Advertisement

ಲೋಕ ಅದಾಲತ್‌ನಿಂದ ನ್ಯಾಯಾಂಗದ ಮೇಲೆ ವಿಶ್ವಾಸ ಹೆಚ್ಚಲಿ

12:23 AM Jun 25, 2022 | Team Udayavani |

ನ್ಯಾಯಾಲಯಗಳಲ್ಲಿ ಲಕ್ಷಾಂತರ ಪ್ರಕರಣಗಳು ಬಾಕಿ ಇದ್ದು ವರ್ಷಗಟ್ಟಲೆ ವಿಚಾರಣೆ ನಡೆಯುತ್ತಲೇ ಇರುವ ಈ ಸಂದರ್ಭದಲ್ಲಿ “ಲೋಕ ಅದಾಲತ್‌’ ಒಂದು ರೀತಿಯ ಭರವಸೆಯ ಬೆಳಕು ಎಂಬಂತಾ ಗಿರುವುದು ಸ್ವಾಗತಾರ್ಹ. ವರ್ಷಗಟ್ಟಲೆ ನ್ಯಾಯಾಲಯಗಳಲ್ಲಿ ಇತ್ಯರ್ಥ ಗೊಳ್ಳದ ಪ್ರಕರಣಗಳು ಲೋಕ ಅದಾಲತ್‌ನಲ್ಲಿ ಪರಸ್ಪರ ರಾಜಿ- ಸಂಧಾನದ ಮೂಲಕ ವಿಲೇವಾರಿ ಆಗುತ್ತಿರುವುದು ಒಳ್ಳೆಯ ಬೆಳವಣಿಗೆ. ಇದರಿಂದ ಜನಸಾಮಾನ್ಯರ ವ್ಯಾಜ್ಯಗಳು ತ್ವರಿತಗತಿಯಲ್ಲಿ ವಿಲೇವಾರಿಯಾಗಿ ನೆಮ್ಮದಿ ಭಾವ ಮೂಡಿಸುವಂತಾಗಲಿದೆ.

Advertisement

ಇತ್ತೀಚೆಗೆ ಲೋಕ ಅದಾಲತ್‌ ವ್ಯಾಪ್ತಿಯು ವಿಸ್ತಾರಗೊಂಡಿರುವುದು ಗಮನಾರ್ಹ. ರೇರಾ, ಕೆಇಆರ್‌ಸಿ, ಆರ್‌ಟಿಐ ಸೇರಿ ಇತರ ಸೇವಾ ವ್ಯಾಪ್ತಿಗಳೂ ಇದರಡಿ ಬಂದಿವೆ. ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ಸಂಚಾರ ಉಲ್ಲಂಘನೆ ಪ್ರಕರಣಗಳ ಇತ್ಯರ್ಥಕ್ಕೂ ಮುಂದಾಗಿರುವುದು ಅತೀ ದೊಡ್ಡ ಬೆಳವಣಿಗೆ ಎಂದೇ ಹೇಳಬಹುದು.

ಹತ್ತಾರು ವರ್ಷಗಳಿಂದ ಬಾಕಿ ಇರುವ ಸಂಚಾರ ನಿಯಮ ಉಲ್ಲಂಘನೆ ಪ್ರಕರಣಗಳಿಂದ ನೂರು ಕೋಟಿ ರೂ.ಗೂ ಅಧಿಕ ದಂಡ ಬರಬೇಕಿದೆ. ಆದರೆ ಪ್ರಕರಣ ಇತ್ಯರ್ಥಕ್ಕೆ ಸುಗಮ ಹಾದಿ ಎಂಬುದಿಲ್ಲ. ಹೀಗಾಗಿ ಲೋಕ ಅದಾಲತ್‌ ಮೂಲಕ ಪರಿಹರಿಸಲು ಮುಂದಾಗಿರುವ ಪ್ರಯತ್ನ ನಿಜಕ್ಕೂ ಶ್ಲಾಘನೀಯ. ಲೋಕ ಅದಾಲತ್‌ ಕೇವಲ ವ್ಯಾಜ್ಯ ಗಳನ್ನಷ್ಟೇ ಇತ್ಯರ್ಥಗೊಳಿಸುತ್ತಿಲ್ಲ. ಪ್ರವಾಹ, ಆ್ಯಸಿಡ್‌ ದಾಳಿ, ಅತ್ಯಾಚಾರ, ದೌರ್ಜನ್ಯ ಪ್ರಕರಣಗಳಲ್ಲೂ ಪರಿಹಾರ ಕೊಡಿಸುವ ಕೆಲಸವನ್ನೂ ಮಾಡುತ್ತಿದೆ. ಇದು ಎಷ್ಟೋ ಕುಟುಂಬಗಳಿಗೆ ಅನುಕೂಲವಾಗಲಿದೆ.

