ಬೆಂಗಳೂರು: ಪ್ರಸಕ್ತ ಶೈಕ್ಷಣಿಕ ವರ್ಷಕ್ಕೆ ಸಂಬಂ ಧಿಸಿ ಶೇ.10ರಷ್ಟು ಶುಲ್ಕ ಹೆಚ್ಚಳ ಮಾಡಲು ಎಂಜಿನಿಯರಿಂಗ್ ಕಾಲೇಜುಗಳ ಆಡಳಿತ ಮಂಡಳಿ ಗಳು ನಿರ್ಧರಿಸಿವೆ.
ಕಳೆದ ವರ್ಷ ಶೇ.25ರಷ್ಟು ಶುಲ್ಕ ಹೆಚ್ಚಳಕ್ಕೆ ಕಾಲೇಜುಗಳು ಬೇಡಿಕೆ ಇಟ್ಟಿದ್ದರೂ ಕೊರೊನಾ ಕಾರಣದಿಂದ ಸರಕಾರ ಒಪ್ಪಿರಲಿಲ್ಲ. ಆದರೆ ಇತರ ಶುಲ್ಕವಾಗಿ ಗರಿಷ್ಠ 20 ಸಾವಿರ ರೂ. ಪಡೆಯಲು ಅವಕಾಶ ನೀಡಿತ್ತು.
ಈ ಸಂಬಂಧ “ಉದಯ ವಾಣಿ’ ಜತೆಗೆ ಮಾತನಾಡಿದ ಕರ್ನಾಟಕ ಅನುದಾನಿತ ಖಾಸಗಿ ಎಂಜಿನಿಯರಿಂಗ್ ಕಾಲೇಜುಗಳ ಒಕ್ಕೂಟದ (ಕೆಯುಪಿ ಇಸಿಎ) ಅಧ್ಯಕ್ಷ ಮಂಜುನಾಥ ಭಂಡಾರಿ, ಕಳೆದ ವರ್ಷ ಸರಕಾರದ ಮನವಿಗೆ ಸ್ಪಂದಿಸಿ ದ್ದೆವು. ಅದೇ ಸಭೆಯಲ್ಲಿ 2022-23ನೇ ಸಾಲಿನಿಂದ ಪ್ರತೀ ವರ್ಷ ಶೇ.10ರಷ್ಟು ಹೆಚ್ಚಳ ಮಾಡಲು ನಿರ್ಧರಿಸಲಾಗಿತ್ತು ಎಂದು ಹೇಳಿದರು.
ಆದರೆ ಖಾಸಗಿ ಎಂಜಿನಿಯರಿಂಗ್ ಕಾಲೇಜುಗಳಲ್ಲಿ ಶುಲ್ಕ ಹೆಚ್ಚಳ ಸಂಬಂಧ ಇನ್ನೂ ಸಭೆ ನಡೆಸಿಲ್ಲ. ಸಭೆ ನಡೆಸಿದ ಬಳಿಕ ಚರ್ಚಿಸಿ ನಿರ್ಧಾರ ಮಾಡಲಾಗುವುದು ಎಂದು ಉನ್ನತ ಶಿಕ್ಷಣ ಸಚಿವ ಡಾ| ಸಿ.ಎನ್. ಅಶ್ವತ್ಥನಾರಾಯಣ ತಿಳಿಸಿದ್ದಾರೆ.
2017-18ನೇ ಸಾಲಿನ ಬಳಿಕ ಅಂದರೆ, ಐದು ವರ್ಷದಿಂದ ಶುಲ್ಕ ಹೆಚ್ಚಳವಾಗಿಲ್ಲ. ಇತ್ತೀಚೆಗಷ್ಟೇ ಅಖಿಲ ಭಾರತೀಯ ತಾಂತ್ರಿಕ ಶಿಕ್ಷಣ ಪರಿಷತ್ (ಎಐಸಿಟಿಇ) ಕೂಡ ಕನಿಷ್ಠ 1.48 ಲಕ್ಷ ರೂ.ಗಳಿಂದ ಗರಿಷ್ಠ 1.78 ಲಕ್ಷ ರೂ.ಗಳ ವರೆಗೆ ಶುಲ್ಕ ಪಡೆಯಬಹುದು ಎಂದು ಹೇಳಿದೆ. ಆದ್ದರಿಂದ ಶುಲ್ಕ ಹೆಚ್ಚಳ ಅನಿವಾರ್ಯವಾಗಿದೆ ಎಂದು ಮಂಜುನಾಥ ಭಂಡಾರಿ ತಿಳಿಸಿದರು.
ಸದ್ಯ ಕೆಇಎ ಮೂಲಕ ಪ್ರವೇಶ ಪಡೆಯುವ ಎಂಜಿನಿಯರಿಂಗ್ ವಿದ್ಯಾರ್ಥಿಗಳಿಗೆ 65,360 ರೂ. ಇದೆ. ಶೇ.10 ಹೆಚ್ಚಿಸಿದರೆ 71,896 ರೂ. ಆಗಲಿದೆ. ಕಾಮೆಡ್-ಕೆ ಕೋಟಾದ ಸೀಟುಗಳಿಗೆ ಪ್ರವೇಶ ಶುಲ್ಕ 1,43,748 ರೂ.ಗಳಿದ್ದು, ಇದು 1,58,118ಕ್ಕೆ ತಲುಪಲಿದೆ.
ಇಂದಿನಿಂದ ಸಿಇಟಿ ಪರೀಕ್ಷೆ
ಎಂಜಿನಿಯರಿಂಗ್ ಸಹಿತ ವಿವಿಧ ವೃತ್ತಿಪರ ಕೋರ್ಸ್‌ಗಳ ಪ್ರವೇಶಕ್ಕಾಗಿ ಗುರುವಾರದಿಂದ (ಜೂ.16) ಮೂರು ದಿನಗಳ ಕಾಲ ಸಿಇಟಿ ಪರೀಕ್ಷೆ ಯು ರಾಜ್ಯದ 486 ಕೇಂದ್ರಗಳಲ್ಲಿ ನಡೆಯಲಿದೆ. ಶೇ.75ರಷ್ಟು ಕೇಂದ್ರಗಳಲ್ಲಿ ಸಿಸಿಟಿವಿ ಮತ್ತು ಶೇ.30ರಷ್ಟು ಕೇಂದ್ರಗಳಲ್ಲಿ ವೀಡಿಯೋ ಚಿತ್ರೀಕರಣ ವ್ಯವಸ್ಥೆ ಕಲ್ಪಿಸಲಾಗಿದೆ ಎಂದು ಉನ್ನತ ಶಿಕ್ಷಣ ಸಚಿವ ಡಾ| ಅಶ್ವತ್ಥ ನಾರಾಯಣ ತಿಳಿಸಿದ್ದಾರೆ.