ಬೆಂಗಳೂರು: ರಾಜ್ಯದಲ್ಲಿ ಕಳೆದ ಒಂದು ವಾರದಿಂದ ಕೋವಿಡ್ ಪ್ರಕರಣಗಳಲ್ಲಿ ಕೊಂಚ ಏರಿಕೆ ಕಂಡು ಬಂದಿದ್ದು, 4 ಜಿಲ್ಲೆಗಳಲ್ಲಿ ನಿಗಾವಹಿಸಲಾಗಿದೆ.
ಕಳೆದ ಒಂದು ವಾರದಿಂದ ಸಿಲಿಕಾನ್ ಸಿಟಿ ಬೆಂಗಳೂರು ಸೇರಿ ರಾಜ್ಯದಲ್ಲಿ ಮತ್ತೆ ಕೊರೊನಾ ಏರಿಕೆಯಾಗಿರುವುದು ಆತಂಕ ಹುಟ್ಟಿಸಿದೆ.
ಶಿವಮೊಗ್ಗ, ಕಲಬುರಗಿ, ಮೈಸೂರು, ಉತ್ತರ ಕನ್ನಡ ಜಿಲ್ಲೆಯಲ್ಲಿ ಹೆಚ್ಚಿನ ಮುನ್ನೆಚ್ಚರಿಕೆ ವಹಿಸಲಾಗಿದೆ.
ಇದೀಗ ಕೇಂದ್ರದ ಸೂಚನೆ ಮೇರೆಗೆ ರಾಜ್ಯದ ಕೆಲವು ಪ್ರದೇಶಗಳಲ್ಲಿ ಆರೋಗ್ಯ ಇಲಾಖೆಯು ಕೊವಿಡ್ ಪರೀಕ್ಷೆ, ಪತ್ತೆ, ಚಿಕಿತ್ಸೆ, ಲಸಿಕೆಗೆ ಒತ್ತು ಕೊಡಲು ಸೂಚಿಸಿದೆ. ಸೋಂಕಿನ ಬಗ್ಗೆ ತೀವ್ರ ನಿಗಾ ವಹಿಸಲು ಹೇಳಿದೆ.
Related Articles
ಮಾ.8ರಿಂದ ಕಳೆದ ಎರಡು ವಾರದ ಅವಧಿಯಲ್ಲಿ ಪಾಸಿಟಿವಿಟಿ ದರ ಶೇ.2.77 ಹೆಚ್ಚಾಗಿದೆ. ದೇಶದಲ್ಲಿ ಎಚ್3ಎನ್2 ಸೋಂಕಿನಿಂದ ಬಹಳಷ್ಟು ಜನ ಬಳಲುತ್ತಿರುವುದು ಆತಂಕ ಹುಟ್ಟಿಸಿದೆ.
ಮುಂಜಾಗ್ರತಾ ಕ್ರಮಗಳೇನು?: ಅಂತಾರಾಷ್ಟ್ರೀಯ ಪ್ರಯಾಣಿಕರು, ಸ್ಥಳೀಯವಾಗಿ ವರದಿಯಾಗುವ ಕ್ಲಸ್ಟರ್ ಪ್ರಕರಣಗಳಲ್ಲಿ ಸಂಗ್ರಹಿಸಲಾಗುವ ಮಾದರಿಗಳನ್ನು ಜಿನೋಮ್ ಸೀಕ್ವೆನ್ಸ್ ಪರೀಕ್ಷೆ ನಡೆಸುವುದು, ಸೋಂಕಿನ ಲಕ್ಷಣಗಳು ಕಂಡು ಬಂದರೆ ನಿಗದಿತವಾಗಿ ಪರೀಕ್ಷೆ ನಡೆಸುವುದು, ಹೊಸದಾಗಿ ಹಾಗೂ ಕ್ಲಸ್ಟರ್ ಮಾದರಿಯಲ್ಲಿ ವರದಿಯಾಗುವ ಸೋಂಕು ಪ್ರಕರಣಗಳ ಮೇಲ್ವಿಚಾರಣೆ ಮಾಡುವುದು, ಐಎಲ್ ಐ (ವಿಷಮ ಶೀತ ಜ್ವರ) ಹಾಗೂ ಸಾರಿ (ತೀವ್ರ ಉಸಿರಾಟ ಸಮಸ್ಯೆ) ಪ್ರಕರಣಗಳನ್ನು ಪತ್ತೆಹಚ್ಚುವುದು ಸೇರಿ ಇನ್ನಿತರ ಮುಂಜಾಗ್ರತಾ ಕ್ರಮ ಕೈಗೊಳ್ಳಲು ಆರೋಗ್ಯ ಇಲಾಖೆಯು ಮುಂದಾಗಿದೆ ಎಂದು ತಿಳಿದು ಬಂದಿದೆ.