ಈಗಾಗಲೇ ಲೋಕ ಅದಾಲತ್‌ ಮೂಲಕ ಲಕ್ಷಾಂತರ ಪ್ರಕರಣಗಳು ಇತ್ಯರ್ಥಗೊಂಡಿರುವುದು ನೋಡಿದರೆ ಜನಸಾಮಾನ್ಯರಲ್ಲಿ ಅದಾಲತ್‌ ಬಗ್ಗೆ ವಿಶ್ವಾಸ ಮೂಡಿರುವುದು ಸಾಬೀತಾಗುತ್ತದೆ. ಜತೆಗೆ ಲೋಕ ಅದಾಲತ್‌ ಕುರಿತು ಮತ್ತಷ್ಟು ಜಾಗೃತಿ ಮೂಡಿಸುವ ಅಗತ್ಯವಿದೆ. ಎಷ್ಟೋ ಮಂದಿ ಸಣ್ಣ ಪುಟ್ಟ ಕಲಹ, ವ್ಯಾಜ್ಯಗಳಿಂದ ಪೊಲೀಸ್‌ ಠಾಣೆ ಮೆಟ್ಟಿಲೇರಿ, ನ್ಯಾಯಾಲಯಗಳಿಗೆ ಅಲೆದಾಡುತ್ತಾ ತಮ್ಮ ಅಮೂಲ್ಯ ಸಮಯ ವ್ಯಯ ಮಾಡುವ ಜತೆಗೆ ಕೆಲಸ ಕಾರ್ಯ ಬಿಟ್ಟು ಮಾನಸಿಕ ಒತ್ತಡ ಹಾಗೂ ವೇದನೆಗೆ ಒಳಗಾಗಿ ಅಂತಿಮವಾಗಿ ಅದು ಜೀವನದ ಮೇಲೆ ಪರಿಣಾಮ ಬೀರುವಂತಾಗುತ್ತದೆ. ಹೀಗಾಗಿ ಪ್ರಕರಣಗಳನ್ನು ಪ್ರಾರಂಭದಲ್ಲೇ ಇತ್ಯರ್ಥಗೊಳಿಸಲು ಲೋಕ ಅದಾಲತ್‌ ಒಂದು ವರದಾನ ಎಂದೇ ಹೇಳಬಹುದು.

ಅವಕಾಶ ವಂಚಿತ ವರ್ಗಗಳಿಗೆ ಉಚಿತವಾಗಿ ಕಾನೂನಿನ ನೆರವು ಮತ್ತು ಪರಿಹಾರ ನೀಡುವ ಉದ್ದೇಶದೊಂದಿಗೆ ಶಾಸನಾತ್ಮಕ ಹೊಣೆಗಾರಿಕೆ ನಿರ್ವಹಿಸುತ್ತಿರುವ ಕರ್ನಾಟಕ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರ ಲೋಕ ಅದಾಲತ್‌ ಜನತಾ ನ್ಯಾಯಾಲಯಗಳ ಮೂಲಕ ಸುಲಭವಾಗಿ ವ್ಯಾಜ್ಯಗಳನ್ನು ಇತ್ಯರ್ಥಪಡಿಸುವ ಬಹುದೊಡ್ಡ ಕೆಲಸ ಮಾಡುತ್ತಿದೆ.

Advertisement

ಇಂದು ಸಹ ರಾಷ್ಟ್ರೀಯ ಲೋಕ ಅದಾಲತ್‌ ನಡೆಯಲಿದ್ದು, ಹೈಕೋರ್ಟ್‌ ಸೇರಿದಂತೆ ಎಲ್ಲ 30 ಜಿಲ್ಲೆಗಳಲ್ಲಿ, 176 ತಾಲೂಕುಗಳಲ್ಲಿ ನ್ಯಾಯಾಧೀಶರು ಕಲಾಪಗಳನ್ನು ನಡೆಸಿ ಪ್ರಕರಣಗಳನ್ನು ಇತ್ಯರ್ಥ ಪಡಿಸಲಿದ್ದಾರೆ. ಈ ವರೆಗೆ ನ್ಯಾಯಾಲಯದಲ್ಲಿ ಬಾಕಿ ಇರುವ 3.02 ಲಕ್ಷ, ವ್ಯಾಜ್ಯಪೂರ್ವ 1.18 ಲಕ್ಷ ಪ್ರಕರಣಗಳು ಸೇರಿ 5 ಲಕ್ಕಕ್ಕೂ ಹೆಚ್ಚು ಪ್ರಕರಣಗಳನ್ನು ಲೋಕ ಅದಾಲತ್‌ನಲ್ಲಿ ಇತ್ಯರ್ಥ ಪಡಿಸಲು ಗುರುತಿಸಲಾಗಿದೆ. ಹೈಕೋರ್ಟ್‌ನಲ್ಲಿ 13 ನ್ಯಾಯಾಧೀಶರು ಕಲಾಪಗಳನ್ನು ನಡೆಸಲಿದ್ದು, ರಾಜ್ಯಾದ್ಯಂತ 995 ಬೆಂಚ್‌ಗಳು ಲೋಕ ಅದಾಲತ್‌ ಪ್ರಕರಣಗಳ ವಿಚಾರಣೆ ನಡೆಸಲಿದ್ದಾರೆ. ರಾಜ್ಯದ ನಾಗರಿಕರು ಇದರ ಸದುಪಯೋಗ ಪಡೆದುಕೊಳ್ಳಬೇಕು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next