ದೇಶಾದ್ಯಂತ ಕೊರೊನಾ ಸೋಂಕು ಬಾಧಿತರ ಸಂಖ್ಯೆ ಹೆಚ್ಚುತ್ತಿದ್ದು ಜನತೆಯಲ್ಲಿ ತುಸು ಆತಂಕವನ್ನು ಸೃಷ್ಟಿಸಿದೆ. ಕಳೆದೆರಡು ವಾರಗಳಿಂದೀಚೆಗೆ ದಿನವಹಿ ಸೋಂಕು ಪೀಡಿತರ ಸಂಖ್ಯೆ ಮತ್ತು ಸಕ್ರಿಯ ಸೋಂಕುಪೀಡಿತರ ಸಂಖ್ಯೆ ವೃದ್ಧಿಗೊಳ್ಳುತ್ತಲೇ ಸಾಗಿದೆ.
ಸೋಮವಾರ ಬೆಳಗ್ಗೆವರೆಗಿನ ಅಂಕಿಅಂಶಗಳ ಪ್ರಕಾರ ಕಳೆದೊಂದು ದಿನದ ಅವಧಿಯಲ್ಲಿ ದೇಶಾದ್ಯಂತ 3,641 ಸೋಂಕು ಪ್ರಕರಣಗಳು ದಾಖಲಾಗಿದ್ದರೆ 11 ಸಾವುಗಳು ಸಂಭವಿಸಿವೆ. ಇದೇ ವೇಳೆ ಸಕ್ರಿಯ ಸೋಂಕಿತರ ಸಂಖ್ಯೆ 20,219ಕ್ಕೆ ಏರಿಕೆ ಕಂಡಿದೆ. ದೈನಂದಿನ ಕೋವಿಡ್ ಪಾಸಿಟಿವಿಟಿ ದರವು ಶೇ. 6.12ರಷ್ಟಾಗಿದೆ.
ದೇಶಾದ್ಯಂತ ತಾಪಮಾನ ಭಾರೀ ಪ್ರಮಾಣದಲ್ಲಿ ಹೆಚ್ಚಳ ಕಂಡಿದ್ದು ದೇಶದ ಬಹುತೇಕ ಎಲ್ಲೆಡೆ ವೈರಲ್ ಜ್ವರ ಕಾಣಿಸಿಕೊಂಡಿದೆ. ಇದೇ ವೇಳೆ ದೇಶದ ಹಲವೆಡೆ ಎಚ್3ಎನ್2 ಸೋಂಕು ಜನರನ್ನು ವ್ಯಾಪಕವಾಗಿ ಬಾಧಿಸುತ್ತಿದೆ. ಒಂದೆಡೆಯಿಂದ ತಾಪಮಾನ ಹೆಚ್ಚಳದ ಬಿಸಿ ಜನರನ್ನು ತಟ್ಟುತ್ತಿದ್ದರೆ ಮತ್ತೂಂದೆಡೆಯಿಂದ ದೇಶದ ಅಲ್ಲಲ್ಲಿ ಸುರಿಯುತ್ತಿರುವ ಅಕಾಲಿಕ ಮಳೆ, ಆಲಿಕಲ್ಲು, ಸಿಡಿಲು-ಗುಡುಗಿನಿಂದ ಕೂಡಿದ ಮಳೆ ಜನರ ಆರೋಗ್ಯದ ಮೇಲೆ ಪ್ರತಿಕೂಲ ಪರಿಣಾಮವನ್ನು ಬೀರುತ್ತಿದೆ.
ಹವಾಮಾನದಲ್ಲಿನ ಈ ಕ್ಷಿಪ್ರ ಬದಲಾವಣೆಗಳಿಗೆ ಹೊಂದಿಕೊಳ್ಳಲು ಜನರು ಚಡಪಡಿಸುವಂತಾಗಿದೆ. ಇದೇ ವೇಳೆ ವಿವಿಧ ತೆರನಾದ ಸಾಂಕ್ರಾಮಿಕ ಕಾಯಿಲೆಗಳು ಜನರನ್ನು ಇನ್ನಿಲ್ಲದಂತೆ ಕಾಡತೊಡಗಿದೆ. ಬಹುತೇಕ ಸಾಂಕ್ರಾಮಿಕ ಕಾಯಿಲೆಗಳಲ್ಲಿ ಜ್ವರ, ನೆಗಡಿ, ಶೀತ, ತಲೆನೋವು, ಮೈಕೈನೋವು, ಕಫದಂತಹ ಸಮಸ್ಯೆಗಳು ಸಾಮಾನ್ಯ ವಾಗಿರುವುದರಿಂದ ಇಂತಹ ಲಕ್ಷಣಗಳು ಗೋಚರಿಸಿದಾಕ್ಷಣ ವೈದ್ಯರು ಕೊರೊನಾ, ಎಚ್3ಎನ್2 ಮತ್ತಿತರ ಸಾಂಕ್ರಾಮಿಕ ರೋಗ ಪತ್ತೆ$ಪರೀಕ್ಷೆಗೊಳಗಾಗುವಂತೆ ಸಲಹೆ ನೀಡುತ್ತಿರುವುದರಿಂದಾಗಿ ಸಹಜವಾಗಿ ಪರೀಕ್ಷಾ ಪ್ರಮಾಣ ಹೆಚ್ಚುತ್ತಿದ್ದಂತೆಯೇ ಸೋಂಕು ಪ್ರಕರಣಗಳ ಸಂಖ್ಯೆಯೂ ಏರಿಕೆಯಾಗತೊಡಗಿದೆ.
