ಕೋಲಾರ: ಮೌಲ್ಯವರ್ಧಿತ ತರಬೇತಿಗಳ ಮೂಲಕ ಆತ್ಮವಿಶ್ವಾಸ ವೃದ್ಧಿಸಿಕೊಂಡು ಮಹಿಳೆ ಯರು ಉದ್ಯಮಶೀಲರಾಗಿ ಅಭಿವೃದ್ಧಿಹೊಂದಬೇಕೆಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಉಪ ನಿರ್ದೇಶಕಿ ಪಾಲಿ ಹೇಳಿದರು.
ನಗರದ ಗಲ್‌ಪೇಟೆಯಲ್ಲಿ ಗುರುವಾರ ಗೋದ್ರೇಜ್ ವೃತ್ತಿಸಂಸ್ಥೆ ಹಾಗೂ ಕೌಶಲ್ಯ ದರ್ಪಣ ಸಂಸ್ಥೆಯ ಆಶ್ರಯದಲ್ಲಿ ಹಮ್ಮಿಕೊಂಡಿದ್ದ ಬ್ಯುಟಿಷಿಯನ್ ಮಹಿಳೆಯರಿಗೆ ಮೌಲ್ಯವರ್ಧಿತ ಕಾರ್ಯಕ್ರಮದಲ್ಲಿ ಮೊದಲ ಹಂತಪೂರ್ಣಗೊಳಿಸಿದವರಿಗೆ ಪ್ರಮಾಣ ಪತ್ರ ಮತ್ತು ಸ್ವತ್ಛತಾ ಕಿಟ್ ಗಳನ್ನು ಹಾಗೂ ಕೊರೊನಾ ಕವಚ ವಿಮಾ ಪತ್ರಗಳನ್ನು ವಿತರಿಸುವ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ಈಗಾಗಲೇ ಉದ್ಯಮ ಶೀಲರಾಗಿರುವವರು ಕಾಲಕ್ಕೆ ತಕ್ಕಂತೆ ಮೌಲ್ಯವರ್ಧಿತ ತರಬೇತಿಗಳನ್ನು ಪಡೆದುಕೊಳ್ಳುವುದು ಅತ್ಯಗತ್ಯ. ಇಂತಹ ಕಾರ್ಯಕ್ರಮ ರೂಪಿಸಿರುವ ಗೋದ್ರೇಜ್ ಹಾಗೂ ದರ್ಪಣ ಕೌಶಲ್ಯ ತರಬೇತಿ ಸಂಸ್ಥೆಗಳ ಕಾರ್ಯವನ್ನು ಶ್ಲಾಘಿಸಿದರು. ಮಹಿಳಾ ಅಭಿವೃದ್ಧಿ ನಿಗಮದ ಅಭಿವೃದ್ಧಿ ನಿರೀಕ್ಷಕಿ ಶೀಲಾ ಮಾತನಾಡಿ, ಉದ್ಯೋಗಿನಿ ಹಾಗೂ ಇನ್ನಿತರ ಸರ್ಕಾರಿ ಯೋಜನೆಗಳನ್ನು ಮಹಿಳೆಯರು ಸದ್ಬಳಕೆ ಮಾಡಿಕೊಳ್ಳಬೇಕೆಂದರು.
ಪರಿಸರವಾದಿ ಕೆ.ಎನ್.ತ್ಯಾಗರಾಜು ಮಾತನಾಡಿ, ನಿತ್ಯಬಳಕೆವಸ್ತುಗಳ ಮೂಲಕ ಪಾಸ್ಟಿಕ್ ತ್ಯಾಜ್ಯ ಸೃಷ್ಟಿಸುವುದನ್ನು ತಡೆಗಟ್ಟಲು ಗೃಹಬಳಕೆ ವಸ್ತುಗಳನ್ನು ಹೇಗೆ ಮನೆಯಲ್ಲಿಯೇ ತಯಾರಿಸಿಕೊಂಡು ಬಳಸಬಹುದು ಎಂಬುದರ ಬಗ್ಗೆ ಮಾಹಿತಿ ನೀಡಿದರು.
ಕೌಶಲ್ಯ ದರ್ಪಣ ಸಂಸ್ಥೆಯ ಅಧ್ಯಕ್ಷ ಗೋಪಿನಾಥ್ ಮಾತನಾಡಿ, ಹಾಲಿ ಉದ್ಯಮದಲ್ಲಿ ಮೌಲ್ಯವರ್ಧಿತ ಸೇವೆಗಳನ್ನು ಹೇಗೆಲ್ಲಾ ರೂಢಿಸಿಕೊಳ್ಳಬಹುದು ಎಂದು ವಿವರಿಸಿ, ತಮ್ಮ ಸಂಸ್ಥೆಯು ನಡೆಸುತ್ತಿರುವ ಕೌಶಲ್ಯಾಭಿವೃದ್ಧಿ ತರಬೇತಿ ಸದುಪಯೋಗಿಸಿಕೊಳ್ಳಬೇಕೆಂದರು.ಕಾರ್ಯಕ್ರಮದಲ್ಲಿ ದರ್ಪಣ ಸಂಸ್ಥೆಯ ಖಜಾಂಚಿ ಗೀತಾಪ್ರಕಾಶ್, ಸಿಡಾಕ್ ಸಂಸ್ಥೆಯ ಅಜಿತ್, ಜಿಪಂನ ಸುಂದರೇಶ್, ಮಹಿಳಾ ಶಕ್ತಿಯ ಲೇಖಾ ಇತರರು ಭಾಗವಹಿಸಿದ್ದರು. ಇದೇ ಸಂದರ್ಭದಲ್ಲಿ ಶಿಬಿರಾರ್ಥಿಗಳಿಗೆ ಪ್ರಮಾಣ ಪತ್ರ, ಸ್ವತ್ಛತಾ ಕಿಟ್ ಹಾಗೂ ವಿಮಾ ಬಾಂಡ್‌ಗಳನ್ನು ವಿತರಿಸಲಾಯಿತು.
ಕಾಂತಾದೇವಿ ಪ್ರಾರ್ಥಿಸಿ, ರುಕ್ಸಾನಾ ಸ್ವಾಗತಿಸಿ, ಶಿಬಿರದ ಯೋಜನಾ ವ್ಯವಸ್ಥಾಪಕಿ ನಾಗಮಣಿ ನಿರೂಪಿಸಿ, ಪದ್ಮ ವಂದಿಸಿದರು.