ವರ್ಷಕ್ಕಿಂತ ಅಧಿಕ ವಯೋಮಾನದವರು, ಇನ್ನಿತರ ಗಂಭೀರ ಸ್ವರೂಪದ ರೋಗಗಳಿಂದ ಬಳಲುತ್ತಿದ್ದವರು. ಈ ಹಿನ್ನೆಲೆಯಲ್ಲಿ ಹಿರಿಯರು ಮತ್ತು ಗಂಭೀರ ರೋಗಗಳಿಂದ ಬಳಲುತ್ತಿರುವವರು ಹೆಚ್ಚುವರಿ ಜಾಗ್ರತೆ ವಹಿಸಬೇಕು. ಇವರ ಕುಟುಂಬದ ಸದಸ್ಯರಿಗೆ ಅಧಿಕ ಎಚ್ಚರಿಕೆ ಬೇಕು. ಈ ಮನೆಗಳ ಮಂದಿ ಹೊರಗಿಳಿಯುವುದನ್ನು ಗರಿಷ್ಠ ಪ್ರಮಾಣದಲ್ಲಿ ಕಡಿಮೆ ಮಾಡಬೇಕು. ಇತರರೊಂದಿಗೆ ಸಂಪರ್ಕವನ್ನು ಬಹಳಷ್ಟು ಪ್ರಮಾಣದಲ್ಲಿ ಕಡಿಮೆ ಮಾಡಬೇಕು.

ಸಾಮಾಜಿಕ ಅಂತರ ಕಾಯ್ದುಕೊಳ್ಳುವಿಕೆ, ಸಾಬೂನು, ನೀರು ಬಳಸಿ ಶುಚೀಕರಣ, ಮಾಸ್ಕ್ ಧಾರಣೆ ಇತ್ಯಾದಿಗಳನ್ನು ಕಡ್ಡಾಯ ಗೊಳಿಸಬೇಕು. ಸುಲಭದಲ್ಲಿ ಜೀರ್ಣವಾಗುವ ಆಹಾರವನ್ನೇ ಸೇವಿಸಬೇಕು, ಧಾರಾಳ ನೀರು ಕುಡಿಯಬೇಕು, ತರಕಾರಿ-ಹಣ್ಣು ಅಧಿಕವಾಗಿ ಸೇವಿಸಬೇಕು, ತೀರ ಅನಿವಾರ್ಯ ಪರಿಸ್ಥಿತಿಯಲ್ಲಿ ಆಸ್ಪತ್ರೆಗೆ ತೆರಳಬೇಕು.

ದೂರವಾಣಿ ಮುಖಾಂತರ ಯಾ ಇ-ಸಂಜೀವಿನಿ ಯೋಜನೆಯ ವೆಬ್‌ //esanjeevani.in ಬಳಸಿ ವೈದ್ಯರ ಸೇವೆ ಪಡೆಯಬಹುದು. ಜೀವನ ಶೈಲಿ ರೋಗ ಹೊಂದಿರುವವರು ವೈದ್ಯರು ತಿಳಿಸುವ ನಿಬಂಧನೆಗಳನ್ನು ಕಡ್ಡಾಯವಾಗಿ ಪಾಲಿಸಬೇಕು. ವಾಂತಿ, ಹಸಿವಿಲ್ಲದಿರುವಿಕೆ, ಹೊಟ್ಟೆಯ ಕೆಳಭಾಗದಲ್ಲಿ ನೋವು ಇತ್ಯಾದಿ ಕಂಡುಬಂದಲ್ಲಿ ತತ್‌ಕ್ಷಣ ಆಸ್ಪತ್ರೆಗೆ ಭೇಟಿ ನೀಡಬೇಕು ಎಂದು ಜಿಲ್ಲಾ ವೈದ್ಯಾಧಿಕಾರಿ ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next