ಕೊರೊನಾ ಸೋಂಕಿತರ ಸಂಖ್ಯೆ ಮತ್ತೆ ಏರುಹಾದಿಯಲ್ಲಿರುವುದರಿಂದ ಕಚೇರಿ ಉದ್ಯೋಗ ಅದರಲ್ಲೂ ಮುಖ್ಯವಾಗಿ ಐಟಿ ಕಂಪೆನಿಗಳು ಕಚೇರಿಯಲ್ಲಿ ಕಾರ್ಯ ನಿರ್ವಹಿಸುವವರ ಒಟ್ಟಾರೆ ಉದ್ಯೋಗಿಗಳ ಸಂಖ್ಯೆಯಲ್ಲಿ ಒಂದಿಷ್ಟು ಕಡಿತ ಮಾಡಿ ಸಾಮಾಜಿಕ ಅಂತರ ಕಾಯ್ದುಕೊಳ್ಳಲು ಅನುಕೂಲವಾಗುವಂತೆ ಪುನರಪಿ “ವರ್ಕ್ ಫ್ರಂ ಹೋಮ್’ನ ಮೊರೆ ಹೋಗಲಾರಂಭಿಸಿವೆ. ಅಷ್ಟು ಮಾತ್ರವಲ್ಲದೆ ಮಾಸ್ಕ್ ಧಾರಣೆ, ಶುಚಿತ್ವಕ್ಕೆ ಹೆಚ್ಚಿನ ಒತ್ತು ನೀಡುತ್ತಿದ್ದು ಕೊರೊನಾ ಸೋಂಕಿನ ಹರಡುವಿಕೆ ಸರಪಳಿಯನ್ನು ತುಂಡರಿಸಲು ಮುಂದಾಗಿವೆ.
ಜನರು ಕೂಡ ಈಗ ತಮ್ಮ ಆರೋಗ್ಯವನ್ನು ರಕ್ಷಿಸಿಕೊಳ್ಳಲು ಒಂದಿಷ್ಟು ಮುನ್ನೆಚ್ಚರಿಕೆಯ ಕ್ರಮಗಳನ್ನು ಅನುಸರಿಸಲೇಬೇಕಾಗಿದೆ. ಕಳೆದ ಮೂರು ವರ್ಷ ಗಳಿಂದ ಜಪಿಸುತ್ತಲೇ ಬಂದಿರುವ ನೈರ್ಮಲ್ಯ, ಮಾಸ್ಕ್ ಧಾರಣೆ, ಸಾಮಾಜಿಕ ಅಂತರ ಕಾಯ್ದುಕೊಳ್ಳುವಂತಹ ಸರಳ ಕ್ರಮಗಳನ್ನು ಅನುಸರಿಸುವ ಮೂಲಕ ಈ ಎಲ್ಲ ಸಾಂಕ್ರಾಮಿಕಗಳಿಂದ ರಕ್ಷಣೆ ಪಡೆದುಕೊಳ್ಳಲು ಸಾಧ್ಯ. ಕೊರೊನಾ ನಿರೋಧಕ ಲಸಿಕೆ ಗಳನ್ನು ಪಡೆದಿದ್ದರೂ ಈ ಮುನ್ನೆಚ್ಚರಿಕೆ ಕ್ರಮಗಳನ್ನು ಪಾಲಿಸುವುದು ಒಳಿತು ಎಂದು ಆರೋಗ್ಯ ಇಲಾಖೆ ಜನತೆಗೆ ಕಿವಿಮಾತು ಹೇಳಿದೆ. ಇನ್ನು 5 ವರ್ಷಕ್ಕಿಂತ ಕಿರಿಯ ವಯಸ್ಸಿನ ಮಕ್ಕಳು, 60 ವರ್ಷಕ್ಕಿಂತ ಮೇಲ್ಪಟ್ಟ ಹಿರಿಯ ನಾಗರಿಕರು ಹಾಗೂ ಈಗಾಗಲೇ ಕೆಲವೊಂದು ಕಾಯಿಲೆಗಳಿಂದ ಬಳಲುತ್ತಿರುವವರ ಆರೋಗ್ಯದ ಮೇಲೆ ಈ ಸಂದರ್ಭದಲ್ಲಿ ಹೆಚ್ಚಿನ ನಿಗಾ ಇರಿಸುವುದು ಅತೀಮುಖ್ಯವಾಗಿದೆ.
ಕೊರೊನಾದ ಆರಂಭಿಕ 2 ಅಲೆಗಳ ಸಂದರ್ಭದಲ್ಲಿ ದೇಶ ಎದುರಿಸಿದ ಕಠಿನತಮ ಪರಿಸ್ಥಿತಿ ಇನ್ನೂ ಕಣ್ಣಿಗೆ ಕಟ್ಟಿರುವುದರಿಂದ ಜನರು ಒಂದಿಷ್ಟು ಎಚ್ಚರಿಕೆಯ ಹೆಜ್ಜೆ ಇರಿ ಸುವುದು ಅತ್ಯಗತ್ಯ. ದೇಶದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಏರುತ್ತಿದೆ ಎಂದು ಏಕಾಏಕಿ ಆತಂಕಕ್ಕೊಳಗಾಗುವ ಅಗತ್ಯವೂ ಇಲ್ಲ. ಹಾಗೆಂದು ಅಸ ಡ್ಡೆಯೂ ಸಲ್ಲದು.